Friday, 10th January 2025

Asha Workers Strike: ಸಿಎಂ ಸಂಧಾನ ಯಶಸ್ವಿ; ಮುಷ್ಕರ ಹಿಂಪಡೆದ ಆಶಾ ಕಾರ್ಯಕರ್ತೆಯರು

Asha Workers Strike

ಬೆಂಗಳೂರು: ಆಶಾ ಕಾರ್ಯಕರ್ತೆಯರ ಸಂಘಟನೆ ಪ್ರಮುಖರ ಜತೆ ಸಿಎಂ ಸಿದ್ದರಾಮಯ್ಯ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮುಷ್ಕರವನ್ನು ಆಶಾ ಕಾರ್ಯಕರ್ತೆಯರು ಹಿಂಪಡೆದಿದ್ದಾರೆ.

ಮಾಸಿಕ 20 ಸಾವಿರ ಗೌರವ ಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಮೈ ಕೊರೆಯುವ ಚಳಿಯಲ್ಲಿಯೇ ಸಾವಿರಾರು ಆಶಾ ಕಾರ್ಯಕರ್ತೆಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು.

ಇಂದು ಬೆಳಗ್ಗೆ ಸರ್ಕಾರದ ಪ್ರತಿನಿಧಿಗಳು ಹಾಗೂ ಕಾರ್ಯಕರ್ತೆಯರ ನಡುವೆ ಮಾತುಕತೆಯೂ ಮುರಿದುಬಿದ್ದಿತ್ತು. ಆದರೆ, ಇದೀಗ ಸಿಎಂ ಅವರು ನಡೆಸಿದ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಷ್ಕರ ಸ್ಥಗಿತಗೊಳಿಸಲು ಆಶಾ ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.

ಈ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಜತೆಗೆ ಇನ್ಸೆಂಟಿವ್‌ ಅನ್ನು ಹೆಚ್ಚಿಗೆ ಪಡೆಯಬಹುದು. ಹಾಗೆಯೇ ಮೊಬೈಲ್‌ ಬಳಸಲು ಬಾರದವರಿಗೆ ಪರ್ಯಾಯ ವ್ಯವಸ್ಥೆ ಹಾಗೂ ರಜೆ ದಿನಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಿಎಂ ಹೇಳಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | PM Narendra Modi: ‘ನಾನೂ ಒಬ್ಬ ಮನುಷ್ಯ… ದೇವರಲ್ಲ…ʼ ಪಾಡ್‌ಕಾಸ್ಟ್‌ಗೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ

ಆಶಾ ಕಾರ್ಯಕರ್ತ ಬೇಡಿಕೆಗಳೇನು?

  • ನಗರ ಪ್ರದೇಶದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ವೆಚ್ಚಗಳಿಗೆ ಅನುಗುಣವಾಗಿ ಗೌರವಧನವನ್ನು ಮಾಸಿಕ ರೂ.20 ಸಾವಿರಕ್ಕೆ ಹೆಚ್ಚಿಸಬೇಕು.
  • 8 ವರ್ಷಗಳಿಂದ ಆಶಾನಿಧಿ ಪೋರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಗಳು ದಾಖಲಾಗದೇ, ಪ್ರೋತ್ಸಾಹಧನವೂ ಬಂದಿಲ್ಲ. ರಾಜ್ಯದಾದ್ಯಂತ ಬಾಕಿ ಇರುವ 3 ತಿಂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು.
  • ಮೊಬೈಲ್ ಆಧಾರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಮೊಬೈಲ್ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು.
  • ಪಶ್ಚಿಮ ಬಂಗಾಳದ ಮಾದರಿಯಲ್ಲಿ ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ 5 ಲಕ್ಷ ನೀಡಬೇಕು.
  • ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರಾಚ್ಯುಟಿ, ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯ ಒದಗಿಸಬೇಕು.

Leave a Reply

Your email address will not be published. Required fields are marked *