Tuesday, 7th January 2025

PUBG Game: ಪಬ್‌ಜಿ ಗೇಮ್‌ನಲ್ಲಿ ಮುಳುಗಿ ಹೋಗಿದ್ದ ಮೂವರು ಬಾಲಕರು; ರೈಲು ಡಿಕ್ಕಿ ಹೊಡೆದು ದುರ್ಮರಣ

ಪಾಟ್ನಾ: ಇತ್ತೀಚೆಗಿನ ಮಕ್ಕಳು ಆನ್‌ಲೈನ್‌ ಗೇಮ್‌ಗಳಿಗೆ(Online Game) ಬಲಿಯಾಗುತ್ತಿದ್ದಾರೆ. ಗೇಮ್‌ಗಳ ಮೇಲಿನ ಅತಿಯಾದ ವ್ಯಾಮೋಹದಿಂದಾಗಿ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಪಬ್‌ಜಿ ಗೇಮ್‌ ಆಡುತ್ತಲೇ ಯಾವುದರ ಪರಿವೆಯಿಲ್ಲದೆ ಮುಳುಗಿ ಹೋಗಿದ್ದ ಮೂವರು ಬಾಲಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ದಾರುಣವಾಗಿ ಮೃತಪಟ್ಟಿರುವ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ (PUBG Game).

ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಗುರುವಾರ (ಜ. 2) ಮೊಬೈಲ್‌ನಲ್ಲಿ ಪಬ್‌ಜಿ ಗೇಮ್ ಆಡುತ್ತಿದ್ದ ಮೂವರು ಹದಿಹರೆಯದ ಬಾಲಕರು ರೈಲಿಗೆ ಸಿಲುಕಿ ನಜ್ಜುಗುಜ್ಜಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನರ್ಕಟಿಯಾಗಂಜ್-ಮುಜಾಫರ್‌ಪುರ್ ರೈಲು ವಿಭಾಗದ ಮಾನ್ಸಾ ಟೋಲಾದ ರಾಯಲ್ ಸ್ಕೂಲ್ ಬಳಿ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಮೂವರು ಬಾಲಕರು ಕಿವಿಗೆ ಇಯರ್‌ಫೋನ್‌ಗಳನ್ನು ಧರಿಸಿದ್ದರು ಎನ್ನಲಾಗಿದೆ. ರೈಲು ಸಮೀಪಿಸುತ್ತಿರುವುದನ್ನು ಗಮನಿಸದ ಕಾರಣ ಅಪಘಾತ ಸಂಭವಿಸಿದೆ. ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದು, ಅಪಘಾತಕ್ಕೆ ಕಾರಣವಾದ ನಿಖರವಾದ ಅಂಶಗಳನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮೃತಪಟ್ಟವರನ್ನು ರೈಲ್ವೆ ಗುಮ್ಟಿ ನಿವಾಸಿ ಫುರ್ಕನ್ ಆಲಂ, ಬರಿ ತೊಲ ನಿವಾಸಿ ಸಮೀರ್ ಆಲಂ ಮತ್ತು ಹಬೀಬುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ಅಪಘಾತದ ನಂತರ ನೂರಾರು ಸ್ಥಳೀಯ ನಿವಾಸಿಗಳು ಆಘಾತಕ್ಕೀಡಾಗಿದ್ದು,ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಂತ್ರಸ್ತರ ಕುಟುಂಬಗಳು ತಮ್ಮ ಮಕ್ಕಳ ಶವವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಕೊಂಡೊಯ್ದಿದ್ದಾರೆ.

ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ವಿವೇಕ್ ದೀಪ್ ಮತ್ತು ರೈಲ್ವೆ ಪೊಲೀಸರು ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪಬ್‌ಜಿ ಗೀಳಿಗೆ ವಿದ್ಯಾರ್ಥಿ ಬಲಿ

ಕಳೆದ ವರ್ಷವಷ್ಟೇ ಪಬ್‌ಜಿ ಗೇಮ್‌ಗೆ ದಾಸನಾಗಿದ್ದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಹೈದರಾಬಾದ್‌ನ ಪಂಜಾಗುಟ್ಟ ಪೊಲೀಸ್‌ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿತ್ತು. ಅಮ್ಮ ಐ ಲವ್ ಯೂ….ಹುಷಾರಾಗಿರು ಎಂದು ವಾಟ್ಸ್‌ಆ್ಯಪ್‌ನಲ್ಲಿ ಅವರ ತಾಯಿಗೆ ಮೆಸೇಜ್ ಮಾಡಿ ಅಖಿಲ್ (21) ಆತ್ಮಹತ್ಯೆ ಮಾಡಿಕೊಂಡಿದ್ದನು.

ಮೃತ ಅಖಿಲ್ ತಂದೆ ಮರಣ ಹೊಂದಿದ ನಂತರ ತಾಯಿ ಜತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ಅಮೀರ್‌ಪೇಟ್ ಸಮೀಪದ ಸಿದಾರ್ಥ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಮೂರು ತಿಂಗಳಿನಿಂದ ಕಾಲೇಜಿಗೂ ಹೋಗದೆ ಪಬ್‌ಜಿಗೆ ಜೋತು ಬಿದ್ದು ಹಗಲು ರಾತ್ರಿ ಗೇಮ್ ಆಡುತ್ತಿದ್ದ. ಕುಟುಂಬದವರು ಬುದ್ದಿಮಾತು ಹೇಳಿದರೂ ಕೇಳದ ಅಖಿಲ್ ಆಟಕ್ಕಾಗಿ ಊಟ ಬಿಟ್ಟು ಪಬ್‌ಜಿ ಗೇಮ್‌ನಲ್ಲಿ ನಿರತನಾಗಿದ್ದ. ಕೊನೆಗೆ ಪಬ್‌ಜಿ ಆಟವೇ ಆತನ ಜೀವಕ್ಕೆ ಮುಳುವಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ:Pinarayi Vijayan: ಹಿಂದೂಗಳ ಆಚರಣೆ ಟೀಕಿಸುವ ಅಧಿಕಾರ ಕೇರಳ ಸಿಎಂಗಿಲ್ಲ; ಪಿಣರಾಯಿ ವಿಜಯನ್‌ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದೇಕೆ?