Thursday, 9th January 2025

Naxals Surrender: ಸಿಎಂ ಸಿದ್ದರಾಮಯ್ಯ ಮುಂದೆ ಶರಣಾದ 6 ನಕ್ಸಲರು; ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು!

ಬೆಂಗಳೂರು: ನಕ್ಸಲ್ ನಾಯಕಿ ಮುಂಡಗಾರು ಲತಾ (Mundagaru Latha) ಸೇರಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ಆರು ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಬುಧವಾರ ಶರಣಾದರು. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸಿಎಂ ಸಮ್ಮುಖದಲ್ಲಿ ನಕ್ಸಲರು ಶರಣಾಗತಿಯಾಗಿದ್ದಕ್ಕೆ (Naxals Surrender) ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಸಾಕ್ಷಿಯಾಯಿತು.

ಮುಂಡಗಾರು ಲತಾ ನೇತೃತ್ವದಲ್ಲಿ ಆರು ಮಂದಿ ನಕ್ಸಲರರು ಬಂದೂಕಿನ ಹಾದಿಯನ್ನು ತೊರೆದು ಪ್ರಜಾಸತ್ತಾತ್ಮಕ ಹಾದಿಯನ್ನು ತುಳಿಯುವ ಉದ್ದೇಶದಿಂದ ಶರಣಾಗಿದ್ದಾರೆ. ಈ ಮೊದಲು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕ್ಸಲರು ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಯಗಳಿಗೆಯಲ್ಲಿ ಬದಲಾವಣೆಗೊಂಡು ಚಿಕ್ಕಮಗಳೂರಿನಿಂದ ನೇರವಾಗಿ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ನಕ್ಸಲರು ಶರಣಾಗತರಾದರು.

ಈ ಮೂಲಕ ಶೃಂಗೇರಿ ತಾಲೂಕು ಮುಂಡಗಾರು ಲತಾ, ದಕ್ಷಿಣ ಕನ್ನಡ ಜಿಲ್ಲೆ ಕುತ್ಲೂರಿನ ಸುಂದರಿ, ಬಾಳೆಹೊಳೆಯ ವನಜಾಕ್ಷಿ, ಆಂಧ್ರ ಪ್ರದೇಶದ ಮಾರೆಪ್ಪ ಅರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ಕೆ.ವಸಂತ, ಕೇರಳದ ಟಿ.ಎನ್.ಜೀಶ ಶರಣಾಗಿ ಸಮಾಜದ ಮುಖ್ಯವಾಹಿನಿ ಸೇರಿದ್ದಾರೆ. ಶೃಂಗೇರಿ ತಾಲೂಕು ಕಿಗ್ಗಾ ಮೂಲದ ರವಿ ಎಂಬಾತ ಮಾತ್ರ ಶರಣಾಗುವುದು ಬಾಕಿ ಇದ್ದು, ಆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಮಹಿಳಾ ಮಾವೋವಾದಿಗಳು 18 ಬೇಡಿಕೆಯನ್ನು ಇಟ್ಟಿದ್ದಾರೆ. ಅಲ್ಲದೆ ಘನತೆಯಿಂದ ಶರಣಾಗತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂಬ ಮನವಿಯನ್ನು ಮಾಡಿದ್ದಾರೆ. ನಕ್ಸಲ್ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ಗೆ ಬಲಿಯಾದ ನಂತರ ಉಳಿದ ನಕ್ಸಲರನ್ನು ಶರಣಾಗಿಸುವ ಪ್ರಕ್ರಿಯೆಗೆ ವೇಗ ಸಿಕ್ಕಿತ್ತು.

ಕರ್ನಾಟಕ, ಕೇರಳ, ತಮಿಳುನಾಡಿನ 6 ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿದ್ದೇವೆ. ನಮ್ಮ ಕೊನೆ ಉಸಿರು ಇರುವವರೆಗೂ ಜನಪರ ಹೋರಾಟಕ್ಕೆ ಹಿಂಜರಿಯುವುದಿಲ್ಲ. ಶರಣಾಗತಿ/ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕರ ವೇದಿಕೆಯವರು ಸರಕಾರ ನೀಡಿದ ಎಲ್ಲ ಭರವಸೆಗಳನ್ನು ಅರ್ಥ ಮಾಡಿಸಿದ್ದಾರೆ. ಸರಕಾರ ಕೂಡ ನಮ್ಮ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ಮುಂಡಗಾರು ಲತಾ ಹೇಳಿದ್ದಾರೆ.

ಸಂವಿಧಾನ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ
ಬಾಳೆಹೊನ್ನೂರಿನಿಂದ ಹಾಸನ ಮಾರ್ಗವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಚನ್ನರಾಯಪ್ಪಟ್ಟಣ, ಹಿರಿಸಾವೆ ಮೂಲಕ ಬೆಂಗಳೂರಿಗೆ 6 ನಕ್ಸಲರನ್ನು ಕರೆದುಕೊಂಡು ಬರಲಾಗಿತ್ತು. ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾಗೆ ಸಂಜೆ 6 ಗಂಟೆಗೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೂ ಬೇಕಿದ್ದಂತ ಮೋಸ್ಟ್ ವಾಂಟೆಂಡ್ 6 ನಕ್ಸಲರು ಆಗಮಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ನಕ್ಸಲರು, ಆ ಬಳಿಕ ಅವರ ಸಮ್ಮುಖದಲ್ಲಿ ಶರಣಾಗತಿಯಾದರು. ಸಿಎಂ ಸಿದ್ದರಾಮಯ್ಯ ಅವರು ಶರಣಾಗತಿಯಾದಂತಹ 6 ನಕ್ಸಲರಿಗೆ ಭಾರತದ ಸಂವಿಧಾನ ಪುಸ್ತಕ, ಗುಲಾಬಿ ಹೂ ನೀಡಿ ಸಾರ್ವಜನಿಕ ಬದುಕಿಗೆ ಬರ ಮಾಡಿಕೊಂಡರು. ಈ ವೇಳೆ ತಮ್ಮನ್ನು ಸಮಾಜದ ಮುಖ್ಯವಾಹಿನಿಗೆ ಸ್ವಾಗತಿಸಿದ ಮುಖ್ಯಮಂತ್ರಿಗಳಿಗೆ ನಕ್ಸಲರು ಅಭಿನಂದನೆ ಸಲ್ಲಿಸಿದರು.

ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ
ಶರಣಾದ 6 ನಕ್ಸಲರಿಗೆ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಮೂರು ಕೆಟಗರಿಯಲ್ಲಿ ಪ್ಯಾಕೇಜ್ ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಕೆಟಗರಿ ಎ ವರ್ಗದಡಿ ನಮ್ಮ ರಾಜ್ಯದವರೇ ಆಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ, ಕೇಸ್ ಇದ್ದು ಶರಣಾದವರಿಗೆ 7.50 ಲಕ್ಷ ಹಣ ನೀಡುತ್ತಿದೆ.

ಕೆಟಗರಿ ಬಿ ವರ್ಗದಡಿ ಹೊರ ರಾಜ್ಯದ ನಕ್ಸಲರಿಗೆ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೇ 4 ಲಕ್ಷ ಪ್ಯಾಕೇಜ್ ನೀಡುವುದಾಗಿ ತಿಳಿಸಿದೆ.

ಕೆಟಗರಿ ಸಿ ವರ್ಗದಡಿ ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಪ್ರಕರಣಗಳು ಇದ್ದರೂ 2 ಲಕ್ಷ ಹಣವನ್ನು ಪ್ಯಾಕೇಜ್ ನಡಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಯಾರ ಮೇಲೆ ಎಷ್ಟು ಕೇಸ್‌?
ಮುಂಡಗಾರು ಲತಾ ವಿರುದ್ಧ 59 ಪ್ರಕರಣಗಳು ದಾಖಲಾಗಿವೆ. ಸುಂದರಿ ವಿರುದ್ಧ ಉಡುಪಿ, ದ.ಕನ್ನಡದಲ್ಲಿ 3 ಕೇಸ್‌ಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ 3 ಪ್ರಕರಣಗಳಿವೆ, ವನಜಾಕ್ಷಿ ವಿರುದ್ಧ15 ಕೇಸ್‌ ದಾಖಲಾಗಿವೆ. ಕೆ.ವಸಂತ ಮತ್ತು ಟಿ.ಎನ್. ಜೀಶಾ ವಿರುದ್ಧ ಹಲವು ಕೇಸ್‌ಗಳಿವೆ.

Leave a Reply

Your email address will not be published. Required fields are marked *