Friday, 20th September 2024

ಆರಂಭ – ಅಪಸ್ವರ

ಕರೋನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಖಾಸಗಿ ಶಾಲೆಗಳು ಇದೀಗ ಪುನರಾರಂಭಕ್ಕೆ
ಸಜ್ಜುಗೊಳ್ಳುತ್ತಿವೆ. ಹತ್ತು ತಿಂಗಳ ನಂತರ 2021ರ ಜ.1 ರಿಂದ ಹಂತ ಹಂತವಾಗಿ ಶಾಲಾ – ಕಾಲೇಜುಗಳನ್ನು ಆರಂಭಿಸಲು ಸರಕಾರ ತೀರ್ಮಾನಿಸಿದೆ.

ಈ ಆದೇಶ ಪ್ರಕಟವಾಗುತ್ತಿದ್ದಂತೆಯೇ ಅಪಸ್ವರಗಳೂ ಕೇಳಿಬರಲಾರಂಭಿಸಿವೆ. ಆದರೆ ಈ ಅಪಸ್ವರಗಳು ವ್ಯಕ್ತವಾಗುತ್ತಿರುವುದು
ಖಾಸಗಿ ಶಾಲೆಗಳ ಬಗ್ಗೆ. ಖಾಸಗಿ ಶಾಲೆಗಳ ಮೇಲೆ ಸರಕಾರಕ್ಕೆ ನಿಯಂತ್ರಣ ಇಲ್ಲ. ತರಗತಿಗಳಿಲ್ಲದೆ ಇದ್ದರೂ ಪೋಷಕರಿಂದ ಪೂರ್ಣಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ ಪೋಷಕರನ್ನು ಬ್ಲಾಕ್
ಮೇಲ್ ಮಾಡಲಾಗುತ್ತಿದೆ. ಸರಕಾರ ಖಾಸಗಿ ಶಾಲೆಗಳನ್ನು ಬೆಂಬಲಿಸುತ್ತಿದೆ ಎಂಬುದು ಆರೋಪ.

ಸರಕಾರ ಹಲವು ತಿಂಗಳುಗಳ ನಂತರ ಅನೇಕ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆಗಳ ಪುನರಾರಂಭಕ್ಕೆ ಪ್ರಯತ್ನಿಸುತ್ತಿರುವ ವೇಳೆಯಲ್ಲಿ ಈ ರೀತಿ ಅಪಸ್ವರಗಳು ಆರಂಭಗೊಳ್ಳುತ್ತಿರುವುದು ಸೂಕ್ತವೇ ಎಂಬುದು ಚರ್ಚಾರ್ಹ. ಇಂದು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದರೂ ಸಹ ಪೋಷಕರು ಖಾಸಗಿ ಶಾಲೆಗಳ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಪೋಷಕರ ಆಸಕ್ತಿಯನ್ನು ಗಮನಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯ ಸೌಲಭ್ಯಗಳಿಗೆ ಅನುಗುಣವಾಗಿ ಒಂದೊಂದು ಶಾಲೆ ಒಂದೊಂದು ರೀತಿಯಾಗಿ ಶುಲ್ಕ ಪಡೆಯುತ್ತಿವೆ.

ಈ ಬೆಳವಣಿಗೆ ಕೆಲವು ಪೋಷಕರ ಅಸಮಾಧಾನಕ್ಕೆ ಕಾರಣ. ಇಂದು ಸರಕಾರಿ ಶಾಲೆಗಳಲ್ಲಿ ಬಹಳಷ್ಟು ಸೌಲಭ್ಯಗಳನ್ನು ನೀಡು ತ್ತಿದ್ದರೂ, ಖಾಸಗಿ ಶಾಲೆಗಳತ್ತ ಹೆಚ್ಚುತ್ತಿರುವ ಆಸಕ್ತಿಯೇ ಈ ಎಲ್ಲ ಸಮಸ್ಯೆಗಳಿಗೆ ಮೂಲ. ಆದರೂ, ಖಾಸಗಿ ಶಾಲೆಗಳ ಶುಲ್ಕ ನಿಗದಿಗಾಗಿ ಸರಕಾರದಿಂದ ಒಂದು ಮಾನದಂಡ ರೂಪಿಸುವ ಮೂಲಕ ಪೋಷಕರ ನೆರವಿಗೆ ಧಾವಿಸಬೇಕಿರುವುದು
ಜವಾಬ್ದಾರಿ.