ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಈ ವಾರ ಎಲ್ಲ ಸ್ಪರ್ಧಿಗಳಿಗೆ ಬಹಳ ಪ್ರಮುಖವಾದ ವಾರ ಆಗಿತ್ತು. ಯಾಕೆಂದರೆ ಈ ವಾರ ನೀಡಿದ ಸರಣಿ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದ ಸ್ಪರ್ಧಿಗೆ ಟಿಕೆಟ್ ಟು ಫಿನಾಲೆ ಪಾಸ್ ಸಿಗಲಿದೆ. ಅಂದರೆ ನೇರವಾಗಿ ಫಿನಾಲೆ ವೀಕ್ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಈ ವಾರ ಎಲ್ಲ ಸ್ಪರ್ಧಿಗಳು ಮೈ-ಚಳಿ ಬಿಟ್ಟು ಆಟವಾಡಿದ್ದಾರೆ. ಆದರೆ, ಅಂತಿಮವಾಗಿ ಈ ರೇಸ್ನಲ್ಲಿ ನಾಲ್ಕು ಜನ ಮಾತ್ರ ಉಳಿದುಕೊಂಡಿದ್ದಾರೆ.
ಈ ವಾರ ಪೂರ್ತಿ ಬಿಗ್ ಬಾಸ್ ಸರಣಿ ಟಾಸ್ಕ್‌ಗಳನ್ನು ನೀಡಿದ್ದರು. ಈ ಎಲ್ಲ ಟಾಸ್ಕ್‌ಗಳ ಬಳಿಕ ಅಂತಿಮವಾಗಿ ಹನುಮಂತ, ಭವ್ಯ ಗೌಡ, ತ್ರಿವಿಕ್ರಮ್ ಮತ್ತು ರಜತ್ ಟಿಕೆಟ್ ಟು ಫಿನಾಲೆ ಟಾಸ್ಕ್ ಆಡಲು ಆಯ್ಕೆಯಾಗಿದ್ದಾರೆ. ಈ ನಾಲ್ವರಲ್ಲಿ ಒಬ್ಬರು ಈಗ ಫಿನಾಲೆ ಟಿಕೆಟ್ ಪಡೆದು ಮೊದಲ ಫೈನಲಿಸ್ಟ್ ಆಗಿದ್ದಾರೆ. ಫಿನಾಲೆ ಟಿಕೆಟ್ ಪಡೆಯಲು ಬಿಗ್ ಬಾಸ್ ಕಠಿಣ ಟಾಸ್ಕ್ ಅನ್ನೇ ನೀಡಿದ್ದರು. ಜೊತೆಗೆ ಗೆದ್ದ ಹೆಸರನ್ನು ಘೋಷಣೆ ಮಾಡಲು ಮನೆಯೊಳಗೆ ಶರಣ್ ಮತ್ತು ಅದಿತಿ ಪ್ರಭುದೇವ ಬಂದಿದ್ದಾರೆ.
ಬಿಗ್ ಬಾಸ್ ನೀಡಿದ ಟಾಸ್ಕ್ ಏನು?:
ಟ್ರಂಕ್ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್ ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಯಾರು ಅತ್ಯಂತ ಕಡಿಮೆ ಅವಧಿಯಲ್ಲಿ ಆಟ ಮುಗಿಸುತ್ತಾರೋ ಅವರು ಫಿನಾಲೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ.
ಮನೆಗೆ ಅತಿಥಿಯಾಗಿ ಆಗಮಿಸಿರುವ ಅದಿತಿ ಹಾಗೂ ಶರಣ್ ಅವರು ಸ್ಪರ್ಧಿಯನ್ನು ಘೋಷಿಸಲಿದ್ದಾರೆ. ನೇರವಾಗಿ ಫಿನಾಲೆಗೆ ಹೋಗುವಂತ ಒಬ್ಬ ಸ್ಪರ್ಧಿ ಯಾರೆಂದು ಶರಣ್ ಹೇಳಲಿದ್ದಾರೆ. ಸದ್ಯ ಈ ಟಾಸ್ಕ್ನಲ್ಲಿ ಹನುಮಂತ ಅವರು ಗೆದ್ದು ಫಿನಾಲೆ ವೀಕ್ಗೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಟಾಸ್ಕ್ ಅನ್ನು ಹನುಮಂತ ಗೆದ್ದಿದ್ದಾರೆ ಎನ್ನಲಾಗಿದೆ.