ಬೆಂಗಳೂರು: ಸೋಮವಾರ (ಜ. 6) ಕೇಂದ್ರ ಸಂಸದೀಯ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಕಿರಣ್ ರಿಜ್ಜು (Kiren Rijiju) ಅವರನ್ನು ಭೇಟಿಯಾಗಿ ಕರ್ನಟಕದ ಬಿಜೆಪಿ ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಭೂ ಕಬಳಿಕೆಯ ಕರಾಳತೆಯನ್ನು ಹಾಗೂ ಇದರಿಂದ ರೈತರು, ಮಠ-ಮಂದಿರಗಳು, ಸಾಮಾನ್ಯ ಜನತೆ ಅನುಭವಿಸುತ್ತಿರುವ ಜಮೀನು, ಮನೆ ಜಾಗಗಳನ್ನು ಕಳೆದುಕೊಳ್ಳುವ ಭೀತಿಯನ್ನು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.
ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಭಗವಂತ ನಾಯಕ, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ, ಭರತ ಮಗದೂರು, ರವಿ ಬಿರಾದರ, ನಿರಂತರ ಗಣೇಶ, ರೇಣುಕಾಪ್ರಸಾದ, ಪ್ರದೀಪ, ಅರುಣ ಮತ್ತಿತರರು ಉಪಸ್ಥಿತರಿದ್ದರು.
ಈ ಮಧ್ಯೆ ವಕ್ಫ್ ಬೋರ್ಡ್ ವಿರುದ್ಧ ಎರಡನೇ ಸುತ್ತಿನ ಹೋರಾಟವನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಆರಂಭಿಸಿದೆ. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಿಂದ ಹೋರಾಟ ಆರಂಭಿಸಿದರು. ಸ್ಥಳೀಯ ಉದ್ಭವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ಶಾರದಾ ಶಾಲೆಯವರೆಗೆ ರ್ಯಾಲಿ ನಡೆಸಲಾಯಿತು.
ಕಾಂಗ್ರೆಸ್ ಸರ್ಕಾರದಿಂದ ತೆರಿಗೆ ಹೊರೆ
ಕಲಬುರಗಿ: ʼʼರಾಜ್ಯದ ಕಾಂಗ್ರೆಸ್ ಸರ್ಕಾರವು ಗಾಳಿ ಒಂದನ್ನು ಬಿಟ್ಟು ಬೇರೆಲ್ಲದಕ್ಕೂ ತೆರಿಗೆ ಹಾಕಿದೆʼʼ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರು. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಕಲಬುರಗಿಯ ಜಗತ್ ಸರ್ಕಲ್ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಾಲು, ಪೆಟ್ರೋಲ್, ಆಲ್ಕೋಹಾಲ್, ಕರೆಂಟ್, ಬಸ್ ಚಾರ್ಜ್ ಸೇರಿ ಎಲ್ಲ ದರಗಳನ್ನು ಹೆಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼʼಸಚಿನ್ ಆತ್ಮಹತ್ಯೆಗೆ ಕಾರಣನಾದ ರಾಜು ಕಪನೂರ್ ಒಬ್ಬ ಗೂಂಡಾ. ಅವನನ್ನು ಕಾಂಗ್ರೆಸ್ಸಿಗರು ಗೂಂಡಾ ಕಾಯಿದೆಯಿಂದ ತೆಗೆಸಿದ್ದಾರೆ. ಈಗ ನಮ್ಮವನಲ್ಲ. ನಮ್ಮವನಲ್ಲ ಎನ್ನುತ್ತಿದ್ದಾರೆ. ಎಂದು ಆರೋಪಿಸಿದ ಅವರು, ಆರೋಪಿಗಳಲ್ಲಿ ಮೊದಲ 3 ಜನ ಕಾಂಗ್ರೆಸ್ಸಿಗರು. ಈ ಭ್ರಷ್ಟ, ಆತ್ಮಹತ್ಯೆಗಳಿಗೆ ಕಾರಣವಾಗುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲʼʼ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | HSRP Deadline: ವಾಹನ ಮಾಲಿಕರಿಗೆ ರಿಲೀಫ್, ಎಚ್ಎಸ್ಆರ್ಪಿ ಅಳವಡಿಕೆ ಡೆಡ್ಲೈನ್ ವಿಸ್ತರಣೆ