Friday, 20th September 2024

ಗಣಿತದ ಅನಂತತೆ ಕಂಡಿದ್ದ ರಾಮಾನುಜನ್‌

ತನ್ನಿಮಿತ್ತ

ಎಲ್‌.ಪಿ.ಕುಲಕರ್ಣಿ, ಬಾದಾಮಿ kulkarnilp007@gmail.com

ಆ ಬಾಲಕ ಗಣಿತದಲ್ಲಿ ಬಹಳ ಚುರುಕು. ಐದನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ಈತ ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಅಧ್ಯಾಪಕರ ನ್ನು ಅನೇಕ ವೇಳೆ ಚಕಿತಗೊಳಿಸಿದ್ದ.

ಒಮ್ಮೆ ತರಗತಿಯಲ್ಲಿ ಪ್ರಾಧ್ಯಾಪಕರು ಗಣಿತದ ಮೂಲಕ್ರಿಯೆ ಭಾಗಾಕಾರದ ಬಗ್ಗೆ ಪಾಠ ಮಾಡುತ್ತ ಐದು ಹಣ್ಣುಗಳನ್ನು ಐದು ಜನರಿಗೆ ಹಂಚಿದರೆ ಒಬ್ಬೊಬ್ಬರಿಗೂ ಬರುವ ಹಣ್ಣುಗಳೆಷ್ಟು? ಎಂಬ ಪ್ರಶ್ನೆಗೆ ಐದು ಹಣ್ಣುಗಳು ದೊರೆಯುತ್ತವೆ ಎಂಬುದು. ಅಂದರೆ ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಭಾಗಲಬ್ದ ’ಒಂದು(1)’ ಎಂಬ ಸಾರ್ವತ್ರಿಕ ಫಲಿತಾಂಶವನ್ನು ಪ್ರಾಧ್ಯಾಪಕರು ನಿರೂಪಿಸಿದರು.

ಕ್ಷಣದಲ್ಲಿಯೇ ಈ ಬಾಲಕ ಎದ್ದುನಿಂತು ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಏನಾಗುತ್ತದೆ? ಎಂದು ಪ್ರಶ್ನಿಸಿದ. ಪ್ರಾಧ್ಯಾ ಪಕರು ತಬ್ಬಿಬ್ಬಾದರು. ಆ ಕುಶಾಗ್ರಮತಿ ಬಾಲಕ ಬೇರಾರೂ ಅಲ್ಲ, ದೇಶಕಂಡ ಅಪ್ಪಟ ಗಣಿತ ಪ್ರತಿಭೆ ಶ್ರೀನಿವಾಸ ರಾಮಾನುಜನ್. ಹೀಗೆ ರಾಮಾನುಜನ್‌ರು ತಮ್ಮದೇ ಆದ ಸಂಖ್ಯಾಲೋಕದಲ್ಲಿ ಅಡೆತಡೆಗಳಿಲ್ಲದೇ ವಿಹರಿಸುತ್ತಿದ್ದರು. ಈ ಹಿಂದೆ ಗಣಿತ ತಜ್ಞರ ಜೀವನಾಧಾರಿತ ’ಬ್ಯೂಟಿಫುಲ್ ಮೈಂಡ್ ’ ನಂತಹ ಮುಂತಾದ ಚಲನಚಿತ್ರಗಳು ಬಂದಿದ್ದವು.

ಇತ್ತೀಚೆಗೆ 2016ರಲ್ಲಿ ತೆರೆಕಂಡ ಭಾರತೀಯ ಗಣಿತಜ್ಞ ರಾಮಾನುಜನ್‌ರ ಜೀವನವನ್ನು ತೆರೆದಿಟ್ಟ ಇನ್ನೊಂದು ಪ್ರಸಿದ್ಧ ಚಲನಚಿತ್ರ ‘ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ (The Man Who Knew Infinity)ಯನ್ನು ನಾವಿಲ್ಲಿ ಸ್ಮರಿಸಬಹುದು. ಮಹಾನ್ ಮೇಧಾವಿ, ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಬದುಕಿದ್ದು ಮಾತ್ರ ಅತ್ಯಲ್ಪ ಕಾಲ. ಆದರೆ ಗಣಿತ ಕ್ಷೇತ್ರದಲ್ಲಿ ತನ್ನದೇ ಆದ
ಛಾಪು ಮೂಡಿಸಿ ಮಿಂಚಿ ಮರೆಯಾದ ಉಜ್ವಲ ತಾರೆ. ತಮ್ಮ ಆರೋಗ್ಯದ ಕಡೆಗೂ ಗಮನ ಕೊಡದೇ ಸಂಪೂರ್ಣ ಅವಧಿಯನ್ನು ಕೇವಲ ಗಣಿತ ಸಂಶೋಧನೆಗಾಗಿಯೇ ಮೀಸಲಿಟ್ಟ ಸಾಧಕ. ಗಣಿತ ಸಂಶೋಧನೆಗೆ ಬೇಕಾದ ಪ್ರತಿಭೆ, ಮೇಧಾಶಕ್ತಿ, ಘನ ಪಾಂಡಿತ್ಯ
ಅವರಲ್ಲಿ ಇದ್ದವು.

ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆಯದಿದ್ದರೂ ಬ್ರಿಟೀಷರ ನಾಡಾದ ಇಂಗ್ಲೆಂಡಿಗೆ ಹೋಗಿ ತಮ್ಮ ಅತ್ಯದ್ಭುತ ಅಗೋಚರ ಬುದ್ಧಿ ಶಕ್ತಿಯಿಂದ ಜಗತ್ತನ್ನೇ ಬೆರಗುಗೊಳಿಸಿದ ಗಣಿತ ಜೀನಿಯಸ್ ಶ್ರೀನಿವಾಸ ರಾಮಾನುಜನ್. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಇರೋಡಿನಲ್ಲಿ ಶ್ರೀನಿವಾಸ ಅಯ್ಯಂಗಾರ್ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಕೋಮಲತ್ತ ಮಾಳ್ ಇವರ ಪತ್ನಿ.

ದಂಪತಿಗಳು ನಾಮಕ್ಕಲ್ ಕ್ಷೇತ್ರದ ನಾಮಗಿರಿ ದೇವಿಯ ಪರಮ ಭಕ್ತರು. ಆರ್ಥಿಕವಾಗಿ ಕೆಳ ಮಧ್ಯಮ ವರ್ಗದ ಶ್ರೀ ವೈಷ್ಣವ ಕುಟುಂಬಕ್ಕೆ ಸೇರಿ ದ ಇವರ ಮೂವರು ಮಕ್ಕಳ ಪೈಕಿ ಜೇಷ್ಠ ಸುಪುತ್ರರಾಗಿ 22ನೇ ಡಿಸೆಂಬರ್ 1887ರಂದು ಶ್ರೀನಿವಾಸ ರಾಮಾ
ನುಜನ್ ಜನಿಸಿದರು. ತಮ್ಮ ಮೂರನೇ ತರಗತಿಯಲ್ಲಿ ಶ್ರೇಣಿ ವ್ಯವಹಾರ ಕಲಿತರು. ರಾಮಾನುಜನ್ ನಾಲ್ಕ ನೇ ಫಾರಂನಲ್ಲಿ ಓದುತ್ತಿದ್ದಾಗಲೇ ಬಿ.ಎ.ತರಗತಿಯ ಒಬ್ಬ ವಿದ್ಯಾರ್ಥಿಯಿಂದ ಎಸ್.ಎಲ್ ಲೋನಿಯವರ ’ಟ್ರಿಗ್ನಾಮೆಟ್ರಿ-ಪಾರ್ಟ್ 2’ ಎಂಬ ಪುಸ್ತಕ ತರಿಸಿಕೊಂಡು ಅದರಲ್ಲಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದಲ್ಲದೇ ಆ ಬಿ.ಎ.ವಿದ್ಯಾರ್ಥಿಗೂ ತಿಳಿಸಿಕೊಟ್ಟಿದ್ದರು.

ಕಾರ್ (Car) ಎಂಬ ಗಣಿತ ಲೇಖಕನು ಬರೆದ ’ಎ ಸೈನಾ ಪ್ಸಿಸ್ ಆಫ್ ಪ್ಯೂರ್ ಮ್ಯಾಥೆಮ್ಯಾಟ್ಸಿೃ್’ ಎಂಬ ಗ್ರಂಥ( ಪುಸ್ತಕ) ರಾಮಾನು ಜನ್‌ರಿಗೆ ಗಣಿತದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿದ್ದಲ್ಲದೇ ಅವರ ಗಣಿತ ಸ್ಫೂರ್ತಿಯನ್ನು ಇಮ್ಮಡಿಗೊಳಿಸಿತ್ತು. 1903ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವೇಳೆಗಾಗಲೇ ರಾಮಾನುಜನ್ ಈ ಗ್ರಂಥವನ್ನು ಸಂಪೂರ್ಣವಾಗಿ ಅಭ್ಯಸಿಸಿ ಅರ್ಥೈಸಿಕೊಂಡಿದ್ದರು.

ಮೆಟ್ರಿಕ್ಯಲೇಷನ್ ಅನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. 1904ರಲ್ಲಿ ಕುಂಭಕೋಣಂನ ಸರಕಾರಿ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದರು. ಗಣಿತ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗಾಗಿಯೇ ಮೀಸಲಾಗಿದ್ದ ಸುಬ್ರಹ್ಮಣ್ಯಂ ಸ್ಕಾಲರ್‌ಶಿಪ್ ಪಡೆದುಕೊಂಡರು. ಬಡತನದಿಂದ ಬಂದಿದ್ದ ಇವರಿಗೆ ಈ ವಿದ್ಯಾರ್ಥಿ ವೇತನ ಅವರ ಊಟ, ಬಟ್ಟೆ ಹಾಗೂ ಪುಸ್ತಕಗಳಿಗೆ ಸಹಾಯವಾಯಿತು. ಕೇವಲ ಗಣಿತದ ಬಗ್ಗೆ ಹೆಚ್ಚು ಒಲವು ತೋರಿ ಉಳಿದ ವಿಷಯಗಳನ್ನು ಅಲಕ್ಷ ಮಾಡಿದ್ದರಿಂದ ಎಫ್.ಎ ಪರೀಕ್ಷೆಯಲ್ಲಿ ಫೇಲಾದರು.

ಜೊತೆಗೆ ಅವರಿಗೆ ಬರುತ್ತಿದ್ದ ವಿದ್ಯಾರ್ಥಿವೇತನವೂ ಕಟ್ ಆಯಿತು. ಮುಂದೆ ವಿದ್ಯಾಭ್ಯಾಸ ಮುಂದುವರಿಸಲಾಗದೇ ಸ್ವಲ್ಪ ದಿನ ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಕೆಲಸಕ್ಕೆ ಅಲೆದಾಡಿದರು. ಮುಂದೆ ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನ ಶ್ರೇಷ್ಠ ಗಣಿತ ಪ್ರಾಧ್ಯಾಪಕ ಪ್ರೊ. ಜಿ.ಎಚ್.ಹಾರ್ಡಿಯವರು ರಾಮಾನುಜನ್‌ರ ಅದ್ಭುತ ಪ್ರತಿಭೆಯನ್ನು ಗುರುತಿಸಿ ಕೇಂಬ್ರಿಜ್ಗೆ ಅಹ್ವಾನಿಸಿದರು. ಅಲ್ಲಿ ಹಲವು ಗಣಿತ ಸಂಶೋಧನೆಗಳಲ್ಲಿ ತೊಡಗಿದರು. ಈ ವಿಷಯ ಎಲ್ಲರಿಗೂ ಗೊತ್ತಿರುವಂತಹುದೇ. ಆದರೆ ರಾಮಾನುಜನ್ ಅವರೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರು! ಎಂದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ.

ಈ ಕುರಿತು ಗಣಿತ ಸಂಶೋಧಕರೂ ಹಾಗೂ ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಆಫ್ ಸೈನ್ಸ್ ಆ್ಯಂಡ್ ಹ್ಯೂಮನ್ ವ್ಯಾಲ್ಯೂಸ್‌ನ ಗೌರವ ನಿರ್ದೇಶಕರೂ ಹಾಗೂ ಬೆಂಗಳೂರಿನ ಪ್ರತಿಷ್ಠಿತ ’ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (NIAS )’ನಲ್ಲಿ ಗೌರವ ಪ್ರಾಧ್ಯಾಪಕ ರಾಗಿಯೂ ಕಾರ್ಯನಿರ್ವಹಿಸಿ, ಜತೆಗೆ ನಮ್ಮ ಪ್ರಾಚೀನ ಗಣಿತ, ವಿಜ್ಞಾನ ತಂತ್ರಜ್ಞಾನಗಳ ಕುರಿತು ತಮ್ಮ ಈ ಇಳಿವಯಸ್ಸಿನಲ್ಲೂ ಸಂಶೋಧನೆಗಳಿದಿರುವ ಡಾ. ಎಸ್.ಬಾಲಚಂದ್ರರಾವ್ ಅವರು, ಗಣಿತ ಪ್ರತಿಭೆ ಶ್ರೀನಿ
ವಾಸ ರಾಮಾನುಜನ್ ಅವರ ಜೀವನ ಸಾಧನೆಗಳ ಬಗ್ಗೆ ಬರೆದ ಪುಸ್ತಕ ’ಶ್ರೀನಿವಾಸ ರಾಮಾನುಜನ್ ವಿಶ್ವವಿಖ್ಯಾತ ಗಣಿತ ಪ್ರತಿಭೆ’ಯಲ್ಲಿ ರಾಮಾನುಜನ್‌ರು ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ವಿವರಿಸಿದ್ದಾರೆ.

‘ಸುಮಾರು 1917ರ ಕೊನೆಯ ಹೊತ್ತಿಗೆ ರಾಮಾನುಜನ್ ರ ಆರೋಗ್ಯ ಕ್ಷೀಣಿಸುತ್ತಿತ್ತು. ಅವರ ತಾಯಿಯಿಂದಾಗಲೀ, ಮಡದಿ ಜಾನಕಿಯಿಂದಾಗಲೀ ಯಾವುದೇ ಪತ್ರ ಬಾರದೇ ವರ್ಷವಾಗಿತ್ತು. ಅಷ್ಟೇ ಅಲ್ಲದೆ ಅತ್ತೆ ಮತ್ತು ಸೊಸೆ ಸಂಬಂಧ ಸಾಕಷ್ಟು  ಜಟಿಲ ಗೊಂಡು ಜಾನಕಿ ಅತ್ತೆಯ ಮನೆ ಬಿಟ್ಟು ದೂರದ ಕರಾಚಿಯಲ್ಲಿದ್ದ ತನ್ನ ಸಹೋದರನ ಮನೆ ಸೇರಿಕೊಂಡಿದ್ದಳು. ಇನ್ನು ಆತನ ಮಾನಸಿಕ-ಸಾಂಸಾರಿಕ ಬವಣೆನ್ನು ತಿಳಿದುಕೊಳ್ಳಲು ಇಂಗ್ಲೆಂಡಿನಲ್ಲಿ ಆತ್ಮೀಯರು ಯಾರೂ ಇರಲಿಲ್ಲ.

ಆತನಿಗೆ ’ ನಿಕಟವರ್ತಿ’ ಆಗಿದ್ದು ಗುರುಸ್ಥಾನದಲ್ಲಿದ್ದವರು ಪ್ರೋ. ಹಾರ್ಡಿ. ಅವರ ಸ್ವಭಾವವೂ ಸಹ ವಿಚಿತ್ರವೇ! ಸ್ವಂತ ವಿಷಯಗಳನ್ನು ಹಂಚಿಕೊಳ್ಳುವಷ್ಟು ಆತ್ಮೀಯತೆ ರಾಮಾನುಜ್ ಮತ್ತು ’ಟಿಪಿಕಲ್ ಇಂಗ್ಲಿಷ್‌ಮನ್’ ಆದ ಹಾರ್ಡಿಯ ನಡುವೆ ಸಾಧ್ಯವೇ? ಹೀಗಾಗಿ ನನ್ನವರು ಎಂಬುವವರು ಯಾರೂ ಇಲ್ಲ, ನಾನು ಎಲ್ಲರಿಗೂ ಬೇಡವಾಗಿದ್ದೇನೆ ಎಂಬ ಹತಾಶಾಭಾವ ರಾಮಾನುಜನ್ ರನ್ನು ಬಹಳ ತೀವ್ರವಾಗಿ ಕಾಡಲಾರಂಭಿಸಿತು.

ಸುಮಾರು 1918 ಜನವರಿ-ಫೆಬ್ರವರಿಯ ಸಮಯದಲ್ಲಿ ಒಂದು ದಿನ ತನ್ನ ಜೀವನ ಸಂಪೂರ್ಣವಾಗಿ ನಿರರ್ಥಕವೆನಿಸಿ ರಾಮಾನು ಜನ್ ಆತಹತ್ಯೆೆ ಮಾಡಿಕೊಳ್ಳಲು ನಿರ್ಧರಿಸಿ, ಲಂಡನ್ ನಗರದ ಪ್ರಸಿದ್ಧವಾದ ಸುಗಮಜಾಲದ ’ಟ್ಯೂಬ್ ಟ್ರೈನ್’ನ ಒಂದು ಸ್ಟೇಷನ್ ಬಳಿ ಟ್ರೈನ್ ಬರುತ್ತಿರುವಾಗ ರೈಲ್ವೆ ಹಳಿಯ ಮೇಲೆ ತಲೆಕೊಟ್ಟು ಮಲಗಿಯೇಬಿಟ್ಟರಂತೆ.

ಮುಂದೆ ಆಗಿದ್ದೆಲ್ಲಾ ಒಂದು ಪವಾಡವೇ ಸರಿ. ಆ ರೈಲುಗಾಡಿಯ ಗಾರ್ಡ್ ಹಳಿಯ ಮೇಲೆ ಒಬ್ಬ ವ್ಯಕ್ತಿ ಮಲಗಿರುವುದನ್ನು ನೋಡಿ ತಕ್ಷಣ ಗಾಡಿ ನಿಲ್ಲುವಂತೆ ತುರ್ತುಗುಂಡಿಯನ್ನು ಒತ್ತಿದ, ಗಾಡಿಯ ಎಂಜಿನ್ ರಾಮಾನುಜನ್ ಮಲಗಿದ್ದ ಜಾಗೆಯಿಂದ ಕೆಲವೇ
ಅಡಿಗಳಷ್ಟು ದೂರದಲ್ಲಿ ನಿಂತಿತು! ವಿಶ್ವದ ಗಣಿತ ಕ್ಷೇತ್ರಕ್ಕೆ ಇನ್ನಷ್ಟು ತನ್ನ ಕೊಡುಗೆಯನ್ನು ನೀಡಲು ಗಣಿತದ ಅತಿಶ್ರೇಷ್ಠ  ಪ್ರತಿಭೆಯ ಜೀವ ಉಳಿಸಿತು.

ಆದರೆ, ಹಳಿಯ ಮೇಲೆ ಬಿದ್ದ ಪರಿಣಾಮವಾಗಿ ರಾಮಾನುಜನ್‌ರಿಗೆ ಸಾಕಷ್ಟು ಗಾಯಗಳಾಗಿ ರಕ್ತವು ಜಿನುಗುತ್ತಿತ್ತು. ಆಗ ರಾಮಾ ನುಜನ್ ಅವರನ್ನು ಆತ್ಮಹತ್ಯೆ ಪ್ರಯತ್ನಕ್ಕಾಗಿ ಬಂಧಿಸಿ ಸ್ಕಾಟ್ಲೆಂಡ್ ಯಾರ್ಡ್‌ನ ಪೋಲಿಸರಿಗೆ ಒಪ್ಪಿಸಲಾಯಿತು. ರಾಮಾನುಜನ್ ನೀಡಿದ ಮಾಹಿತಿಯಂತೆ ಅವರು ಪ್ರೊ.ಹಾರ್ಡಿಯವರನ್ನು ಕರೆಸಿದರು. ಆಗ ಸಂದರ್ಭದ ಗಂಭೀರತೆಯನ್ನು ಕ್ಷಣಾರ್ಧದಲ್ಲೇ ಗ್ರಹಿಸಿದ ಪ್ರೊ.ಹಾರ್ಡಿಯವರು ತಮ್ಮ ವಿಶೇಷವಾದ ಘನತೆ, ಖ್ಯಾತಿ, ಪ್ರತಿಷ್ಠೆಗಳನ್ನು ಬಳಸಿಕೊಂಡು, ಸಮಯ ಪ್ರಜ್ಞೆಯನ್ನು ತೋರಿ ಹಿರಿಯ ಪೋಲಿಸ್ ಅಧಿಕಾರಿಯನ್ನು ಗದರಿಸಿ, ‘ನೀವು ಆತನನ್ನು ಅದು ಹೇಗೆ ಬಂಧಿಸುತ್ತೀರಿ? ಅವರು ಮಿಸ್ಟರ್ ಎಸ್.ರಾಮಾನುಜನ್, ಎಫ್ ಆರ್‌ಎಸ್. – ಬ್ರಿಟಿಷ್ ಸರಕಾರದ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಶೇಷ ಆಹ್ವಾನಿತರಾದ ಗೌರವಾನ್ವಿತ ಅತಿಥಿ.

ಅಷ್ಟೇ ಅಲ್ಲದೇ, ಅವರು ವಿಜ್ಞಾನ ಕ್ಷೇತ್ರದಲ್ಲೇ ಅತ್ಯುನ್ನತವಾದ ಎಫ್‌ಆರ್‌ಎಸ್ ( ಫೆಲೊ ಆಫ್ ದಿ ರಾಯಲ್ ಸೊಸೈಟಿ ) ಮಾನ್ಯತೆಯನ್ನು ಹೊಂದಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಬಂಧಿಸಬಾರದೆಂಬ ಕಾನೂನಿದೆ ಎಂಬುದು ನಿಮಗೆ
ತಿಳಿಯದೇ?‘ ಎಂದು ದಬಾಯಿಸಿ ಆ ಅಧಿಕಾರಿಯನ್ನು ದಂಗುಬಡಿಸಿದರು! ಪ್ರೊ.ಹಾರ್ಡಿ ಅವರ ಮಾತಿಗೆ ಮಣಿದ ಪೋಲಿಸ್
ಅಧಿಕಾರಿ ತಕ್ಷಣ ರಾಮಾನುಜನ್ ರನ್ನು ಬಿಡುಗಡೆ ಮಾಡಿದರು! ಇಲ್ಲಿ,ನಿಜಾಂಶವೆಂದರೆ, ಆಗಿನ್ನೂ ರಾಮಾನುಜನ್ ’ಎಫ್‌ಆರ್‌ಎಸ್’. ಆಗಿರಲಿಲ್ಲ ಅಲ್ಲದೆ ಆ ಮಾನ್ಯತೆಯಿಂದ ಗೌರವಿಸಲ್ಪಟ್ಟವರನ್ನು ಬಂಧಿಸಬಾರದೆಂಬ ಕಾನೂನು ಇರಲಿಲ್ಲ!

ಆದರೆ ಬಹಳ ವರ್ಷಗಳ ನಂತರ ಹಾರ್ಡಿಯವರನ್ನು ಭೇಟಿಯಾದ ಅದೇ ಪೋಲಿಸ್ ಅಧಿಕಾರಿಯವರು ರಾಮಾನುಜನ್‌ರ ಪ್ರಸಂಗವನ್ನು ನೆನಪಿಸಿಕೊಂಡು ತಾವು ಅಂದು ನೀಡಿದ ಸಬೂಬುಗಳಲ್ಲಿ ಏನೂ ಹುರುಳಿರಲಿಲ್ಲವೆಂದು ನನಗೂ ತಿಳಿದಿತ್ತು. ಆದರೆ ತಮ್ಮ ಘನತೆ, ಪ್ರಸಿದ್ಧಿಗೆ ಹಾಗೂ ಕೇಂಬ್ರಿಡ್ಜ್ ‌‌ನ ಅತಿಥಿಯಾಗಿ ಬಂದಿದ್ದ ವಿದ್ಯಾರ್ಥಿಯ ಪ್ರಗತಿಗೆ ಧಕ್ಕೆಯಾಗಬಾರದೆಂದು ಉದ್ಧೇಶಪೂರ್ವಕವಾಗಿಯೇ ನಾವು ರಾಮಾನುಜನ್‌ರನ್ನು ಬಿಡುಗಡೆ ಮಾಡಿದೆವು ಎಂದು ತಿಳಿಸಿದರಂತೆ.

ಹೀಗಿರುವಾಗ ಪೋಲಿಸ್ ಅಧಿಕಾರಿ ಹಾಗೂ ಪ್ರೊ.ಹಾರ್ಡಿಯವರು ತೋರಿದ ಸಮಯ ಪ್ರಜ್ಞೆ ಮತ್ತು ಅವರಿಗೆ ರಾಮಾನುಜನ್ ಬಗೆಗಿದ್ದ ತೀವ್ರ ಕಳಕಳಿಗಾಗಿ ಇಡೀ ವಿಶ್ವವೇ ಅವರಿಗೆ ಆಭಾರಿ. ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ; ಒಮ್ಮೆ ಹಾರ್ಡಿ ರಾಮಾನುಜನ್‌ರನ್ನು ಆಸ್ಪತ್ರೆಯಲ್ಲಿದ್ದಾಗ ನೋಡಿ ಯೋಗಕ್ಷೇಮ ವಿಚಾರಿಸಲು 1729 ಸಂಖ್ಯೆಯ ಟ್ಯಾಕ್ಸಿಯಲ್ಲಿ ಬಂದರು. ಹಾಗೆ ಮಾತನಾಡುತ್ತಾ ರಾಮಾನುಜರಲ್ಲಿ ನಾನು ನಿಮ್ಮನ್ನು ನೋಡಲು 1729 ಸಂಖ್ಯೆ ಹೊಂದಿದ ಟ್ಯಾಕ್ಸಿಯಲ್ಲಿ ಬಂದೆ. ಅಷ್ಟೇನು
ಶುಭವಲ್ಲದ ಸಂಖ್ಯೆ. ಏಕೆಂದರೆ ಅದರ ಅಪವರ್ತನಗಳು 7,13,19 ಎಂದರು. ಅದಕ್ಕೆ ರಾಮಾನುಜನ್ ಅದು ಬಹು ಸ್ವಾರಸ್ಯಕರ ವಾದ ಸಂಖ್ಯೆ. ಏಕೆಂದರೆ ಎರಡು ರೀತಿಯಲ್ಲಿ ಎರಡು ಘನ ಸಂಖ್ಯೆಗಳ ಮೊತ್ತವಾಗಿರುವ ಕನಿಷ್ಠ ಸಂಖ್ಯೆ ಅದು. ಎಂದರು.

1್ಪ+ 12್ಪ = 1729 = 9್ಪ + 10್ಪ (1ರ ಘಾತ 3 + 12 ರ ಘಾತ 3 = 1729 = 9 ರ ಘಾತ 3 + 10 ರ ಘಾತ 3 ) ಎಂದು ವಿವರಣೆ ಕೊಟ್ಟರು. ಇಂತಹ ಮಹಾನ್ ಗಣಿತ ಪ್ರತಿಭೆ ಅಲ್ಪಾಯುಷ್ಯ ಪಡೆದು ಕೇವಲ 32 ವರ್ಷಕ್ಕೆ ಇಹಲೋಕ ತ್ಯಜಿಸಿದ್ದು ಮಾತ್ರ ಗಣಿತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಗಣಿತಕ್ಕೆ ರಾಮಾನುಜನ್‌ರು ನೀಡಿದ ಕೊಡುಗೆಗಳೇನು – ರಾಮಾನುಜನ್ ಕಂಜಕ್ಟರ್.

– ಮೊಕ್ ಥಿಟಾ ಫಂಕ್ಷ್ಸ್.
– ರಾಮಾನುಜನ್ ಪ್ರೈಮ್.
– ರಾಮಾನುಜನ್-ಸಾಲ್ಡನರ್ ಕಾನ್ಸ್ಟಂಟ್.
– ರಾಮಾನುಜ್ಸ್ ಸಮ್ .
– ರೋಜರ್-ರಾಮಾನುಜನ್ ಐಡೆಂಟಿಟೀಸ್.
– ರಾಮಾನುಜನ್ ಮಾಸ್ಟರ್ ಥೇರಮ್.

ಇವುಗಳಲ್ಲೆಲ್ಲಾ ಅತಿ ಪ್ರಮುಖವಾದುದು Infinite series for ‘pi’ ( ಇನ್‌ಫೈನೆಟ್ ಸಿರೀಜ್ ಆಫ್ ’ಪೈ’) ಕುರಿತಾದುದು. ಹೀಗೆ ರಾಮಾ ನುಜನ್‌ರು ಅಂದಾಜು 3900ಕ್ಕಿಂತಲೂ ಹೆಚ್ಚಿನ ಗಣಿತ ಫಲಿತಾಂಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

Shanmugha Arts, Science, Technology Research Academy (SASTRA) ಷಣ್ಮುಗ ಕಲೆ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಶ್ರೀನಿವಾಸ್ ರಾಮಾನುಜನ್‌ರ ಹುಟ್ಟೂರಾದ ಕುಂಭಕೋಣಂ ನ ಹತ್ತಿರದಲ್ಲಿ ಸ್ಥಾಪಿಸಲಾಗಿದೆ. ’ ಸಸ್ತ್ರಾ- ರಾಮಾನುಜನ್’ ಪ್ರಶಸ್ತಿಯನ್ನು ಇದೇ ಅಕಾಡೆಮಿ ಪ್ರತಿವರ್ಷ ರಾಮಾನುಜನ್‌ರ ಆಸಕ್ತಿಕರ ಕ್ಷೇತ್ರವಾದ ಗಣಿತದಲ್ಲಿ
ಸಾಧನೆಗೈದ 32 ವರ್ಷ ಒಳಗಿನ ವಯೋಮಾನದ ಯುವ ಗಣಿತ ಸಾಧಕರಿಗೆ ರಾಮಾನುಜನ್ ರ ಜನ್ಮದಿನವಾದ ಡಿ.22 ರಂದು ಕೊಡಲಾಗುತ್ತಿದೆ.

ಸದ್ಯ ಈ ಪ್ರಶಸ್ತಿಯು 10,000 ಡಾಲರ್ ಅಂದರೆ 7 ಲಕ್ಷ ರು. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕಳೆದ ಸಾರಿಯ ಸಸ್ತ್ರಾ- ರಾಮಾನುಜನ್ ಪ್ರಶಸ್ತಿಯನ್ನು ಇಂಗ್ಲೆಂಡಿನ ’ಯುನಿವರ್ಸಿಟಿ ಆಫ್ ವಾರ್ವಿಕ್’ (University of Warwick )ನಲ್ಲಿ ಗಣಿತ
ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವ ತರುಣ ಪ್ರೊ.ಆಡಮ್ ಹಾರ್ಪರ್ ಅವರಿಗೆ ಪ್ರದಾನ ಮಾಡಲಾಗಿದೆ. ಈ ಸಾಲಿನ ಸಸ್ತ್ರಾ ರಾಮಾನುಜನ್ ಪ್ರಶಸ್ತಿಯನ್ನು ಯು.ಎಸ್‌ನ ಪ್ರಿನ್ಸ್ ಟನ್ ವಿವಿ ಹಾಗೂ ಇಸ್ರೇಲ್‌ನ ಜೆರುಸಲೇಮ್ ನಲ್ಲಿರುವ ಹೆಬ್ರು ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಶೈ ಇವ್ರಾ ಅವರಿಗೆ ನೀಡಲಾಗುತ್ತಿದೆ.

2012ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಫೆ.26 ಫೆಬ್ರುವರಿರಂದು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ರಾಮಾನುಜನ್‌ರ 125 ನೇ ಜನ್ಮವರ್ಷಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯ ಗಣಿತ ದಿನ ’
(National Mathematic Day) ಎಂದು ಆಚರಿಸಲು ಕರೆಕೊಟ್ಟರು. ಅಲ್ಲದೇ ರಾಮಾನುಜನ್ ರ 125 ನೇ ಜನ್ಮವರ್ಷಾಚರಣೆ ನಿಮಿತ್ತ 2012 ನ್ನು ’ ರಾಷ್ಟ್ರೀಯ ಗಣಿತ ವರ್ಷ ’ (National Mathematic Year) ಎಂದು ಘೋಷಿಸಿದ್ದರು. 2017 ರಲ್ಲಿ ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಕುಪ್ಪಂನಲ್ಲಿ ’ ರಾಮಾನುಜನ್ ಮ್ಯಾಥ್ ಪಾರ್ಕ್ ’ ಲೋಕಾರ್ಪಣೆ ಆದದ್ದನ್ನು ಸ್ಮರಿಸಬಹುದು.