Tuesday, 7th January 2025

New Virus Outbreak: ಚೀನಾದಲ್ಲಿ ಹೊಸ ಸಾಂಕ್ರಾಮಿಕ ರೋಗದ ವೈರಸ್‌ ಪತ್ತೆ! ಮತ್ತೆ ಜಗತ್ತಿಗೆ ಕಾದಿದೆಯಾ ಕಂಟಕ ?

Viral News

ಬಿಜೀಂಗ್‌: 2020ರಲ್ಲಿ ಕೋವಿಡ್‌- 19 (Covid-19) ಸಾಂಕ್ರಾಮಿಕ ರೋಗದಿಂದಾಗಿ ಇಡೀ ಜಗತ್ತೇ ನಲುಗಿ ಹೋಗಿತ್ತು. ವಿಶ್ವದಾದ್ಯಂತ ಕೋಟಿಗಟ್ಟಲೆ ಜನ ಪ್ರಾಣ ಕಳೆದುಕೊಂಡಿದ್ದರು. ಅದಾಗಿ ಸುಮಾರು 5 ವರ್ಷಗಳ ನಂತರ ಚೀನಾದಲ್ಲಿ ವೈರಸ್‌ ಸೋಂಕು ಹರಡುತ್ತಿದೆ ಎಂದು ವರದಿ ಹರಡಿದೆ. ಸದ್ಯ ಚೀನಾದ (China) ಆಸ್ಪತ್ರೆಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ (New Virus Outbreak).

ಹ್ಯೂಮನ್‌ ಮೆಟಾಪ್‌ನಿಯುಮೊ ವೈರಸ್‌ (HMPV)’ ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಕಾಣಿಸಿಕೊಂಡಿದ್ದು, ಜನರ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಈ ಸೋಂಕಿನ ಹರಡುವಿಕೆ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಕಟ್ಟುನಿಟ್ಟಿನ ಮುಂಜಗ್ರತಾ ಕ್ರಮಗಳ ಜಾರಿಗೆ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

 ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಹೇಳಲಾಗಿದ್ದು, ಜನರು ಆಸ್ಪತ್ರೆಗಳ ಬಳಿ ಕಿಕ್ಕಿರಿದು ನೆರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ವೈರಲ್‌ ಆಗಿರುವ ವಿಡಿಯೊದಲ್ಲಿ ಜನರು ಮಾಸ್ಕ್‌ ಧರಿಸಿ ವೈದ್ಯರನ್ನು ಭೇಟಿಯಾಗಲು ಬಂದಿರುವುದನ್ನು ಕಾಣಬಹುದು. ಕೋವಿಡ್‌ ಸೋಂಕು ಹರಡುವಿಕೆ ತಡೆಗೆ ಅನುಸರಿಸಲಾಗಿದ್ದ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್‌ ಧರಿಸುವಿಕೆ ಹಾಗೂ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವ ಪ್ರಕ್ರಿಯೆಗಳನ್ನು ತಪ್ಪದೇ ಪಾಲಿಸುವಂತೆ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರವು ತನ್ನ ಪ್ರಜೆಗಳಿಗೆ ನಿರ್ದೇಶಿಸಿದೆ ಎಂದು ಕೆಲ ವರದಿಗಳು ಹೇಳಿವೆಯಾದರೂ ಯಾವುದೂ ಅಧಿಕೃತವಾಗಿ ತಿಳಿದು ಬಂದಿಲ್ಲ.

ಹ್ಯೂಮನ್‌ ಮೆಟಾಪ್‌ನಿಯುಮೊ ವೈರಸ್‌ (HMPV) ಸಾಮಾನ್ಯ ಶೀತವನ್ನು ಹೋಲುವ ರೋಗಲಕ್ಷಣಗಳನ್ನು ಒಳಗೊಂಡಿದೆ. ಇದು ಬಹು ಬೇಗನೆ ಹರಡುತ್ತದೆ ಎಂದು ಹೇಳಲಾಗಿದೆ. ವಿಶೇಷವಾಗಿ ಚಿಕ್ಕ ಮಕ್ಕಳು, ವೃದ್ಧರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.

ಎಚ್‌ಎಂಪಿವಿ ವೈರಾಣು ಸೋಂಕು ಪ್ರಯೋಗಾಲಯದ ಪರೀಕ್ಷೆಯಲ್ಲಿ ಪತ್ತೆಯಾಗಲು 3-5 ದಿನಗಳು ಬೇಕು. ಸೀನುವುದು ಹಾಗೂ ಕೆಮ್ಮುವ ಮೂಲಕ ಹೊರಬೀಳುವ ದ್ರವದ ಮೂಲಕ ಸೋಂಕು ತೀವ್ರವಾಗಿ ಹರಡುತ್ತದೆ. ಚಳಿಗಾಲ ಹಾಗೂ ಬೇಸಗೆಯಲ್ಲಿಈ ಸೋಂಕು ಪ್ರಬಲವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಐದು ವರ್ಷಗಳ ಮೊದಲು ಕೊರೊನಾ ಮಹಾಮಾರಿ ಚೀನಾದಲ್ಲಿಯೇ ಪ್ರಾರಂಭವಾಗಿತ್ತು. ನಂತರ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಇದೀಗ ಮತ್ತೊಂದು ಸಾಂಕ್ರಾಮಿಕ ವೈರಸ್‌ ಬಗ್ಗೆ ಕೇಳಿದ ಜನ ಆತಂಕಕ್ಕೀಡಾಗಿದ್ದಾರೆ.

ಈ ಸುದ್ದಿಯನ್ನೂ ಓದಿ : Viral News: ಚೀನಾದ ಈ ರೆಸ್ಟೋರೆಂಟ್‌ನಲ್ಲಿ ವಿಚಿತ್ರ ಮೆನು ಕಾರ್ಡ್‌- ಅಂತಹದ್ದೇನಿದೆ ಅಂತೀರಾ? ಹಾಗಿದ್ರೆ ಇಲ್ಲಿ ನೋಡಿ