Friday, 10th January 2025

Bomb Threat: ದಿಲ್ಲಿಯ 23 ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ; 12ನೇ ತರಗತಿಯ ವಿದ್ಯಾರ್ಥಿ ಅರೆಸ್ಟ್!

ನವದೆಹಲಿ:‌ ರಾಷ್ಟ್ರ ರಾಜಧಾನಿ ದೆಹಲಿಯ(Delhi) ಹಲವಾರು ಶಾಲೆಗಳಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಬೆದರಿಕೆ ಹಾಕಿದ ಆರೋಪದಲ್ಲಿ 12ನೇ ತರಗತಿಯ ವಿದ್ಯಾರ್ಥಿಯನ್ನು ಇಂದು(ಜ.10) ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ(Bomb Threat)

ಗುರುವಾರ(ಜ.9) ಕನಿಷ್ಠ 10 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದವು ಎನ್ನಲಾಗಿದೆ. ಕಳೆದ ವರ್ಷವೂ ಹೀಗೆ ಹಲವು ಬಾರಿ ಬೆದರಿಕೆಗಳು ಬಂದಿದ್ದವು. ಆದರೆ ಅವೆಲ್ಲವೂ ಹುಸಿ ಬೆದರಿಕೆಗಳಾಗಿದ್ದವು ಎಂದು ತಿಳಿದು ಬಂದಿದೆ. ಇದೀಗ ದೆಹಲಿಯ ವಿವಿಧ ಶಾಲೆಗಳಿಗೆ ಬಂದ ಕೊನೆಯ 23 ಬೆದರಿಕೆ ಇಮೇಲ್‌ಗಳನ್ನು 12 ನೇ ತರಗತಿಯ ವಿದ್ಯಾರ್ಥಿ ಕಳುಹಿಸಿದ್ದು,ತಾನು ಈ ಹಿಂದೆಯೂ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ದೆಹಲಿಯ ವಿವಿಧ ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆಯ ಹಿಂದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಕೈವಾಡವಿದೆ ಎಂಬುದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ತಾನು ಈ ಹಿಂದೆಯೂ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಗಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ಹೇಳಿದ್ದಾರೆ. ಬಾಂಬ್ ಬೆದರಿಕೆಗಳು ಶಾಲಾ ಅಧಿಕಾರಿಗಳಲ್ಲಿ ಭೀತಿಯನ್ನು ಉಂಟು ಮಾಡಿತ್ತು. ದೆಹಲಿ ಪೊಲೀಸರು ಇಂತಹ ಬಿಕ್ಕಟ್ಟುಗಳನ್ನು ಎದುರಿಸಲು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದರ್ಸ್ ಇಂಟರ್‌ನ್ಯಾಶನಲ್ ಸ್ಕೂಲ್, ಮಾಡರ್ನ್ ಸ್ಕೂಲ್, ಸ್ಪ್ರಿಂಗ್‌ಡೇಲ್ ಸ್ಕೂಲ್, ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್, ಸೇಂಟ್ ಕೊಲಂಬಾಸ್ ಸ್ಕೂಲ್, ಸಲ್ವಾನ್ ಪಬ್ಲಿಕ್ ಸ್ಕೂಲ್, ಅಮಿಟಿ ಇಂಟರ್‌ನ್ಯಾಶನಲ್ ಸ್ಕೂಲ್, ಏರ್ ಫೋರ್ಸ್ ಬಾಲ್ ಭಾರತಿ, ವಸಂತ್ ವಿಹಾರ್‌ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ಆರ್‌ಕೆ ಪುರಂ ಶಾಲೆಗಳಿಗೆ ವಿದ್ಯಾರ್ಥಿ ಬೆದರಿಕೆಯ ಇಮೇಲ್ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿಲ್ಲಿಯ ಶಾಲೆಗಳಿಗೆ ಬಾಂಬ್‌ ಬೆದರಿಕೆ

ಕಳೆದ ತಿಂಗಳಷ್ಟೇ ದಿಲ್ಲಿಯ ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ ಸಂದೇಶ (Bomb Threat) ಬಂದಿತ್ತು. ಶುಕ್ರವಾರ (ಡಿ. 13) ಬೆಳಗ್ಗೆ ಕನಿಷ್ಠ 6 ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಸಂದೇಶ ಬಂದಿದ್ದು, ಕೂಡಲೇ ಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು. ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದರು. ಸದ್ಯ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿದ್ದವು.

ಕೈಲಾಶ್‌ ಪೂರ್ವದಲ್ಲಿರುವ ದಿಲ್ಲಿ ಪಬ್ಲಿಕ್ ಸ್ಕೂಲ್, ಸಲ್ವಾನ್ ಸ್ಕೂಲ್, ಮಾಡರ್ನ್ ಸ್ಕೂಲ್, ಕೇಂಬ್ರಿಡ್ಜ್ ಶಾಲೆ ಸೇರಿ 6ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು. ಇಮೇಲ್‌ನಲ್ಲಿ “ಶಾಲೆಗಳು ಆವರಣದಲ್ಲಿ ಹಲವು ಸ್ಫೋಟಕಗಳಿವೆ” ಎಂದು ಹೇಳಲಾಗಿತ್ತು. ರಹಸ್ಯ ಡಾರ್ಕ್‌ ವೆಬ್‌ ಗುಂಪು ಇದರ ಹಿಂದಿದೆ ಎಂದೂ ತಿಳಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Viral News: ಅಬ್ಬಬ್ಬಾ… 2,10,42,08,405 ರೂಪಾಯಿ ವಿದ್ಯುತ್‌ ಬಿಲ್;‌ ಉದ್ಯಮಿ ತಬ್ಬಿಬ್ಬು!

Leave a Reply

Your email address will not be published. Required fields are marked *