Friday, 10th January 2025

Dr Vijay Darda Column: ಭಾಗತವ್‌ಜೀ ಇದನ್ನೇಕೆ ಹೇಳಬೇಕಾಗಿ ಬಂತು ?

ಸಂಗತ

ಡಾ.ವಿಜಯ್‌ ದರಡಾ

ಇತಿಹಾಸವನ್ನು ನಾವು ಬದಲಿಸಲು ಸಾಧ್ಯವಿಲ್ಲ. ಇವತ್ತಿನ ಹಿಂದೂಗಳಾಗಲೀ ಅಥವಾ ಮುಸ್ಲಿಮರಾಗಲೀ ಆ ಇತಿಹಾಸವನ್ನು ಸೃಷ್ಟಿಸಿದವರಲ್ಲ. ಹಾಗಿರುವಾಗ ಏಕೆ ಪ್ರತಿಯೊಂದು ಮಸೀದಿಯ ಕೆಳಗೂ ಈಗ ಶಿವಲಿಂಗವನ್ನು ಹುಡುಕಬೇಕು?

ಹಿಂದೂ ಅಥವಾ ಮುಸಲ್ಮಾನರ ಭಾವನೆಗಳನ್ನು ಕೆಣಕಬೇಡಿ, ನಿಮ್ಮ ಕುರ್ಚಿಗಾಗಿ ಬೇರೆಯವರ ಅಂತರಂಗ ಕಲಕ ಬೇಡಿ! ನಮ್ಮಲ್ಲಿ ಹೂಣರಿದ್ದೇವೆ, ಶಕರಿದ್ದೇವೆ, ಮಂಗೋಲ್ ಗಳಿದ್ದೇವೆ, ಸಮಾಧಿಯಾದ ವಿಷಯಗಳನ್ನು ಕೆದಕಿ
ನಮ್ಮನ್ನು ಎತ್ತಿಕಟ್ಟಬೇಡಿ! ತಪ್ಪು ಬಾಬರನದಾಗಿದ್ದರೆ ಜುಮ್ಮಾನ ಮನೆ ಏಕೆ ಸುಟ್ಟಿತು? ಇಂಥ ಸೂಕ್ಷ್ಮ ಸಮಯದಲ್ಲಿ ಪರಿಸ್ಥಿತಿ ಬಿಗಡಾಯಿಸಬೇಡಿ!

ಹಿಟ್ಲರ್, ಹಲಾಕು, ತ್ಸಾರ್ ಅಥವಾ ಚೆಂಗಿಸ್ ಖಾನ್ ಗಳು ಎಲ್ಲಿದ್ದಾರೆ? ಎಲ್ಲರೂ ಮಣ್ಣಾದರು, ಹೀಗಾಗಿ ಜನಾಂಗದ ಯೋಗ್ಯತೆ ಕೆಣಕಬೇಡಿ! ಬನ್ನಿ, ಎಲ್ಲರೂ ಸೇರಿ ಒಂದು ಹೋರಾಟ ಮಾಡೋಣ, ಬಡತನದ ವಿರುದ್ಧ. ಆದರೆ ಗೆಳೆಯರೇ, ಯಾರೂ ನನ್ನ ಧಾರ್ಮಿಕ ನಂಬಿಕೆಯನ್ನು ಕಲಕಬೇಡಿ!”- ಕವಿ ಆದಂ ಗೊಂಡ್ವಿಯ ಸಾಲುಗಳಿವು.

ಬಹಳ ತೀಕ್ಷ್ಣವಾಗಿ, ಮುಕ್ತವಾಗಿ ಮತ್ತು ಧೈರ್ಯವಾಗಿ ಬರೆಯುವುದಕ್ಕೆ ಆದಂ ಪ್ರಸಿದ್ಧರು. ಅವರ ಇದೇ ಕವಿತೆ ಯನ್ನು ನಾನು ಹಿಂದೊಮ್ಮೆ ಇಲ್ಲಿ ಪ್ರಸ್ತಾಪಿಸಿದ್ದೆ. ಆ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್‌ಜೀ ಭಾಗವತ್ ಅವರು ಒಂದು ಮಹತ್ವದ ಹೇಳಿಕೆ ನೀಡಿದ್ದರು. ಅದರ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. “ಇತಿಹಾಸವನ್ನು ನಾವು ಬದಲಿಸಲು ಸಾಧ್ಯವಿಲ್ಲ. ಇವತ್ತಿನ ಹಿಂದೂಗಳಾಗಲೀ ಅಥವಾ ಮುಸ್ಲಿಮರಾಗಲೀ ಆ ಇತಿಹಾಸವನ್ನು ಸೃಷ್ಟಿಸಿದವರಲ್ಲ. ಹಾಗಿರುವಾಗ ಏಕೆ ಪ್ರತಿಯೊಂದು ಮಸೀದಿಯ ಕೆಳಗೂ ಈಗ ಶಿವಲಿಂಗವನ್ನು ಹುಡುಕಬೇಕು?” ಎಂದು ಮೋಹನ್ ಭಾಗವತ್ ಕೇಳಿದ್ದರು. ಇತ್ತೀಚೆಗೆ ಮತ್ತೊಮ್ಮೆ ಅವರು ಆಡಿದ ಮಾತುಗಳು ನನಗೆ ಮೇಲಿನ ಕವನವನ್ನು ನೆನಪಿಸಿದವು.

ಪುಣೆಯಲ್ಲಿ ಮಾತನಾಡುತ್ತಾ ಅವರು, “ರಾಮಮಂದಿರವು ಹಿಂದೂಗಳಿಗೆ ನಂಬಿಕೆ ಹಾಗೂ ಶ್ರದ್ಧೆಯ ವಿಷಯ.
ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಕೆಲವರಿಗೆ ಇನ್ನೂ ಬೇರೆ ಬೇರೆ ಕಡೆ ಇಂಥದೇ ವಿಷಯವನ್ನೆತ್ತಿ ಗದ್ದಲ ಮಾಡಿದರೆ ತಾವು ಹಿಂದೂ ನಾಯಕರಾಗಬಹುದು ಎಂದು ಅನ್ನಿಸಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ದಿನಕ್ಕೊಂದು ಹೊಸ ಹೊಸ ಪ್ರಕರಣವನ್ನು ಕೆದಕುವುದು ಸರಿಯಲ್ಲ. ಇದು ಸಮಾಜದಲ್ಲಿ
ದ್ವೇಷದ ಭಾವನೆಯನ್ನು ಬಿತ್ತುತ್ತದೆ. ಇದನ್ನು ಹೀಗೇ ಮುಂದುವರಿಯಲು ಬಿಡಬಾರದು” ಎಂದು ಹೇಳಿದ್ದರು.

ನಾನೀಗ ವಿದೇಶ ಪ್ರವಾಸದಲ್ಲಿದ್ದೇನೆ. ಸಿಂಗಾಪುರದಲ್ಲಿ ಯಾರೋ ನನ್ನ ಬಳಿ “ಮೋಹನ್ ಭಾಗವತ್ ಅವರ ಹೇಳಿಕೆಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು. ಅವರು ಇಂಥ ಮಾತು ಹೇಳಬಹುದೇ ಎಂಬುದು ನನ್ನನ್ನು ಪ್ರಶ್ನಿಸಿದವರ ಮನಸ್ಸಿನ ಇಂಗಿತವಾಗಿತ್ತು. ನಾನು ಅವರಿಗೆ ಹೇಳಿದೆ, “ನೋಡಿ ಸ್ವಾಮಿ, ನಾನು ಆರ್‌ಎಸ್‌ಎಸ್ ನ ಸಾಕಷ್ಟು ಸರಸಂಘಚಾಲಕರ ಜತೆ ಮಾತನಾಡಿದ್ದೇನೆ. ಅವರ ಜತೆಗೆ ಬಹಳ ಹತ್ತಿರದಿಂದ
ಒಡನಾಡಿದ್ದೇನೆ. ಆದರೆ, ಮೋಹನ್ ಭಾಗವತ್ ಆ ಎಲ್ಲಾ ಸರಸಂಘಚಾಲಕರಿಗಿಂತ ಭಿನ್ನರಾಗಿದ್ದಾರೆ.
ಅವರು ಮುಕ್ತ ಮನಸ್ಸು ಹೊಂದಿದ್ದಾರೆ.

ಮುಕ್ತವಾಗಿ ಚಿಂತನೆ ನಡೆಸುತ್ತಾರೆ. ಸೈದ್ಧಾಂತಿಕವಾಗಿ ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗಬೇಕು
ಎಂಬುದು ಅವರ ಯೋಚನೆ. ಮೇಲಾಗಿ ತುಂಬಾ ಸರಳವಾದ ವ್ಯಕ್ತಿ. ಅಷ್ಟೇ ನೇರವಂತಿಕೆಯೂ ಅವರಲ್ಲಿದೆ. ಆದ್ದರಿಂದಲೇ ಅವರ ಮಾತು ಮತ್ತು ಚಿಂತನೆಗಳು ಬೇರೆಯವರಿಗಿಂತ ಭಿನ್ನವಾಗಿರುತ್ತವೆ. ಭಾಗವತ್‌ಜೀ ದೇಶದ ಅಭಿವೃದ್ಧಿಯಲ್ಲಿ ನಂಬಿಕೆಯಿರಿಸಿದವರು. ಅವರು ಎಲ್ಲರನ್ನೂ ಗೌರವಿಸುತ್ತಾರೆ. ಎಲ್ಲಾ ಧರ್ಮದ ಮುಖಂಡರ
ಜತೆಗೂ ಒಡನಾಟ ಹೊಂದಿದ್ದಾರೆ”. ನಾನಿಲ್ಲಿ ಆರ್‌ಎಸ್‌ಎಸ್‌ನ ಮೂಲಭೂತ ಸಿದ್ಧಾಂತವನ್ನು ಚರ್ಚಿಸಲು ಹೋಗುತ್ತಿಲ್ಲ. ಆದರೆ ಭಾಗವತ್‌ಜೀ ಅವರಿಗೆ ಆರ್‌ಎಸ್‌ಎಸ್ ಈ ಕಾಲಕ್ಕೆ ತಕ್ಕಂತೆ ಪ್ರಾಯೋಗಿಕವಾಗಿ ಬದಲಾಗದೆ ಹೋದರೆ ಅದು ದೇಶದ ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡುತ್ತದೆ ಎಂಬುದು ತಿಳಿದಿದೆ.

ಭಾರತ ಇನ್ನೂ ಸಾಕಷ್ಟು ಅಭಿವೃದ್ಧಿ ಹೊಂದುವುದು ಬಾಕಿಯಿದೆ. ಬೆಳವಣಿಗೆಗೆ ಇಲ್ಲಿನ್ನೂ ಅಗಾಧವಾದ ಅವಕಾಶ ಗಳಿವೆ. ಉದ್ದಿಮೆಗಳು ಹಾಗೂ ಉದ್ಯಮಶೀಲತೆ ಬೆಳೆಯಬೇಕಿದೆ. ಯುವಕರ ಆಶೋತ್ತರಗಳನ್ನು ಈಡೇರಿಸ ಬೇಕಿದೆ. ರೈತರು ಹಾಗೂ ಕಾರ್ಮಿಕ ವರ್ಗದವರನ್ನು ಮೇಲೆತ್ತಬೇಕಿದೆ. ಈ ಕಾರಣಗಳಿಗಾಗಿಯೇ ಭಾಗವತ್‌ಜೀ ತುಂಬಾ ಪ್ರಾಯೋಗಿಕವಾಗಿ ಮಾತನಾಡುತ್ತಿದ್ದಾರೆ.

ನಾನಂತೂ ಅವರ ನಿಲುವನ್ನು ನೂರಕ್ಕೆ ನೂರು ಒಪ್ಪುತ್ತೇನೆ. ಯಾವುದಾದರೂ ಒಂದು ಹಂತದಲ್ಲಿ ನಾವು ಇಂಥ ಜಗಳಗಳನ್ನು ನಿಲ್ಲಿಸಲೇಬೇಕು. ಇಲ್ಲ ದಿದ್ದರೆ ನಮ್ಮ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ. ಅದು ದೇಶಕ್ಕೂ ಒಳ್ಳೆಯದಲ್ಲ, ನಮಗೂ ಒಳ್ಳೆಯದಲ್ಲ. ಇಂಥ ಒಡಕು ಅಥವಾ ವೈಮನಸ್ಯದಿಂದ ಯಾರಿಗೂ ಯಾವುದೇ ಲಾಭವಿಲ್ಲ.
ಧರ್ಮಗಳ ನಡುವೆ ಸಂಘರ್ಷವಿದ್ದರೆ ದೇಶದ ಹಿತಕ್ಕೆ ಅದರಿಂದೇನಾದರೂ ಅನುಕೂಲವಿದೆಯೇ? ನನಗೆ ತಿಳಿದಂತೆ ಸದ್ಯ ದೇಶಾದ್ಯಂತ 10 ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದಂತೆ 18 ಕೇಸುಗಳು ಕೋಟ್ ನಲ್ಲಿವೆ. ಹೀಗೆ ಧಾರ್ಮಿಕ ಸ್ಥಳಗಳ ವಿಷಯದಲ್ಲಿ ತಕರಾರು ಬರಬಾರದು ಎಂಬ ಕಾರಣದಿಂದಲೇ 1991ರ ಪೂಜಾ ಸ್ಥಳಗಳ ಕಾಯ್ದೆಯಲ್ಲಿ ‘ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದಂತೆ 1947ರಲ್ಲಿದ್ದ ಯಥಾಸ್ಥಿತಿಯನ್ನೇ ಯಾವತ್ತೂ ಕಾಯ್ದುಕೊಳ್ಳಬೇಕು’
ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈಗ ಸಮಸ್ಯೆ ಏನಾಗಿದೆ ಅಂದರೆ, ಈ ಕಾಯ್ದೆಯನ್ನೇ ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಅಲ್ಲಿನ್ನೂ ವಿಚಾರಣೆ ನಡೆಯುತ್ತಿದೆ. ಈ ನಡುವೆ ಸುಪ್ರೀಂಕೋರ್ಟ್ ದೇಶಾದ್ಯಂತ ಇರುವ ಎಲ್ಲಾ ನ್ಯಾಯಾಲಯಗಳಿಗೆ, ‘ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ
ಮುಗಿಯುವವರೆಗೆ ಯಾವುದೇ ನ್ಯಾಯಾಲಯಗಳು ಧಾರ್ಮಿಕ ಸ್ಥಳಗಳ ಹಕ್ಕಿಗೆ ಸಂಬಂಧಿಸಿದಂತೆ ಆದೇಶಗಳನ್ನು ಅಥವಾ ನಿರ್ದೇಶನಗಳನ್ನು ನೀಡುವಂತಿಲ್ಲ’ ಎಂದು ಸ್ಪಷ್ಟವಾಗಿ ಸೂಚಿಸಿದೆ.

ಹೀಗೆ ಒಂದಾದ ಮೇಲೊಂದು ವಿವಾದವನ್ನು ಕೆದಕುತ್ತಾ ಹೋದರೆ ಸಮಸ್ಯೆ ಏನಾಗುತ್ತದೆ ಅಂದರೆ ದೇಶಾದ್ಯಂತ ಅಸಂಖ್ಯಾತ ವ್ಯಾಜ್ಯಗಳು ಹುಟ್ಟಿಕೊಳ್ಳುತ್ತವೆ. ಧಾರ್ಮಿಕ ಸಂಘರ್ಷದ ವಿಷಯದಲ್ಲಿ ಇತಿಹಾಸದಲ್ಲಿ ನಡೆದ ರಕ್ತಪಾತ ಅಥವಾ ಕ್ರೌರ್ಯವನ್ನು ನಾವು ನೋಡಿದ್ದೇವೆ. ಅದಕ್ಕೂ ಹಿಂದೆ ಅಸಂಖ್ಯಾತ ವಿದೇಶಿ ದಾಳಿಕೋರರು ಭಾರತದ ಮೇಲೆ ಹಾಗೂ ಇಲ್ಲಿನ ಶ್ರೀಮಂತ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಲೂಟಿಗೈದಿದ್ದಾರೆ. ಸೌಮ್ಯ ಸ್ವಭಾವದ ಭಾರತೀಯರನ್ನು ಸಾಕಷ್ಟು ಶೋಷಣೆ ಕೂಡ ಮಾಡಿದ್ದಾರೆ. ದಾಳಿಕೋರರು ಕೇವಲ ಸಂಪತ್ತನ್ನು ಮಾತ್ರ ಹೊತ್ತೊಯ್ಯಲಿಲ್ಲ. ಅದರ ಜತೆಗೆ ಅವರು ನಮ್ಮ ಸ್ಥಳೀಯ ಸಂಸ್ಕೃತಿಯ ಮೇಲೆ ಪ್ರಹಾರ ನಡೆಸಿದರು, ಆ ಸಂಸ್ಕೃತಿಯ ಪ್ರತೀಕವಾದ ಚಿಹ್ನೆಗಳನ್ನು ನಾಶಗೊಳಿಸಿದರು ಹಾಗೂ ದೇಶವಾಸಿಗಳ ಮನಸ್ಸಿನಲ್ಲಿ ಭೀತಿಯನ್ನು ಹುಟ್ಟುಹಾಕಿದರು. ಇಂಥ ಕೃತ್ಯಗಳು ಬೇರೆ ಬೇರೆ ದೇಶಗಳಲ್ಲೂ ನಡೆದಿವೆ.

ಹಾಗೆಯೇ ಭಾರತದಲ್ಲೂ ಸಾಕಷ್ಟು ನಡೆದಿವೆ. ಹಾಗಂತ ಈಗ ನಾವು ಆ ಇತಿಹಾಸವನ್ನೆಲ್ಲ ಬದಲಿಸಿ ಬೇರೆಯದನ್ನು ಬರೆಯಲು ಕುಳಿತುಕೊಳ್ಳುವುದಕ್ಕೆ ಆಗುತ್ತದೆಯೇ? ಅಥವಾ ಅದರ ಬದಲಿಗೆ ದೇಶದ ಅಭಿವೃದ್ಧಿಯನ್ನು ಗುರಿಯಾಗಿ ಇರಿಸಿಕೊಂಡು ಹೊಸ ಅಧ್ಯಾಯವನ್ನು ಬರೆಯುವುದು ಸೂಕ್ತವೇ? ಆರ್‌ಎಸ್‌ಎಸ್‌ನ ಮುಖ್ಯಸ್ಥರು ಆಡಿರುವ ಮಾತುಗಳನ್ನು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ನಾಯಕರು ಕೂಡ ಒಪ್ಪಿಕೊಂಡಿದ್ದಾರೆ ಎಂಬುದು
ಗಮನಾರ್ಹ ಸಂಗತಿ. ಆದರೆ, ಕೆಲವು ಧರ್ಮಾಚಾರ್ಯರು ಅಥವಾ ಧಾರ್ಮಿಕ ಮುಖಂಡರು ಮಾತ್ರ ಮೋಹನ್‌ಜೀ ಭಾಗವತ್‌ರಿಗೆ “ಹಿಂದೂ ಧರ್ಮದ ಬಗ್ಗೆ ನೀವು ಮಾತನಾಡಬೇಡಿ” ಎಂದು ಹೇಳುತ್ತಿದ್ದಾರೆ.

ಸ್ವಲ್ಪ ಸಮಯ ಕಳೆದರೆ ಈ ಧರ್ಮಾಚಾರ್ಯರಿಗೂ, ಕಟ್ಟರ್ ಹಿಂದೂ ಮುಖಂಡರಿಗೂ ಈ ಕಾಲದ ಅಗತ್ಯವೇನು ಮತ್ತು ತಾವೇನು ತಪ್ಪು ಮಾಡುತ್ತಿದ್ದೇವೆ ಎಂಬುದು ಅರ್ಥವಾದೀತು ಎಂದು ಆಶಿಸೋಣ. ಇತ್ತೀಚೆಗೆ ನಾನು ಇಂಡೋನೇಷ್ಯಾದ ರಾಜಧಾನಿ ಬಾಲಿಗೆ ಹೋಗಿದ್ದೆ. ಜಗತ್ತಿನಲ್ಲೇ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶ ಇಂಡೋನೇಷ್ಯಾ. ಆದರೆ ಅಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಎಷ್ಟೊಂದು ಸಾಮರಸ್ಯದಿಂದ ಬದುಕುತ್ತಿದ್ದಾರೆ
ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂಡೋನೇಷ್ಯಾದ ಹಿಂದೂಗಳು ತಮ್ಮನ್ನು ತಾವು ಹೆಮ್ಮೆಯಿಂದ ಹಿಂದೂಗಳು ಎಂದು ಗುರುತಿಸಿಕೊಳ್ಳುತ್ತಾರೆ. ಅಷ್ಟೊಂದು ಮುಕ್ತ ವಾತಾವರಣ ಅಲ್ಲಿದೆ. ದೇಶವೊಂದು ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಅಂತಾದರೆ ಅಂಥ ಧಾರ್ಮಿಕ ಸಾಮರಸ್ಯದ ಅಗತ್ಯವಿದೆ.

ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಎಲ್ಲರಿಗೂ ಶುಭಾಶಯ ಕೋರುತ್ತಾ, ಭಾರತೀಯರು ಇತಿಹಾಸವನ್ನು ಪುನಃ ಪುನಃ ಬಗೆಯಲು ಹೋಗದೆ ಉತ್ತಮ ಭವಿಷ್ಯವನ್ನು ಸೃಷ್ಟಿಸಿಕೊಳ್ಳುವತ್ತ ತಮ್ಮ ಗಮನ ಹರಿಸುತ್ತಾರೆಂದು ಆಶಿಸುತ್ತೇನೆ. ಈ
ಹಂತದಲ್ಲಿ ನಮ್ಮ ಮುಂದಿರುವ ಅತ್ಯಂತ ಪ್ರಮುಖ ಮತ್ತು ಅತಿದೊಡ್ಡ ಸವಾಲೆಂದರೆ ನಮ್ಮ ಮೌಲ್ಯಗಳು, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿಕೊಳ್ಳುವುದು. ನಾನು ಸಿಂಗಾಪುರದಲ್ಲಿದ್ದಾಗ ಉತ್ತರ ಪ್ರದೇಶ ಮೂಲದ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದೆ. ಅವನಿಗೆ ಹಿಂದಿಯೇ ಗೊತ್ತಿರಲಿಲ್ಲ. ಅಲ್ಲೇ ಇನ್ನೊಬ್ಬ ಗುಜರಾತಿಯನ್ನು ಭೇಟಿ ಯಾಗಿದ್ದೆ. ಅವನಿಗೆ ಗುಜರಾತಿ ಭಾಷೆ ಗೊತ್ತಿರಲಿಲ್ಲ! ಮಾತೃ ಭಾಷೆಯೇ ಗೊತ್ತಿಲ್ಲ ಅಂತಾದರೆ ತನ್ನ ನೆಲದ
ಸಂಸ್ಕೃತಿ ಹೇಗೆ ತಾನೇ ಅವನಿಗೆ ತಿಳಿದಿರುತ್ತದೆ? ಹೀಗಾಗಿ ಅದನ್ನು ಕೇಳುವುದೇ ಬೇಡ. ಭಾರತದಲ್ಲಿ ಕೂಡ ನಮ್ಮ ಭಾಷೆಗಳು, ಮೌಲ್ಯಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳು ಗಂಭೀರವಾದ ಅಪಾಯಕ್ಕೆ ಸಿಲುಕಿವೆ. ಅದರಲ್ಲೂ ಮಾತೃಭಾಷೆಯ ಅವಸಾನ ನನ್ನನ್ನು ಕಂಗಾಲು ಮಾಡುತ್ತಿದೆ.

ಮುಂದೊಂದು ದಿನ ನಮ್ಮ ಮಕ್ಕಳು ಸ್ವಂತ ಭಾಷೆಯನ್ನೇ ಮರೆತು ಇಂಗ್ಲಿಷ್‌ನಲ್ಲಿ ದಿನನಿತ್ಯದ ವ್ಯವಹಾರ ನಡೆಸುವಂತಾಗಬಹುದು ಎಂದು ಯೋಚಿಸಿದರೆ ಮನಸ್ಸು ಮೂಕವಾಗುತ್ತದೆ. ಆಧುನಿಕ ಉಡುಗೆ ತೊಡುಗೆಗಳನ್ನು ಧರಿಸುವುದು ಖಂಡಿತ ತಪ್ಪಲ್ಲ. ಆದರೆ, ನಮ್ಮ ಮನಸ್ಸಿನಲ್ಲಾದರೂ ಭಾರತೀಯ ಮೌಲ್ಯಗಳು ಬೆಚ್ಚಗೆ ಉಳಿದಿರ ಬೇಕು. ಇಂಗ್ಲಿಷ್ ಎಲ್ಲಾ ಕಡೆ ವ್ಯಾಪಿಸಿಕೊಳ್ಳುತ್ತಿದೆ ಎಂದೇನೂ ನನಗೆ ಬೇಸರವಿಲ್ಲ, ಅದಕ್ಕೆ ವ್ಯತಿರಿಕ್ತವಾಗಿ,
ನಮ್ಮದೇ ಮಾತೃಭಾಷೆಗೆ ಸಿಗಬೇಕಿದ್ದ ಪ್ರೀತಿ ಹಾಗೂ ಗೌರವ ಕಡಿಮೆಯಾಗುತ್ತಿದೆಯಲ್ಲಾ ಎಂದು ಚಿಂತೆಯಾಗುತ್ತಿದೆ. ಎದುರಿಗೆ ಬಂದವರನ್ನು ಮಾತನಾಡಿಸುವಾಗ ಶೇಕ್‌ಹ್ಯಾಂಡ್ ಮಾಡಬೇಡಿ ಎಂದು ನಾನು ಹೇಳುವುದಿಲ್ಲ.

ಆದರೆ, ನಮ್ಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ‘ನಮಸ್ತೇ’ ಎಂದು ಕೈಮುಗಿಯುವ ಪದ್ಧತಿ ಮರೆತೇಹೋಗ
ಬಹುದು ಎಂದು ಕಳವಳಪಡುತ್ತೇನೆ. ಮೋಹನ್ ಜೀ ಭಾಗವತ್ ಅವರ ಬಳಿ ಬಹಳ ದೊಡ್ಡ ಸಂಸ್ಥೆ ಹಾಗೂ ಕಾರ್ಯಕರ್ತರ ಪಡೆಯಿದೆ. ಅವರು ಇಂಥ ವಿಷಯಗಳ ಬಗ್ಗೆ ಯೋಚಿಸಲಿ. ಈಗ ಬಂದಿರುವ ಹೊಸ ವರ್ಷ ವಾದರೂ ಭಾರತೀಯರಿಗೆ ತಮ್ಮ ಮೌಲ್ಯಗಳು, ವೈವಿಧ್ಯಮಯವಾದ ಸುಂದರ ಭಾಷೆಗಳು, ಇಲ್ಲಿನ ವರ್ಣಮಯ ಸಂಸ್ಕೃತಿ ಹಾಗೂ ಶ್ರೀಮಂತ ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರ ಮಹತ್ವವನ್ನು ಅರ್ಥಮಾಡಿಸುವ ವರ್ಷವಾಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಜೈ ಹಿಂದ್!

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr Vijay Darda Column: ವಿದೇಶಿ ಸಂಬಂಧದ ಹೊಸ ಸಮೀಕರಣಗಳು

Leave a Reply

Your email address will not be published. Required fields are marked *