Tuesday, 7th January 2025

Hitech Flower Market: ಜಿಲ್ಲಾ ಕೇಂದ್ರದಲ್ಲಿ 140 ಕೋಟಿ ವೆಚ್ಚದ ಹೈಟೆಕ್ ಹೂ ಮಾರುಕಟ್ಟೆ ನಿರ್ಮಿಸಲು ಚಿಂತನೆ: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ವಿವಿಧ ಹೂ ಬೆಳೆಗಳಿಗೆ ಹೆಸರಾಗಿದ್ದು, ಜಿಲ್ಲೆಯ ಹೂ ಬೆಳೆಗಾರರು ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬಳಿಯ ತೋಟಗಾರಿಕೆ ಇಲಾಖೆಗೆ ಸೇರಿದ 20 ಎಕರೆ ಪ್ರದೇಶದಲ್ಲಿ 140 ಕೋಟಿ ವೆಚ್ಚದ ಹೈಟೆಕ್ ಹೂ ಮಾರುಕಟ್ಟೆಯನ್ನು ನಿರ್ಮಿಸಲು ಉದ್ಧೇಶಿಸಿದ್ದು, ಈ ವರ್ಷದ ಬಜೆಟ್‌ನಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ಮುಖ್ಯಮಂತ್ರಿಗಳು ಘೋಷಿಸುವ ವಿಶ್ವಾಸವಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರೆದಿದ್ದ ಹೂವಿನ ವ್ಯಾಪಾರಸ್ಥರು ಮತ್ತು ಹೂ ಬೆಳೆಗಾರರ ಸಭೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಹೈಟೆಕ್ ಹೂವಿನ ಮಾರುಕಟ್ಟೆಯ ನೀಲ ನಕ್ಷೆಯ ಕುರಿತು ಮಾಹಿತಿ ನೀಡುವ ಜೊತೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಾತನಾಡಿದರು.

ಈಗಾಗಲೇ ತೋಟಗಾರಿಕೆ ಇಲಾಖೆಗೆ ಸೇರಿದ ೨೦ ಎಕರೆ ಜಮೀನು  ಹೂವಿನ ಮಾರುಕಟ್ಟೆಗೆ ಉಚಿತವಾಗಿ ಮಂಜೂ ರಾಗಿದೆ. ಜಿಲ್ಲಾ ಕೇಂದ್ರದ ಬೆಳವಣಿಗೆಯ ದೂರದೃಷ್ಟಿಯನ್ನು ಇಟ್ಟುಕೊಂಡು ಈ ಹೈಟೆಕ್ ಹೂವಿನ ಮಾರುಕಟ್ಟೆ ಯನ್ನು ನಿರ್ಮಿಸಲಾಗುವುದು. ಹೂವಿನ ಮಾರುಕಟ್ಟೆಗಾಗಿ ೧೪೦ ಕೋಟಿ ರೂಪಾಯಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಿದ್ದಪಡಿಸಲಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಗಳಿಗೆ ಸಲ್ಲಿಸಲಿದ್ದು, ಇದೇ ವರ್ಷದ ಬಜೆಟ್‌ನಲ್ಲಿ ಘೋಷಿಸುವಂತೆಯೂ ಮನವಿ ಮಾಡಲಾಗುವುದು. ಇದೇ ಬಜೆಟ್ ನಲ್ಲಿ ಘೋಷಣೆಯಾಗುವ ವಿಶ್ವಾಸವೂ ತಮಗಿದೆ ಎಂದು ತಿಳಿಸಿದರು.

ಹೂವಿನ ಮಾರುಕಟ್ಟೆಯಲ್ಲಿ ಇ-ಹರಾಜು ವಿಭಾಗ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು ಇರಲಿವೆ. ಈಗಾಗಲೇ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಯನ್ನು ನಿರ್ಮಿಸಲು ಹಣ ಮಂಜೂರಾಗಿದೆ. ಸ್ಥಳವೂ ಆಗಿರುವುದರಿಂದ ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು. ಇನ್ನು ಒಂದು ಅಥವಾ ಎರಡು ತಿಂಗಳ ಒಳಗಾಗಿ ಮುಖ್ಯಮಂತ್ರಿಗಳು ಈ  ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.

ಸಭೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಸಿಇಒ ಪ್ರಕಾಶ್ ನಿಟ್ಟಾಲಿ, ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯ ದರ್ಶಿ ಆರ್.ಉಮಾ, ಸಹಾಯಕ ನಿರ್ದೇಶಕಿ ವಿನುತಾ, ಕೃಷಿ ಇಲಾಖೆಯ ಅಭಿಯಂತರರು, ಹೂವಿನ ವರ್ತಕರು, ರೈತರು ಹಾಜರಿದ್ದರು.

ಇದನ್ನೂ ಓದಿ: chikkaballapurnews