Friday, 10th January 2025

Naxalites Encounter: ಭರ್ಜರಿ ಕಾರ್ಯಾಚರಣೆ- ಎನ್‌ಕೌಂಟರ್‌ನಲ್ಲಿ ಮೂವರು ಮಾವೋವಾದಿಗಳು ಫಿನೀಶ್‌!

ರಾಯ್‌ಪುರ: ಛತ್ತೀಸ್‌ಗಢದ(Chhattisgarh) ಸುಕ್ಮಾ(Sukma) ಜಿಲ್ಲೆಯಲ್ಲಿ ಗುರುವಾರ(ಜ.9) ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲೀಯರು ಹತರಾಗಿದ್ದಾರೆ(Naxalites Encounter). ಈ ಕುರಿತು ರಾಜ್ಯ ಉಪ ಮುಖ್ಯಮಂತ್ರಿ ಮತ್ತು ಗೃಹಖಾತೆ ಸಚಿವರಾದ ವಿಜಯ್ ಶರ್ಮಾ(Vijay Sharma) ಮಾಹಿತಿ ನೀಡಿದ್ದು, ಸುಕ್ಮಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಯಶಸ್ಸನ್ನು ಸಾಧಿಸಿವೆ. ಇಲ್ಲಿಯವರೆಗೆ ಮೂವರು ನಕ್ಸಲೀಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಜನವರಿ 6 ರಂದು ನಕ್ಸಲೀಯರು ಪ್ರಚೋದಿಸಿದ ಐಇಡಿ ಸ್ಫೋಟದಲ್ಲಿ ಎಂಟು ಭದ್ರತಾ ಸಿಬ್ಬಂದಿ ಮತ್ತು ಅವರ ವಾಹನದ ಚಾಲಕರು ಮೃತಪಟ್ಟಿದ್ದರು. “ನಕ್ಸಲೀಯರು ಮಾಡಿದ ಕೃತ್ಯದಿಂದ ಅವರ ಮೇಲೆ ಭದ್ರತಾ ಪಡೆಗಳಿಗೆ ಕೋಪವಿದೆ. ನಾನು ಭದ್ರತಾ ಪಡೆ ಸಿಬ್ಬಂದಿಗಳನ್ನು ಭೇಟಿ ಮಾಡಿದ್ದೇನೆ. ಅವರು ನಕ್ಸಲೀಯರ ಹೆಡೆಮುರಿ ಕಟ್ಟದೆ ಸುಮ್ಮನಿರುವುದಿಲ್ಲ ಎಂದಿದ್ದಾರೆ. ಅವರು ನಕ್ಸಲೀಯರನ್ನು ತೊಡೆದು ಹಾಕಲಿದ್ದಾರೆ. ಮಾರ್ಚ್ 2026 ರೊಳಗೆ ದೇಶದಿಂದ ನಕ್ಸಲರನ್ನು ನಿರ್ಮೂಲನೆ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ. ಇದೀಗ ಎನ್‌ಕೌಂಟರ್‌ ಆಗಿದೆ. ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಹತ್ಯೆಗೀಡಾದವರ ತ್ಯಾಗ ವ್ಯರ್ಥವಾಗಿಲ್ಲ” ಎಂದು ಶರ್ಮಾ ಹೇಳಿದ್ದಾರೆ.

ಗುರುವಾರ(ಜ.9) ಬೆಳಗ್ಗೆ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ತಂಡವು ನಕ್ಸಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್‌ಕೌಂಟರ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್, ವಿಶೇಷ ಕಾರ್ಯಪಡೆ ಮತ್ತು ಕೋಬ್ರಾಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಈ ವರ್ಷ ಇದುವರೆಗೆ ಎನ್‌ಕೌಂಟರ್‌ಗಳಲ್ಲಿ ಒಂಬತ್ತು ನಕ್ಸಲೀಯರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ 6 ರಂದು ಮುಕ್ತಾಯಗೊಂಡ ನಾರಾಯಣಪುರ-ದಂತೇವಾಡ-ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅಬುಜ್ಮದ್‌ನಲ್ಲಿ ಭದ್ರತಾ ಪಡೆಗಳ ಮೂರು ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲೀಯರು ಹತರಾಗಿದ್ದಾರೆ.

ನಕ್ಸಲರ ಶಸ್ತ್ರಾಸ್ತ್ರಗಳು ಏನಾದವು?

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ ಆರು ನಕ್ಸಲರು ಮೊನ್ನೆ ಶರಣಾಗಿದ್ದಾರೆ. ಆದರೆ ಅವರು ಈವರೆಗೆ ತಮ್ಮ ಶಸ್ತ್ರಾಸ್ತ್ರಗಳು ಒಪ್ಪಿಸಿಲ್ಲ. ಅದು ಏನಾದವು ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಿದೆ.

ಪುನರ್ವಸತಿ ಸಮಿತಿ ಸದಸ್ಯರು ಮತ್ತು ನಾಗರಿಕ ಸಮಿತಿ ಸದಸ್ಯರು ಶಾಂತಿಗಾಗಿ ನಕ್ಸಲರನ್ನು ಕೊಪ್ಪ ತಾಲ್ಲೂಕಿನ ಮೇಗೂರು ಕಾಡಿನಿಂದಲೇ ಕರೆದುಕೊಂಡು ಬಂದರು. ಆ ವೇಳೆ ಅವರ ಬಳಿ ಶಸ್ತ್ರಗಳು ಇರಲಿಲ್ಲ. ಅವರನ್ನು ಮಾತ್ರ ನೇರವಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲೇ ಉಳಿದಿವೆಯೇ ಎಂಬ ಪ್ರಶ್ನೆ ಎದುರಾಗಿದೆ. ಉಡುಪಿ ಜಿಲ್ಲೆಯ ಪೀತಬೈಲು ಬಳಿ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ವಿಕ್ರಂ ಗೌಡ ಬಲಿಯಾಗಿದ್ದರು. ಆಗ ಅವರು ಹೊಂದಿದ್ದರು ಎನ್ನಲಾದ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ ಈ ಆರು ನಕ್ಸಲರ ಬಂದೂಕು ಮತ್ತು ಇತರ ಶಸ್ತ್ರಗಳನ್ನು ಈವರೆಗೆ ವಶಪಡಿಸಿಕೊಂಡಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral News: ಅಬ್ಬಬ್ಬಾ… 2,10,42,08,405 ರೂಪಾಯಿ ವಿದ್ಯುತ್‌ ಬಿಲ್;‌ ಉದ್ಯಮಿ ತಬ್ಬಿಬ್ಬು!

Leave a Reply

Your email address will not be published. Required fields are marked *