Tuesday, 7th January 2025

Dr Sudhakar Hosally Column: ಭಾರತ ಕಮ್ಯುನಿಸ್ಟ್‌ ರಾಷ್ಟ್ರವಾಗುವುದನ್ನು ತಪ್ಪಿಸಿದ್ದ ಅಂಬೇಡ್ಕರರು

ಅಭಿಮತ

ಡಾ.ಸುಧಾಕರ ಹೊಸಳ್ಳಿ

ಸಂವಿಧಾನ ಜಾರಿಗೆ ಬಂದು ಇದೇ ಜನವರಿ 26ಕ್ಕೆ 75 ವರ್ಷಗಳು ತುಂಬುತ್ತವೆ. ಇಂತಹ ವಿಶಿಷ್ಟ ಸಂದರ್ಭದಲ್ಲಿ ಸಂವಿಧಾನದ ಆದರ್ಶಗಳು, ದಕ್ಷತೆ, ಶ್ರೇಷ್ಠತೆ ಕುರಿತು ಅವಲೋಕನ ಮಾಡುವುದು, ಆ ಮುಖಾಂತರ ಸಂವಿಧಾನದ ಮೂಲಬೇರುಗಳನ್ನು ಮತ್ತಷ್ಟು ಗಟ್ಟಿ ಮಾಡುವ ಹೊಣೆಗಾರಿಕೆ ಪ್ರeವಂತ ಭಾರತೀಯರ ಮೇಲೆ ಇದೆ. ಭಾರತವನ್ನು 75 ವರ್ಷಗಳ ಹಿಂದೆ ಪರಂಪರೆ ಸಂಸ್ಕೃತಿ ನಡವಳಿಕೆ ಐತಿಹಾಸಿಕ ದಾಖಲಾತಿಗಳು ಇವುಗಳ ಮುಖಾಂತರ ಗುರುತಿಸ ಲಾಗುತ್ತಿತ್ತು, ಸ್ಮರಿಸಲಾಗುತ್ತಿತ್ತು, ಮುಂದುವರಿಸಿಕೊಂಡು ಹೋಗಲಾಗುತ್ತಿತ್ತು. ಆದರೆ 75 ವರ್ಷಗಳ ಹಿಂದೆ ಭಾರತ ವನ್ನು ಶಾಸನಾತ್ಮಕ ಭಾರತವಾಗಿ ರೂಪಿಸುವ ಕಾರ್ಯ ಸಂವಿಧಾನ ರಚನೆಯ ಜೊತೆಯಲ್ಲಿ ಪ್ರಾರಂಭ ವಾಗಿತ್ತು. ಈ ಪವಿತ್ರ ನೆಲಕ್ಕೊಂದು ಸಂವಿಧಾನ ರಚನೆ ಮಾಡುವ, ನಿಯಮಗಳ ಗುಚ್ಛವನ್ನು ಜೋಡಿಸಿಕೊಳ್ಳುವ ಕಾರ್ಯ ಸಾಗಿತ್ತು.

ಇಂತಹ ಮಹತ್ಕಾರ್ಯದಲ್ಲಿ ಪಾಲ್ಗೊಂಡಿದ್ದ ಕೆಲವು ಸದಸ್ಯರಿಗೆ ಭಾರತವನ್ನು ಅದರ ಸಂಸ್ಕೃತಿ ಮತ್ತು
ಪರಂಪರೆಯ ದೃಷ್ಟಿಕೋನದ ಶಾಸನದ ಅಡಿಯಲ್ಲಿ ತರಬೇಕು, ಸಂವಿಧಾನದ ಒಳಗೆ ಇರುವ ಎಲ್ಲ ನಿಯಮಗಳು
ಭಾರತದ ಐತಿಹಾಸಿಕ ಆದರ್ಶಗಳನ್ನು ಆಧಾರವಾಗಿಟ್ಟುಕೊಳ್ಳಬೇಕು ಎನ್ನುವ ಹೆಬ್ಬಯಕೆ ಇತ್ತು. ಕೆ ವಿ ಕಾಮತ್, ಶ್ಯಾಮ್ ಪ್ರಸಾದ್ ಮುಖರ್ಜಿ, ಗೋವಿಂದಾಸ್, ಘನಶಾಮಗುಪ್ತ, ಕಲ್ಲೂರು ಸುಬ್ಬರಾವ್, ರಾಮ್ ಸಹಾಯ್ ಹೀಗೆ ಪಟ್ಟಿ ಸಾಗುತ್ತದೆ. ಇಂತಹ ಸದುದ್ದೇಶಕ್ಕಾಗಿ ಸದನದಲ್ಲಿ ಪ್ರತಿ ವಿಷಯ ವಿಭಾಗ ಚರ್ಚೆಯಲ್ಲಿಯೂ ಯಾವುದೇ ನಿಯಮಗಳಿರಲಿ ಅವು ಭಾರತದ ಆದರ್ಶಗಳನ್ನೇ ಆಧಾರವಾಗಿಟ್ಟುಕೊಳ್ಳಬೇಕೆಂಬ ಆಗ್ರಹವನ್ನು, ಆಧಾರವನ್ನು ನೀಡುತ್ತಾ ಬಂದಿದ್ದರು.

ವೇದ, ಪುರಾಣ, ರಾಮಾಯಣ, ಮಹಾಭಾರತ ಸಂಹಿತೆಗಳ ಉದಾಹರಣೆಗಳನ್ನು ಸದನದ ಮುಂದೆ ಹಾಜರು ಪಡಿಸುತ್ತಿದ್ದರು. ಉಳಿದಂತೆ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್‌ನ ಅನೇಕ ಸದಸ್ಯರು ಭಾರತ ದಾಸ್ಯವನ್ನು ಮುಂದು ವರಿಸುವ, ಬ್ರಿಟಿಷರ ನಿಯಮಗಳಿಗೆ ಜೋತು ಬೀಳುವ, ಭಾರತದ ಪರಂಪರೆಯನ್ನು ನಿರ್ಲಕ್ಷಿಸುವ, ಮರೆಮಾಚುವ ಕಾರ್ಯದಲ್ಲಿ ತೊಡಗಿದ್ದನ್ನು ಸಂವಿಧಾನ ರಚನಾ ಸಭೆಯ ಚರ್ಚೆಗಳು ಅಂಕಿ ಸಂಖ್ಯೆಗಳ ಮೂಲಕ
ದೃಢಪಡಿಸುತ್ತವೆ.

ಸಂವಿಧಾನದ ಒಳಗೆ ದಾಸ್ಯದ ನಿಯಮಗಳು ಎರವಲು ಆಗದಂತೆ, ಭಾರತದ ಪರಂಪರೆ ಸಂಸ್ಕೃತಿ ಕಣ್ಮರೆ ಯಾಗದಂತೆ ತಡೆಗೋಡೆಯಾಗಿ ನಿಂತದ್ದು ಶ್ರೇಷ್ಠ ರಾಷ್ಟ್ರೀಯವಾದಿ ಬಾಬಾ ಸಾಹೇಬ್ ಅಂಬೇಡ್ಕರ್. ಅವರು
ಸದಸ್ಯರ ಪ್ರಶ್ನೆಗೆ ಉತ್ತರಿಸುತ್ತಾ ಈ ಸಂವಿಧಾನ ರಚನಾ ಸಭೆಯು ತನ್ನ ಕಾರ್ಯ ಆರಂಭ ಮಾಡುವ ಮೊದಲೇ
ಬ್ರಿಟಿಷ್ ಸಂಸತ್ತು ನಿರ್ದೇಶಿಸುವ ಎಲ್ಲ ನಿರ್ದೇಶನಗಳನ್ನು ತಿರಸ್ಕರಿಸಿಯಾಗಿದೆ, ಬ್ರಿಟನ್ ನಿರ್ದೇಶನಗಳು ಈ ಸಂವಿ
ಧಾನದ ಭಾಗವಾಗುವುದನ್ನು ನನ್ನನ್ನು ಸೇರಿದಂತೆ ಇಲ್ಲಿರುವ ಯಾವ ಸದಸ್ಯರು ಒಪ್ಪುವುದಿಲ್ಲ ಮತ್ತು ಅವಕಾಶ ವನ್ನು ಕೊಡುವುದಿಲ್ಲ ಎಂದು ಗುಡುಗಿದ್ದರು.

ಇಂತಹ ಗಟ್ಟಿ ಧ್ವನಿಯ ನಡುವೆಯೂ ಭಾರತವನ್ನು ಶಾಸನಾತ್ಮಕವಾಗಿ ಕಮ್ಯುನಿ ನೆಲೆಗಟ್ಟಿನಲ್ಲಿ ಪ್ರತಿಷ್ಠಾಪಿಸಲು
ಕೆಲವರು ಉತ್ಸುಕರಾಗಿದ್ದರು. ಇಂಥದ್ದೊಂದು ಪ್ರಯತ್ನ ನಡೆದಿತ್ತು ಎನ್ನುವುದೇ ಸಂವಿಧಾನ ರಚನಾ ಸಭೆಗೆ ಅಂಟಿದ ಕಳಂಕವೂ ಹೌದು.

ಅಂದು 1949 ಸೆಪ್ಟೆಂಬರ್ 18ನೇ ತಾರೀಕು ಮೂಲ ಕಾಂಗ್ರೆಸ್ ಸದಸ್ಯರಾಗಿದ್ದ, ತದನಂತರ ಮುಸ್ಲಿಂ ಲೀಗ್ ಸೇರ್ಪಡೆಯಾಗಿದ್ದ ಅಶ್ರತ್ ಮೊಹಾನಿ ಮಂಡಿಸಿದ ತಿದ್ದುಪಡಿ ಒಟ್ಟು ಭಾರತವನ್ನೇ ಚಕಿತಗೊಳಿಸುವಂಥದ್ದು. ಮಾನ್ಯ ಅಧ್ಯಕ್ಷರೇ, ಭಾರತದ ಸಂವಿಧಾನ ಚೌಕಟ್ಟನ್ನು ನಿರ್ಧಾರ ಮಾಡಿದ ಧ್ಯೇಯಗಳ ನಿರ್ಣಯವನ್ನು
1946ರಲ್ಲಿ ಮಂಡಿಸಿದ ನೆಹರುರವರು ಭಾರತವನ್ನು ಸರ್ವ ಸ್ವತಂತ್ರ, ಸಾರ್ವಭೌಮ ಗಣತಂತ್ರ ಎಂದು ಘೋಷಿಸುವ ನಿರ್ಧಾರ ಮಾಡಿದ್ದರು.

ಸಂವಿಧಾನದ ರಚನೆಯ ಉದ್ದಕ್ಕೂ ನೆಹರುರವರು ಈ ವಿಷಯವನ್ನು ಅನೇಕ ಬಾರಿ ಮಂಡಿಸಿದ್ದರು. ಆದರೆ ಡಾ. ಅಂಬೇಡ್ಕರ್ ಇದನ್ನು ಸುಳ್ಳು ಮಾಡಿದ್ದಾರೆ. ಗಣತಂತ್ರ ಅಥವಾ ಗಣರಾಜ್ಯ ಮಾದರಿಯನ್ನು ತೆಗೆದುಹಾಕಿದ್ದಾರೆ. ಇದನ್ನು ಮರು ಸೇರ್ಪಡೆ ಮಾಡಬೇಕು ಎಂದು ತಿದ್ದುಪಡಿ ಮಂಡಿಸಿದಾಗ ಶಾಸನಾತ್ಮಕ ಭಾರತವನ್ನು ಕಮ್ಯುನಿಸಂ ಚೌಕಟ್ಟಿನ ಒಳಗೆ ಎಳೆದು ತರುವ ವಾಸನೆ ಸೂಸಿತ್ತು.

ಮಾತು ಮುಂದುವರಿಸಿದ್ದ ಮೊಹಾನಿ, ಅಂಬೇಡ್ಕರ್ ಫೆಡರೇಶನನ್ನು-ಯೂನಿಯನ್ ಆಗಿ ಬದಲಿಸಿದ್ದು ಏಕೆ?
ಭಾರತವು ರಾಜ್ಯಗಳ ಒಕ್ಕೂಟ ಮಾತ್ರ ಎಂದು ಯಾತಕ್ಕಾಗಿ ಸೀಮಿತ ಮಾಡಿzರೆ? ಭಾರತವು ಗಣತಂತ್ರದ ಒಕ್ಕೂಟ
ಏಕಾಗಬಾರದು? ಭಾರತವನ್ನು ಯೂನಿಯನ್ ಆಫ್ ರಿಪಬ್ಲಿಕ್ ಆಫ್ ಇಂಡಿಯಾ ಅಥವಾ ಯೂನಿಯನ್ ಆಫ್
ಸೋಷಿಯಲಿ ರಿಪಬ್ಲಿಕ್ ಇಂಡಿಯಾ ಎಂದು ಬದಲಿಸಬೇಕು ಎಂಬ ತಿದ್ದುಪಡಿ ಮಂಡಿಸುವ ಹಕ್ಕು ನನಗಿದೆ
ಎಂಬಂತೆ ಅಂಬೇಡ್ಕರ್ ಎದುರಿಗೆ ನಿಂತು ಆಗ್ರಹಿಸಿದ್ದರು‌ ಮತ್ತು ತಿದ್ದುಪಡಿಯನ್ನು ಮಂಡಿಸಿದರು. ನನ್ನ ಈ ವಾದವನ್ನು ನಾನು ಪ್ರಸ್ತಾವನೆಯಲ್ಲಿಯೇ ತರಲು ಉದ್ದೇಶಿಸಿದ್ದೆ, ಆದರೆ ಅಂಬೇಡ್ಕರ್ ನನಗನಿಸುವಂತೆ ಅವಕಾಶವನ್ನು ನಿರಾಕರಿಸುವ ಉದ್ದೇಶ ಅವರಿಗಿತ್ತು.

ಅದಕ್ಕಾಗಿಯೇ ಅವರು ಪ್ರಸ್ತಾವನೆಯನ್ನು ಕುರಿತ ಚರ್ಚೆಯ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದರು ಹಾಗೂ ಇದು ಇತ್ಯರ್ಥವಾದ ವಿಷಯ ಮೊದಲಿನ ತೀರ್ಮಾನಕ್ಕೆ ವಿರುದ್ಧವಾಗಿ ಪ್ರಸ್ತಾವನೆಯನ್ನು ಮತ್ತೆ ರಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೆಲವರಿಗೆ ರಿಪಬ್ಲಿಕ್ ಶಬ್ದವು ನಿಷಿದ್ಧವಾಗಿದೆ. ಇದನ್ನು ಬಳಸುವ ಧೈರ್ಯ ಇಲ್ಲದಿದ್ದರೆ ನನ್ನ ಬಳಿ ಇದಕ್ಕೆ ಬದಲಿ
ಸೂಚನೆ ಇದೆ. ಕನಿಷ್ಠ ಪಕ್ಷ ಭಾರತದ ಸಾರ್ವಭೌಮ ರಾಜ್ಯಗಳು ಎಂದು ಕರೆಯಬಹುದು ಎಂದು ಅಂಬೇಡ್ಕರರ
ಮೇಲೆ ಘನವಾದ ಆರೋಪ ಹಾಗೂ ಒತ್ತಡವನ್ನು ಹೇರಿದ್ದರು ಎಂಬುದು ಸಂವಿಧಾನ ರಚನಾ ಸಭೆಯ ಸಂದರ್ಭ ದಲ್ಲಿ ಪರಮ ಶ್ರೇಷ್ಠ ರಾಷ್ಟ್ರ ಪ್ರೇಮಿಯೊಬ್ಬರಿಗೆ ಅದೆಂಥ ಅಡೆತಡೆಗಳು ಒದಗಿ ಬಂದಿದ್ದವು ಮತ್ತು ಒದಗಿಸಿ ನಿಲ್ಲಿಸಿದ್ದರು ಎನ್ನುವ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಈಗಾಗಲೇ ಬೇರೆ ಬೇರೆ ಕಾರಣಕ್ಕೆ ಹಂಚಿ ಹೋಗಿದ್ದ ಭಾರತವನ್ನು ಬಲಿಷ್ಠ ಕೇಂದ್ರ ಸರಕಾರದ ಪ್ರತಿಪಾದನೆ
ಯೊಂದಿಗೆ, ಐಕ್ಯ ಭಾರತವನ್ನಾಗಿ ಮಾಡಲು ಪಣ ತೊಟ್ಟಿದ್ದ ಸಂವಿಧಾನ ಶಿಲ್ಪಿಗೆ ವಿಘಟಿತ ಭಾರತದ ಕಲ್ಪನೆ ಯನ್ನು ಎದುರಾಗಿ ನಿಲ್ಲಿಸಿದ್ದರು ಎಂಬುದು ಜೀರ್ಣಿಸಿಕೊಳ್ಳಲಾಗದ ಐತಿಹಾಸಿಕ ದಾಖಲಾತಿ. ಅಂದು ಚರ್ಚೆ ಮುಂದುವರಿಸಿದ್ದ ಮೊಹಾನಿ ಅಂಬೇಡ್ಕರರ ಉದ್ದೇಶದಂತೆ ಭಾರತವು ರಾಜ್ಯಗಳ ಒಕ್ಕೂಟವಾದರೂ, ಇಲ್ಲಿ ರಾಜ್ಯಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡಬೇಕು, ಇದು ಬ್ರಿಟಿಷರು ಈ ಹಿಂದೆ ಮಾಡಿದ್ದ ಏಕಾತ್ಮಕ ನಿಯಮವನ್ನು ಅನುಸರಿಸಬಾರದು ಪ್ರತಿ ಪ್ರಾಂತ್ಯಕ್ಕೂ ತನ್ನದೇ ಆದ ನೀತಿ ನಿರ್ಧಾರಗಳನ್ನು ಮಾಡಿಕೊಳ್ಳುವ ಹಕ್ಕುಗಳನ್ನು ನೀಡಬೇಕು ಎಂದು ಆಗ್ರಹಿಸುವ ಮೂಲಕ, ಮತ್ತೊಮ್ಮೆ ಭಾರತ ಕಾನೂನಿನ ಮುಖಾಂತರವೇ ಛಿದ್ರವಾಗಬೇಕು ಎಂಬ ಹುನ್ನಾರವನ್ನು ಸೃಷ್ಟಿಸಿದ್ದರು.

ರಾಜ್ಯಗಳಿಗೆ ಸಂಪೂರ್ಣ ಸ್ವಾಯತ್ತತೆ ಕೊಡುವುದು ಎಂದರೆ ಐಕ್ಯ ಭಾರತವನ್ನು ಒಡೆಯುವುದೇ ಎಂದು ಅರ್ಥ.
ಇಂತದೇ ದುರುದ್ದೇಶದಿಂದ ಸಂವಿಧಾನದ ಒಳಗೆ ೩೭೦ನೇ ವಿಧಿಯನ್ನು ಅಂಬೇಡ್ಕರ್‌ರ ಅತೀವ ವಿರೋಧದ ನಡುವೆಯೂ ತೂರಿಸಿ 70 ವರ್ಷಗಳ ಕಾಲ ಭಾರತ ಸಂವಿಧಾನವು ಅಸಮಾನತೆಯಿಂದ ಬಾಧಿಸಿದ್ದನ್ನು ಕಾಣ ಬಹುದು. ಅದೆಷ್ಟು ರಭಸದಲ್ಲಿ ಮೊಹಾನಿ ಅಂಬೇಡ್ಕರರ ಮೇಲೆ ಎರಗಿದ್ದರು ಎಂದರೆ, ಡಾ. ಅಂಬೇಡ್ಕರ್ ಅವರು ಕೆಲವು ರಹಸ್ಯ ಕಾರಣಗಳಿಂದ ಈಗ ನಮ್ಮ ಮುಂದೆ ಹೊಸ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ, ಇಲ್ಲಿ ನಾವು ಚುನಾಯಿತ ಗೌರ್ನರ್‌ರನ್ನು ಹೊಂದಿರುವುದಿಲ್ಲ,

ಆದರೆ ಗೌರ್ನರ್‌ಗಳು ರಾಷ್ಟ್ರಪತಿಗಳಿಂದ ನಾಮಕರಣಗೊಳ್ಳುತ್ತಾರೆ ಮತ್ತು ರಾಷ್ಟ್ರಪತಿಗಳಿಂದ ನಾಮಕರಣ ಗೊಂಡಿದ್ದರೂ ಸಹ, ತುರ್ತು ಸಂದರ್ಭಗಳಲ್ಲಿ ರಾಷ್ಟ್ರಪತಿಗಳು ಅವರ ಮೇಲೆ ನಂಬಿಕೆ ಇಡುವುದಿಲ್ಲ ಮತ್ತು ಈ ತುರ್ತು ಪರಿಸ್ಥಿತಿ ಕೇಂದ್ರ ಅಥವಾ ರಾಷ್ಟ್ರಪತಿಗಳಿಂದ ನಿರ್ಧರಿಸಲ್ಪಡಬೇಕು ಎಂದಿದ್ದಾರೆ.

ಇದು ಏನನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರೆ, ಅಂಬೇಡ್ಕರ್ ತಮ್ಮ ಎಲ್ಲ ಪ್ರಮಾಣ ಮತ್ತು ನಿರ್ಧಾರಗಳಿಂದ ಹಿಂದೆ ಸರಿಯಬಯಸಿದ್ದಾರೆ. ಈಗ ಹೊಸದನ್ನು ಮಾಡುತ್ತಾರೆ ಮತ್ತು ಸಂವಿಧಾನದ ಮೂಲ ಸ್ವಭಾವವನ್ನೇ ಬದಲಿಸಿ ಬಿಡುತ್ತಾರೆ.

ಸಾಂಪ್ರದಾಯಿಕವಾಗಿ ನಮ್ಮ ಯೋಜನೆ ಏನಿತ್ತೆಂದರೆ ಭಾರತವು ಫೆಡರಲ್ ರಿಪಬ್ಲಿಕ್ ಗಣತಂತ್ರಗಳ ಒಕ್ಕೂಟವಾಗ ಬೇಕು ಎಂದು. ಅಂಬೇಡ್ಕರ್ ಒಕ್ಕೂಟ ಮಾದರಿಯನ್ನು ಬಯಸುತ್ತಾರೆ, ಎಲ್ಲ ವಿಭಾಗಗಳನ್ನು, ಎಲ್ಲ ಪ್ರಾಂತ್ಯ ಗಳನ್ನು ಮತ್ತು ರಾಜ್ಯಗಳ ಗುಂಪುಗಳನ್ನು, ಎಲ್ಲ ವಿಷಯವನ್ನು ಕೇಂದ್ರದ ಹಿಡಿತದಲ್ಲಿ ತರಲು ಬಯಸುತ್ತಾರೆ. ಮುಂದುವರೆದು, ಭಾರತವನ್ನು ಒಂದು ರೀತಿಯಲ್ಲಿ ಒಕ್ಕೂಟ ಸರಕಾರ ಮತ್ತು ಕೇವಲ ಒಕ್ಕೂಟ ಸರಕಾರವಲ್ಲ ಅದೊಂದು ರೀತಿಯ ಒಕ್ಕೂಟ ಸಾಮ್ರಾಜ್ಯವನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ನೋವನ್ನು ತೋಡಿ ಕೊಂಡಿದ್ದರು.

ಇವರು ಕೇವಲ ಮುಖವಾಣಿ, ಇವರ ಬೆನ್ನಿಗೆ ಇಂಥದ್ದೇ ಮನಸ್ಥಿತಿಯ ಹಲವರು ನಿಂತಿದ್ದರು ಎಂಬುದು ವಾಸ್ತವ. ಭಾರತವನ್ನು ನಿಯಮಗಳ ಅಡಿಯ ಒಡೆಯುವ ಸಂಚು ಎಷ್ಟು ಗಟ್ಟಿಯಾಗಿತ್ತು ಎಂದರೆ, ಇದೇ ಮೊಹಾನಿ ಅಂಬೇಡ್ಕರ್ ಇಡೀ ಭಾರತವನ್ನು ಒಂದಾಗಿ ನೋಡಲು ಬಯಸುತ್ತಿದ್ದಾರೆ ಮತ್ತು ಅವರು ಸ್ಥಾಪಿಸಲು ಹೊರಟಿರು ವುದು ಕೇವಲ ಸಾಮ್ರಾಜ್ಯ ಅಥವಾ ಅದೇ ರೀತಿಯ ಇನ್ನೊಂದನ್ನಲ್ಲ, ಬದಲಿಗೆ ಅವರು ಒಂದು ರೀತಿಯಲ್ಲಿ ಭಾರತೀಯ ಚಕ್ರಾಧಿಪತ್ಯವನ್ನು ಸ್ಥಾಪಿಸಲು ಬಯಸುತ್ತಾರೆ.

ಇಂತದ್ದೊಂದು ಆರೋಪ, ಆಗ್ರಹ, ಒತ್ತಡ ಭಾರತವನ್ನು ಒಂದಾಗಿಸಬಾರದೆಂಬ ಹೋರಾಟದ ಯೋಜನೆಯನ್ನು
ಸಾದೃಶಪಡಿಸುತ್ತದೆ. ಅಂದರೆ ರಷ್ಯಾ ಮಾದರಿಯ ಕಮ್ಯುನಿಸ್ಟ್ ಚಿಂತನೆಯನ್ನು ಭಾರತ ಶಾಸನಾತ್ಮಕವಾಗಿ
ಹೊಂದಬೇಕೆಂಬ ಹುನ್ನಾರ ಅವರ ಹೆಬ್ಬಯಕೆಯೇ ಆಗಿತ್ತು.‌ ಅದೇ ಕಾರಣಕ್ಕಾಗಿ ವಿಪರೀತವಾದ ಸಮಾಜವಾದ ವನ್ನು ಸಂವಿಧಾನದ ಭಾಗ ಮಾಡಬೇಕೆಂದು ಮೊಹಾನಿಯೂ ಸೇರಿದಂತೆ ನಝೀರುದ್ದೀನ್ ಅಹಮದ್, ಇಮಾಮ್ ಹುಸೇನ್, ಟಿ ಟಿ ಕೃಷ್ಣಮಚಾರಿ ಮುಂತಾದವರು ಪ್ರಯತ್ನಿಸಿದ್ದು ಉಂಟು. ಆದರೆ 15 ನವಂಬರ್ 1948ರಲ್ಲಿ ಕೆ ಟಿ ಷಾ ಮಂಡಿಸಿದ್ದ ಜಾತ್ಯಾತೀತತೆ ಮತ್ತು ಸಮಾಜವಾದವನ್ನು ಸಂವಿಧಾನದ ಭಾಗ ಮಾಡಬೇಕೆಂಬ ತಿದ್ದುಪಡಿ ತಿರಸ್ಕರಿಸುತ್ತ ಅಂಬೇಡ್ಕರರು ಈ ನೆಲ ಮೂಲ ಸಂಸ್ಕೃತಿಗೆ ವಿರುದ್ಧವಾದ, ಪಾಶ್ಚಾತ್ಯ ಕಲ್ಪನೆಯನ್ನು, ಜಾತ್ಯಾತೀತ ಚಿಂತನೆಯನ್ನು ಸಂವಿಧಾನದ ಒಳಗೆ ಬಿಡಲು ನಾನು ಒಪ್ಪುವುದೇ ಇಲ್ಲ ಹಾಗೂ ಈಗಾಗಲೇ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಸ್ಥಾಪಿತವಾಗಿರುವ ಸಮಾಜವಾದಿ ಚಿಂತನೆಗಳಿಗಿಂತ ವಿಪರೀತವಾದ ಸಮಾಜವಾದದ ಚಿಂತನೆಯನ್ನು ನಾನು ಒಪ್ಪುವುದೂ ಇಲ್ಲ ಎಂದು ಘೋಷಿಸಿಬಿಟ್ಟಿದ್ದರು.

ಅಂದೇ ಮುಂದುವರಿದ ಮಾತಿನಲ್ಲಿ ನೀವಿಂದು ಬಂಡವಾಳಶಾಹಿ ಪದ್ಧತಿಯ ವಿರುದ್ಧ ನಿಲ್ಲಬಹುದು, ಸಮಾಜ ವಾದವನ್ನು ಬೆಂಬಲಿಸಬಹುದು, ಆದರೆ ಮುಂದೊಂದು ದಿನ ಭವಿಷ್ಯ ಭಾರತದ ಜನ ಸಮಾಜವಾದವು
ಮೀರಿ ನಿಲ್ಲಬೇಕು ಎಂದು ಯೋಚಿಸಿದಾಗ ಅವರನ್ನು ಸಮಾಜವಾದಿ ಚಿಂತನೆಗೆ ನಿಯಮಗಳ ಅಡಿಯಲ್ಲಿ ಕಟ್ಟಿ
ಹಾಕುವುದು ಅಪರಾಧ ಎಂದು ಹೇಳಿದ್ದರು. ಇಂತಹ ಘಟನೆಗಳನ್ನು, ದಾಖಲಾತಿಗಳನ್ನು ಪರಾಮರ್ಶಿಸಿದಾಗ ಒಂದು ವೇಳೆ ಅಂಬೇಡ್ಕರರಂತ ರಾಷ್ಟ್ರ ಪ್ರೇಮಿ ಕರಡು ರಚನಾ ಸಮಿತಿಯ ಅಧ್ಯಕ್ಷರಾಗದೆ ಇದ್ದಿದ್ದರೆ, ಅವರು ಕಟಿಬದ್ಧತೆಯನ್ನು ತೋರದೆ ಇದ್ದಿದ್ದರೆ, ನೆಹರು ಮತ್ತು ಮುಸ್ಲಿಂ ಲೀಗ್ ನ ಆಶಯದಂತೆ ಭಾರತ ಕಮ್ಯುನಿಸ್ಟ ರಾಷ್ಟ್ರವಾಗುವ ಅಪಾಯವಿತ್ತು ಎಂಬುದನ್ನು ಸಂವಿಧಾನ ರಚನಾ ಸಭೆಯ ಚರ್ಚೆಯ ದಾಖಲಾತಿಗಳು ಭೋದಿಸು ತ್ತಿವೆ. ತನ್ನ ನೆಲ ಮೂಲವನ್ನು ಮರೆಯದಂತೆ, ಪರಂಪರೆಯನ್ನು ಬಿಡದಂತೆ, ಆದರ್ಶಗಳನ್ನು ತ್ಯಜಿಸಿದಂತೆ, ಸಂಸ್ಕೃತಿಯನ್ನು ದೂರೀಕರಿಸದಂತೆ ಸಂವಿಧಾನ ಸಭೆಯಲ್ಲಿ ಕಾವಲು ಕಾದ ಅಂಬೇಡ್ಕರರಿಗೆ 75 ವರ್ಷಗಳ ಈ ಸುಸಂದರ್ಭದಲ್ಲಿ ರಾಷ್ಟ್ರ ಪ್ರೇಮಿಗಳೆಲ್ಲರೂ ಭಾರತ ಭಾರತವಾಗಿಯೇ ಉಳಿದಿದ್ದಕ್ಕೆ, ಅದು ತನ್ನ ಮೂಲವನ್ನು ಉಳಿಸಿಕೊಂಡದ್ದಕ್ಕೆ ಪ್ರಣಾಮ ಗಳನ್ನು ಸಲ್ಲಿಸಬೇಕು.

ಭಾರತದ ಯುವಕರು ರಾಷ್ಟ್ರದ ಬಗ್ಗೆ ಅಂಬೇಡ್ಕರರಂತ ಪ್ರೇಮ, ಆದರಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದನ್ನು ಸಂವಿಧಾನ ರಚನಾ ಸಭೆಯ ನಡೆವಳಿಕೆಗಳು ತೋರಿಸಿಕೊಟ್ಟಿವೆ.

(ಆಧಾರ: ಸಂವಿಧಾನ ರಚನಾ ಸಭೆಯ ಚರ್ಚೆಗಳು ಸೆಪ್ಟಂಬರ್ 18.1949 ಪುಟ ಸಂಖ್ಯೆ 251, 252, 253,
268 ಸಂಪುಟ 9)

ಇದನ್ನೂ ಓದಿ: Dr Sudhakar Hosally Column: ಪರಿನಿರ್ವಾಣದ ನೆರಳಲ್ಲಿ ಸಂವಿಧಾನದ ಆತ್ಮ-ಶೋಧ