ಪಣಜಿ: ಮಹಾ ಕುಂಭಮೇಳ ಜನವರಿ 13 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಹಾ ಕುಂಭಮೇಳ 2025ರ ಮರಳು ಮಾದರಿಯನ್ನು ವಿದೇಶಿಯರೊಬ್ಬರು ನಿರ್ಮಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಬ್ರಿಟಿಷ್ ಇತಿಹಾಸಕಾರ ನಿಕ್ ಬುಕರ್ ಅವರು ವೀಕ್ಷಕರಿಗೆ ಈ ಬಗ್ಗೆ ವಿವರಿಸುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿತ್ತು. ಆದರೆ ಸಮುದ್ರದ ನೀರಿನ ಪ್ರವಾಹಕ್ಕೆ ಆ ಮಾದರಿ ಕೊಚ್ಚಿ ಹೋಗಿದ್ದು, ನಂತರ ತನ್ನ ಮರಳು ಮಾದರಿ ಭಾಗಶಃ ನಾಶವಾಗಿದೆ ಎಂದು ಅವರು ವಿಡಿಯೊದಲ್ಲಿ ನೆಟ್ಟಿಗರಿಗೆ ಮಾಹಿತಿ ನೀಡಿದ್ದಾರೆ.
ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ಮರಳು ರಚನೆಯು ಮಹಾ ಪ್ರವಾಹದಿಂದಾಗಿ ಸ್ವಲ್ಪ ಮಟ್ಟಿಗೆ ನಾಶವಾಗಿದೆ ಎಂದು ಬ್ರಿಟಿಷ್ ಇತಿಹಾಸಕಾರ ನಿಕ್ ಬುಕರ್ ಹೇಳಿದ್ದಾರೆ.
ಅವರು ಹಿಂದೂ ಪುರಾಣಗಳಲ್ಲಿನ ಸಮುದ್ರ ಮಂಥನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. “ಪ್ರಯಾಗ್‌ರಾಜ್ ತೀರ್ಥದಲ್ಲಿ ಪ್ರವಾಹ ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಇದು ಸಮುದ್ರದ ಮಹಾನ್ ಮಂಥನವಾದ ಸ್ಥಳವಾಗಿದೆ” ಎಂದು ನಿಕ್ ವಿವರಿಸಿದ್ದಾರೆ. ಹೆಚ್ಚಿನ ಉಬ್ಬರವಿಳಿತದಿಂದಾಗಿ ಸಮುದ್ರದ ನೀರು ದಡಕ್ಕೆ ಅಪ್ಪಳಿಸಿದ ಕಾರಣ ಮರಳು ಮಾದರಿ ಸ್ವಲ್ಪಮಟ್ಟಿಗೆ ನಾಶವಾಗಿದೆ ಎಂದು ಹೇಳಿದ್ದಾರೆ. ನಂತರ ಅವರು ರಚನೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುವ ಮತ್ತೊಂದು ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
“ಅಲೆಯು ನನ್ನ ಕುಂಭಮೇಳ ಮರಳು ಮಾದರಿಯನ್ನು ಭಾಗಶಃ ನಾಶಪಡಿಸಿದೆ” ಎಂದು ಅವರು ಹೇಳಿದ್ದರು. ಆದರೆ ಶೀಘ್ರದಲ್ಲೇ ಅದನ್ನು ಮತ್ತೆ ನವೀಕರಿಸಿ, ಅವರು ಅದನ್ನು ಮತ್ತೆ ಸರಿಪಡಿಸಿರುವುದಾಗಿ ತಿಳಿಸಿದ್ದಾರೆ. “ನಾನು ಬೆಳಿಗ್ಗೆ ಮಹಾ ಕುಂಭಮೇಳ ಮರಳು ಮಾದರಿಯನ್ನು ಪುನರ್ನಿರ್ಮಿಸಿದ್ದೇನೆ ಮತ್ತು ಆಶ್ವೆಮ್ ಬೀಚ್‍ನಲ್ಲಿ ಸೂರ್ಯಾಸ್ತದ ಮೊದಲು ನೀರನ್ನು ಬಿಡುಗಡೆ ಮಾಡಲು ನಾವು ಸಿದ್ಧರಿದ್ದೇವೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ವಿಡಿಯೊದಲ್ಲಿ ಅವರು ಮರಳು ಮಾದರಿಯ ದೃಶ್ಯಗಳನ್ನು ಸೆರೆಹಿಡಿದು ಮಹಾ ಕುಂಭಮೇಳದ ವಿವರಗಳನ್ನು ಅದರ ಮೂಲಕ ವಿವರಿಸಿದ್ದಾರೆ. ನಿಕ್ ಅಪ್‌ಲೋಡ್ ಮಾಡಿದ ಈ ವಿಡಿಯೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ಸುದ್ದಿಯನ್ನೂ ಓದಿ:ಗೋವಾ ಬೀಚ್‍ನಲ್ಲಿ ಮಹಾಕುಂಭ ಮೇಳ; ವಿಡಿಯೊ ನೋಡಿ
ಮಹಾ ಕುಂಭಮೇಳವು 144 ವರ್ಷಗಳ ನಂತರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಒಂದು ಅದ್ಭುತವಾದ ಉತ್ಸವವಾಗಿದೆ. 2025ರ ಜನವರಿ 13ರಿಂದ ಫೆಬ್ರವರಿ 26 (ಮಹಾ ಶಿವರಾತ್ರಿ) ನಡುವೆ ಈ ಆಚರಣೆ ನಡೆಯಲಿದ್ದು, ಇದಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ಪವಿತ್ರ ನದಿಗಳ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಾಗುತ್ತದೆ. ವಿಶೇಷವಾಗಿ ಈ ಅವಧಿಯಲ್ಲಿ ಸ್ನಾನ ಮಾಡುವುದರಿಂದ ಆ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಮತ್ತು ದೇವರ ಆಶೀರ್ವಾದಗಳು ಸಿಗುತ್ತವೆ ಎಂದು ನಂಬಲಾಗಿದೆ.