ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಜಸ್ ಪ್ರೀತ್ ಬುಮ್ರಾಗೆ (Jasprit Bumrah) ನೀಡಬೇಕೆಂಬ ಸಲಹೆಗಳು ಕೇಳಿ ಬರುತ್ತಿವೆ. ಹಲವು ಮಾಜಿ ಕ್ರಿಕೆಟಿಗರು ನೀಡುತ್ತಿದ್ದಾರೆ. ಆದರೆ ಈ ಹೇಳಿಕೆಗಳನ್ನು ಅಲ್ಲಗಳೆದಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಒಂದು ವೇಳೆ ರೋಹಿತ್ ಶರ್ಮಾ ಟೆಸ್ಟ್ ಕ್ಯಾಪ್ಟನ್ಸಿ ತೊರೆದರೆ ವೇಗಿ ಜಸ್‌ಪ್ರೀತ್ ಬುಮ್ರಾ ಬದಲಿಗೆ ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅವರಲ್ಲಿ ಒಬ್ಬರಿಗೆ ನಾಯಕತ್ವ ನೀಡಬೇಕೆಂದು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡಿದ್ದ ಬಾರ್ಡರ್ -ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ ಜಸ್‌ಪ್ರೀತ್ ಬುಮ್ರಾಗೆ ನಾಯಕತ್ವ ನೀಡಲಾಗಿತ್ತು. ಅಲ್ಲದೆ ಹಿಟ್‌ಮ್ಯಾನ್ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ತಂಡಕ್ಕೆ 295 ರನ್‌ಗಳ ಬೃಹತ್ ಗೆಲುವು ತಂದುಕೊಟ್ಟಿದ್ದರು. ಆದರೆ ಅಂತಿಮವಾಗಿ ಭಾರತ 1-3 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ಸೋತಿತ್ತು ಹಾಗೂ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿತ್ತು.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, ವೇಗಿ ಜಸ್‌ಪ್ರೀತ್ ಬುಮ್ರಾಗೆ ಟೀಮ್ ಇಂಡಿಯಾದ ನಾಯಕತ್ವ ನೀಡುವ ಮೂಲಕ ಅವರ ವೈಭವವನ್ನು ಕಳೆದುಕೊಳ್ಳುವಂತೆ ಮಾಡಬೇಡಿ, ಅದರ ಬದಲಿಗೆ ಆಯ್ಕೆ ಮಂಡಳಿಯು ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅವರಲ್ಲಿ ಒಬ್ಬರಿಗೆ ಈ ಜವಾಬ್ದಾರಿ ನೀಡಲಿ ಎಂದು ಸಲಹೆ ನೀಡಿದ್ದಾರೆ.
ಜಸ್‌ಪ್ರೀತ್ ಬುಮ್ರಾಗೆ ನಾಯಕತ್ವ ನೀಡಬೇಡಿ: ಕೈಫ್
“ಬಿಸಿಸಿಐ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಭಾರತ ತಂಡದ ಟೆಸ್ಟ್ ತಂಡದ ಪೂರ್ಣಾವಧಿ ನಾಯಕರನ್ನಾಗಿ ಆಯ್ಕೆ ಮಾಡುವ ಮುನ್ನ ಎರಡು ಬಾರಿ ಯೋಚಿಸುವುದು ಒಳಿತು. ಬುಮ್ರಾ ತಮ್ಮ ಫಿಟ್ನೆಸ್ ಹೆಚ್ಚಿಸಿಕೊಂಡು ವಿಕೆಟ್ ಪಡೆಯುವುದರ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಒಂದು ವೇಳೆ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದರೆ, ತಮ್ಮ ಫಾರ್ಮ್ ಕಳೆದುಕೊಳ್ಳುವುದಲ್ಲದೆ ಗಾಯಕ್ಕೆ ಒಳಗಾಗಿ ಅವರ ಕ್ರಿಕೆಟ್ ವೃತ್ತಿ ಬದುಕು ಬಹುಬೇಗ ಮುಗಿಯಬಹುದು. ಆದ್ದರಿಂದ ಚಿನ್ನದ ಕೋಳಿಯನ್ನು ಕಳೆದುಕೊಳ್ಳಬೇಡಿ,” ಎಂದು ಮಾಜಿ ಕ್ರಿಕೆಟಿಗ ಆಗ್ರಹಿಸಿದ್ದಾರೆ.
ತಂಡದ ಮೇಲೂ ಹೆಚ್ಚಿನ ಹೊರೆ
“ರೋಹಿತ್ ಶರ್ಮಾ ನಂತರ ಜಸ್‌ಪ್ರೀತ್ ಬುಮ್ರಾ ಅವರನ್ನು ಭಾರತ ತಂಡದ ಯಶಸ್ವಿ ನಾಯಕ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯಾದ ಉಪಾಯವಲ್ಲ. ಒಂದು ವೇಳೆ ಬುಮ್ರಾ ನಾಯಕರಾದರೆ ಆತನ ಮೇಲೆ ಹೆಚ್ಚಿನ ಹೊರೆ ಬಿದ್ದು ಗಾಯದ ಸಮಸ್ಯೆಗೆ ಒಳಗಾಗಬಹುದು. ಬುಮ್ರಾ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು,” ಎಂದು ಕೈಫ್ ಹೇಳಿದ್ದಾರೆ.
ಬ್ಯಾಟ್ಸ್‌ಮನ್‌ಗೆ ನಾಯಕತ್ವ ನೀಡಿ
” ಆದ್ದರಿಂದ ನಾನು ಜಸ್‌ಪ್ರೀತ್ ಬುಮ್ರಾ ಅವರಿಗೆ ಕ್ಯಾಪ್ಟನ್ಸಿ ನೀಡುವ ನಿಲುವನ್ನು ಒಪ್ಪುವುದಿಲ್ಲ. ಅಲ್ಲದೆ ಒಬ್ಬ ಬ್ಯಾಟರ್ ಕ್ಯಾಪ್ಟನ್ ಆಗಬೇಕು ಎಂದು ನಾನು ಬಯಸುತ್ತೇನೆ. ಆದ್ದರಿಂದ ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್‌ಗೆ ನಾಯಕತ್ವ ನೀಡಿ. ಏಕೆಂದರೆ ಈ ಆಟಗಾರರಿಗೆ ಐಪಿಎಲ್ ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸಿರುವ ಅನುಭವವಿದೆ. ಆದ್ದರಿಂದ ರಾಹುಲ್ ಅಥವಾ ಪಂತ್ ಇಬ್ಬರಲ್ಲಿ ಒಬ್ಬರಿಗೆ ಕ್ಯಾಪ್ಟನ್ಸಿ ನೀಡುವುದು ಉತ್ತಮ ಆಯ್ಕೆ ಆಗಿದೆ,” ಎಂದು ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ