Tuesday, 7th January 2025

Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲುವವರೆಗೂ ವಿಶೇಷ ಪ್ರಾರ್ಥನೆ; ಕೋಲ್ಕತಾ ಇಸ್ಕಾನ್‌ ಹೇಳಿಕೆ

Bangladesh Unrest

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ (Bangladesh Unrest) ನಡೆಯುತ್ತಿದೆ. ಈ ಬಗ್ಗೆ ಕೋಲ್ಕತಾದ ಇಸ್ಕಾನ್‌ (Kolkata ISKCON) ಅಸಮಾಧಾನ ವ್ಯಕ್ತಪಡಿಸಿ, ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ದೌರ್ಜನ್ಯವನ್ನು ಎದುರಿಸುತ್ತಿರುವ ಬಾಂಗ್ಲಾದೇಶದಲ್ಲಿ ಸಹಜ ಸ್ಥಿತಿಗೆ ಮರಳುವವರೆಗೆ ನಾವು ಪ್ರಾರ್ಥನೆ ನಡೆಸುತ್ತೇವೆ ಎಂದು ಶುಕ್ರವಾರ ಹೇಳಿಕೆ ನೀಡಿದೆ.

ಕೋಲ್ಕತ್ತಾದ ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ISKCON) ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಗಾಗಿ ಹಾಗೂ ಜೈಲಿನಲ್ಲಿರುವ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ (Chinmay Das) ಅವರ ಬಿಡುಗಡೆಗಾಗಿ ಒಂದು ತಿಂಗಳಿನಿಂದ ಆಲ್ಬರ್ಟ್ ರೋಡ್ ಕೇಂದ್ರದಲ್ಲಿ ದೈನಂದಿನ ಪ್ರಾರ್ಥನೆಗಳನ್ನು ನಡೆಸುತ್ತಿದೆ. ಈ ಬಗ್ಗೆ ಮಾತನಾಡಿದ ಕೋಲ್ಕತ್ತಾ ಇಸ್ಕಾನ್‌ ವಕ್ತಾರ ರಾಧರಾಮ್ ದಾಸ್ “ಬಾಂಗ್ಲಾದೇಶದ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ನಾವು ಅಲ್ಪಸಂಖ್ಯಾತರಿಗಾಗಿ ನಮ್ಮ ದೈನಂದಿನ ಪ್ರಾರ್ಥನೆಯನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.

ಚಿನ್ಮಯ್‌ ದಾಸ್‌ ಅವರ ಬಗ್ಗೆ ಮಾತನಾಡಿದ ಅವರು ಚಿತ್ತಗಾಂಗ್ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ಬಾಂಗ್ಲಾದ ಹೈಕೋರ್ಟ್‌ನಲ್ಲಿ ಜಮೀನು ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಬಂದಿದೆ. ಅಲ್ಲಿಂದ ಇಲ್ಲಿಯವರಿಗೆ ಅಲ್ಪ ಸಂಖ್ಯಾತ ಸಮುದಾಯವಾದ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ.

ಬಾಂಗ್ಲಾದೇಶದ ಇಸ್ಕಾನ್‌ ವಕ್ತಾರರಾದ ಚಿನ್ಮಯ್‌ ದಾಸ್‌ ಅವರನ್ನು ದೇಶ ದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಾಂಗ್ಲಾದೇಶ ತೊರೆದು ಭಾರತಕ್ಕೆ ಬರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಚಿನ್ಮಯ್‌ ದಾಸ್‌ ಅವರನ್ನು ಸರ್ಕಾರದ ಸೂಚನೆ ಮೇರೆಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ನಂತರ ಅವರಿಗೆ ಜಾಮೀನು ನೀಡಲು ಸ್ಥಳೀಯ ಕೋರ್ಟ್‌ ನಿರಾಕರಿಸಿತ್ತು. ಈ ನಡುವೆ ಚಿನ್ಮಯ್‌ ಅವರ ಪರನಾಗಿದ್ದ ವಕೀಲರ ಮೇಲೆಯೂ ಮಾರಣಾಂತಿಕ ದಾಳಿಯಾಗಿತ್ತು. ಇದೀಗ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬಾಂಗ್ಲಾ ಹೈಕೋರ್ಟ್‌ ಮೊರೆ ಹೋಗಲಾಗಿದೆ.

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಭಾರತ ಕೂಡ ಖಂಡಿಸಿತ್ತು. ವಿದೇಶಾಂಗ ಇಲಾಖೆಯ ವಕ್ತಾರ ಬಾಂಗ್ಲಾದೇಶಕ್ಕೆ ಹಿಂದೂಗಳ ಸುರಕ್ಷತೆಯ ಬಗ್ಗೆ ಬಾಂಗ್ಲಾದೇಶಕ್ಕೆ ಪತ್ರ ಬರೆದಿದ್ದರು.

ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಅರೆಸ್ಟ್‌‌ ಆಗಿದ್ದೇಕೆ?