Tuesday, 7th January 2025

Viral Video: ಅಬ್ಬಾ! ಇದೆಂಥ ಸಾಹಸ; ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ನಾಲಗೆಯಿಂದ ನಿಲ್ಲಿಸುವ ಡ್ರಿಲ್‌ಮ್ಯಾನ್

ಹೈದರಾಬಾದ್:‌ ನಮ್ಮ ನಡುವೆ ಸಾಕಷ್ಟು ವಿಚಿತ್ರ ಸಾಹಸ ತೋರುವ ವ್ಯಕ್ತಿಗಳಿದ್ದಾರೆ. ಅವರ ಸಾಹಸ ದೃಶ್ಯಗಳನ್ನು ನೋಡಿದಾಗ ಮೈ ಜುಮ್ಮೆನ್ನಿಸುತ್ತದೆ. ಇತ್ತೀಚೆಗೆ ಲಡ್ಡು ಮುತ್ಯಾ ಎಂಬ ವ್ಯಕ್ತಿ ತಮ್ಮ ಸಾಹಸದಿಂದ ಪವಾಡ ಪುರುಷ ಎನಿಸಿಕೊಂಡರು. ಅವರು ತಮ್ಮ ಒಂದು ಕೈಯಿಂದ ಸೀಲಿಂಗ್‌ ಫ್ಯಾನ್‌ ಅನ್ನು ನಿಲ್ಲಿಸುವ ಮೂಲಕ ಸಖತ್‌ ವೈರಲ್‌ ಆಗಿದ್ದರು. ಅವರನ್ನು ಪವಾಡ ಪುಣ್ಯ ಪುರುಷ ಎಂದು ಭಾವಿಸಿದ ಜನರು ʼಪಂಖಾ ಬಾಬಾʼ ಎಂದು ಕರೆದರು. ಈಗ ಇಲ್ಲೊಬ್ಬ ವ್ಯಕ್ತಿ ಒಂದು ನಿಮಿಷದಲ್ಲಿ ಬರೋಬ್ಬರಿ 57 ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ನಾಲಗೆಯಿಂದ ನಿಲ್ಲಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆ. ತೆಲಂಗಾಣ ಮೂಲದ ಕ್ರಾಂತಿ ಕುಮಾರ್ ಪಣಿಕೇರ ಅವರು ತಮ್ಮ ಅಸಾಮಾನ್ಯ ಸಾಹಸಗಳಿಂದಾಗಿ ʼಡ್ರಿಲ್ ಮ್ಯಾನ್ʼ (Drill Man) ಎಂದು ಕರೆಸಿಕೊಂಡಿದ್ದಾರೆ (Viral Video).

ಪಣಿಕೇರ ಸೂರ್ಯಪೇಟೆಯ ನಿವಾಸಿಯಾಗಿದ್ದು, ಮೂಗಿಗೆ ಡ್ರಿಲ್ ಹಾಕಿಕೊಂಡು ತಮ್ಮ ಬೆರಳುಗಳಿಂದ ಫ್ಯಾನ್ ನಿಲ್ಲಿಸುವಂಥ ವಿಚಿತ್ರ ಸಾಹಸಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹಲವಾರು ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಾಹಸಿ ವ್ಯಕ್ತಿ ನಾಲ್ಕು ಬಾರಿ ಗಿನ್ನಿಸ್ ದಾಖಲೆಯನ್ನು ಬರೆದಿದ್ದಾರೆ (Guinness World Record). ಇದೀಗ ಪಣಿಕೇರ ಅವರ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಅವರ ಸಾಹಸದ ವಿಡಿಯೊ ಹಂಚಿಕೊಂಡಿದ್ದು “ಕ್ರಾಂತಿ ಕುಮಾರ್ ಪಣಿಕೇರ ಡ್ರಿಲ್‌ಮ್ಯಾನ್ ಅವರು ಒಂದು ನಿಮಿಷದ ಅವಧಿಯಲ್ಲಿ 57 ಎಲೆಕ್ಟ್ರಿಕ್ ಫ್ಯಾನ್ ಬ್ಲೇಡ್‌ಗಳನ್ನು ನಾಲಗೆಯ ಮೂಲಕ ನಿಲ್ಲಿಸುತ್ತಾರೆ” ಎಂದು ಬರೆದಿದ್ದಾರೆ.

ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ಡ್ರಿಲ್‌ಮ್ಯಾನ್‌ ಅವರು “ನಾನು ಒಂದು ಸಣ್ಣ ಹಳ್ಳಿಯಿಂದ ಬಂದವನು. ನನಗೆ ನೂರಾರು ಕನಸುಗಳಿದ್ದವು. ನಮ್ಮಂಥವರಿಗೆ ಕನಸು ಕಾಣುವುದು ಕೂಡ ಕಷ್ಟವಿತ್ತು. ಇಂದು ನಾಲ್ಕು ಗಿನ್ನಿಸ್ ವಿಶ್ವ ದಾಖಲೆಗಳನ್ನು ಬರೆದಿದ್ದೇನೆ ಎಂದರೆ ನಂಬಲಾಗುತ್ತಿಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಗುರುತಿಸಲ್ಪಟ್ಟಿದ್ದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ, ”ಎಂದು ತಿಳಿಸಿದ್ದಾರೆ. “ಈ ಸಾಧನೆಯು ಮೈಲಿಗಲ್ಲು ಮಾತ್ರವಲ್ಲದೆ, ಈ ವರ್ಷಗಳಲ್ಲಿ ನಾನು ಮಾಡಿದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ.

ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಒಇನ್‌ಸ್ಟಾಗ್ರಾಮ್‌ನಲ್ಲಿ ಸರಿ ಸುಮಾರು 6 ಕೋಟಿ ಜನರು ವೀಕ್ಷಿಸಿದ್ದು, ಹಲವು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಅಂತಹ ಸಾಹಸಗಳ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತು ಇನ್ನೂ ಕೆಲವರು ದಾಖಲೆಯ ಉದ್ದೇಶದ ಬಗ್ಗೆ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಕಾರ್ಮಿಕರ ದುರ್ಮರಣ