Wednesday, 8th January 2025

AUS vs IND: ದಶಕದ ಬಳಿಕ ಸರಣಿ ಗೆದ್ದ ಆಸೀಸ್‌; ವಿಶ್ವ ಟೆಸ್ಟ್‌ ಫೈನಲ್‌ನಿಂದ ಹೊರಬಿದ್ದ ಭಾರತ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ(AUS vs IND) 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ದಶಕದ ಬಳಿಕ ಟೀಮ್‌ ಇಂಡಿಯಾ ವಿರುದ್ಧ ಸರಣಿ ಗೆದ್ದ ಕಾಂಗರೂ ಪಡೆಗೆ ಈ ಗೆಲುವಿನ ಸಂಭ್ರಮದ ಜತೆಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೂ ಪ್ರವೇಶ ಸಿಕ್ಕಿದೆ. ಸೋಲಿನೊಂದಿಗೆ ಭಾರತದ ಹ್ಯಾಟ್ರಿಕ್‌ ಫೈನಲ್‌ ಕನಸು ಭಗ್ನಗೊಂಡಿತು.

2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 141 ರನ್‌ ಗಳಿಸಿ, ಒಟ್ಟಾರೆ 145 ರನ್‌ ಮುನ್ನಡೆ ಪಡೆದಿದ್ದ ಭಾರತ ಮೂರನೇ ದಿನವಾದ ಭಾನುವಾರ 157 ರನ್‌ಗೆ ಆಲೌಟ್‌ ಆಯಿತು. 162 ರನ್‌ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 4 ವಿಕೆಟ್‌ ಕಳೆದುಕೊಂಡು 162 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಬೂಮ್ರಾ ಬೆನ್ನು ನೋವಿನ ಸಮಸ್ಯೆಯಿಂದಾಗಿ ಕೇವಲ ಬ್ಯಾಟಿಂಗ್‌ ಮಾತ್ರ ನಡೆಸಿದರು. ಬೌಲಿಂಗ್‌ ನಡೆಸದೇ ಇದದ್ದು ಕೂಡ ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಮೂರನೇ ದಿನ ಭಾರತಕ್ಕೆ ಗಳಿಸಲಾದ್ದು ಕೇವಲ 16 ರನ್‌ ಮಾತ್ರ.

ದ್ವಿತೀಯ ದಿನ ಅಜೇಯರಾಗಿ ಉಳಿದಿದ್ದ ಸುಂದರ್‌(12) ಮತ್ತು ಜಡೇಜಾ(13) ರನ್‌ ಗಳಿಸಿದರು. ಶನಿವಾರ 4 ವಿಕೆಟ್‌ ಕಿತ್ತಿದ್ದ ಸ್ಕಾಟ್‌ ಬೋಲ್ಯಾಂಡ್‌ ಇಂದು(ಭಾನುವಾರ) 2 ವಿಕೆಟ್‌ ಉರುಳಿಸುವ ಜತೆಗೆ ಒಟ್ಟು 6 ವಿಕೆಟ್‌ ಕಿತ್ತ ಸಾಧನೆ ಮಾಡಿದರು. ನಾಯಕ ಕಮಿನ್ಸ್‌ 3 ವಿಕೆಟ್‌ ಪಡೆದರು.

162 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್‌ ಪರ ಉಸ್ಮಾನ್‌ ಖವಾಜ 41, ಸ್ಯಾಮ್ ಕಾನ್ಸ್ಟಸ್ 22 ರನ್‌ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 39 ರನ್‌ ಒಟ್ಟುಗೂಡಿಸಿತು. ಅನುಭವಿ ಆಟಗಾರರಾಶದ ಸ್ಟೀವನ್‌ ಸ್ಮತ್‌(4) ಮತ್ತು ಮಾರ್ನಸ್‌ ಲಬುಶೇನ್‌(6) ಮತ್ತೆ ನಿರಾಸೆ ಮೂಡಿಸಿದರು. ಅಂತಿಮವಾಗಿ ಟ್ರಾವಿಸ್‌ ಹೆಡ್‌(34) ಮತ್ತು ಬ್ಯೂ ವೆಬ್‌ಸ್ಟರ್‌(39) ಅಜೇಯ ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಗೆದ್ದರೆ ಭಾರತದ ಗೆಲುವಿನ ಪ್ರತಿಶತ ಶೇ.55.26ಕ್ಕೆ ಹೆಚ್ಚಳವಾಗುತ್ತಿತ್ತು. ಶ್ರೀಲಂಕಾ ವಿರುದ್ಧದ 2 ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲ್ಲದಿದ್ದರೆ ಭಾರತಕ್ಕೆ ಫೈನಲ್‌ಗೇರಬಹುದಿತ್ತು. ಆದರೆ ಭಾರತವೇ ಸೋಲು ಕಂಡು ಫೈನಲ್‌ಗಿಂದ ಹೊರಬಿದ್ದಿತು.

ಸಿಡ್ನಿಯಲ್ಲಿ ಭಾರತಕ್ಕೆ 2ನೇ ಸೋಲು

ಭಾರತ ತಂಡಕ್ಕೆ ಸಿಡ್ನಿಯಲ್ಲಿ ಎದುರಾದ 2ನೇ ಸೋಲು ಇದಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತ ಈ ಕ್ರೀಡಾಂಗಣದಲ್ಲಿ13 ಪಂದ್ಯಗಳನ್ನಾಡಿತ್ತು. 1ರಲ್ಲಿಗೆಲುವು. ಉಳಿದ 5 ಪಂದ್ಯಗಳಲ್ಲಿ ಸೋಲು ಮತ್ತು 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಇದೀಗ 2ನೇ ಸೋಲು ಕಂಡಿದೆ. 1978ರಲ್ಲಿ ಬಿಷನ್‌ ಸಿಂಗ್‌ ಬೇಡಿ ನಾಯಕತ್ವದಲ್ಲಿ ಭಾರತಕ್ಕೆ ಏಕೈಕ ಗೆಲುವು ಒಲಿದಿತ್ತು.