Friday, 10th January 2025

Harish Kera Column: ಬಗೆಹರಿಯದ ಪ್ರಶ್ನೆಗೆ ನೂರು ವರ್ಷ

ಕಾಡುದಾರಿ

ಹರೀಶ್‌ ಕೇರ

ಹರಪ್ಪ ನಾಗರಿಕತೆಯು ಆರ್ಯರಿಗಿಂತ ಹಿಂದಿನದು ಮತ್ತು ಆರ್ಯರು ಬರುವ ಮೊದಲು ದ್ರಾವಿಡರು ಉತ್ತರದಲ್ಲಿ ನೆಲೆಸಿದ್ದರು ಎಂಬುದನ್ನು ಎತ್ತಿ ತೋರಿಸುವುದು, ಆ ಮೂಲಕ ತಮಿಳು ಅಸ್ಮಿತೆಯನ್ನು ಭಾರತದ ಸಾಂಸ್ಕೃತಿಕ ಕೇಂದ್ರ ಎಂದು ಪ್ರತಿಪಾದಿಸುವುದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಗುರಿ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಿಂಧೂ ಕಣಿವೆ ನಾಗರಿಕತೆಯಲ್ಲಿ ಕಂಡುಬಂದಿರುವ ಶಿಲಾಲಿ ಪಿಗಳ ಅರ್ಥ ಡಿಕೋಡ್ ಮಾಡುವ ಅಧ್ಯಯನಕ್ಕೆ ಹತ್ತು ಲಕ್ಷ ಡಾಲರ್ ಕೊಡುವುದಾಗಿ ಹೇಳಿದ್ದಾರೆ.
ಅಂದರೆ ಸುಮಾರು 8.5 ಕೋಟಿ ರುಪಾಯಿ. ಉತ್ತರೋತ್ತರ ಭಾರತದ ಈ ಪುರಾತನ ನಾಗರಿಕತೆಯ ಲಿಪಿ ಅಧ್ಯಯನಕ್ಕೆ ಈ ದಕ್ಷಿಣದ ನಾಯಕರಿಗೆ ಇರುವ ವಿಶೇಷ ಆಸಕ್ತಿಯನ್ನು ಮೊದಲು ಡಿಕೋಡ್ ಮಾಡಬಹುದು. ದ್ರಾವಿಡ ರಾಜಕೀಯದ ಉತ್ತಮೋತ್ತಮ ನಾಯಕ ತಾನು ಎನಿಸಿಕೊಳ್ಳಲು ಮುಂದಾಗಿರುವ ಸ್ಟಾಲಿನ್ ಈ
ಲಿಪಿಯ ಅಧ್ಯಯನಕ್ಕೆ ದುಡ್ಡು ನೀಡುವುದು ಸಹಜ.

ಇದು ದ್ರಾವಿಡ ಸಂಸ್ಕೃತಿಯನ್ನು ಸಿಂಧೂ ನದಿ ನಾಗರಿಕತೆಯ ಬಯಲಿನ ತೊಟ್ಟಿಲಿನಲ್ಲಿ ಹಾಕಿ ತೂಗುವ ಒಂದು ಯತ್ನ ಎಂದರೂ ಸರಿ. ಸಿಂಧೂ ನದಿ ಬಯಲಿನಲ್ಲಿ ನೆಲೆಸಿದ್ದ ಮೂಲ ಸಂಸ್ಕೃತಿ ದ್ರಾವಿಡರದು, ಆರ್ಯ ಜನಾಂಗದ ದಾಳಿಯಿಂದ ಅವರು ದಕ್ಷಿಣದತ್ತ, ಮುಖ್ಯವಾಗಿ ತಮಿಳುನಾಡಿನತ್ತ ಬಂದು ನೆಲೆಯಾದರು ಎಂದು ಸ್ಥಾಪಿಸುವ ಅಧ್ಯಯನಗಳ ಬಗ್ಗೆ ಸ್ಟಾಲಿನ್ ಮುಂತಾದ ನಾಯಕರಿಗೆ ಹೆಚ್ಚು ಒಲವು. ಅಲ್ಲಿನ ಶಿಲಾಲಿಪಿಯ ಅಧ್ಯಯನವೂ ಅದನ್ನೇ ಸಮರ್ಥಿಸಿದರೆ ಅವರಿಗೂ ದ್ರಾವಿಡ ಸಂಸ್ಕೃತಿವಾದಿಗಳಿಗೂ ಸಂತೋಷವಾಗುತ್ತದೆ.

ಇರಲಿ, ಇದು ರಾಜಕಾರಣದ ಮಾತಾಯಿತು. ಆದರೆ ಇದ್ದಕ್ಕಿದ್ದಂತೆ ಈಗ ಸಿಂಧೂ ನಾಗರಿಕತೆಯ ಬಗ್ಗೆ ಯಾಕೆ ಇಷ್ಟೊಂದು ಆಸಕ್ತಿ? ಯಾಕೆಂದರೆ ಸಿಂಧೂ ಅಥವಾ ಹರಪ್ಪ- ಮೊಹೆಂಜೊದಾರೋ ನಾಗರಿಕತೆಯ ಸಂಶೋಧನೆ ನಡೆದು ಕಳೆದ ವರ್ಷಕ್ಕೆ (2024) ಭರ್ತಿ ನೂರು ವರ್ಷಗಳು (1924) ತುಂಬಿದವು. ಜಾನ್ ಹರ್ಬರ್ಟ್ ಮಾರ್ಷಲ್
ಎಂಬ ಬ್ರಿಟಿಷ್ ಆರ್ಕಿಯಾಲಜಿ ಈ ಸಂಶೋಧನೆಯ ಕ್ರೆಡಿಟ್ ಹೊಂದಿದ್ದಾನೆ. ಆದರೆ ಹೀಗೆ ಹೇಳುವುದು ಕೂಡ ಪೂರ್ತಿಯಾಗಿ ಸರಿಯಲ್ಲ. ಇದಕ್ಕೂ ಬಹಳ ಮೊದಲೇ ಅಂದರೆ 1921ರ ದಯಾರಾಮ್ ಸಾಹ್ನಿ ಎಂಬ ಭಾರತೀಯ ಆರ್ಕಿಯಾಲಜಿ ಈ ಪ್ರದೇಶದಲ್ಲಿ ಪುರಾತನ ನಾಗರಿಕತೆ ಇದೆ ಎಂದು ಕಂಡುಕೊಂಡಿದ್ದರು. ಆಗ ಜಾನ್ ಮಾರ್ಷಲ್ ಆರ್ಕಿಯಾಲಜಿಕಲ್ ಸರ್ವೆ ಆಫ್‌ ಇಂಡಿಯಾದ ಮಹಾನಿರ್ದೇಶಕನಾಗಿದ್ದ. ಸಂಸ್ಥೆಯ ಸಂಶೋಧಕರಾಗಿದ್ದ ದಯಾರಾಮ್ ಸಾಹ್ನಿ, ಮಾಧವಸ್ವರೂಪ ವತ್ಸ್, ರೇಖಾದಾಸ್ ಬ್ಯಾನರ್ಜಿ ಮೊದಲಾದವರು ಹರಪ್ಪ ಹಾಗೂ ಮೊಹೆಂಜೋದಾರೋ ಎಂಬ ಸ್ಥಳಗಳಲ್ಲಿ ಅಗೆದು ಈಗ ನಾವು ಕಾಣುವ ಶಿಲಾಶಿಲ್ಪಗಳು, ಬರಹಗಳು, ಕುರುಹು‌ ಗಳನ್ನು ಹೊರತೆಗೆದಿದ್ದರು.

ಇವೆಲ್ಲವೂ ಒಂದೇ ಬೃಹತ್ ನಾಗರಿಕತೆ ಎಂದು ಈ ವಿಷಯವನ್ನು ಜಾನ್ ಮಾರ್ಷಲ್ 1924ರಲ್ಲಿ ಮೊದಲು
ಪ್ರಕಟಿಸಿದ. ಹೀಗಾಗಿ ಔಪಚಾರಿಕವಾಗಿ 1924ನ್ನು ಇದರ ಶೋಧದ ವರ್ಷವೆಂದು ಗುರುತಿಸುತ್ತಾರೆ. ಆದರೆ ಜಾನ್ ಮಾರ್ಷಲ್ ಮುಂದಿನ ತಲೆಮಾರುಗಳು ನೆನಪಿಡಬೇಕಾದ ಅದ್ಭುತ ಕೆಲಸವನ್ನೇ ಮಾಡಿದ್ದ. ಆತ ಹರಪ್ಪ- ಮೊಹೆಂಜೋದಾರೋ ತಾಣಗಳಲ್ಲಿ ಪತ್ತೆಯಾದ ಪ್ರತಿಯೊಂದು ಸಾಕ್ಷಿಯನ್ನೂ ಬಹಳ ಜತನದಿಂದ ರಕ್ಷಿಸಿ, ದಾಖಲೀಕರಿಸಿದ. ನುರಿತ ಆರ್ಕಿಯಾಲಜಿಸ್ಟ್‌ಗಳಿಂದಲೇ ಆ ಕೆಲಸ ಮಾಡಿಸಿ, ಯಾವುದೇ ಉತ್ಖನನದ ದಾಖಲೆಯೂ ಕಾಣೆಯಾಗದಂತೆ ನೋಡಿಕೊಂಡ.

ಹೀಗೆ ಮಾಡುವಾಗ ‘ವಾಸ್ತವ’ ಹಾಗೂ ‘ಕಲ್ಪನೆ’ ಮಿಶ್ರವಾಗದಂತೆ ನೋಡಿಕೊಂಡದ್ದು ಆತ ಮಾಡಿದ ಗಮನಾರ್ಹ ಸಾಧನೆ. ಇದರಿಂದಾಗಿಯೇ ಇಂದಿಗೂ ಮುಕ್ತ ಮನಸ್ಸಿನ ಅಧ್ಯಯನಕಾರರಿಗೆ ಅಕಲುಷಿತವಾದ ದಾಖಲೆಗಳು ಹೆಚ್ಚಿನ ಅಧ್ಯಯನಕ್ಕೆ ಲಭ್ಯವಾಗಿವೆ. ತಕ್ಷಶಿಲಾ ಹಾಗೂ ಸಾಂಚಿಗಳಲ್ಲೂ ನಡೆದ ಪುರಾತತ್ವ ಸಂಶೋಧನೆಗಳನ್ನು ಈತನೇ ಮುನ್ನಡೆಸಿದ್ದ. ಈ ಮೂರೂ ತಾಣಗಳ ಬಗ್ಗೆ ಅಧ್ಯಯನಪೂರ್ವಕವಾದ ಕೃತಿಗಳನ್ನು ಆತ ಬರೆದಿಟ್ಟುಹೋಗಿದ್ದಾನೆ. ಇಂದು ಹರಪ್ಪ ಸಂಸ್ಕೃತಿ ಆರ್ಯ-ದ್ರಾವಿಡ ಎಂದು ಗುzಡುವ ಎರಡೂ ಕಡೆಯವರೂ ಯಾವುದೇ ದಾಖಲೆ ಬೇಕಿದ್ದರೂ ಜಾನ್ ಮಾರ್ಷಲ್ ಕಂಡುಕೊಂಡ ಸಾಕ್ಷಿಗಳ ಮೊರೆ ಹೋಗಲೇಬೇಕು.

ಸದ್ಯ ಹರಪ್ಪದಲ್ಲಿದ್ದ ಜನಾಂಗದ ಕಾಲಘಟ್ಟದ ಬಗ್ಗೆ ಅಂಥ ಗೊಂದಲವಿಲ್ಲ. ಇದು ಕ್ರಿಸ್ತಪೂರ್ವ 2500-1700 ನಡುವೆ ಇದ್ದುದು ಎಂದು ನ್ಯೂಕ್ಲಿಯರ್ ಡೇಟಿಂಗ್‌ನಲ್ಲಿ ತಿಳಿದುಬಂದಿದೆ. ಅಂದರೆ ಸುಮಾರು 4000 ವರ್ಷಗಳ ಹಿಂದಿನದು. ಈ ಜನಾಂಗ ಎಂಥದು ಎಂದು ತಿಳಿಯುವ ಅಧ್ಯಯನ ಇನ್ನೂ ನಡೆದೇ ಇದೆ. ಇದನ್ನು
ಅರಿಯಲು ತಜ್ಞರು ಹಲವು ಮಾನದಂಡಗಳನ್ನು ಬಳಸುತ್ತಿದ್ದಾರೆ.

ಅದರಲ್ಲಿ ಮುಖ್ಯವಾದ್ದು ಇಂಡಸ್ ಲಿಪಿ ಅಥವಾ ಸಿಂಧೂ ಲಿಪಿ. ಇದೊಂದು ಶಿಸ್ತುಬದ್ಧವಾದ ಲಿಪಿಯಂತೂ ಹೌದು ಎಂದು ಗೊತ್ತಾಗಿದೆ. ಆದರೆ ಇದನ್ನು ಡಿಕೋಡ್ ಮಾಡುವ ಬಗೆ ಮಾತ್ರ ಬಗೆಹರಿದಿಲ್ಲ. ಇದು 600ಕ್ಕೂ ಹೆಚ್ಚು
ವಿಭಿನ್ನ ಚಿಹ್ನೆಗಳನ್ನು ಒಳಗೊಂಡ ಭಾಷೆಯಾಗಿತ್ತು. ಮುದ್ರೆಗಳು, ಮಣ್ಣಿನ ಅಥವಾ ಕಲ್ಲಿನ ಪಾತ್ರೆಗಳು,
ಸೆರಾಮಿಕ್ ಮಡಕೆಗಳು ಮತ್ತು ಕಟ್ಟಡಗಳ ಬದಿಗಳಲ್ಲಿ ಈ ಲಿಪಿ ಕೆತ್ತಲಾಗಿದೆ. ಇವುಗಳನ್ನು ಬಲದಿಂದ ಎಡಕ್ಕೆ ಬರೆಯಲಾಗಿದೆ ಎಂದು ಭಾವಿಸಲಾಗಿದೆ. ಈ ಭಾಷೆಗೂ, ಇದರಷ್ಟೇ ಹಳತಾದ ನಾಗರಿಕತೆಗಳಾದ ಮೆಸೊಪಟೋ ಮಿಯಾ ಮತ್ತು ಈಜಿಪ್ಟ್‌ನ ಭಾಷೆಗಳ ಲಿಪಿಗಳಿಗೂ ಬಹುಶಃ ಸಂಬಂಧವಿಲ್ಲ.

ಅವುಗಳನ್ನು ಬಳಸಿಕೊಂಡು ಇದನ್ನು ಡಿಕೋಡ್ ಮಾಡಲು ಮಾಡಿದ ಪ್ರಯತ್ನಗಳು ಫಲಿಸಿಲ್ಲ.

ಹರಪ್ಪ ನಾಗರಿಕತೆಯ ವಿಸ್ತಾರ, ಏಕರೂಪತೆ ಮತ್ತು ವ್ಯಾಪಾರ ಸಂಪರ್ಕದ ವ್ಯಾಪ್ತಿಯನ್ನು ಗಮನಿಸಿದರೆ, ಅದು ಸಾಕಷ್ಟು ಅಭಿವೃದ್ಧಿ ಹೊಂದಿದ ಭಾಷೆಯ ಸಂವಹನ ಸಾಧನವನ್ನೇ ಬಳಸಿದ್ದಿರಬೇಕು. ಪತ್ತೆಯಾದ ಕುರುಹುಗಳ ಮೇಲಿನ ಲಿಪಿ ಇಂಡೋ-ಯುರೋಪಿಯನ್ ಕುಟುಂಬದ್ದಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ. ಹಾಗಿದ್ದರೆ
ಎರಡೇ ಸಾಧ್ಯತೆ- ಅದು ಬ್ರಾಹ್ಮಿ ಲಿಪಿ ಅಥವಾ ದ್ರಾವಿಡ ಲಿಪಿಯ ಮೂಲ ಸ್ವರೂಪಗಳಲ್ಲಿ ಒಂದಾಗಿರಬೇಕು. ದ್ರಾವಿಡ ಭಾಷೆ ಹಾಗೂ ಲಿಪಿ ಈಗಿರುವುದು ದಕ್ಷಿಣ ಭಾರತದಲ್ಲಿ ಮಾತ್ರ. ದ್ರಾವಿಡ ಭಾಷೆಗಳ ಸಂಬಂಧಿಯಾದ ‘ಬ್ರಾಹುಯಿ’ ಭಾಷೆ ಈಗಲೂ ಪಶ್ಚಿಮ ಪಾಕಿಸ್ತಾನದಲ್ಲಿದೆ.

ಇದು ಹರಪ್ಪ ಸಂಸ್ಕೃತಿಯ ಪ್ರದೇಶಗಳಿಗೆ ಹತ್ತಿರದಲ್ಲಿದೆ. ಇದೂ ಬಲದಿಂದ ಎಡಕ್ಕೆ ಬರೆಯುವ ಲಿಪಿ. ಬ್ರಾಹ್ಮಿ
ಲಿಪಿಯ ಸಾಮ್ಯತೆಗಳು ಇದರಲ್ಲಿ ಕಡಿಮೆ. ಕಳೆದ ದಶಕಗಳಲ್ಲಿ ನೂರಾರು ದೇಶಿ-ವಿದೇಶಿ ವಿದ್ವಾಂಸರು ಈ ಲಿಪಿಯ ನಿಗೂಢ ಒಡೆಯಲು ಯತ್ನಿಸಿದ್ದಾರೆ. ಆದರೆ ಸಫಲರಾಗಿಲ್ಲ. ಈಗ ಅರ್ಥವಾಯಿತೆ? ಈ ಲಿಪಿ ದ್ರಾವಿಡ ಲಿಪಿಗಳಿಗೆ ಹತ್ತಿರದಲ್ಲಿದೆ ಎಂದು ಅಧ್ಯಯನದ ಫಲಿತಾಂಶ ಬಂದರೆ ಅದನ್ನು ತಾರ್ಕಿಕವಾಗಿ ವಿಸ್ತರಿಸಿ ಆರ್ಯರ ದಾಳಿ, ಅದರಿಂದಾಗಿ ಹರಪ್ಪದಲ್ಲಿದ್ದ ಜನಾಂಗಗಳು ದಕ್ಷಿಣಕ್ಕೆ ಬಂದವು ಎಂಬ ವಾದಕ್ಕೆ ಇನ್ನಷ್ಟು ಪುಷ್ಟಿಗಳನ್ನು ಒದಗಿಸಬಹುದು.

ಆರ್ಯರೇ ವಿದೇಶೀಯರು, ದ್ರಾವಿಡರು ಇಲ್ಲಿನ ಸ್ಥಳೀಯರು ಎಂಬ ವಾದ ಗಟ್ಟಿಗೊಳ್ಳಲಿದೆ. ಇಲ್ಲ, ಈ ಲಿಪಿ ಬ್ರಾಹ್ಮಿ ಅಥವಾ ಪ್ರಾಕೃತಕ್ಕೆ ಸಮೀಪವಾದದ್ದು ಎಂದು ಕಂಡುಬಂದರೆ ಆರ್ಯರ ದಾಳಿ ವಾದ ಬಿದ್ದು ಹೋಗುತ್ತದೆ. ದ್ರಾವಿಡವಾದದ ಹಿಂದೆ ನಿಂತಿರುವ ಎಡಪಂಥೀಯರಿಗೂ, ಆರ್ಯರೂ ಇಲ್ಲಿನ ಮೂಲನಿವಾಸಿಗಳು ಎನ್ನುತ್ತಿರುವ ಬಲಪಂಥೀಯರಿಗೂ ಹರಪ್ಪ ಲಿಪಿಯ ರಹಸ್ಯ ಬಯಲಾಗುವುದು ಬೇಕಿದೆ; ಆದರೆ ಅದು ತಮ್ಮ ಪರವಾಗಿಯೇ ಆಗಬೇಕಿದೆ. ಇದು ಅಧ್ಯಯನ ಕಾರರಿಗೂ ಇರುವ ಸವಾಲು. ಬಹುಶಃ ಭವಿಷ್ಯದಲ್ಲಿ ಈ ರಹಸ್ಯವನ್ನು ಒಡೆಯುವ ಅಧ್ಯಯನಗಳು ನಡೆಯಬಹುದು. ಆದರೆ ಅವು ವಿವಾದಮುಕ್ತವಾಗುವುದು ಕಷ್ಟ.

ತಮಿಳುನಾಡಿನಲ್ಲಿ ಇನ್ನೂ ಒಂದು ಬೆಳವಣಿಗೆ ನಡೆಯಿತು. ಸಿಂಧೂ ಕಣಿವೆಯ ಲಿಪಿ ಚಿಹ್ನೆಗಳು ಮತ್ತು ತಮಿಳು ನಾಡಿನ ಕೆಲವು ಸ್ಥಳಗಳಲ್ಲಿ ಉತ್ಖನನದ ಸಮಯದಲ್ಲಿ ಪತ್ತೆಯಾದ ಚಿಹ್ನೆಗಳ ನಡುವೆ ಹಲವಾರು ಸಾಮ್ಯತೆಗಳಿವೆ ಎಂದು ತಮಿಳುನಾಡಿನ ಪುರಾತತ್ವ ಇಲಾಖೆಯ ಅಧ್ಯಯನವೊಂದು ಹೇಳಿತು. ‘ಸಿಂಧೂ ಚಿಹ್ನೆಗಳು ಮತ್ತು ತಮಿಳುನಾಡಿನ ಗ್ರಾಫಿಟಿ ಗುರುತುಗಳು- ಒಂದು ಮಾರ್ಫಲಾಜಿಕಲ್ ಸ್ಟಡಿ’ ಎಂಬುದು ಅಧ್ಯಯನದ ಹೆಸರು. “ದಕ್ಷಿಣ ಭಾರತದ ಶೇ.90ಕ್ಕಿಂತ ಹೆಚ್ಚು ಗ್ರಾಫಿಟಿ ಗುರುತುಗಳು ಮತ್ತು ಸಿಂಧೂ ಕಣಿವೆ ನಾಗರಿಕತೆಯ ಗುರುತುಗಳು ಸಮಾನತೆ ಹೊಂದಿವೆ” ಎಂದು ಅದು ಹೇಳಿದೆ.

ಸಿಂಧೂ ಕಣಿವೆ ನಾಗರಿಕತೆ ಪ್ರಧಾನವಾಗಿ ತಾಮ್ರದ ಯುಗದ್ದು, ದಕ್ಷಿಣ ಭಾರತದ, ವಿಶೇಷವಾಗಿ ವೈಗೈ ನದಿ
ಕಣಿವೆಯ ಸಂಸ್ಕೃತಿ ತದನಂತರದ ಕಬ್ಬಿಣ ಯುಗದ್ದು. ಅಂದರೆ ಇಲ್ಲಿನದು ಅಲ್ಲಿಗಿಂತ ಹೆಚ್ಚು ಮುಂದುವರಿದ ಹಂತ. ಅಂದರೆ ಇದು ಅಲ್ಲಿಂದಲೇ ಬಂದಿರಬೇಕು ಎಂಬುದು ಈ ಅಧ್ಯಯನದ ಪ್ರಮೇಯ. ಇತ್ತೀಚಿನ ವರ್ಷಗಳಲ್ಲಿ, ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರ ರಾಜ್ಯದಲ್ಲಿ ಪುರಾತತ್ತ್ವ ಉತ್ಖನನಗಳನ್ನು ತೀವ್ರಗೊಳಿಸಿದೆ. ವೈಗೈ ನದಿಯ ಜಲಾನಯನ ಪ್ರದೇಶದಲ್ಲಿರುವ ಕೀಳಡಿಯಲ್ಲಿನ ಅಂಥ ಒಂದು ಉತ್ಖನನ, ಸಂಗಂ ಯುಗದಲ್ಲಿ ಈ
ಪ್ರದೇಶದಲ್ಲಿ ನಗರ ಕೇಂದ್ರಗಳು ಪ್ರವರ್ಧಮಾನಕ್ಕೆ ಬಂದವು ಎಂದು ಬಹಿರಂಗಪಡಿಸಿದೆ.

ಇದರ ವರದಿಯಂತೆ ಕೀಳಡಿಯಲ್ಲಿ ಸಿಕ್ಕಿದ ಕಲಾಕೃತಿಗಳು ಕ್ರಿಸ್ತಪೂರ್ವ ಆರನೇ ಹಾಗೂ ಮೊದಲ ಶತಮಾನಗಳ ನಡುವಿನದು. ಪುರಾತತ್ತ್ವ ಶಾಸ್ತ್ರದ ಪ್ರಕಾರ ಹರಪ್ಪ ತಾಣಗಳು ಮತ್ತು ಪುರಾತನ ದಕ್ಷಿಣ ಭಾರತದ ತಾಣಗಳಲ್ಲಿ ಸಿಕ್ಕಿರುವ ಚಿಹ್ನೆಗಳಿಗೆ ಹೋಲಿಕೆ ಇದ್ದರೆ, ಎರಡೂ ಸಂಸ್ಕೃತಿಗಳ ನಡುವೆ ಸಾಂಸ್ಕೃತಿಕ ಸಂಪರ್ಕ ಇದ್ದಿರಲೇಬೇಕು. ಅಂದರೆ ದಕ್ಷಿಣ ಭಾರತದ ಈ ಪುರಾತನ ನಾಗರಿಕತೆಗಳ ಸ್ಥಳಗಳು ಸಿಂಧೂ ಕಣಿವೆಯ ತಾಣಗಳ ಕಾಲಕ್ಕೆ ಸಮೀಪ
ಎಂದಂತಾಗುತ್ತದೆ. ರಾಜಕೀಯವಾಗಿ ಸ್ಟಾಲಿನ್‌ಗೆ ಇದು ಮಹತ್ವದ್ದು. ಅದರ ಮೂಲಕ, ಹರಪ್ಪ ನಾಗರಿಕತೆಯು ಆರ್ಯರಿಗಿಂತ ಹಿಂದಿನದು ಮತ್ತು ಆರ್ಯರು ಬರುವ ಮೊದಲು ದ್ರಾವಿಡರು ಉತ್ತರದಲ್ಲಿ ನೆಲೆಸಿದ್ದರು ಎಂಬು ದನ್ನು ಎತ್ತಿ ತೋರಿಸುವುದು, ಆ ಮೂಲಕ ತಮಿಳು ಅಸ್ಮಿತೆಯನ್ನು ಭಾರತದ ಸಾಂಸ್ಕೃತಿಕ ಕೇಂದ್ರ ಎಂದು
ಪ್ರತಿಪಾದಿಸುವುದು ಅವರ ಗುರಿ.

ಆ ಮೂಲಕ ಇನ್ನೊಂದು ಸುತ್ತಿನ ಸಾಂಸ್ಕೃತಿಕ ಯುದ್ಧಕ್ಕಂತೂ ಸ್ಟಾಲಿನ್ ಅಣಿಯಾಗಿದ್ದಾರೆ. ಈಗ ಬ್ರಾಹ್ಮಿ- ಸಂಸ್ಕೃತ- ಪ್ರಾಕೃತದ ಪುರಾತನತೆಯನ್ನು ಪ್ರತಿಪಾದಿಸುವವರು ಮತ್ತು ಆರ್ಯರ ದಾಳಿಯ ಥಿಯರಿಯನ್ನು ವಿರೋಧಿಸುವವರು ಸುಮ್ಮನಿರುವುದಿಲ್ಲ. ಅವರೂ ಮತ್ತೊಮ್ಮೆ ರಂಗಕ್ಕಿಳಿಯುತ್ತಾರೆ. ಸದ್ಯ ನಮ್ಮ ಇತಿಹಾಸ ಪಠ್ಯಗಳೆಲ್ಲವೂ ಈ ಆರ್ಯ-ದ್ರಾವಿಡ ಥಿಯರಿಯ ಹೋರಾಟಗಳ ಕಗ್ಗಂಟಾಗಿ ಕೂತಿವೆ. ವಸ್ತುನಿಷ್ಠತೆಗಿಂತಲೂ ವಾದಕ್ಕೇ ಆದ್ಯತೆ ಕೊಡುವ ನಮ್ಮ ದೇಶದ ಬುದ್ದಿವಂತರು ಈ ಕಗ್ಗಂಟನ್ನು ಇನ್ನಷ್ಟು ಸಿಕ್ಕುಸಿಕ್ಕಾಗಿಸಲಿದ್ದಾರೆ!

ಇದನ್ನೂ ಓದಿ: Harish Kera Column: ಇದು ಬರೀ ಬಾಳೆಹಣ್ಣಲ್ಲವೋ ಅಣ್ಣ!

Leave a Reply

Your email address will not be published. Required fields are marked *