ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ (Narendra Modi Podcast). ಜೆರೋಧಾ (Zerodha) ಸಂಸ್ಥೆಯ ಸಹ-ಸಂಪ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 2002ರಲ್ಲಿ ನಡೆದ ಗುಜರಾತ್ನ ಗೋಧ್ರಾ ಹತ್ಯಾಕಾಂಡ, 2005ರಲ್ಲಿ ಅಮೆರಿಕದಿಂದ ವೀಸಾ ನಿರಾಕರಣೆಯಂತಹ ವಿವಿಧ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ʼʼ2002ರ ಫೆ. 24ರಂದು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೆ. ಫೆ. 27ರಂದು ನಾನು ವಿಧಾನಸಭೆಗೆ ಹೋಗಿದ್ದೆ. ಆ ದಿನ ಗೋಧ್ರಾ ಘಟನೆ ನಡೆಯಿತು. ಆಗ ನಾನು ಕೇವಲ 3 ದಿನಗಳ ಶಾಸಕನಾಗಿದ್ದೆ. ಮೊದಲು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ವರದಿಗಳು ಬಂದವು. ಕ್ರಮೇಣ ನಮಗೆ ಸಾವು-ನೋವುಗಳ ಬಗ್ಗೆ ವಿವರ ದೊರೆತವು. ಆಗ ನಾನು ಸದನದಲ್ಲಿದ್ದೆ. ಸುದ್ದಿ ಕೇಳಿ ನನಗೆ ಕಳವಳವಾಗಿತ್ತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
An enjoyable conversation with @nikhilkamathcio, covering various subjects. Do watch… https://t.co/5Q2RltbnRW
— Narendra Modi (@narendramodi) January 10, 2025
ʼʼಮಾಹಿತಿ ತಿಳಿದ ಕೂಡಲೇ ನಾನು ಸದನದಿಂದ ಹೊರಬಂದೆ. ತಕ್ಷಣ ಗೋಧ್ರಾಕ್ಕೆ ಭೇಟಿ ನೀಡುವುದಾಗಿ ತಿಳಿಸಿದೆ. ಆಗ ಒಂದೇ ಒಂದು ಹೆಲಿಕಾಪ್ಟರ್ ಇತ್ತು. ಅದು ಒಎನ್ಜಿಸಿ ಆಗಿತ್ತು. ಅದು ಒಂದೇ ಎಂಜಿನ್ ಆಗಿರುವುದರಿಂದ ಅದರಲ್ಲಿ ವಿಐಪಿಗಳು ಪ್ರಯಾಣಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ನಾನು ಅದೇ ಹೆಲಿಕಾಪ್ಟರ್ನಲ್ಲಿ ಆದಷ್ಟು ಬೇಗ ಗೋದ್ರಾಕ್ಕೆ ಹೋಗುವುದಾಗಿ ತಿಳಿಸಿದೆ. ಈ ಹೆಲಿಕಾಪ್ಟರ್ನಲ್ಲಿನ ಹೋಗಿ ಏನೇ ಆದರೂ ಅದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ ಎಂದು ಹೇಳಿದ್ದೆ” ಎಂಬುದಾಗಿ ಮೋದಿ ವಿವರಿಸಿದ್ದಾರೆ.
ಗೋದ್ರಾದಲ್ಲಿ ತಲುಪಿದಾಗ ಆಗಿದ್ದೇನು?
“ಕೊನೆಗೆ ನಾನು ಗೋಧ್ರಾ ತಲುಪಿದೆ. ಅಲ್ಲಿನ ನೋವಿನ ದೃಶ್ಯಕ್ಕೆ ನಾನು ಸಾಕ್ಷಿಯಾದೆ. ಮೃತದೇಹಗಳನ್ನು ನೋಡಿ ಮನಸ್ಸು ಮುದುಡಿ ಹೋಯ್ತು. ಆದರೆ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಕಷ್ಟಪಟ್ಟು ದುಃಖವನ್ನು ಅದುಮಿಟ್ಟುಕೊಂಡೆʼʼ ಎಂದು ಅವರು ಕಾಮತ್ ಬಳಿ ತಿಳಿಸಿದ್ದಾರೆ.
ಅಮೆರಿಕದಿಂದ ವೀಸಾ ನಿರಾಕರಣೆ
ತಾವು ಶಾಸಕರಾಗಿದ್ದಾಗ ಅಮೆರಿಕ ವೀಸಾ ನಿರಾಕರಿಸಿದ್ದ ಬಗ್ಗೆಯೂ ಮೋದಿ ಮನಸ್ಸು ಬಿಚ್ಚಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ʼಅಮೆರಿಕ ಸರ್ಕಾರ 2005ರಲ್ಲಿ ನನಗೆ ವೀಸಾ ನೀಡಲು ನಿರಾಕರಿಸಿದಾಗ ಶಾಸಕನಾಗಿದ್ದೆ. ಆ ದಿನ ನಾನು ಪತ್ರಿಕಾಗೋಷ್ಠಿ ನಡೆಸಿ ಅಮೆರಿಕನ್ ಸರ್ಕಾರ ನನ್ನ ವೀಸಾವನ್ನು ತಿರಸ್ಕರಿಸಿದೆ ಎಂದು ಹೇಳಿದ್ದೆ. ಆಗ ನಾನು ಮುಂದೊಂದು ದಿನ ಜಗತ್ತು ಭಾರತದ ವೀಸಾಕ್ಕಾಗಿ ಸರದಿಯಲ್ಲಿ ಕಾದು ನಿಲ್ಲುತ್ತದೆ ಎಂದು ಸವಾಲು ಹಾಕಿದ್ದೆ. ಇದೀಗ ಆ ದಿನದತ್ತ ನಾವು ಸಾಗುತ್ತಿದ್ದೇವೆʼʼ ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
“ಜಗತ್ತು ನಮ್ಮನ್ನು ನಂಬುತ್ತದೆ. ಯಾಕೆಂದರೆ ನಮ್ಮಲ್ಲಿ ಯಾವುದೇ ನಕಲು ಇಲ್ಲ. ನಾವು ಏನನ್ನಾದರೂ ಸ್ಪಷ್ಟವಾಗಿ ಹೇಳುತ್ತೇವೆ. ನಾನು ಶಾಂತಿಯ ಪರವಾಗಿದ್ದೇನೆ ಮತ್ತು ಇದಕ್ಕಾಗಿ ನಡೆಸುವ ಯಾವುದೇ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ. ನಾನು ಇದನ್ನೇ ರಷ್ಯಾ, ಉಕ್ರೇನ್, ಇರಾನ್, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ಗೂ ಹೇಳಿದ್ದೇನೆ. ಅವರಿಗೆ ನನ್ನ ಮೇಲೆ ನಂಬಿಕೆ ಇದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಸಚಿವರೊಂದಿಗೆ ʻದಿ ಸಬರಮತಿ ರಿಪೋರ್ಟ್ʼ ಚಿತ್ರ ವೀಕ್ಷಿಸಿದ ಪ್ರಧಾನಿ ಮೋದಿ ಹೇಳಿದ್ದೇನು?