Tuesday, 7th January 2025

Monk The Young Movie: ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರದ ‘ಮಾಂಕ್ ದಿ ಯಂಗ್’ ಚಿತ್ರ ಫೆಬ್ರವರಿಯಲ್ಲಿ ರಿಲೀಸ್‌

Monk The Young Movie

ಬೆಂಗಳೂರು: ಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ ʼಮಾಂಕ್ ದಿ ಯಂಗ್ʼ ಚಿತ್ರವನ್ನು (Monk The Young Movie) ಫೆಬ್ರವರಿಯಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಬಿಡುಗಡೆಗೂ ಪೂರ್ವಭಾವಿಯಾಗಿ ಸದ್ಯದಲ್ಲೇ ಬರುವ ಸಂಕ್ರಾಂತಿ ಸಂದರ್ಭದಲ್ಲಿ ಪ್ರಚಾರ ಕಾರ್ಯ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಗ್ಲಿಂಪ್ಸ್, ಹಾಡು ಹಾಗೂ ಟ್ರೇಲರ್ ಬಿಡುಗಡೆಯಾಗಲಿದ್ದು, ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಖ್ಯಾತ ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಸ್ವಾಮಿನಾಥನ್ ರಾಮಕೃಷ್ಣ ಹಾಗೂ ಸುಪ್ರೀತ್ ಫಾಲ್ಗುಣ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಾಗೂ ಟೀಸರ್ ಮೂಲಕ ʼಮಾಂಕ್ ದಿ ಯಂಗ್ʼ ಜನರ ಮನಸ್ಸಿಗೆ ಹತ್ತಿರವಾಗಿದೆ.

ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ ನಿರ್ದೇಶಿಸಿದ್ದಾರೆ. ಸರೋವರ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸೌಂದರ್ಯ ಗೌಡ. ತೆಲುಗು ಹಾಗೂ ತಮಿಳಿನ ಪ್ರಸಿದ್ದ ನಟ ಬಬ್ಲೂ ಪೃಥ್ವಿರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಉಷಾ ಭಂಡಾರಿ, ಪ್ರಣಯ ಮೂರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ನಿವೃತ್ತ ಆರ್ಮಿ ಆಫೀಸರ್ ಕರ್ನಲ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಗೋಪಿಚಂದ್, ಲಾಲ್ ಚಂದ್ ಖತಾರ್ ಮತ್ತು ಸರೋವರ್ ಐದು ಜನ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಪಕರೆಲ್ಲಾ ಈ ಚಿತ್ರದಲ್ಲಿ ನಟನೆಯನ್ನೂ ಮಾಡಿರುವುದು ವಿಶೇಷ.

ಈ ಸುದ್ದಿಯನ್ನೂ ಓದಿ | Glopixs: ಡಿಜಿಟಲ್‌ ಮನರಂಜನೆ ಕ್ಷೇತ್ರಕ್ಕೆ ಗ್ಲೋಪಿಕ್ಸ್‌ ಒಟಿಟಿ; ಲೋಗೊ ಅನಾವರಣ

ಕಾರ್ತಿಕ್ ಶರ್ಮ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಕ್ಲೈಮಾಕ್ಸ್ ಛಾಯಾಗ್ರಹಣ ದೀಪಕ್ ಹಾಗೂ ಧನುಷ್ ಬೆದ್ರೆ ಅವರ ಸಂಕಲನ ಹರ್ಷವರ್ಧನ್ ಏ ಎಲ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.