Tuesday, 7th January 2025

Indian Navy: ತಾಲೀಮಿನ ವೇಳೆ ಪ್ಯಾರಾಚೂಟ್‌ ಹರಿದು ಸಮುದ್ರಕ್ಕೆ ಬಿದ್ದ ನೌಕಾಪಡೆ ಅಧಿಕಾರಿಗಳು! ವಿಡಿಯೊ ನೋಡಿ

Indian Navy

ಹೈದರಾಬಾದ್‌: ಜ. 4ರಂದು ಆಂಧ್ರಪ್ರದೇಶದಲ್ಲಿ (Andhra Pradesh) ಆಯೋಜಿಸಿರುವ ಭಾರತೀಯ ನೌಕಾಪಡೆಯ (Indian Navy) ಕಾರ್ಯಾಚರಣೆಯ (operational demonstration) ಮುನ್ನ ನಡೆದ ತಾಲೀಮು ಪ್ರದರ್ಶನದಲ್ಲಿ ಭಾರೀ ಅವಘಡವೊಂದು ತಪ್ಪಿದೆ. ತಾಲೀಮಿನಲ್ಲಿ ಭಾಗವಹಿಸಿದ್ದ ನೌಕಾಪಡೆಯ ಅಧಿಕಾರಿಗಳಿಬ್ಬರು ಪ್ಯಾರಾಚೂಟ್‌ನ ಸಮಸ್ಯೆಯಿಂದಾಗಿ ಆಯ ತಪ್ಪಿ ಸಮುದ್ರೊಳಗೆ ಬಿದ್ದ ಘಟನೆ ನಡೆದಿದೆ.

ಪೂರ್ವ ನೌಕಾ ಕಮಾಂಡ್‌ನ ಕಾರ್ಯಾಚರಣೆಯ ಪ್ರದರ್ಶನ ಪೂರ್ವಾಭ್ಯಾಸದ ಸಮಯದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರಾಮಕೃಷ್ಣ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಪ್ಯಾರಾಚೂಟ್‌ ಸಮಸ್ಯೆಯಿಂದಾಗಿ ಆಕಾಶದಲ್ಲಿ ಹಾರಾಡುತ್ತಿದ್ದ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಮುದ್ರದ ಒಳಗೆ ಬಿದ್ದಿದ್ದಾರೆ. ಒಬ್ಬ ಅಧಿಕಾರಿ ತನ್ನ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಅಧಿಕಾರಿಗಳು ಬಿದ್ದ ಜಾಗದಲ್ಲಿ ನೌಕಾಪಡೆಯ ಗಸ್ತು ದೋಣಿ ಇತ್ತು. ಇದರಿಂದಾಗಿ ಅವರು ಕೂಡಲೇ ಇಬ್ಬರನ್ನು ರಕ್ಷಿಸಿ ದಡ ತಲುಪಿಸಿದ್ದಾರೆ. ಸದ್ಯ ಅಧಿಕಾರಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ನಡೆಯಲಿರುವ ಕಾರ್ಯಕ್ರಮದ ತಾಲೀಮು ವೀಕ್ಷಿಸಲು ಹಲವಾರು ಜನರು ಸ್ಥಳದಲ್ಲಿ ಹಾಜರಿದ್ದರು.

ನಾಳೆ ಕಾರ್ಯಕ್ರಮ ನಿಗದಿಯಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.  ಈಸ್ಟರ್ನ್ ನೇವಲ್ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ರಾಜೇಶ್ ಪೆಂಡಾರ್ಕರ್ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಕಾರ್ಯಾಚರಣೆಯ ಪ್ರದರ್ಶನವು ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ವಿಮಾನಗಳು, ನೇವಲ್ ಬ್ಯಾಂಡ್ ಮತ್ತು ಮೆರೈನ್ ಕಮಾಂಡೋಸ್ (ಮಾರ್ಕೋಸ್) ಮೂಲಕ ಪ್ರದರ್ಶನಗಳನ್ನು ಒಳಗೊಂಡಿದೆ.

ಭಾರತೀಯ ನೌಕಾಪಡೆಯು ಸ್ಥಳೀಯವಾಗಿ ನಿರ್ಮಿಸಲಾದ ಎರಡು ಯುದ್ಧನೌಕೆಗಳು ಮತ್ತು ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳು ಜನವರಿ 15ರಂದು ಮುಂಬೈನ ನೌಕಾಲೆಯಿಂದ ಕಾರ್ಯಾರಂಭ ಮಾಡುತ್ತವೆ ಎಂದು ತಿಳಿದು ಬಂದಿದೆ.

ಇದು ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯಕ್ಕೆ ಗಮನಾರ್ಹವಾದ ಉತ್ತೇಜನವನ್ನು ನೀಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ : Submarine: ನೌಕಾಪಡೆಯ ಜಲಾಂತರ್ಗಾಮಿ ಮೀನುಗಾರಿಕಾ ದೋಣಿಗೆ ಡಿಕ್ಕಿ; ಇಬ್ಬರು ಮೀನುಗಾರರು ಕಣ್ಮರೆ