Thursday, 9th January 2025

NZ vs SL: ಹ್ಯಾಟ್ರಿಕ್‌ ವಿಕೆಟ್‌ ಪಡೆದು ಮಾಲಿಂಗ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಮಹೇಶ್‌ ತೀಕ್ಷಣ!

NZ vs SL: Sri lanka Spinner Maheesh Theekshana bags ODI hat-trick, joins Vaas, Malinga in elite list

ನವದೆಹಲಿ: ಶ್ರೀಲಂಕಾ ಕ್ರಿಕೆಟ್‌ ತಂಡದ ಸ್ಪಿನ್ನರ್‌ ಮಹೇಶ್‌ ತೀಕ್ಷಣ ಅವರು ನ್ಯೂಜಿಲೆಂಡ್‌ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ (NZ vs SL) ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ ಶ್ರೀಲಂಕಾದ ಏಳನೇ ಬೌಲರ್‌ ಎಂಬ ಸಾಧನೆಗೆ ಮಹೇಶ್‌ ತೀಕ್ಷಣ ಭಾಜನರಾಗಿದ್ದಾರೆ.

ಬುಧವಾರ ಸೆಡಾನ್‌ ಪಾರ್ಕ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ 37ನೇ ಓವರ್‌ನಲ್ಲಿ ಶ್ರೀಲಂಕಾ ಸ್ಪಿನ್ನರ್‌ ಹ್ಯಾಟ್ರಿಕ್‌ ವಿಕೆಟ್‌ ಪೂರ್ಣಗೊಳಿಸಿದರು. ನ್ಯೂಜಿಲೆಂಡ್‌ ತಂಡದ ಮಿಚೆಲ್‌ ಸ್ಯಾಂಟ್ನರ್‌, ನೇಥನ್‌ ಸ್ಮಿತ್‌ ಹಾಗೂ ಮ್ಯಾಟ್‌ ಹೆನ್ರಿ ಅವರನ್ನು ಸತತ ಮೂರು ಎಸೆತಗಳಲ್ಲಿ ಮಹೇಶ್‌ ತೀಕ್ಷಣ ಔಟ್‌ ಮಾಡಿದ್ದಾರೆ. 35ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಅವರು ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ನಂತರ 37ನೇ ಓವರ್‌ಗೆ ಬೌಲಿಂಗ್‌ಗೆ ಬಂದಿದ್ದ ತೀಕ್ಷಣ, ತನ್ನ ಮೊದಲನೇ ಎಸೆತದಲ್ಲಿಯೇ ಮ್ಯಾಟ್‌ ಹೆನ್ರಿ ವಿಕೆಟ್‌ ಅನ್ನು ಕಿತ್ತಿದ್ದರು.

ಈ ಪಂದ್ಯದಲ್ಲಿ ಒಟ್ಟು 8 ಓವರ್‌ಗಳನ್ನು ಬೌಲ್‌ ಮಾಡಿದ್ದ ಮಹೇಶ್‌ ತೀಕ್ಷಣ 44 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂತಿಮವಾಗಿ ನ್ಯೂಜಿಲೆಂಡ್‌ ತಂಡ 37 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳನ್ನು ಕಲೆ ಹಾಕಿತ್ತು. ಮಳೆಯ ಕಾರಣ ಈ ಪಂದ್ಯವನ್ನು 37 ಓವರ್‌ಗಳಿಗೆ ಸೀಮಿತಗಿಳಿಸಲಾಗಿತ್ತು. ನ್ಯೂಜಿಲೆಂಡ್‌ ಪರ ರಚಿನ್‌ ರವೀಂದ್ರ 79 ರನ್‌ಗಳಿಸಿದ್ದರೆ, ಮಾರ್ಕ್‌ ಚಾಂಪ್ಮನ್‌ 62 ರನ್‌ಗಳಿಸಿದ್ದರು.

ಶ್ರೀಲಂಕಾ ಪರ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧಕರು

ಚಮಿಂದಾ ವಾಸ್: ಶ್ರೀಲಂಕಾ vs ಜಿಂಬಾಬ್ವೆ, 2001, ಕೊಲಂಬೊ
ಚಮಿಂದಾ ವಾಸ್: ಶ್ರೀಲಂಕಾ vs ಬಾಂಗ್ಲಾದೇಶ, 2003, ಪೀಟರ್‌ಮರಿಟ್ಜ್‌ಬರ್ಗ್
ಲಸಿತ್ ಮಾಲಿಂಗ: ಶ್ರೀಲಂಕಾ vs ದಕ್ಷಿಣ ಆಫ್ರಿಕಾ, 2007, ಗಯಾನಾ
ಫರ್ವೀಜ್ ಮಹರೂಫ್: ಶ್ರೀಲಂಕಾ vs ಭಾರತ, 2010, ದಾಂಬುಲ್ಲಾ
ಲಸಿತ್ ಮಾಲಿಂಗ: ಶ್ರೀಲಂಕಾ vs ಕೀನ್ಯಾ, 2011, ಕೊಲಂಬೊ (RPS)
ಲಸಿತ್ ಮಾಲಿಂಗ: ಶ್ರೀಲಂಕಾ vs ಆಸ್ಟ್ರೇಲಿಯಾ, 2011, ಕೊಲಂಬೊ (RPS)
ತಿಸಾರ ಪೆರೇರಾ: ಶ್ರೀಲಂಕಾ vs ಪಾಕಿಸ್ತಾನ, 2012, ಕೊಲಂಬೊ (RPS)
ವಾನಿಂದು ಹಸರಂಗ: ಶ್ರೀಲಂಕಾ vs ಜಿಂಬಾಬ್ವೆ, 2017, ಗಾಲೆ
ದುಷ್ಮಂತ ಮಧುಶಂಕ: ಶ್ರೀಲಂಕಾ vs ಬಾಂಗ್ಲಾದೇಶ, 2018, ಢಾಕಾ
ಮಹೇಶ್ ತೀಕ್ಷಣ: ಶ್ರೀಲಂಕಾ vs ನ್ಯೂಜಿಲೆಂಡ್, 2024, ಹ್ಯಾಮಿಲ್ಟನ್

ಶ್ರೀಲಂಕಾ 142 ರನ್‌ಗಳಿಗೆ ಆಲೌಟ್‌

ಬಳಿಕ 256 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ ವಿಲಿಯಮ್‌ ರೌರ್ಕಿ ಸೇರಿದಂತೆ ಕಿವೀಸ್‌ ಶಿಸ್ತುಬದ್ದ ಬೌಲಿಂಗ್‌ ದಾಳಿಗೆ ನಲುಗಿ 30.2 ಓವರ್‌ಗಳಿಗೆ 142 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಶ್ರೀಲಂಕಾ ತಂಡ 113 ರನ್‌ಗಳಿಂದ ಸೋಲು ಅನುಭವಿಸಿದೆ. ಪ್ರವಾಸಿಗರ ಪರ ಕಮಿಂದು ಮೆಂಡಿಸ್‌ 64 ರನ್‌ಗಳನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕಿವೀಸ್‌ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.

ಈ ಸುದ್ದಿಯನ್ನು ಓದಿ: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ

Leave a Reply

Your email address will not be published. Required fields are marked *