ವಿಶ್ಲೇಷಣೆ
ಸಂದೀಪ್ ಶಾಸ್ತ್ರಿ
ಸಾರ್ವತ್ರಿಕ ಚುನಾವಣೆಯ ವೇಳೆ ತಾನು ನೀಡಿದ್ದ ಭರವಸೆಯನ್ನು ಈಡೇರಿಸಲು ಹಾಗೂ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಒಂದು ಸಾಮಾನ್ಯ ಚುನಾವಣಾ ವೇಳಾಪಟ್ಟಿಯನ್ನು ಜಾರಿಗೆ ತರಲು ಕೇಂದ್ರ ಸರಕಾರವು ಇತ್ತೀಚೆಗೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿರುವುದು ನಿಮಗೆ ಗೊತ್ತು. ಇದರ ಅಂಗವಾಗಿ ಸರಕಾರವು, ‘129ನೇ ಸಾಂವಿಧಾನಿಕ ತಿದ್ದುಪಡಿ ವಿಧೇಯಕ 2024’ವನ್ನು ಸಂಸತ್ತಿನಲ್ಲಿ ಪರಿಚಯಿಸಿತು
ಮತ್ತು ‘ಕೇಂದ್ರಾಡಳಿತ ಪ್ರದೇಶಗಳ ಸರಕಾರದ ಕಾಯ್ದೆ 1963’ಕ್ಕೆ ತಿದ್ದುಪಡಿ ತರಲು ಮುಂದಾಯಿತು.
ನಂತರ ಈ ಪ್ರಸ್ತಾವನೆಗಳ ಪರಿಶೀಲನೆ ಮತ್ತು ವರದಿಗೆಂದು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು.
ಆದರೆ, ಬಿಜೆಪಿಯ ಪಾಲಿಗೆ 2014 ಮತ್ತು 2019ರಲ್ಲಿ ಇದ್ದ ಸ್ಥಿತಿಯೇ ಬೇರೆ, ಈಗಿರುವ ಪರಿಸ್ಥಿತಿಯೇ ಬೇರೆ. ಬಿಜೆಪಿಗೆ ಈ ಬಾರಿ ಲೋಕಸಭೆಯಲ್ಲಿ ತನ್ನದೇ ಆದ ಬಹುಮತವಿಲ್ಲದ ಕಾರಣ, ಹಿಂದಿನ ರೀತಿಯಲ್ಲಿ ತನ್ನ ಮೊದಲ 100 ದಿನಗಳ ಕಾರ್ಯಾವಧಿಯಲ್ಲಿ ‘ಓಹೋ’ ಎನ್ನುವಂಥ ಯಾವುದೇ ಮಹತ್ತರ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಆದರೀಗ, ‘ಒಂದು ರಾಷ್ಟ್ರ, ಒಂದು ಚುನಾವಣೆ’ (ಒಎನ್‌ಒಇ) ಪರಿಕಲ್ಪನೆಗೆ ಸಂಬಂಧಿಸಿದ ಬಿಜೆಪಿಯ ನಡೆಯನ್ನು ಅಂಥದೊಂದು ಮಹತ್ತರ ಹೆಜ್ಜೆ ಎಂದು ಪರಿಗಣಿಸಬಹುದು. ಈ ಪ್ರಸ್ತಾವನೆಯು ತನಗೆ ಅಗತ್ಯವಿರುವ ಬೆಂಬಲ ವನ್ನು ಕ್ರೋಡೀಕರಿಸುತ್ತದೆಯೇ ಮತ್ತು ನಂತರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಸೂಕ್ಷ್ಮ ಪರಿಶೀಲನೆಯ ಅಗ್ನಿಪರೀಕ್ಷೆ ಯಲ್ಲಿ ತೇರ್ಗಡೆಯಾಗುತ್ತದೆಯೇ? ಎಂಬುದು ಬೇರೆಯೇ ಪ್ರಶ್ನೆ. ‘ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳು ಏಕಕಾಲದಲ್ಲಿ ನಡೆಯುವಂತಾಗಬೇಕು, 100 ದಿನಗಳ ನಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಬೇಕು’ ಎಂಬುದು ಸಂವಿಧಾನ ತಿದ್ದುಪಡಿ ವಿಧೇಯಕದಲ್ಲಿ ಅಡಕಗೊಂಡಿರುವ ಪ್ರಸ್ತಾವನೆ. ಸಂಸತ್ತಿನಲ್ಲಿ ಪ್ರಸ್ತುತ ಅನುಮೋದನೆಗೆ ಬಾಕಿಯಿರುವ ಈ ಪ್ರಸ್ತಾವನೆಗೆ ಸಂಬಂಽಸಿ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದು ಇಲ್ಲಿ ಉಪಯುಕ್ತವಾಗಬಹುದು.
1952, 1957 ಮತ್ತು 1962ರ ವರ್ಷಗಳಲ್ಲಿ ಭಾರತದಲ್ಲಿ ನಡೆದ ಮೊದಲ ಮೂರು ಸಾರ್ವತ್ರಿಕ ಚುನಾವಣೆಗಳು
ಬಹುತೇಕವಾಗಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಿಕವಾಗಿ ನಡೆದ ಮತದಾನಗಳಿಗೆ ಸಾಕ್ಷಿ ಯಾಗಿದ್ದವು. ತರುವಾಯದಲ್ಲಿ, ಕೆಲವೊಂದು ವಿಧಾನಸಭೆಗಳ ಅವಽಪೂರ್ವ ವಿಸರ್ಜನೆಯ ಹಿನ್ನೆಲೆ
ಯಲ್ಲಿ ಈ ‘ಚುನಾವಣಾ ಚಕ್ರ’ದಲ್ಲಿ ವ್ಯತ್ಯಯವಾಯಿತು.
ಪರಿಣಾಮವಾಗಿ, ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳು ತಮ್ಮದೇ ಆದ ವಿಭಿನ್ನ ಚುನಾವಣಾ
ವೇಳಾಪಟ್ಟಿಗಳ ಅನುಸಾರ ಅಸ್ತಿತ್ವಕ್ಕೆ ಬರುವಂಥ ವಾತಾವರಣ ಸೃಷ್ಟಿಯಾಯಿತು. ಇದರಿಂದಾಗಿ, ದೇಶದಲ್ಲಿ ಪ್ರತಿವ
ರ್ಷವೂ ಒಂದಲ್ಲಾ ಒಂದು ಚುನಾವಣೆ ನಡೆಯುತ್ತಲೇ ಇರುವಂತಾಯಿತು; ಕೆಲವೊಮ್ಮೆಯಂತೂ ವರ್ಷದಲ್ಲಿ
ಹಲವು ಬಾರಿ ಚುನಾವಣೆ ನಡೆದಿದ್ದೂ ಇದೆ! ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಂದು ಸಾಮಾನ್ಯ
ಚುನಾವಣಾ ವೇಳಾಪಟ್ಟಿ ಸಜ್ಜುಗೊಳ್ಳುವಂತಾಗಬೇಕು ಎಂಬ ಆಗ್ರಹ ಗಟ್ಟಿಯಾಗುವುದಕ್ಕೆ ಈ ಪ್ರವೃತ್ತಿಯೇ
ಕಾರಣವಾಯಿತು.
ಹಾಗೆ ನೋಡಿದರೆ, ದೇಶದಲ್ಲಿ ಏಕಕಾಲಿಕ ಚುನಾವಣೆಯನ್ನು ನಡೆಸಬೇಕೆಂಬ ಇಂಥ ಆಗ್ರಹ ಕಳೆದ ನಾಲ್ಕು ದಶಕಗಳಿಂದ, ನಾನಾ ವಲಯಗಳಿಂದ ಕೇಳಿಬರುತ್ತಿದೆ. 1963ರಲ್ಲಿ ಬಂದ ಚುನಾವಣಾ ಆಯೋಗದ ವರದಿ, 1999ರಲ್ಲಿ ಬಂದ ಕಾನೂನು ಆಯೋಗದ 170ನೇ ವರದಿ, ಸಂವಿಧಾನದ ಕಾರ್ಯನಿರ್ವಹಣೆಯ ಪರಿಶೀಲನೆ ಗೆಂದು ರಚಿಸಲಾಗಿದ್ದ ರಾಷ್ಟ್ರೀಯ ಆಯೋಗದ 2002ರ ವರದಿ, 2015ರಲ್ಲಿ ಬಂದ ಕಾನೂನು ಆಯೋಗದ 255ನೇ ವರದಿ, ಕಾನೂನು ಮತ್ತು ನ್ಯಾಯದಾನ ವ್ಯವಸ್ಥೆಯ ಕುರಿತಾಗಿ 2015ರಲ್ಲಿ ಬಂದ ಸಂಸದೀಯ ಸ್ಥಾಯಿ ಸಮಿತಿಯ 79ನೇ ವರದಿ, 2017ರಲ್ಲಿ ನೀತಿ ಆಯೋಗದಿಂದ ಬಂದ ಆರಂಭಿಕ ಕಾರ್ಯೋಪಯೋಗಿ ವರದಿ, ಹಾಗೂ 2018ರಲ್ಲಿ ಬಂದ ಕಾನೂನು ಆಯೋಗದ ಕರಡು ವರದಿ ಇವು ಇಂಥ ಆಗ್ರಹಗಳಲ್ಲಿ ಸೇರಿದ್ದವು. ಆದರೆ, ಕೇಂದ್ರ ಸರಕಾರವು 2023ರ ಸೆಪ್ಟೆಂಬರ್ 2ರಂದು ಈ ಉದ್ದೇಶಕ್ಕಾಗಿ ಉನ್ನತ ಮಟ್ಟದ ಸಮಿತಿ ಯೊಂದನ್ನು ನೇಮಿಸಿದಾಗ, ‘ಒಎನ್‌ಒಇ’ ಕ್ರಮಕ್ಕೆ ಅತೀವ ವೇಗ ದಕ್ಕಿತು ಎನ್ನಬೇಕು.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಈ ಸಮಿತಿಯು ಸಲ್ಲಿಸಿದ ವರದಿಯಲ್ಲಿ, “ಏಕಕಾಲಿಕ ಚುನಾವಣೆಗಳು ವಿರಳ ಸಂಪನ್ಮೂಲಗಳ ಗರಿಷ್ಠ ಪ್ರಯೋಜನ ಪಡೆಯುವುದಕ್ಕೆ ಕಾರಣವಾಗುತ್ತವೆ ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೂ ಉತ್ತೇಜಿಸುತ್ತವೆ” ಎಂದು ಶಿ-ರಸು ಮಾಡಲಾಗಿತ್ತು. ಮಾತ್ರವಲ್ಲದೆ, “ಪದೇಪದೆ ನಡೆಯುವ ಚುನಾವಣೆಗಳ ಕಾರಣದಿಂದಾಗಿ ಅನ್ವಯಿಸಬೇಕಾಗಿ ಬರುವ ಮಾದರಿ ನೀತಿಸಂಹಿತೆಯಿಂದಾಗಿ ಆಡಳಿತ ವ್ಯವಸ್ಥೆ ಮತ್ತು ನೀತಿ ನಿರೂಪಣೆಗೆ ಒದಗುವ ಅಡೆತಡೆಗಳು ಹಾಗೂ
ಅದರಿಂದಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳನ್ನು ಈ ಉಪಕ್ರಮವು ತಗ್ಗಿಸುತ್ತದೆ”
ಎಂದು ಕೂಡ ವರದಿ ಉಲ್ಲೇಖಿಸಿತ್ತು. ಸಚಿವ ಸಂಪುಟವು ಈ ಸಮಿತಿಯ ಶಿ-ರಸುಗಳನ್ನು ಅಂಗೀಕರಿಸಿ, ಸಂವಿಧಾನ
ತಿದ್ದುಪಡಿ ವಿಧೇಯಕವನ್ನು ಪರಿಚಯಿಸುವುದಕ್ಕೆ ಅನುವುಮಾಡಿಕೊಟ್ಟಿತು.
ಸದರಿ ಪ್ರಸ್ತಾವಿತ ತಿದ್ದುಪಡಿಗೆ ಸಿಕ್ಕಿರುವ ಪ್ರತಿಕ್ರಿಯೆಯು ಪಕ್ಷದ ನಿರೀಕ್ಷೆಗೆ ತಕ್ಕಂತೆಯೇ ಇರುವುದು ಸುಸ್ಪಷ್ಟ. ಎನ್
ಡಿಎ ಒಕ್ಕೂಟದ ಸದಸ್ಯ ಪಕ್ಷಗಳು ಸದರಿ ಪ್ರಸ್ತಾವನೆಯನ್ನು ಬೆಂಬಲಿಸಿದ್ದರೆ, ಇತರ ಬಹುತೇಕ ಪಕ್ಷಗಳು ವಾಡಿಕೆ ಯಂತೆ ಈ ವಿಧೇಯಕದ ವಿರುದ್ಧ ದನಿಯೆತ್ತಿವೆ. ಈ ತಿದ್ದುಪಡಿ ವಿಧೇಯಕವನ್ನು ಪರಿಚಯಿಸುವಾಗ, ಕಾನೂನು ಸಚಿವರು ಒಂದಷ್ಟು ಪ್ರಮುಖ ವಾದಗಳನ್ನು ಮಂಡಿಸಿದರು. ಮೊದಲನೆಯದಾಗಿ, ದೇಶದ ಉದ್ದಗಲಕ್ಕೂ ಐದು ವರ್ಷಕ್ಕೊಮ್ಮೆ ಚುನಾವಣೆಗಳು ನಡೆಯುವುದನ್ನು ಇದು ಖಾತ್ರಿಪಡಿಸುತ್ತದೆ ಮತ್ತು ವರ್ಷದುದ್ದಕ್ಕೂ ದೇಶದ ಯಾವುದಾದರೊಂದು ಕಡೆ ಒಂದಲ್ಲಾ ಒಂದು ಚುನಾವಣೆ ನಡೆಯುತ್ತಲೇ ಇರುವುದಕ್ಕೆ ಇದು ತಡೆ ಹಾಕುತ್ತದೆ. ಎರಡನೆಯದಾಗಿ, ಆಡಳಿತದ ಮೇಲೆ ಮಹತ್ತರ ಗಮನವನ್ನು ನೀಡುವುದಕ್ಕೆ ಇದು ಅನುವು ಮಾಡಿಕೊಡುತ್ತದೆ.
ಮೂರನೆಯದಾಗಿ, ಚುನಾವಣೆಗಳ ಕಾಲಸೂಚಿಯನ್ನು ಹೀಗೆ ಸುವ್ಯವಸ್ಥಿತಗೊಳಿಸುವುದರಿಂದಾಗಿ, ಬೇರೆ ಬೇರೆ
ಕಾಲಾವಧಿಗಳಲ್ಲಿ ಚುನಾವಣೆಯನ್ನು ಸಜ್ಜುಗೊಳಿಸುವುದಕ್ಕೆಂದು ಆಗುವ ಭಾರಿ ವೆಚ್ಚವು ತಗ್ಗುತ್ತದೆ. ವ್ಯವಸ್ಥೆ
ಯನ್ನು ಶುದ್ಧೀಕರಿಸುವಲ್ಲಿ, ನಿರ್ವಹಣಾ ದಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ, ಆಡಳಿತಾತ್ಮಕ ಮತ್ತು ವಿತ್ತೀಯ
ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಈ ವಾದ ಅಥವಾ ಸಮರ್ಥನೆಗಳು ಸೂಕ್ತವಾಗಿವೆ ಎಂಬುದು
ಬಹುತೇಕರ ಅಭಿಮತ. ಆದ್ದರಿಂದ, ಈ ನಡೆಯು ಯೋಗ್ಯವಾಗಿದೆ ಎಂಬುದನ್ನು ನಿರ್ಧರಿಸುವ ಹೊಣೆ ಹೊತ್ತವರ ದೃಷ್ಟಿಕೋನವು ಇಲ್ಲಿ ನಿರ್ಣಾಯಕವಾಗಿ ಪರಿಣಮಿಸುತ್ತದೆ. ಹೀಗಾಗಿ, ಅವರು ಆಡಳಿತಾತ್ಮಕ ಮತ್ತು ವಿತ್ತೀಯ ವೆಚ್ಚಗಳನ್ನು ಮಾತ್ರವೇ ಸೂಕ್ಷ್ಮ ಪರಿಶೀಲನೆಗೆ ಒಡ್ಡುತ್ತಾರೆಯೇ ಅಥವಾ ‘ರಾಜಕೀಯ’ ವೆಚ್ಚಗಳು ಕೂಡ ಅವರಿಗೆ ಮುಖ್ಯವಾಗಿ ಕಾಣುತ್ತವೆಯೇ? ಎಂಬುದನ್ನು ಕಾದುನೋಡಬೇಕಿದೆ.
“ಏಕಕಾಲಿಕ ಚುನಾವಣಾ ಪದ್ಧತಿಯ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗುವುದರಿಂದ ಒಂದಷ್ಟು ಸವಾಲುಗಳು ಎದುರಾಗುತ್ತವೆ; ದೇಶದ ಉದ್ದಗಲಕ್ಕೂ ಒಂದೇ ಸಮಯಕ್ಕೆ ಲೋಕಸಭಾ ಮತ್ತು ರಾಜ್ಯ
ವಿಧಾನಸಭಾ ಚುನಾವಣೆಗಳನ್ನು ಸಮರ್ಥವಾಗಿ ನಡೆಸುವುದಕ್ಕಾಗಿನ ವೆಚ್ಚಗಳು ತೀವ್ರವಾಗಿ ಹೆಚ್ಚಾಗುವುದಕ್ಕೆ ಈ ಉಪಕ್ರಮ ಕಾರಣವಾಗಬಹುದು” ಎಂಬ ವಾದವೂ ಇದೆ. ಒಂದು ‘ಸರ್ವೇಸಾಮಾನ್ಯ ಚುನಾವಣಾ ಆವರ್ತನದ ಅಗತ್ಯ’ವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯ ಮೂಲಭೂತ ಸಿದ್ಧಾಂತ ಅಥವಾ ಆಧಾರ ಪ್ರಮೇಯವಾಗಿದ್ದು, ವಿವಿಧ ಸ್ತರಗಳ ಸರಕಾರದ ಆಯ್ಕೆಗೆ ತಳಹದಿಯಾಗಿರುವ ತರ್ಕವು ಒಂದೇ ಆಗಿರುತ್ತದೆ ಎಂಬುದನ್ನು ಅದು ಸೂಚ್ಯವಾಗಿ ಹೇಳುತ್ತದೆ.
ಆದರೆ, ಕಳೆದ ದಶಕದಲ್ಲಿ ಹೊಮ್ಮಿರುವ ಪುರಾವೆಗಳು ಬೇರೆಯದೇ ಕಥೆಯನ್ನು ಹೇಳುತ್ತವೆ. ಅಂದರೆ, ಮತದಾರ
ಮಹಾಪ್ರಭುಗಳು ರಾಷ್ಟ್ರೀಯ ಮತ್ತು ರಾಜ್ಯಮಟ್ಟಗಳಲ್ಲಿ ಮತಯಂತ್ರದಲ್ಲಿ ತಮ್ಮ ಆಯ್ಕೆಯ ಗುಂಡಿಯನ್ನು
ಒತ್ತುವಾಗ, ವಿಭಿನ್ನತೆಯ ಮೊರೆಹೋಗುತ್ತಾರೆ ಅಥವಾ ಅವರ ಪರಿಗಣನಾ ಮಾನದಂಡಗಳು ಅಲ್ಲಿ ವಿಭಿನ್ನ ವಾಗಿರುತ್ತವೆ.
ಇದಕ್ಕೊಂದು ಪುಟ್ಟ ಉದಾಹರಣೆ ನೀಡುವುದಾದರೆ, 2014 ಮತ್ತು 2023ರ ವರ್ಷಗಳ ನಡುವೆ ಲೋಕಸಭೆ ಮತ್ತು ವಿಭಿನ್ನ ರಾಜ್ಯ ವಿಧಾನಸಭೆಗಳನ್ನು ಸೇರಿಸಿ ಒಟ್ಟು 58 ಚುನಾವಣೆಗಳು ನಡೆದವು. ಈ ಪೈಕಿಯ 31 ಚುನಾವಣೆ ಗಳಲ್ಲಿ, ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾರರಿಂದ ದಕ್ಕಿದ ತೀರ್ಪು ಏನಿದೆ ಅದು ಲೋಕಸಭಾ
ಚುನಾವಣೆಯಲ್ಲಿ ಅವರಿಂದ ದಕ್ಕಿದ ತೀರ್ಪಿಗಿಂತ ವಿಭಿನ್ನವಾಗಿದ್ದ ನಿದರ್ಶನಗಳಿವೆ. ಅದರಲ್ಲೂ, ಲೋಕಸಭೆ
ಮತ್ತು ವಿಧಾನಸಭಾ ಚುನಾವಣೆಗಳ ನಡುವಿನ ಅಂತರವು 2 ವರ್ಷಕ್ಕಿಂತ ಹೆಚ್ಚು ಇದ್ದ ಸಂದರ್ಭದಲ್ಲಿ, ಇಂಥ
ವ್ಯತ್ಯಾಸಗಳ ಅಥವಾ ವಿಭಿನ್ನ ಫಲಿತಾಂಶಗಳ ಸಾಧ್ಯತೆಗಳು ಹೆಚ್ಚೇ ಇದ್ದುದು ಕಂಡುಬಂದಿದೆ.
ಎರಡನೆಯದಾಗಿ, ಈ ಎರಡೂ ಸ್ತರದ ಚುನಾವಣೆಗಳು ಸುಸ್ಪಷ್ಟವಾಗಿ ವಿಭಿನ್ನವಾಗಿರುವ ಜನಾದೇಶಗಳಿಗೆ
ಸಂಬಂಧಿಸಿದ್ದು ಎಂಬ ಅಂಶವು ಗೊತ್ತಿರುವುದೇ ಆದ್ದರಿಂದ, ಅಂಥದೊಂದು ವ್ಯತ್ಯಾಸವನ್ನು ಮಾಡುವುದು
ಅವಶ್ಯವಾಗಬಹುದು. ಎರಡು ರಾಜಕೀಯ ಅಸ್ತಿತ್ವಗಳ ಸ್ವಾಯತ್ತತೆಯ ಮೇಲಷ್ಟೇ ಅಲ್ಲದೆ, ಒಂದು ರಾಷ್ಟ್ರೀಯ
ಮಟ್ಟದ ಮತ್ತು ಒಂದು ರಾಜ್ಯ ಮಟ್ಟದ ಚುನಾವಣಾ ಚರ್ಚಾವಿಷಯ ಬಂದಾಗ ಮತದಾರರು ತಮ್ಮ ತೀರ್ಪನ್ನು
ಸ್ವತಂತ್ರವಾಗಿ ಚಲಾಯಿಸುವಂತಾಗುವುದರ ಮೇಲೆ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ ಎಂದೂ ಇಲ್ಲಿ ವಾದಿಸಬಹುದು. ಮಾತ್ರವಲ್ಲ, ಇದು ಒಕ್ಕೂಟ ವ್ಯವಸ್ಥೆಯ ಆಡಳಿತದ ಮನೋಭಾವಕ್ಕೆ ಅನುಗುಣವಾಗಿರುತ್ತದೆ
ಎಂದೂ ಹೇಳಲಡ್ಡಿಯಿಲ್ಲ.
ಮೂರನೆಯದಾಗಿ, ಭಾರತವು ‘ಚುನಾವಣೆಯಿಂದ ಮಾತ್ರವೇ’ ವ್ಯವಸ್ಥೆಯನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಜಾಪ್ರ
ಭುತ್ವವಾಗುತ್ತಿರುವುದರಿಂದ, ಮತದಾನದ ಹಕ್ಕಿಗೆ ಹಾಗೂ ಅದರ ಚಲಾವಣೆಗೆ ನಿರ್ಣಾಯಕ ಪ್ರಾಮುಖ್ಯ ದಕ್ಕಿ ಬಿಡುತ್ತದೆ. ಈ ಹಕ್ಕನ್ನು ಐದು ವರ್ಷಗಳಿಗೊಮ್ಮೆ ಚಲಾಯಿಸುವಂತಾದರೆ, ಅದು ‘ಭಾಗವಹಿಸುವಿಕೆ’ಯ
ನಿಟ್ಟಿನಲ್ಲಿ ಭಾರತೀಯ ಮತದಾರರಿಗೆ ಒದಗುವ ಒಂದು ಹೆಚ್ಚು ಸೀಮಿತವಾದ ಸಾಧನವಾಗಿಬಿಡುತ್ತದೆ. ಆದ್ದರಿಂದ,
ಎರಡು ಪರ್ಯಾಯ ಆಯ್ಕೆಗಳನ್ನು ಇಲ್ಲಿ ಪರಿಗಣಿಸಬಹುದು.
‘ಒಂದು ರಾಷ್ಟ್ರ, ಎರಡು ಚುನಾವಣೆಗಳು’ ಎಂಬ ಪರಿಕಲ್ಪನೆಯೂ ಇಲ್ಲಿ ಪರಿಗಣನೀಯ. ಅಂದರೆ, ಒಂದೊಮ್ಮೆ ಲೋಕಸಭಾ ಚುನಾವಣೆಯು ಮೊದಲ ವರ್ಷದಲ್ಲಿ ನಡೆದರೆ, ಎಲ್ಲಾ ರಾಜ್ಯ ವಿಧಾನಸಭೆಗಳ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಐದು ವರ್ಷಗಳ ಆವರ್ತನದ ಮೂರನೇ ವರ್ಷದಲ್ಲಿ ನಡೆಸಬೇಕು. ಸ್ಥಳೀಯ
ಸಂಸ್ಥೆಗಳ ಆಳುಗ ವ್ಯವಸ್ಥೆಗಳು ರಾಜ್ಯ ಸರಕಾರಗಳ ವ್ಯಾಪ್ತಿಯಲ್ಲಿ ಇರುವಂಥವು. ಹೀಗಾಗಿ, ವಿಧಾನಸಭಾ
ಚುನಾವಣೆಯಾದ ೧೦೦ ದಿನಗಳ ನಂತರ ಅವುಗಳ ಚುನಾವಣೆಯನ್ನು ನಡೆಸಬಹುದು. ಇಂಥದೊಂದು
ಚೌಕಟ್ಟನ್ನು ರೂಪಿಸಿದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸಂಬಂಧಿಸಿ ಸ್ಪಷ್ಟ ‘ಜನಾದೇಶ’ವನ್ನು
ನೀಡುವುದಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ. ಎರಡನೆಯ ಪರ್ಯಾಯವೆಂದರೆ, ಪ್ರತಿ ವರ್ಷವೂ ಎರಡು
ವಾರಗಳ ಒಂದು ಕಾಲಸೂಚಿಯನ್ನು ನಿಗದಿಪಡಿಸಬೇಕು ಮತ್ತು ಆ ವರ್ಷಕ್ಕೆಂದು ಯೋಜಿಸಲಾದ ಎಲ್ಲಾ
ಚುನಾವಣೆಗಳನ್ನು ಆ ಕಾಲಸೂಚಿಯಲ್ಲೇ ನಡೆಸಬೇಕು.
ಹೀಗೆ ಮಾಡುವುದರಿಂದ, ರಾಷ್ಟ್ರವು ಎಲ್ಲಾ ಕಾಲದಲ್ಲೂ ‘ಚುನಾವಣಾ ಹ್ಯಾಂಗೋವರ್’ನಲ್ಲೇ ಇರುವುದನ್ನು
ತಪ್ಪಿಸಬಹುದು. ಇಂಥ ನಿರ್ಣಾಯಕ ವಿಷಯವನ್ನು ಜಂಟಿ ಸಂಸದೀಯ ಸಮಿತಿಯು ಒಳಹೊಕ್ಕು ಪರಿಶೀಲಿಸಿ
ಚರ್ಚಿಸಲಿರುವುದರಿಂದ, ದೇಶಾದ್ಯಂತ ಈ ಸಂಬಂಧವಾಗಿ ಒಂದು ಅರ್ಥಪೂರ್ಣ ವಿಚಾರ ವಿನಿಮಯ ನಡೆಯುವುದು ಸ್ವಾಗತಾರ್ಹ ಹೆಜ್ಜೆಯಾಗಬಲ್ಲದು.
(ಲೇಖಕರು ಲೋಕನೀತಿ ಕಾರ್ಯಜಾಲದ ರಾಷ್ಟ್ರೀಯ ಸಂಯೋಜಕರು ಮತ್ತು ನಿಟ್ಟೆ ಎಜುಕೇಷನ್ ಟ್ರಸ್ಟ್‌ನ ಶೈಕ್ಷಣಿಕ ನಿರ್ದೇಶಕರು)
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ