Wednesday, 8th January 2025

IND vs AUS: ʻಜಸ್‌ಪ್ರೀತ್‌ ಬುಮ್ರಾ ಇಲ್ಲದೆ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆʼ-ಸುನೀಲ್‌ ಗವಾಸ್ಕರ್‌!

IND vs AUS: 'without Bumrah, India will find it difficult to win SCG Test',says Sunil Gavaskar

ನವದೆಹಲಿ: ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಗಾಯಕ್ಕೆ ತುತ್ತಾಗಿರುವ ಕಾರಣ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದ (IND vs AUS) ದ್ವಿತೀಯ ಇನಿಂಗ್ಸ್‌ನಲ್ಲಿ ಬೌಲ್‌ ಮಾಡುವುದು ಬಹುತೇಕ ಅನುಮಾನ. ಜಸ್‌ಪ್ರೀತ್‌ ಬುಮ್ರಾ ಅಲಭ್ಯರಾದರೆ ಭಾರತ ತಂಡ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಲಿದೆ ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಎಚ್ಚರಿಕೆ ನೀಡಿದ್ದಾರೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಗಾಯಕ್ಕೆ ತುತ್ತಾದ ಕಾರಣ ಜಸ್‌ಪ್ರೀತ್‌ ಬುಮ್ರಾ ಕೇವಲ ಎಂಟು ಓವರ್‌ಗಳಿಗೆ ಮಾತ್ರ ಸೀಮಿತರಾಗಿದ್ದರು. ಈ ವೇಳೆ ಪ್ರಸಿಧ್‌ ಕೃಷ್ಣ ಹಾಗೂ ಮೊಹಮ್ಮದ್‌ ಸಿರಾಜ್‌ ಎರಡನೇ ದಿನ ಹೆಚ್ಚಿನ ಓವರ್‌ಗಳನ್ನು ಬೌಲ್‌ ಮಾಡಿ ಆಸ್ಟ್ರೇಲಿಯಾ ತಂಡವನ್ನು 181 ರನ್‌ಗಳಿಗೆ ಆಲ್‌ಔಟ್‌ ಮಾಡಲು ನೆರವು ನೀಡಿದ್ದರು.

ಅಂದ ಹಾಗೆ ಗಾಯಕ್ಕೆ ತುತ್ತಾದ ಬಳಿಕ ಮೈದಾನ ತೊರೆದಿದ್ದ ಜಸ್‌ಪ್ರೀತ್‌ ಬುಮ್ರಾ ಆಸ್ಪತ್ರೆಗೆ ತೆರಳಿದ್ದರು. ಆದರೆ, ಅವರು ಎರಡನೇ ದಿನದಾಟದ ಮುಗಿಯುವ ಹೊತ್ತಿಗೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಕಾಣಿಸಿಕೊಂಡಿದ್ದರು. ಅಂದ ಹಾಗೆ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ವಿರಾಟ್‌ ಕೊಹ್ಲಿ ಮುನ್ನಡೆಸಿದ್ದರು.

IND vs AUS: ಫಾರ್ಮ್‌ಗೆ ಮರಳಲು ಕೊಹ್ಲಿ, ರೋಹಿತ್‌ಗೆ ಉಪಾಯ ಹೇಳಿಕೊಟ್ಟ ಮಾಂಜ್ರೇಕರ್‌!

ಜಸ್‌ಪ್ರೀತ್‌ ಬುಮ್ರಾ ಅವರ ಸ್ಕ್ಯಾನ್‌ ವರದಿ ಹೇಗಿದೆ ಎಂದು ಯಾರಿಗೂ ತಿಳಿದಿಲ್ಲ. ಅವರು ಮೂರನೇ ದಿನ ಕಣಕ್ಕೆ ಇಳಿಯಲಕಿದ್ದಾರೆಯೇ ಅಥವಾ ಇಲ್ಲವೇ ಎಂದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಜಸ್‌ಪ್ರೀತ್‌ ಬುಮ್ರಾ ದ್ವಿತೀಯ ಇನಿಂಗ್ಸ್‌ನಲ್ಲಿ ಬೌಲ್‌ ಮಾಡಲು ಸಾಧ್ಯವಾಗದೆ ಇದ್ದರೆ ಇದು ಟೀಮ್‌ ಇಂಡಿಯಾಗೆ ಭಾರಿ ಹಿನ್ನಡೆಯನ್ನು ತಂದೊಡ್ಡಲಿದೆ ಎಂದು ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ.

“ಜಸ್‌ಪ್ರೀತ್‌ ಬುಮ್ರಾ ಇಲ್ಲದೆ ಭಾರತಕ್ಕೆ ಹೆಚ್ಚಿನ ಅವಕಾಶಗಳು ಇರುವುದಿಲ್ಲ. ಆ ಮೂಲಕ ಭಾರತ ತಂಡ ಸಿಡ್ನಿ ಟೆಸ್ಟ್‌ ಪಂದ್ಯವನ್ನು ಗೆಲ್ಲುವುದು ಅತ್ಯಂತ ಕಠಿಣವಾಗಿರುತ್ತದೆ,” ಎಂದು ಇಂಡಿಯಾ ಟುಡೇ ಸಂದರ್ಶನದಲ್ಲಿ ಕ್ರಿಕೆಟ್‌ ಕಾಮೆಂಟೇಟರ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬುಮ್ರಾಗೆ ಸಿರಾಜ್‌-ಪ್ರಸಿಧ್‌ ಸರಿಸಾಟಿಯಿಲ್ಲ

ಮಾರಕ ಬೌಲಿಂಗ್‌ ದಾಳಿ ನಡೆಸಿ ಸ್ಟೀವನ್‌ ಸ್ಮಿತ್‌, ಬೇ ವೆಬ್‌ಸ್ಟರ್‌ ಹಾಗೂ ಅಲೆಕ್ಸ್‌ ಕೇರಿ ಅವರನ್ನು ಔಟ್‌ ಮಾಡಿದ ಪ್ರಸಿಧ್‌ ಕೃಷ್ಣ ಅವರನ್ನು ಸುನೀಲ್‌ ಗವಾಸ್ಕರ್‌ ಶ್ಲಾಘಿಸಿದ್ದರು. ಅವರು ಬೌಲ್‌ ಮಾಡಿದ್ದ 16 ಓವರ್‌ಗಳಲ್ಲಿ 51 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಭಾರತಕ್ಕೆ ಆರಂಭಿಕ ಮುನ್ನಡೆ ಪಡೆಯಲು ಜಸ್‌ಪ್ರೀತ್‌ ಬುಮ್ರಾ ಅಗತ್ಯ ಎಂಬುದನ್ನು ಗವಾಸ್ಕರ್‌ ಒತ್ತಿ ಹೇಳಿದ್ದಾರೆ.

“ಕ್ರಿಕೆಟ್‌ನಲ್ಲಿ ತಮಾಷೆಯ ಸಂಗತಿಗಳು ನಡೆದಿರುವುದರಿಂದ ಇದು ಅಸಾಧ್ಯವೆಂದು ನಾನು ಹೇಳುವುದಿಲ್ಲ. ಪ್ರಸಿಧ್‌ ಕೃಷ್ಣ ನಿರಾಶಾದಾಯಕ ಮೊದಲ ಸ್ಪೆಲ್ ನಂತರ, ಸ್ಟೀವ್ ಸ್ಮಿತ್ ಮತ್ತು ಅಲೆಕ್ಸ್ ಕೇರಿಯನ್ನು ಔಟ್‌ ಮಾಡುವ ಮೂಲಕ ಪ್ರಸಿಧ್‌ ಕಮ್‌ಬ್ಯಾಕ್‌ ಮಾಡಿದರು. ಅವರು ಆಡಿದ ರೀತಿಯಲ್ಲಿ ಬೌಲಿಂಗ್ ಮಾಡಿದರೆ ಅವರು ಪರಿಣಾಮಕಾರಿಯಾಗಬಹುದು, ಆದರೆ ಆರಂಭಿಕ ಮುನ್ನಡೆಗೆ ಬುಮ್ರಾ ಅವರ ಅಗತ್ಯವಿದೆ. ಸಿರಾಜ್ ಮತ್ತು ಪ್ರಸಿಧ್‌, ಬುಮ್ರಾ ಅವರಷ್ಟು ಪರಿಣಾಮವನ್ನು ಹೊಂದಿರುವುದಿಲ್ಲ, ”ಗಾವಸ್ಕರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ತಮ್ಮ ಬೌಲಿಂಗ್‌ ಯಶಸ್ಸಿನ ಶ್ರೇಯವನ್ನು ಮಾರ್ಕೆಲ್‌ಗೆ ಸಮರ್ಪಿಸಿದ ಪ್ರಸಿಧ್‌ ಕೃಷ್ಣ!