Thursday, 9th January 2025

ISRO Chairman: ಇಸ್ರೋ ಹೊಸ ಸಾರಥಿಯಾಗಿ ವಿ.ನಾರಾಯಣನ್; ಇವರ ಹಿನ್ನೆಲೆ ಏನು? ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO Chairman) ನೂತನ ಅಧ್ಯಕ್ಷರನ್ನಾಗಿ ತಮಿಳುನಾಡು ಮೂಲದ ವಿಜ್ಞಾನಿ ಡಾ. ವಿ. ನಾರಾಯಣನ್(V.Narayanan) ಅವರನ್ನು ಕೇಂದ್ರ ಸರ್ಕಾರ ಮಂಗಳವಾರ(ಜ.7) ನೇಮಿಸಿದೆ.

ಇಸ್ರೋದ ಹಾಲಿ ಅಧ್ಯಕ್ಷ ವಿ. ಸೋಮನಾಥ್ ಅವರ ಅಧಿಕಾರಾವಧಿ ಇದೇ ಜನವರಿ 14ರಂದು ಅಂತ್ಯವಾಗಲಿದ್ದು ಅಂದೇ ವಿ. ನಾರಾಯಣನ್ ಅಧಿಕಾರ ಸ್ವೀಕರಿಸಲಿದ್ದಾರೆ. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳ ಸಂಚಲನೆಯ ವಿಷಯ ಪರಿಣಿತರಾಗಿರುವ ವಿ. ನಾರಾಯಣನ್ ಅವರು ಸದ್ಯ ಕೇರಳದ ತಿರುವನಂತಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋದ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌’ನ (LPSC) ನಿರ್ದೇಶಕರಾಗಿ 2018ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ವಿ.ನಾರಾಯಣನ್‌ ಪರಿಚಯ

ಐಐಟಿ ಖರಗ್‌ಪುರದಲ್ಲಿ ಎಂಜಿನಿಯರ್ ಪದವಿ ಮುಗಿಸಿ 1984 ರಲ್ಲಿ ಇಸ್ರೊ ಸೇರಿದ್ದ ನಾರಾಯಣನ್ ಅವರು ಆರಂಭದಲ್ಲಿ ವಿಕ್ರಮ್ ಸಾರಾಬಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದರು. ನಂತರ 1989 ರಲ್ಲಿ ಕ್ರಯೋಜಿನಿಕ್ ಎಂಜಿನಿಯರಿಂಗ್ ವಿಷಯದಲ್ಲಿ ಐಐಟಿ ಖರಗ್‌ಪುರದಿಂದ ಎಂ.ಟೆಕ್ ಪದವಿಯನ್ನು ಮೊದಲ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾದರು. 2001 ರಲ್ಲಿ ಅದೇ ಸಂಸ್ಥೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ವಿಷಯದಲ್ಲಿ ಪಿಎಚ್‌ಡಿ ಪಡೆದರು.

2001 ರಿಂದ ಇಸ್ರೊದ ರಾಕೆಟ್‌ಗಳಿಗೆ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಸಂಚಾಲನೆಯ ಸಾಧನ ಸಲಕರಣೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಅವರು ಈ ವಿಷಯದಲ್ಲಿ ಹೊರದೇಶಗಳ ಅವಲಂಬನೆಯನ್ನು ತಗ್ಗಿಸಿದರು. ಮಹತ್ವದ ಚಂದ್ರಯಾನದ ಪ್ರೊಪಲ್ಷನ್ ಸಿಸ್ಟಮ್‌ಗೆ ಕೆಲಸ ಮಾಡಿದ್ದ ನಾರಾಯಣನ್ ಅವರು ಸದ್ಯ ಇಸ್ರೊದ ಮಹತ್ವಾಕಾಂಕ್ಷೆಯ ಗಗನಯಾನ, ಚಂದ್ರಯಾನ–4 ಮತ್ತು ಸ್ಪೇಸ್ ಡಾಕಿಂಗ್ ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ವಿ.ನಾರಾಯಣನ್ ಬಾಹ್ಯಾಕಾಶಕ್ಕೆ ಸಂಬಂಧಿಸಿದ ದೇಶ–ವಿದೇಶದ ಅನೇಕ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಗಗನಯಾನಿಗಳ ಅಕಾಡೆಮಿಯ ಸದಸ್ಯರೂ ಹೌದು.

ವಿ ನಾರಾಯಣನ್ ಅವರ ಸುದೀರ್ಘ ವೃತ್ತಿಜೀವನವು ಆದಿತ್ಯ ಬಾಹ್ಯಾಕಾಶ ನೌಕೆ ಮತ್ತು GSLV Mk-III ಮಿಷನ್‌ಗಳು ಸೇರಿದಂತೆ ಪ್ರಮುಖ ಇಸ್ರೋ ಯೋಜನೆಗಳಿಗೆ ಗಮನಾರ್ಹ ಕೊಡುಗೆಗಳನ್ನು ಒಳಗೊಂಡಿದೆ. ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಶ್ರೀ ಪ್ರಶಸ್ತಿ ಮತ್ತು ಐಐಟಿ ಖರಗ್‌ಪುರದಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಪ್ರಶಸ್ತಿ ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಇವರಿಗೆ ಸಂದಿದ್ದು ಇನ್ನು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಅವರ ಅಸಾಧಾರಣ ಸಾಧನೆಗಳನ್ನು ಗುರುತಿಸಲಾಗಿದೆ.

ಇಸ್ರೋದೊಂದಿಗೆ ನಾಲ್ಕು ದಶಕಕ್ಕೂ ಹೆಚ್ಚು ಕೆಲಸ ಮಾಡಿರುವ ವಿ.ನಾರಾಯಣನ್ ಜನವರಿ 14 ರಿಂದ ಎರಡು ವರ್ಷ ಇಸ್ರೋವನ್ನು ಮುನ್ನಡೆಸಲಿದ್ದು,ಉಳಿದ ವಿಜ್ಞಾನಿಗಳು ಅವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ತೋರಿದ್ದಾರೆ.

ಈ ಸುದ್ದಿಯನ್ನೂ ಓದಿ:Kaviyoor Ponnamma: ʼಮಲಯಾಳಂ ಸಿನಿಮಾದ ಅಮ್ಮʼ ಖ್ಯಾತಿಯ ನಟಿ ಕವಿಯೂರ್‌ ಪೊನ್ನಮ್ಮ ಇನ್ನಿಲ್ಲ

Leave a Reply

Your email address will not be published. Required fields are marked *