Tuesday, 7th January 2025

IND vs AUS: ʻಅಷ್ಟೆ, ನಿಮ್ಮ ಕಥೆ ಮುಗಿಯಿತುʼ-ವಿರಾಟ್‌ ಕೊಹ್ಲಿ ವಿರುದ್ಧ ಫ್ಯಾನ್ಸ್‌ ಆಕ್ರೋಶ!

IND vs AUS: ʻVirat Kohli, you're doneʼ- Cricket Fans furious as Australian horror ends

ಸಿಡ್ನಿ: ವಿರಾಟ್‌ ಕೊಹ್ಲಿಗೆ ಏನಾಗಿದೆ? ಒಂದಲ್ಲ, ಎರಡರಲ್ಲ, ಮೂರಲ್ಲ ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ (IND vs AUS) ಎಂಟು ಬಾರಿ ಆಫ್‌ ಸ್ಟಪ್‌ ಹೊರಗಡೆ ಎಸೆತಗಳನ್ನು ಆಡಲು ಪ್ರಯತ್ನಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಇದರಿಂದ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಮಾತ್ರವಲ್ಲ, ಕ್ರಿಕೆಟ್‌ ಅಭಿಮಾನಿಗಳು ಕೂಡ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳಬಹುದು, ಮುಂದಿನ ಪಂದ್ಯದಲ್ಲಿ ಈ ತಪ್ಪನ್ನು ತಿದ್ದಿಕೊಳ್ಳಬಹುದೆಂಬ ಮಾಜಿ ಕ್ರಿಕೆಟಿಗರ ಹಾಗೂ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಆದರೆ, ಅದೇ ರಾಗ-ಅದೇ ತಾಳ ಎಂಬಂತೆ ವಿರಾಟ್‌ ಕೊಹ್ಲಿ ಆಫ್‌ ಸ್ಟಂಪ್‌ ಹೊರಗಡೆ ಎಸೆತಗಳಲ್ಲಿ ಮಾಡುತ್ತಿರುವ ತಪ್ಪನ್ನು ತಿದ್ದಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಸರಣಿಯಲ್ಲಿ ಬ್ಯಾಟ್‌ ಮಾಡಿದ 9 ಇನಿಂಗ್ಸ್‌ಗಳ ಪೈಕಿ 8 ಬಾರಿ ಆಫ್‌ ಸ್ಟಂಪ್‌ ಹೊರಗಡೆಯ ಎಸೆತಗಳನ್ನು ಆಡಿ ವಿಕೆಟ್‌ ಒಪ್ಪಿಸಿದ್ದಾರೆ.

ಸಿಡ್ನಿ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿಯೂ ಅದೇ ರೀತಿ ವಿಕೆಟ್‌ ಒಪ್ಪಿಸಿದ್ದ ವಿರಾಟ್‌ ಕೊಹ್ಲಿ, ದ್ವಿತೀಯ ಇನಿಂಗ್ಸ್‌ನಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಶನಿವಾರ ಸ್ಕಾಟ್‌ ಬೋಲೆಂಡ್‌ ಎಸೆದ ಔಟ್‌ ಸೈಡ್‌ ಆಫ್‌ ಸ್ಟಂಪ್‌ ಎಸೆತವನ್ನು ಆಡಲು ಹೋಗಿ ವಿರಾಟ್‌ ಕೊಹ್ಲಿ ಮತ್ತೊಮ್ಮೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ವಿರಾಟ್‌ ಕೊಹ್ಲಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ಆಫ್‌ ಸ್ಟಂಪ್‌ ರಣತಂತ್ರಕ್ಕೆ ಬಲಿಯಾಗಿದ್ದಾರೆ.

ಅದರಲ್ಲಿಯೂ ವಿಶೇಷವಾಗಿ ಆಸ್ಟ್ರೇಲಿಯಾ ವಿರುದ್ಧ ಸ್ಕಾಟ್‌ ಬೋಲೆಂಡ್‌ ವಿರುದ್ಧ ಅತಿ ಹೆಚ್ಚು ಬಾರಿ ವಿಕೆಟ್‌ ಒಪ್ಪಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಮಾಧ್ಯಮದ ಜೊತೆ ಮಾತನಾಡಿದ ಸ್ಕಾಟ್‌ ಬೋಲೆಂಡ್‌, ವಿರಾಟ್‌ ಕೊಹ್ಲಿಯನ್ನು ಔಟ್‌ ಮಾಡುವ ತನ್ನ ರಣತಂತ್ರದ ಬಗ್ಗೆ ಬಹಿರಂಗಪಡಿಸಿದ್ದಾರೆ.

“ವಿರಾಟ್‌ ಕೊಹ್ಲಿಗೆ ಹೇಗೆ ಬೌಲ್‌ ಮಾಡೆಬೇಕೆಂಬ ಸೆಟ್‌ ಪ್ಲ್ಯಾನ್‌ ಏನೆಂಬುದು ನಮಗೆ ಗೊತ್ತಿದೆ. ನಮ್ಮ ಬೌಲಿಂಗ್‌ ಲೈನ್‌ ಅನ್ನು ಸ್ವಲ್ಪ ಐದನೇ ಸ್ಟಂಪ್‌ಗೆ ಹಾಕುವುದು ನಮ್ಮ ಯೋಜನೆಯಾಗಿದೆ. ಸದ್ಯ ಇದು ಯೋಜನೆ ನಮಗೆ ಕೆಲಸ ಮಾಡುತ್ತಿದೆ,” ಎಂದು ಜಾಶ್‌ ಹೇಝಲ್‌ವುಡ್‌ ಸ್ಥಾನದಲ್ಲಿ ಆಡುತ್ತಿರುವ ಸ್ಕಾಟ್‌ ಬೋಲೆಂಡ್‌ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ವಿರುದ್ಧ ಫ್ಯಾನ್ಸ್‌ ಅಸಮಾಧಾನ

ವಿರಾಟ್‌ ಕೊಹ್ಲಿ ಈ ಸರಣಿಯಲ್ಲಿ ಆಫ್‌ ಸ್ಟಂಪ್‌ ಹೊರಗಡೆಯ ಎಸೆತಗಳಲ್ಲಿ ವಿಕೆಟ್‌ ಒಪ್ಪಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸ್ಟಾರ್‌ ಬ್ಯಾಟ್ಸ್‌ಮನ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಸಲ ಅಥವಾ ಎರಡು ಸಲ ಅಂದರೆ ಪರವಾಗಿಲ್ಲ, ಆದರೆ ಅವರು ಬರೋಬ್ಬರಿ ಎಂಟು ಬಾರಿ ಆಫ್‌ ಸ್ಟಂಪ್‌ ಹೊರಗಡೆಯ ಎಸೆತಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ. ಇದರಿಂದ ವಿರಾಟ್‌ ಕೊಹ್ಲಿ ವಿರುದ್ದ ಅಭಿಮಾನಿಗಳಿಗೆ ಬೇಸರಗೊಂಡಿದ್ದಾರೆ.

ಈ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಕ್ರಮವಾಗಿ 5, 100*, 7, 11, 3, 36, 5, 17 ಹಾಗೂ 6 ರನ್‌ಗಳಿಗೆ ಸೀಮಿತರಾಗಿದ್ದಾರೆ. ಆ ಮೂಲಕ ಒಟ್ಟು ಈ ಸರಣಿಯಲ್ಲಿ ಕೊಹ್ಲಿ 23.75ರ ಸರಾಸರಿಯಲ್ಲಿ 190 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಿಂಗ್‌ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: Jasprit Bumrah: ಭಾರತ ತಂಡಕ್ಕೆ ಆಘಾತ; ಅರ್ಧದಲ್ಲೇ ಪಂದ್ಯ ತೊರೆದು ಆಸ್ಪತ್ರೆಗೆ ತೆರಳಿದ ಬುಮ್ರಾ