Tuesday, 7th January 2025

Delhi Polls: ದೆಹಲಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಸ್ಪರ್ಧೆ

ನವದೆಹಲಿ: ಮುಂಬರಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ(BJP) ಇಂದು (ಜ. 4) ತನ್ನ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ (Delhi Polls).

ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್(Aravind Kejriwal) ವಿರುದ್ಧ ಮಾಜಿ ಸಂಸದ ಪರ್ವೇಶ್(Parvesh) ಸ್ಪರ್ಧಿಸಲಿದ್ದು, ಮುಖ್ಯಮಂತ್ರಿ ಅತಿಶಿ ಹೆಸರು ಘೋಷಣೆಯಾಗಿರುವ ಕಲ್ಕಾಜಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ್ ಬಿಧುರಿ ಅವರನ್ನು ಬಿಜೆಪಿ ಚುನಾವಣಾ ಕಣಕ್ಕಿಳಿಸಿದೆ. ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳಾದ ದುಶ್ಯಂತ್ ಕುಮಾರ್ ಗೌತಮ್ ಹಾಗೂ ಆಶಿಶ್ ಸೂದ್ ಅವರನ್ನು ಕ್ರಮವಾಗಿ ಕರೋಲ್ ಬಾಗ್ ಹಾಗೂ ಜನಕಪುರಿ ಕ್ಷೇತ್ರದಿಂದ, ಅರವಿಂದರ್ ಸಿಂಗ್ ಲವ್ಲಿ ಅವರನ್ನು ಗಾಂಧಿನಗರ, ಎಎಪಿ ಮಾಜಿ ನಾಯಕ ಕೈಲಾಶ್ ಗೆಹಲೋತ್‌ ಅವರನ್ನು ಬಿಜ್ವಾಸನ್‌ನಿಂದ ಸ್ಫರ್ಧೆಗೆ ಇಳಿಸಿದೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಅವರು ಮಾಳವೀಯ ನಗರದಿಂದ ಸ್ಪರ್ಧಿಸಲಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಅತಿಶಿ ವಿರುದ್ಧ ಅಲ್ಕಾ ಲಾಂಬಾ 

ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿದ್ದು, ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಹೆಸರನ್ನು ಘೋಷಿಸಲಾಗಿದೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಾಂಬಾ ಅವರನ್ನು ಕಲ್ಕಾಜಿ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಕೇಂದ್ರ ಚುನಾವಣಾ ಸಮಿತಿ ಅನುಮೋದಿಸಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹೇಳಿದೆ. ಅಲ್ಕಾ ಲಾಂಬಾ ಈ ಹಿಂದೆ 2015ರಲ್ಲಿ ಚಾಂದಿನಿ ಚೌಕ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಸೆಪ್ಟೆಂಬರ್ 2019ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 47 ಅಭ್ಯರ್ಥಿಗಳನ್ನೊಳಗೊಂಡ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಎಪಿ ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಎಪಿ ದೆಹಲಿಯ ‘Aaapda’, ಚುನಾವಣೆಯಲ್ಲಿ ಸೋಲಿಸಿ: ಮೋದಿ

ಆಮ್ ಆದ್ಮಿ ಪಾರ್ಟಿಯು ದೆಹಲಿಯ ‘ವಿಪತ್ತು’ ಆಗಿದ್ದು, ಕಳೆದ 10 ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಾಕಷ್ಟು ವಾಗ್ದಾಳಿ ನಡೆಸಿದ್ದಾರೆ.

ವಸತಿ ಮತ್ತು ಶಿಕ್ಷಣ ಕ್ಷೇತ್ರಗಳು ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ಮೂಲಭೂತ ಯೋಜನೆಗಳನ್ನು ಉದ್ಘಾಟಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಅದರ (ಎಎಪಿ) ಆಳ್ವಿಕೆಯು ಮುಂದುವರಿದರೆ ರಾಷ್ಟ್ರ ರಾಜಧಾನಿಯ ಪರಿಸ್ಥಿತಿಯು ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದರು. ಒಂದೆಡೆ, ಕೇಂದ್ರವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ; ಮತ್ತೊಂದೆಡೆ, ಕೇಂದ್ರಾಡಳಿತ ಪ್ರದೇಶದಲ್ಲಿನ ಸರ್ಕಾರವು ಕಟುವಾದ ಸುಳ್ಳಿನ ಪರವಾಗಿ ನಿಂತಿದೆ. ಎಎಪಿ ಸರ್ಕಾರವು ಶಾಲಾ ಶಿಕ್ಷಣದಿಂದ ಹಿಡಿದು ಮಾಲಿನ್ಯ ಮತ್ತು ಮದ್ಯ ವ್ಯಾಪಾರದವರೆಗೆ ಹಲವಾರು ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಮುಂದಿನ ತಿಂಗಳು ದೆಹಲಿಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ದೆಹಲಿಯು ಈ ‘ಆಪ್ಡಾ’ (ವಿಪತ್ತು)ದ ಮೇಲೆ ಯುದ್ಧವನ್ನು ಪ್ರಾರಂಭಿಸಿದೆ ಮತ್ತು ಅದನ್ನು ತೊಡೆದುಹಾಕಲು ನಿರ್ಧರಿಸಿದೆ. ಈ ವರ್ಷ ರಾಷ್ಟ್ರ ನಿರ್ಮಾಣ ಮತ್ತು ಜನರ ಕಲ್ಯಾಣದ ಹೊಸ ರಾಜಕೀಯಕ್ಕೆ ನಾಂದಿಯಾಗಲಿದೆ. ಆದ್ದರಿಂದ, ‘ಆಪ್ಡಾ’ವನ್ನು ತೆಗೆದುಹಾಕಬೇಕು ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಕಾರ್ಮಿಕರ ದುರ್ಮರಣ