Wednesday, 8th January 2025

First Circle Udyami Vokkaliga Expo: ಎನ್‌ಆರ್‌ಐ ಒಕ್ಕಲಿಗ ವೇದಿಕೆಯನ್ನು ಸೃಷ್ಟಿಸುವ ಅಗತ್ಯವಿದೆ: ಡಾ. ಆರತಿ ಕೃಷ್ಣ

First Circle Udyami Vokkaliga Expo (1)

ಬೆಂಗಳೂರು: ವಿಶ್ವದಾದ್ಯಂತ ಒಕ್ಕಲಿಗ ಸಮುದಾಯವನ್ನು ಸಂಪರ್ಕಿಸುವ ಮತ್ತು ಬೆಂಬಲಿಸುವಂತಹ ಎನ್‌ಆರ್‌ಐ ಒಕ್ಕಲಿಗ ವೇದಿಕೆಯನ್ನು ನಿರ್ಮಿಸುವ ಅಗತ್ಯವಿದೆ ಎಂದು ಅನಿವಾಸಿ ಭಾರತೀಯ ಫೋರಂ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ 2025 ರ ಕಾರ್ಯಕ್ರಮದಲ್ಲಿ (First Circle Udyami Vokkaliga Expo) ಪಾಲ್ಗೊಂಡು ಅವರು ಮಾತನಾಡಿದರು.

ವಿದೇಶದಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯಗಳಿಗೆ ಮೀಸಲಾದ ಸೆಲ್‌ ಅನ್ನು ರಚಿಸಬೇಕು. ಈ ಉಪಕ್ರಮವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ಭಾರತದ ಹೊರಗಿರುವ ಒಕ್ಕಲಿಗರ ನಿಖರ ಸಂಖ್ಯೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿದೆ. ಇದು ಅನಿವಾಸಿ ಒಕ್ಕಲಿಗರನ್ನು ಸಂಪರ್ಕಿಸಲು, ಅಗತ್ಯ ಸಲಹೆಗಳನ್ನು ನೀಡಲು ಮತ್ತು ಮಾಹಿತಿ ಕಲೆ ಹಾಕಲು ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಆರತಿ ಕೃಷ್ಣ ಅವರು ಪ್ರಸ್ತುತ ಸರ್ಕಾರದಲ್ಲಿ ಕ್ಯಾಬಿನೆಟ್‌ನಲ್ಲಿ ಮರುನೇಮಕಗೊಂಡಿದ್ದಾರೆ. ವಾಷಿಂಗ್ಟನ್ ಡಿಸಿ ಯ ಭಾರತೀಯ ರಾಯಭಾರ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಭಾರತೀಯ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಇಂಡಿಯಾ ಡೆವಲಪ್‌ಮೆಂಟ್ ಫೌಂಡೇಶನ್‌ನೊಂದಿಗೆ ಸಲಹೆಗಾರರಾಗಿ ಕೆಲಸ ಮಾಡಿರುವ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದರ ಜತೆಗೆ ಕರ್ನಾಟಕದ ಹಳ್ಳಿಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷ್ಣ ಫೌಂಡೇಶನ್‌ ಎಂಬ ಎನ್‌ಜಿಒ ಸ್ಥಾಪಿಸಿರುವುದಾಗಿ ಅವರು ತಿಳಿಸಿದರು.

ಪ್ರಸ್ತುತ ಉದ್ಯಮಿ ಒಕ್ಕಲಿಗ ಎಕ್ಸ್‌ಪೋದಲ್ಲಿ ಪಾಲ್ಗೊಂಡು ಅದರ ಉಪಕ್ರಮಗಳ ಕುರಿತಾಗಿ ಚರ್ಚಿಸಿದ ಡಾ. ಆರತಿ ಕೃಷ್ಣ ಅವರು, ಸಿದ್ದರಾಮಯ್ಯ ಸರ್ಕಾರದ ಅಡಿಯಲ್ಲಿ ಎನ್‌ಆರ್‌ಐ ಸಮಿತಿಯನ್ನು ಪುನಃ ಸಕ್ರಿಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಎನ್‌ಆರ್‌ಐ ಕನ್ನಡಿಗರ ಅಗತ್ಯತೆಯನ್ನು ಪರಿಹರಿಸಲು ಶಾಶ್ವತವಾದ ಮೀಸಲಾದ ಸಚಿವಾಲಯವನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಎಫ್‌ಸಿ ಎಕ್ಸ್‌ಪೋ ನಿಜಕ್ಕೂ ಒಕ್ಕಲಿಗರನ್ನು ಸಬಲೀಕರಣಗೊಳಿಸಲು ಮತ್ತು ಮರುಸಂಪರ್ಕಿಸಲು ಅದ್ಭುತ ವೇದಿಕೆಯಾಗಿ ಹೊರಹೊಮ್ಮಲಿದೆ ಎಂದರು.

ಈ ಸುದ್ದಿಯನ್ನೂ ಓದಿ | Glopixs: ಡಿಜಿಟಲ್‌ ಮನರಂಜನೆ ಕ್ಷೇತ್ರಕ್ಕೆ ಗ್ಲೋಪಿಕ್ಸ್‌ ಒಟಿಟಿ; ಲೋಗೊ ಅನಾವರಣ

ಮಹಿಳಾ ಉದ್ಯಮಿಗಳ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಡಾ ಶೃತಿ ಚೇತನ್ ಗೌಡ, ಸುನೀತಾ ಗೌಡ, ಅಮಿತಾ ಪ್ರಶಾಂತ್, ನಟಿ ಮತ್ತು ನಿರ್ದೇಶಕಿ ಸ್ವಪ್ನಾ ಕೃಷ್ಣ, ಡಾ. ಪುಣ್ಯವತಿ ಸಿ ನಾಗರಾಜ್, ಸಿ. ಇಂದಿರಾ ಚನ್ನೇಗೌಡ, ಪವಿತ್ರಾ ಹಳೆಕೋಟೆ, ಶಿಲ್ಪಾ ಗೌಡ, ಸವಿತಾ ರಮೇಶ್ ಸೇರಿದಂತೆ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.