ನವದೆಹಲಿ: ಟೀಂ ಇಂಡಿಯಾ ಆಟಗಾರ ವರುಣ್ ಆರೋನ್ ಎಲ್ಲಾ ಸ್ವರೂಪದ ಕ್ರಿಕೆಟ್ಗೆ (Varun Aaaron Retirement) ವಿದಾಯ ಹೇಳಿದ್ದಾರೆ. ಅವರು ತಮ್ಮ 35ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದಾರೆ. ವರುಣ್ ಆರೋನ್ ಭಾರತ ಪರ 9 ಏಕದಿನ ಹಾಗೂ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ ಮಾರಕ ಬೌಲಿಂಗ್ಗೆ ಪ್ರಸಿದ್ಧರಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿಯೂ ಅವರು ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ದೇಶಿ ಕ್ರಿಕೆಟ್ನಲ್ಲಿ ಜಾರ್ಖಂಡ್ ಪರ ಆಡುತ್ತಿದ್ದರು. ಈ ವರ್ಷದ ಜನವರಿ 5 ರಂದು ಗೋವಾ ವಿರುದ್ಧ ಜಾರ್ಖಂಡ್ ಪರ ಕೊನೆಯ ದೇಶಿ ಪಂದ್ಯವನ್ನು ಆಡಿದ್ದರು.
ಶುಕ್ರವಾರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ನಾನು ಕಳೆದ 20 ವರ್ಷಗಳಿಂದ ವೇಗದ ಬೌಲಿಂಗ್ನಲ್ಲಿ ಬದುಕಿದ್ದೇನೆ. ಇಂದು ನಾನು ಅಧಿಕೃತವಾಗಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ದೇವರು, ಕುಟುಂಬ, ಸ್ನೇಹಿತರು, ಸಹ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳು ಇಲ್ಲದಿದ್ದರೆ ನನ್ನ ಈ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ. ನಾನು ಬಿಸಿಸಿಐ ಮತ್ತು ಜೆಎಸ್ಸಿಎಗೆ ಧನ್ಯವಾದ ಹೇಳುತ್ತೇನೆ,” ಎಂದು ಅವರು ಬರೆದಿದ್ದಾರೆ.
ವರುಣ್ ಅವರ ಬೌಲಿಂಗ್ ವೃತ್ತಿಜೀವನ
ವರುಣ್ ಆರೋನ್ ತಮ್ಮ ವೇಗದ ಬೌಲಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಅವರು ನವೆಂಬರ್ 2011ರಲ್ಲಿ ಭಾರತ ತಂಡದ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ಅವರು ದೀರ್ಘಾವಧಿ ಭಾರತ ತಂಡದಲ್ಲಿ ಮುಂದುವರಿಯಲಿಲ್ಲ. 2015ರಲ್ಲಿ ಭಾರತ ಪರ ಕೊನೆಯ ಟೆಸ್ಟ್ ಆಡಿದ್ದರು. 2011ರ ಅಕ್ಟೋಬರ್ನಲ್ಲಿ ಏಕದಿನ ಕ್ರಿಕೆಟ್ಗೆ ವರುಣ್ ಆರೋನ್ ಪದಾರ್ಪಣೆ ಮಾಡಿದ್ದರುರು. ಆದರೆ 2014 ರಲ್ಲಿಯೇ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಭಾರತ ಪರ 9 ಟೆಸ್ಟ್ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. 9 ಏಕದಿನ ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಕಬಳಿಸಿದ್ದಾರೆ.
ವರುಣ್ ಆರೋನ್ ದೇಶಿ ಕ್ರಿಕೆಟ್ ಅಂಕಿಅಂಶಗಳು
ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಜ್ಜಾಗುತ್ತಿದೆ. ಇನ್ನು ಎರಡು ದಿನಗಳ ಒಳಗೆ ಭಾರತ ಟೆಸ್ಟ್ ತಂಡ ಪ್ರಕಟವಾಗಲಿದೆ. ಇನ್ನು ವರುಣ್ ಬಗ್ಗೆ ಹೇಳುವುದಾರೆ, ಅವರು ಟೀಮ್ ಇಂಡಿಯಾದಿಂದ ಬಹಳ ಕಾಲ ಹೊರಗಿದ್ದರು. ಆದಾಗ್ಯೂ, ಅವರು ಈ ಅವಧಿಯಲ್ಲಿ ದೇಶಿ ಕ್ರಿಕೆಟ್ನಲ್ಲಿ ನಿರಂತರವಾಗಿ ಆಡಿದ್ದಾರೆ. 88 ಲಿಸ್ಟ್ ಎ ಪಂದ್ಯಗಳಲ್ಲಿ ವರುಣ್ 141 ವಿಕೆಟ್ ಪಡೆದಿದ್ದಾರೆ. ಆದರೆ ಪ್ರಥಮ ದರ್ಜೆ ಪಂದ್ಯಗಳಲ್ಲಿ 173 ವಿಕೆಟ್ಗಳ ಕಿತ್ತಿದ್ದಾರೆ.
ಈ ಸುದ್ದಿಯನ್ನು ಓದಿ: Pat Cummins: ರೋಹಿತ್ ಅಲ್ಲ, ವಿಶ್ವದ ನಂ1 ನಾಯಕನನ್ನು ಹೆಸರಿಸಿದ ದಿನೇಶ್ ಕಾರ್ತಿಕ್!