Thursday, 9th January 2025

Mohammed Shami: ಫಿಟ್ನೆಸ್ ಚರ್ಚೆಯ ಬೆನ್ನಲ್ಲೇ ಶಮಿ ಬೌಲಿಂಗ್‌ ಅಭ್ಯಾಸದ ವಿಡಿಯೊ ವೈರಲ್‌

ಬೆಂಗಳೂರು: ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ(Mohammed Shami) ಅವರ ಫಿಟ್‌ನೆಸ್‌ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಅವರು ಕಠಿಣ ಬೌಲಿಂಗ್‌ ಅಭ್ಯಾಸ ನಡೆಸುವ ವಿಡಿಯೊವೊಂದು ವೈರಲ್‌ ಆಗಿದೆ. ಹೀಗಾಗಿ ಶಮಿ ಶೀಘ್ರದಲ್ಲೇ ಭಾರತ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯೊಂದು ಕಂಡುಬಂದಿದೆ. ಅಭ್ಯಾಸದ ವಿಡಿಯೊಗೆ ಶಮಿ, ‘ನಿಖರತೆ, ವೇಗ ಮತ್ತು ಉತ್ಸಾಹ, ಜಗತ್ತನ್ನು ಗೆಲ್ಲಲ್ಲು ಸಿದ್ಧವಾಗಿದೆ!’ ಎಂದು ಬರೆದುಕೊಂಡಿದ್ದಾರೆ.

2023ರ ಏಕದಿನ ವಿಶ್ಚಕಪ್​ ಬಳಿಕ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿರುವ ಶಮಿ ಆ ಬಳಿಕ ಭಾರತ ತಂಡದ ಪರ ಆಡಿಲ್ಲ. ಇದೀಗ ಶಮಿ ಸಂಪೂರ್ಣ ಫಿಟ್ನೆಸ್‌ನೊಂದಿಗೆ ಬೌಲಿಂಗ್‌ ನಡೆಸುತ್ತಿವ ವಿಡಿಯೊ ವೈರಲ್‌ ಆಗಿದ್ದು ಇಂಗ್ಲೆಂಡ್‌ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಶಮಿ ಆಯ್ಕೆಯಾಗುವ ಸಾಧ್ಯತೆಯೂ ಕಂಡು ಬಂದಿದೆ. ಮುಂದಿನ ತಿಂಗಳು ಆರಂಭಗೊಳ್ಳುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಜ.12 ರಂದು ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆಯೂ ಇದೆ. ಆದರೆ ಶಮಿಗೆ ಅವಕಾಶ ಸಿಗುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ WTC Record: ಪಾಕ್‌ ವಿರುದ್ಧ ಗೆದ್ದು ಭಾರತದ ದಾಖಲೆ ಸರಿಗಟ್ಟಿದ ದಕ್ಷಿಣ ಆಫ್ರಿಕಾ

2023ರಲ್ಲಿ ಭಾರತದ ಆತಿಥ್ಯದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ವಿಶ್ವ ಕಪ್‌ ಫೈನಲ್‌ ಪಂದ್ಯದ ಬಳಿಕ ಶಮಿ ಹಿಮ್ಮಡಿ ಗಾಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಟಿ20 ವಿಶ್ವಕಪ್‌ ಆಡುವ ಅವಕಾಶ ಕೂಡ ಕಳೆದುಕೊಂಡಿದ್ದರು.

ಆಸೀಸ್‌ ವಿರುದ್ಧದ ಟೆಸ್ಟ್‌ ಸರಣಿ ಸೋಲಿನ ಬೆನ್ನಲ್ಲೇ ಮಾಜಿ ಕೋಚ್ ರವಿಶಾಸ್ತ್ರಿ ಅವರು ಶಮಿ ಚೇತರಿಕೆ ಬಗ್ಗೆ ಬಿಸಿಸಿಐ ಏಕೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಗಾಯದಿಂದ ಚೇತರಿಸಿಕೊಂಡ ಶಮಿ ದೇಶಿಯ ಕ್ರಿಕೆಟ್‌ನಲ್ಲಿ ಮಿಂಚಿದ್ದರು. ಜತೆಗೆ ಆಸೀಸ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಲಿದ್ದಾರೆ ಎಂಬ ಪ್ರಚಾರವೂ ಹಬ್ಬಿತ್ತು. ಆ ಬಳಿಕ ಅವರ ಫಿಟ್‌ನೆಸ್‌ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಿದ್ದರೆ ಭಾರತ ತಂಡ ಬಲಿಷ್ಠವಾಗುತ್ತಿತ್ತು. ಆಯ್ಕೆಯೂ ಮಾಡದೇ, ಆಡಲೂ ಅವಕಾಶ ನೀಡದೆ ಇರುವ ಬಿಸಿಸಿಐ ನಿಗೂಡ ನಿರ್ಧಾರ ಸರಿಯಲ್ಲ ಎಂದು ರವಿಶಾಸ್ತ್ರಿ ಹೇಳಿದ್ದರು.

Leave a Reply

Your email address will not be published. Required fields are marked *