ನವದೆಹಲಿ: ಪತ್ನಿ ಬೇರೊಬ್ಬನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಆರೋಪಿಯನ್ನು 28 ವರ್ಷದ ಧನರಾಜ್ ಅಲಿಯಾಸ್ ಲಲ್ಲು ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಂದ ನಂತರ ಆಕೆಯ ಸ್ನೇಹಿತ ಯಾರೆಂದು ಪತ್ತೆ ಹಚ್ಚಿ ಕೊಲ್ಲಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. (Delhi Horror)
ಆರೋಪಿ ಧನರಾಜ್ ಈ ಹಿಂದೆ ಓಲಾ ಹಾಗೂ ಉಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಗೀತಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿ ದಿನವೂ ಗಂಡ- ಹೆಂಡತಿಯ ನಡುವೆ ಜಗಳವಾಗುತ್ತಿತ್ತು. ಧನರಾಜ್ ತನ್ನ ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧ ಇದೆ ಎಂದು ಅನುಮಾನಿಸುತ್ತಿದ್ದ ಎಂದು ತಿಳಿದು ಬಂದಿದೆ. . ಡಿಸೆಂಬರ್ 29, 2024 ರಂದು ದಂಪತಿಗಳ ನಡುವೆ ತೀವ್ರ ಜಗಳ ನಡೆದಿದ್ದು, ನೈಋತ್ಯ ದೆಹಲಿಯ ದಾಬ್ರಿ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಆತ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ಹಾಸಿಗೆಯೊಳಗೆ ಬಚ್ಚಿಟ್ಟಿದ್ದಾನೆ. ದೇಹವನ್ನು ಬಚ್ಚಿಡುವ ಮೊದಲು, ಕೊಳೆಯುವುದನ್ನು ತಡೆಯಲು ಅವಳ ಮುಖವನ್ನು ಟೇಪ್ನಿಂದ ಮುಚ್ಚಿದ್ದ.
ಪೊಲೀಸ್ ಹೇಳಿಕೆಯ ಪ್ರಕಾರ, ಧನರಾಜ್ ತನ್ನ ಹೆಂಡತಿಯನ್ನು ಕೊಂದ ನಂತರ, ದೇಹವನ್ನು ಹೇಗೆ ವಿಲೇವಾರಿ ಮಾಡಬೇಕು ಮತ್ತು ಏಕಾಂತ ಪ್ರದೇಶದಲ್ಲಿ ವಿಲೇವಾರಿ ಮಾಡುವುದು ಹೇಗೆ ಎಂದು ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಿದ್ದ. ಹಾಗೂ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನನ್ನು ಕೊಲ್ಲಲು ಯೋಜನೆ ಸಿದ್ದತೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 3 ರಂದು, ದಂಪತಿಯ ನಿವಾಸದಲ್ಲಿ ಹಾಸಿಗೆಯೊಳಗೆ ಗೀತಾ ಅವರ ಕೊಳೆತ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ನಂತರ ತನಿಖೆಯನ್ನು ಕೈಗೊಂಡ ಪೊಲೀಸರು ಧನರಾಜ್ ಪತ್ತೆಗೆ ಹಲವು ತಂಡಗಳನ್ನು ರಚಿಸಿದ್ದರು. ಧನರಾಜ್ ಹೊಸ ಫೋನ್ ಮತ್ತು ಸಿಮ್ ಕಾರ್ಡ್ ಪಡೆದಿರುವುದು ಬೆಳಕಿಗೆ ಬಂದಿದೆ. ಆತ ಪಂಜಾಬ್‌ನಲ್ಲಿದ್ದು, ಮತ್ತೊಂದು ಕೊಲೆ ಮಾಡಲು ದೆಹಲಿಗೆ ಬರುತ್ತಾನೆ ಎಂದು ಪೊಲೀಸರು ಖಚಿತ ಮಾಹಿತಿಯನ್ನು ಕಲೆ ಹಾಕಿದ್ದರು. ಆ್ಯಂಟಿ ನಾರ್ಕೋಟಿಕ್ಸ್ ಸೆಲ್, ದ್ವಾರಕಾ ತಂಡವು ಎರಡನೇ ಅಪರಾಧವನ್ನು ನಡೆಸುವ ಮೊದಲು ಧನರಾಜನನ್ನು ಬಂಧಿಸಿದೆ.
ಈ ಸುದ್ದಿಯನ್ನೂ ಓದಿ : Death Penalty: ಮರಣದಂಡನೆ ಸಮಯದಲ್ಲಿ ಅಪರಾಧಿ ಕಿವಿಯಲ್ಲಿ ಏನು ಹೇಳಲಾಗುತ್ತದೆ ಗೊತ್ತೇ?