ಕೇಪ್‌ಟೌನ್: ರಯಾನ್ ರಿಕೆಲ್ಟನ್ (259 ರನ್) ಅವರ ದ್ವಿಶತಕ ಹಾಗೂ ಕಗಿಸೊ ರಬಾಡ (6 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ (SA vs PAK) ಪಾಕಿಸ್ತಾನ ವಿರುದ್ದ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆತಿಥೇಯ ದಕ್ಷಿಣ ಆಫ್ರಿಕಾ ತಂಡ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಇಲ್ಲಿನ ನ್ಯೂಲ್ಯಾಂಡ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 421 ರನ್‌ಗಳ ಹಿನ್ನಡೆ ಅನುಭವಿಸಿದ್ದ ಕಾರಣ ಪಾಕಿಸ್ತಾನ ತಂಡ ಫಾಲೋ ಆನ್‌ಗೆ ಗುರಿಯಾಯಿತು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 478 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 58 ರನ್ ಗುರಿಯನ್ನು ನೀಡಿತ್ತು. ದಕ್ಷಿಣ ಆಫ್ರಿಕಾ ತಂಡ ವಿಕೆಟ್ ನಷ್ಟವಿಲ್ಲದೆ 7.1 ಓವರ್‌ಗಳಿಗೆ 61 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆ ಮೂಲಕ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಆತಿಥೇಯರು ಸರಣಿಯನ್ನು ಗೆದ್ದುಕೊಂಡಿತು.
ದಕ್ಷಿಣ ಆಫ್ರಿಕಾ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಡೇವಿಡ್ ಬೆಡಿಂಗ್‌ಹ್ಯಾಮ್ 30 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿದರೆ, ಏಡೆನ್ ಮಾರ್ಕ್ರಮ್ ಅಜೇಯ 14 ರನ್ ಗಳಿಸಿದರು. ಪ್ರಥಮ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ರಯಾನ್ ರಿಕೆಲ್ಟನ್ (259 ರನ್‌ಗಳು) ಅವರು ಸ್ನಾಯು ಸೆಳೆತಕ್ಕೆ ತುತ್ತಾದ ಕಾರಣ ಅವರ ಬದಲು ಎರಡನೇ ಇನಿಂಗ್ಸ್‌ನಲ್ಲಿ ಬೆಡಿಂಗ್‌ಹ್ಯಾಮ್ ಬ್ಯಾಟ್ ಮಾಡಿದ್ದರು.
ಶಾನ್ ಮಸೂದ್ ಏಕಾಂಗಿ ಹೋರಾಟ
ಪಾಕಿಸ್ತಾನ ತಂಡದ ನಾಯಕ ಶಾನ್ ಮಸೂದ್ ಅವರು ದ್ವಿತೀಯ ಇನಿಂಗ್ಸ್‌ನಲ್ಲಿ ಶತಕವನ್ನು ಸಿಡಿಸಿದರು. ಅವರು ಎದರುಸಿದ್ದ 251 ಎಸೆತಗಳಲ್ಲಿ 145 ರನ್‌ಗಳನ್ನು ಕಲೆ ಹಾಕುವ ಜೊತೆಗೆ ಬಾಬರ್ ಅಝಮ್ (81 ರನ್) ಅವರ ಜೊತೆ ಮುರಿಯದ ಮೊದಲನೇ ವಿಕೆಟ್‌ಗೆ 205 ರನ್‌ಗಳನ್ನು ಆಡಿದ್ದರು. ಆ ಮೂಲಕ ಪಾಕಿಸ್ತಾನ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, ಎರಡನೇ ಹೊಸ ಚೆಂಡಿನಲ್ಲಿ ಡೆಬ್ಯೂಟಂಟ್ ಕ್ವೇನಾ ಎಂಫಾಕಗೆ ವಿಕೆಟ್ ಒಪ್ಪಿಸಿದರು. ಶಾನ್ ವಿಕೆಟ್ ಒಪ್ಪಿಸಿದ ಕೇವಲ ಮೂರು ಎಸೆತಗಳ ಅಂತರದಲ್ಲಿ ಸೌದ್ ಶಕೀಲ್ ಎರಡನೇ ಸ್ಲಿಪ್‌ನಲ್ಲಿ ಕ್ಯಾಚ್ ಕೊಟ್ಟರು.
ಮೊಹಮ್ಮದ್ ರಿಝ್ವಾನ್ (41) ಹಾಗೂ ಸಲ್ಮಾನ್ ಅಘಾ (48) ಅವರು ಆರನೇ ವಿಕೆಟ್‌ಗೆ 88 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಈ ಜೋಡಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಕೊನೆಯಲ್ಲಿ ಅಮೀರ್ ಜಮಲ್ 34 ರನ್‌ಗಳಿಸಿದರು. ಆದರೂ, ಪಾಕಿಸ್ತಾನ ತಂಡ ಎದುರಾಳಿ ತಂಡಕ್ಕೆ ದೊಡ್ಡ ಗುರಿಯನ್ನು ನೀಡುವಲ್ಲಿ ವಿಫಲವಚಾಯಿತು. ಅಂದ ಹಾಗೆ ಪ್ರಥಮ ಇನಿಂಗ್ಸ್‌ನಲ್ಲಿ ಪಾಕಿಸ್ತಾನ 194 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ 615 ರನ್‌ಗಳನ್ನು ದಾಖಲಿಸಿತ್ತು.
ಈ ಸುದ್ದಿಯನ್ನು ಓದಿ: PAK vs SA: ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಶಾನ್ ಮಸೂದ್!