Tuesday, 7th January 2025

Nimisha Priya Case: ಕೇರಳದ ನರ್ಸ್‌ಗೆ ಯೆಮೆನ್‌ನಲ್ಲಿ ಮರಣದಂಡನೆ; ಪ್ರಕರಣದ ಬೆಳವಣಿಗೆಗಳನ್ನು ಗಮನಿಸುತ್ತಿರುವ ಭಾರತ

ನವದೆಹಲಿ: ಯೆಮನ್‌ನಲ್ಲಿ(Yemen) ಮರಣದಂಡನೆ ಶಿಕ್ಷೆಗೆ(Death Penalty) ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ(Nimisha Priya Case) ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಭಾರತ ಶುಕ್ರವಾರ(ಜ.3) ಹೇಳಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ಪ್ರಿಯಾ, ಜುಲೈ, 2017 ರಲ್ಲಿ ಯೆಮೆನ್ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ತಪ್ಪಿತಸ್ಥಳೆಂದು ಸಾಬೀತಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ನಿನ್ನೆ “ನಿಮಿಷ ಪ್ರಿಯಾ ಅವರ ಪ್ರಕರಣದ ಸುತ್ತಲಿನ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ” ಎಂದಿದ್ದಾರೆ. 37 ವರ್ಷದ ನರ್ಸ್ ಸದ್ಯಕ್ಕೆ ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದಲ್ಲಿನ ಜೈಲಿನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುವಾರ(ಜ.2) ಇರಾನ್ ಅಧಿಕಾರಿಯೊಬ್ಬರು ಈ ಪ್ರಕರಣದಲ್ಲಿ ಇರಾನ್ ಏನು ಮಾಡಬಹುದೋ ಅದನ್ನು ಮಾಡುತ್ತದೆ ಎಂದು ಹೇಳಿದ್ದಾರೆ. ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮಹದಿ ವಶಪಡಿಸಿಕೊಂಡಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಹಿಂಪಡೆಯಲು ಪ್ರಿಯಾ ಚುಚ್ಚುಮದ್ದಿನ ಮಿತಿಮೀರಿದ ನಿದ್ರಾಹೀನತೆಯಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, 2020 ರಲ್ಲಿ ವಿಚಾರಣಾ ನ್ಯಾಯಾಲಯದಿಂದ ಪ್ರಿಯಾಗೆ ಮರಣದಂಡನೆ ವಿಧಿಸಲಾಯಿತು. ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023 ರಲ್ಲಿ ತೀರ್ಪನ್ನು ಎತ್ತಿಹಿಡಿದಿದೆ. ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಕೆಲವು ದಿನಗಳ ಹಿಂದೆ ಪ್ರಿಯಾಗೆ ಮರಣದಂಡನೆಯನ್ನು ಸಮ್ಮತ್ತಿಸಿದ್ದಾರೆ. ಸದ್ಯ ಸನಾದಲ್ಲಿರುವ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರು ತಮ್ಮ ಮಗಳ ಜೀವ ಉಳಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಯೆಮೆನ್‌ನಿಂದ ವಿಡಿಯೊ ಮೂಲಕ ಸಂದೇಶ ಕಳುಹಿಸಿರುವ ಪ್ರೇಮಾ ಕುಮಾರಿ ಕೇಂದ್ರ ಸರ್ಕಾರ ಮತ್ತು ಇತರ ಅಧಿಕಾರಿಗಳು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ. “ಇದು ನನ್ನ ಅಂತಿಮ ಮನವಿ. ಇನ್ನು ಕೆಲವೇ ದಿನಗಳು ಉಳಿದಿವೆ. ಕ್ರಿಯಾ ಮಂಡಳಿಯ ಪ್ರತಿಯೊಬ್ಬ ಸದಸ್ಯರು ನಿಧಿ ಸಂಗ್ರಹಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಆಕೆಯ ಜೀವ ಉಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವಂತೆ ನಾನು ಕೇಂದ್ರ ಸರ್ಕಾರ ಮತ್ತು ಮಂಡಳಿಯನ್ನು ಬೇಡಿಕೊಳ್ಳುತ್ತೇನೆ, ”ಎಂದು ಹೇಳಿದರು.

ಏನಿದು ಪ್ರಕರಣ?

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ನಿಮಿಷಾ ಪ್ರಿಯಾ 2008 ರಲ್ಲಿ ಯೆಮೆನ್‌ ದೇಶಕ್ಕೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ ತನ್ನದೇ ಆದ ಸ್ವಂತ ಕ್ಲಿನಿಕ್ ಸ್ಥಾಪಿಸುವ ಯೋಜನೆಗೆ ಕೈ ಹಾಕಿದ್ದರು. 2017 ರಲ್ಲಿ ಸ್ಥಳೀಯ ಪಾಲುದಾರ ತಲಾಲ್ ಅಬ್ದೋ ಮಹದಿಯೊಂದಿಗೆ ಜಗಳವಾಡಿದ್ದರು. ಆತ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಹಣವನ್ನು ಕೂಡ ದುರುಪಯೋಗಪಡಿಸಿಕೊಂಡಿದ್ದ.

ಅಲ್ಲದೆ ತನ್ನ ಸ್ನೇಹಿತರೊಂದಿಗೂ ದೈಹಿಕ ಸಂಬಂಧವನ್ನು ಹೊಂದುವಂತೆ ಮಾನಸಿಕವಾಗಿ ಹಿಂಸೆ ನೀಡಿದ್ದನು ಎಂದು ಹೇಳಲಾಗಿತ್ತು. “ಆತನನ್ನು ಪ್ರಿಯಾ ಸಾಕಷ್ಟು ವಿರೋಧಿಸಿದ್ದಳು. ಮನವೊಲಿಸಲು ಪ್ರಯತ್ನಪಟ್ಟರೂ ಅವನು ಬಗ್ಗಿರಲಿಲ್ಲ ಎಂದು ಪ್ರಿಯಾ ಕುಟುಂಬ ಸದಸ್ಯರು ಹೇಳಿದ್ದರು. ಆತ ವಶಪಡಿಸಿಕೊಂಡಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರುಪಡೆಯುವ ಪ್ರಯತ್ನದಲ್ಲಿ ಮತ್ತಿನ ಇಂಜೆಕ್ಷನ್ (Sedatives) ಹಾಕಿದ್ದಾರೆ. ಆತನ ಸಾವಿಗೆ ಇದೇ ಕಾರಣ ಎಂಬ ಆರೋಪವಿದೆ.

ಬಳಿಕ ಯೆಮೆನ್‌ನಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಆಕೆಯನ್ನು ಕೊಲೆ ಪ್ರಕರಣದ ಆರೋಪದ ಮೇಲೆ ಬಂಧಿಸಲಾಗಿತ್ತು. 2018 ರಲ್ಲಿ ಅಪರಾಧಿ ಎಂದು ಘೋಷಿಸಲಾಯಿತು. 2020 ರಲ್ಲಿ ಸನಾದಲ್ಲಿನ ವಿಚಾರಣಾ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಿತು.

ಈ ಸುದ್ದಿಯನ್ನೂ ಓದಿ:Controversy: ಸಿಪಿಐ(ಎಂ) ಕಾರ್ಯಕ್ರಮಕ್ಕೆ ಬಾಂಗ್ಲಾ ಗಾಯಕಿಗೆ ಆಹ್ವಾನ; ಭುಗಿಲೆದ್ದ ವಿವಾದ