ಬೆಂಗಳೂರು: ಸ್ಯಾಂಡಲ್ವುಡ್ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಆ್ಯಕ್ಷನ್ ಕಟ್ ಹೇಳಿರುವ ‘ಕೆಜಿಎಫ್’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿ, ‘ಕೆಜಿಎಫ್ 2’ ಸಿನಿಮಾದ ಬಳಿಕ ಗ್ಲೋಬಲ್ ಸ್ಟಾರ್ ಆದ ಯಶ್ (Yash) ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತಿಯನ್ನು ವಿಶ್ವಾದ್ಯಂತ ಪಸರಿಸಿದ ಯಶ್ಗೆ ಬುಧವಾರ (ಜ. 8) ಹುಟ್ಟುಹಬ್ಬದ ಸಂಭ್ರಮ (Yash Birthday). ಈ ಹಿನ್ನೆಲೆಯಲ್ಲಿ ಅವರ ಮುಂಬರುವ ‘ಟಾಕ್ಸಿಕ್’ (Toxic) ಚಿತ್ರದ ಟೀಸರ್ ರಿಲೀಸ್ ಆಗಿದೆ. ಯಶ್ ಹೊಸ ಗ್ಯಾಂಗ್ಸ್ಟರ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. 2022ರಲ್ಲಿ ತೆರೆಕಂಡ ‘ಕೆಜಿಎಫ್ 2 ಸಿನಿಮಾದ ಬಳಿಕ ಯಶ್ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಹೀಗಾಗಿ ಅವರ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ. ಸದ್ಯ ಯಶ್ ಒಂದಲ್ಲ ಎರಡಲ್ಲ 3 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.
ʼಟಾಕ್ಸಿಕ್ʼ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರದ ನಿರ್ದೇಶಕಿ, ಮಲಯಾಳಂ ಮೂಲದ ಗೀತು ಮೋಹನ್ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಗ್ಯಾಂಗ್ಸ್ಟರ್ ಚಿತ್ರ ʼಟಾಕ್ಸಿಕ್ʼ. ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿರುವ ಈ ಚಿತ್ರ ಗೋವಾದಲ್ಲಿ ನಡೆಯುವ ಡ್ರಗ್ಸ್ ಮಾಫಿಯಾ ಸುತ್ತ ಸಾಗುತ್ತದೆ. ಸದ್ಯ ರಿಲೀಸ್ ಆಗಿರುವ ಗ್ಲಿಂಪ್ ಈ ಬಗ್ಗೆ ಸೂಚನೆ ನೀಡಿದೆ. ಜತೆಗೆ ಹಾಲಿವುಡ್ ರೇಂಜ್ನಲ್ಲಿ ಚಿತ್ರ ಇರಲಿದೆ ಎನ್ನುವುದು ಗೊತ್ತಾಗಿದೆ. ಯಶ್ ಯಾವ ಹಾಲಿವುಡ್ ಸ್ಟಾರ್ಗೂ ಕಡಿಮೆ ಇಲ್ಲದಂತೆ ಮಿಂಚಿದ್ದಾರೆ. ಕಳೆದ ವರ್ಷ ಸೆಟ್ಟೇರಿದ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಬೆಂಗಳೂರು, ಮುಂಬೈ, ಗೋವಾ ಮುಂತಾದೆಡೆ ಚಿತ್ರೀಕರಣ ನಡೆಸಲಾಗುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಇದು ಮೊದಲ ಸಾಲಿನಲ್ಲಿ ನಿಲ್ಲುತ್ತದೆ.
ʼರಾಮಾಯಣʼ
ಸ್ಯಾಂಡಲ್ವುಡ್ ಮಾತ್ರವಲ್ಲ ಪರಭಾಷೆಯಲ್ಲಿಯೂ ಯಶ್ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಅವರು ಅಳೆದೂ ತೂಗಿ ಪಾತ್ರವನ್ನು ಅಯ್ಕೆ ಮಾಡುತ್ತಿದ್ದಾರೆ. ಹೀಗೆ ಒಪ್ಪಿಕೊಂಡ ಚಿತ್ರ ಹಿಂದಿಯ ʼರಾಮಾಯಣʼ. ಬಾಲಿವುಡ್ನ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ನಿರ್ವಹಿಸುತ್ತಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯಾಗಿ ನಟಿಸುತ್ತಿದ್ದು, ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ. ಸಿನಿಮಾದಲ್ಲಿ ಯಶ್ ಪಾತ್ರ ವಿಶೇಷವಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ. ವಿಶೇಷ ಎಂದರೆ ಈ ಪಾತ್ರಕ್ಕಾಗಿ ಯಶ್ ದಾಖಲೆ ಸಂಭಾವನೆ ಪಡೆದಿದ್ದಾರೆ. ಬರೋಬ್ಬರಿ 200 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಭಾರತದಲ್ಲಿ ವಿಲನ್ ಪಾತ್ರಕ್ಕಾಗಿ ಅತೀ ಹೆಚ್ಚಿನ ಸಂಭಾವನೆ ಪಡೆದ ನಟ ಎನ್ನುವ ಖ್ಯಾತಿಯನ್ನೂ ಯಶ್ ಪಡೆದಿದ್ದಾರೆ.
ʼಕೆಜಿಎಫ್ 3ʼ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕೆಜಿಎಫ್ʼ ಸರಣಿ ಚಿತ್ರದ 2 ಭಾಗಗಳು ಈಗಾಲೇ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಮೈಲಿಗಲ್ಲು ನೆಟ್ಟಿವೆ. ಇದೀಗ 3ನೇ ಭಾಗವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ʼಕೆಜಿಎಫ್ 2ʼ ಚಿತ್ರದ ಕೊನೆಯಲ್ಲಿ ಕಥೆ ಮುಂದುವರಿಯುವ ಸೂಚೆನೆ ಇಡಲಾಗಿದೆ. ಹೀಗಾಗಿ ಅದರ ಮುಂದುವರಿದ ಭಾಗ ನಿರ್ಮಾಣವಾಗಲಿದೆ ಎಂದೇ ಹೇಳಲಾಗುತ್ತಿದೆ. ನಿರ್ದೇಶಕ ಪ್ರಸಾಂತ್ ನೀಲ್ ಕೂಡ ಇದಕ್ಕೆ ಪೂರಕವಾಗಿಯೇ ಕೆಲವು ದಿನಗಳ ಹಿಂದೆ ಮಾತನಾಡಿದ್ದರು. ಅದಾಗ್ಯೂ ಚಿತ್ರ ಸದ್ಯ ಸೆಟ್ಟೇರುವುದು ಡೌಟು. ಯಶ್ ಮತ್ತು ಪ್ರಶಾಂತ್ ನೀಲ್ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ನಿರತರಾಗಿದ್ದು, ಇದಾದ ಬಳಿಕ ಇವರು ಒಂದಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಈ ಸುದ್ದಿಯನ್ನೂ ಓದಿ: Toxic Movie: ‘ಟಾಕ್ಸಿಕ್’ ಚಿತ್ರತಂಡದಿಂದ ಗುಡ್ನ್ಯೂಸ್; ಯಶ್ ಹುಟ್ಟಹಬ್ಬದಂದು ಹೊರ ಬೀಳಲಿದೆ ಮಹತ್ವದ ಅಪ್ಡೇಟ್