Tuesday, 7th January 2025

Ram Charan: ಟಿವಿಯಲ್ಲಿ ಮೊದಲ ಬಾರಿ ಅಪ್ಪನನ್ನು ನೋಡಿ ಖುಷಿ ಪಟ್ಟ ರಾಮ್‌ ಚರಣ್‌ ಮಗಳು; ಕ್ಯೂಟ್‌ ವಿಡಿಯೊ ಇಲ್ಲಿದೆ

Ram Charan

ಹೈದರಾಬಾದ್‌: ಟಾಲಿವುಡ್‌ ಹೀರೋ ರಾಮ್‌ ಚರಣ್‌ (Ram Charan) ಒಂದಾದ ಮೇಲೊಂದು ಸಿನಿಮಾಗಳಲ್ಲಿ ಸಕ್ಕತ್‌ ಬ್ಯುಸಿಯಾಗಿದ್ದಾರೆ. ಮುಂಬರಲಿರುವ ‘ಗೇಮ್‌ ಚೇಂಜರ್‌’ (Game Changer) ಸಿನಿಮಾದಲ್ಲಿ ತೊಡಗಿರುವ ಅವರು ಬಿಡುವಿನ ಸಮಯವನ್ನು ತಮ್ಮ ಕುಟುಂಬಸ್ಥರ ಜತೆ ಕಳೆಯುತ್ತಾರೆ. ಕಳೆದ ವರ್ಷವಷ್ಟೇ ರಾಮ್‌ ಚರಣ್‌ ಹಾಗೂ ಉಪಾಸನಾ (Upasana Konidela) ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದರು. ತಮ್ಮ ಮಗಳಿಗೆ ಕ್ಲಿಂಕಾರಾ (Klin Kaara) ಎಂದು ಹೆಸರಿಟ್ಟಿದ್ದಾರೆ. ಇದೀಗ ಉಪಾಸನಾ ತಮ್ಮ ಮಗಳು ಟಿವಿಯಲ್ಲಿ ತಂದೆಯನ್ನು ಗುರುತಿಸುವುದನ್ನು ಹಂಚಿಕೊಂಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕ್ಯೂಟ್‌ ವಿಡಿಯೊ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ಟಿವಿಯಲ್ಲಿ ʼಆರ್‌ಆರ್‌ಆರ್‌ʼ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಕ್ಲಿಂಕಾರಾ ಇದ್ದಕ್ಕಿದ್ದಂತೆ ತನ್ನ ತಂದೆಯನ್ನು ಪರದೆಯ ಮೇಲೆ ಗುರುತಿಸುತ್ತಾಳೆ. ಟಿವಿಯನ್ನು ತೋರಿಸುತ್ತಾ,ಉತ್ಸಾಹದಿಂದ ಕೂಗುತ್ತಾಳೆ. ಹಿನ್ನೆಲೆಯಲ್ಲಿ ಉಪಾಸನಾ ನಗುತ್ತಿರುವುದನ್ನು ಕೇಳಬಹುದು. ಉತ್ಸುಕರಾದ ರಾಮ್ ಚರಣ್ ಕೂಡ “ಯಾರು ಅದು?” ಎಂದು ಕೇಳುತ್ತಾರೆ.

ಇದನ್ನು ಹಂಚಿಕೊಂಡ ಉಪಾಸನಾ ʼಆರ್‌ಆರ್‌ಆರ್‌ʼ ಸಿನಿಮಾ ನಮಗೆ ಲೆಕ್ಕವಿಲ್ಲದಷ್ಟು ರೀತಿಯ ಖುಷಿಯನ್ನು ಹಾಗೂ ಅನುಭವವನ್ನು ನೀಡಿದೆ. ಕ್ಲಿಂಕಾರಾ ಮೊದಲ ಬಾರಿಗೆ ಟಿವಿಯಲ್ಲಿ ತನ್ನ ತಂದೆಯನ್ನು ನೋಡಿ ಅಷ್ಟು ಖುಷಿಯಾಗಿದ್ದಾಳೆ. ರಾಮ್‌ ಚರಣ್‌ ನಿಮ್ಮ ಬಗ್ಗೆ ನನಗೆ ಯಾವಾಗಲೂ ಹೆಮ್ಮೆಯಿದೆ. ಮುಂಬರಲಿರುವ ʼಗೇಮ್‌ ಚೇಂಜರ್‌ʼಗಾಗಿ ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ.

‘ಗೇಮ್ ಚೇಂಜರ್’ ಸಿನಿಮಾ ಜನವರಿ 10ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾದ ಮೇಲೆ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ಅಂಜಲಿ ನಾಯಕಿಯರಾಗಿ ನಟಿಸುತ್ತಿದ್ದು, ಸಿನಿಮಾದಲ್ಲಿ ಎಸ್.​ಜೆ.ಸೂರ್ಯ ವಿಲನ್, ಸುನಿಲ್ ಹಾಸ್ಯ ನಟನ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು,ಗಮನ ಸೆಳೆದಿದೆ.  ಸಿನಿಮಾದ ಪ್ರೀ ರಿಲೀಸ್ ಇವೆಂಟ್ ರಾಜಮಂಡ್ರಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಬೆಳ್ಳಿತೆರೆಯಲ್ಲಿ ʼಗೇಮ್ ಚೇಂಜರ್ʼ ಸಿನಿಮಾ ನೋಡಲು ಅಭಿಮಾನಿಗಳು ಸೇರಿದಂತೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. 

ಈ ಸುದ್ದಿಯನ್ನೂ ಓದಿ : Game Changer Trailer: ಮತ್ತೊಂದು ಪವರ್‌ಫುಲ್‌ ಪಾತ್ರದಲ್ಲಿ ರಾಮ್‌ ಚರಣ್‌; ಬಹು ನಿರೀಕ್ಷಿತ ‘ಗೇಮ್‌ ಚೇಂಜರ್‌ʼ ಟ್ರೈಲರ್‌ ಔಟ್‌