Friday, 10th January 2025

IND vs IRE: ವೇಗವಾಗಿ 4000 ಒಡಿಐ ರನ್‌ ಪೂರ್ಣಗೊಳಿಸಿ ದಾಖಲೆ ಬರೆದ ಸ್ಮೃತಿ ಮಂಧಾನಾ!

IND vs IRE: Smriti Mandhana Creates history, becomes fastest Indian woman to complete 4000 ODI runs

ರಾಜ್‌ಕೋಟ್‌: ಅಂತಾರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 4000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ. ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಜನವರಿ 10 ರಂದು ಐರ್ಲೆಂಡ್‌ ವಿರುದ್ಧ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ (IND vs IRE) ಅವರು ಈ ದಾಖಲೆ ಬರೆದಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದ 15ನೇ ಆಟಗಾರ್ತಿ ಹಾಗೂ ಮಾಜಿ ನಾಯಕ ಮಿಥಾಲಿ ರಾಜ್‌ ಬಳಿಕ ಎರಡನೇ ಭಾರತೀಯ ಆಟಗಾರ್ತಿ ಎಂಬ ಸಾಧನೆಗೆ ಭಾಜನರಾಗಿದ್ದಾರೆ.

ಈ ಪಂದ್ಯದಲ್ಲಿ 9ನೇ ಓವರ್‌ನಲ್ಲಿ ಅರ್ಲೆನ್‌ ಕೆಲ್ಲಿ ಅವರ ಎಸೆತದಲ್ಲಿ ಒಂದು ರನ್‌ ಪಡೆಯುವ ಮೂಲಕ ಸ್ಮೃತಿ ಮಂಧಾನಾ ಈ ಮೈಲುಗಲ್ಲು ತಲುಪಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನಾ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇವರು ಕೇವಲ 29 ಎಸೆತಗಳಲ್ಲಿ 41 ರನ್‌ಗಳನ್ನು ಕಲೆ ಹಾಕಿದರು. ಇದರ ಜೊತೆಗೆ ಅವರು ಡೆಬ್ಯೂಟಂಟ್‌ ಪ್ರತೀಕಾ ರಾವಲ್‌ ಅವರ ಜೊತೆ 70 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು.

ನೂತನ ಮೈಲುಗಲ್ಲು ಸ್ಥಾಪಿಸಿದ ಸ್ಮೃತಿ ಮಂಧಾನಾ

ಸ್ಮೃತಿ ಮಂಧಾನಾ ಅವರು 4000 ಒಡಿಐ ರನ್‌ಗಳನ್ನು ಪೂರ್ಣಗೊಳಿಸಲು 95ನೇ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ, 100 ಇನಿಂಗ್ಸ್‌ಗಳ ಒಳಗಾಗಿ 4000 ಒಡಿಐ ರನ್‌ ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮಿಥಾಲಿ ರಾಜ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 7805 ರನ್‌ಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮಂಧಾನಾ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತ ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನಾ ಅವರು ಕೀ ಆಟಗಾರ್ತಿ. ಅವರು 2024ರ ಕ್ಯಾಲೆಂಡರ್‌ ವರ್ಷದಲ್ಲಿ ಮಹಿಳಾ ಕ್ರಿಕೆಟ್‌ನ ಒಡಿಐ ಮತ್ತು ಟಿ20ಐನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎಂಬ ದಾಖಲೆ ಕೂಡ ಸ್ಮೃತಿ ಮಂಧಾನಾ ಅವರ ಹೆಸರಿನಲ್ಲಿದೆ. ಆ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಎಲ್ಲಾ ಸ್ವರೂಪದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಭಾರತ ಆಡಿದ್ದ ಟೆಸ್ಟ್‌ ಪಂದ್ಯದಲ್ಲಿ ಶತಕ ಹಾಗೂ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕು ಸೆಂಚುರಿಗಳನ್ನು ಬಾರಿಸಿದ್ದರು.

2025ರ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ ಟೂರ್ನಿಗೂ ಮುನ್ನ ಭಾರತ ವನಿತೆಯರಿಗೆ ಐರ್ಲೆಂಡ್‌ ವಿರುದ್ದದ ಏಕದಿನ ಸರಣಿ ಕೊನೆಯದಾಗಿದೆ. ಇದಕ್ಕೂ ಮುನ್ನ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಮಹಿಳಾ ಆಟಗಾರ್ತಿಯರು ಆಡಲಿದ್ದಾರೆ.ಅಂದ ಹಾಗೆ ಐರ್ಲೆಂಡ್‌ ವಿರುದ್ದದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಇದರೊಂದಿಗೆ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆಯನ್ನು ಪಡೆದಿದೆ.

ಈ ಸುದ್ದಿಯನ್ನು ಓದಿ: Smriti Mandhana : ಕೌರ್ ಬದಲಿಗೆ ಸ್ಮೃತಿ ಮಂಧಾನಾ ಭಾರತ ತಂಡಕ್ಕೆ ನಾಯಕಿ

Leave a Reply

Your email address will not be published. Required fields are marked *