ಬೆಂಗಳೂರು: ಮಗುವನ್ನು ದತ್ತು ಪಡೆದುಕೊಂಡ ಸರ್ಕಾರಿ ನೌಕರರಿಗೆ (Government Employee) ಪಿತೃತ್ವ ಮತ್ತು ಮಾತೃತ್ವ ರಜೆ (Maternity Leave) ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮಗು ದತ್ತು ಪಡೆದ ತಾಯಿಗೆ ಒಂದು ವರ್ಷ ವೇತನ ಸಹಿತ ರಜೆ ನೀಡಲಾಗುತ್ತದೆ.
ಸರ್ಕಾರದ ಅಧಿಸೂಚನೆ (1)ರಲ್ಲಿ ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ 60 ದಿವಸಗಳ ರಜೆ ನೀಡಲು ಅನುಮತಿಸಲಾಗಿದೆ. ರಜೆ 60 ದಿವಸಗಳು ಮೀರದಂತೆ ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ, ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ, ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಅಂತಹ ಮಹಿಳಾ ಸರ್ಕಾರಿ ನೌಕರಳು ದತ್ತಕದ ಸಮಯದಲ್ಲಿ ಬೇರೆ ಎರಡು ಮಕ್ಕಳನ್ನು ಹೊಂದಿರತಕ್ಕದ್ದಲ್ಲ ಎಂಬ ಷರತ್ತು ವಿಧಿಸಲಾಗಿದೆ.
ಸರ್ಕಾರದ ಅಧಿಸೂಚನೆ (2) ರಲ್ಲಿ, ಪುರುಷ ನೌಕರರಿಗೆ ಅವರ ಪತ್ನಿಯ ಹೆರಿಗೆಯ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವ ರಜೆಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಇದೇ ಮಾದರಿಯ ಸೌಲಭ್ಯವನ್ನು ದತ್ತಕ ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೂ ಸಹ ಮಾತೃತ್ವ ಮತ್ತು ಪಿತೃತ್ವ ರಜೆಯ ಮಾದರಿಯಲ್ಲಿ ರಜೆಯನ್ನು ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ವ್ಯಾಪ್ತಿಯ ಅರ್ಹ ನೌಕರರ ಪ್ರಕರಣಗಳಲ್ಲಿ ಮಗುವನ್ನು ದತ್ತು ಪಡೆಯುವಂತಹ ಸರ್ಕಾರಿ ನೌಕರರಿಗೆ ಎರಡು ಜೀವಂತ ಮಕ್ಕಳನ್ನು ಹೊಂದಿರತಕ್ಕದ್ದಲ್ಲವೆಂಬ ಷರತ್ತಿಗೆ ಒಳಪಟ್ಟು ಮಗುವಿಗೆ ಒಂದು ವರ್ಷ ತುಂಬುವ ಅವಧಿಗೆ ಮೀರದಂತೆ ಮಹಿಳಾ ನೌಕರರಿಗೆ ಹೆರಿಗೆ ರಜೆ ಮಾದರಿಯಲ್ಲಿ 180 ದಿನಗಳು ಮತ್ತು ಪುರುಷ ನೌಕರರಿಗೆ ಪಿತೃತ್ವ ರಜೆ ಮಾದರಿಯಲ್ಲಿ 15 ದಿನಗಳ ರಜೆಯ ಮಂಜೂರಾತಿ ಅವಕಾಶವನ್ನು ಕಲ್ಪಿಸಿದೆ. ಈ ಅಂಶಗಳನ್ನು ಅವಲೋಕಿಸಿ ರಾಜ್ಯ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮಗಳು-1958ರ ನಿಯಮ-135 ಎ ರಲ್ಲಿ ವಿಧಿಸಿರುವ ಇತರೆ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಮಹಿಳಾ ಸರ್ಕಾರಿ ನೌಕರಳು ಮಗುವನ್ನು ದತ್ತು ಪಡೆದ ಸಂದರ್ಭದಲ್ಲಿ 180 ದಿನಗಳ ರಜೆಯನ್ನು(ಹೆರಿಗೆ ರಜೆ ಮಾದರಿಯಲ್ಲಿ) ದತ್ತು ಪ್ರಕ್ರಿಯೆಯು ಮಾನ್ಯತೆ ಹೊಂದಿದ ದಿನಾಂಕದಿಂದ ಮಂಜೂರು ಮಾಡತಕ್ಕದ್ದು, ಅಂತಹ ದತ್ತಕ ಪಡೆದ ಪ್ರಕರಣದಲ್ಲಿ ಪಿತೃತ್ವ ರಜೆ ಮಾದರಿಯಲ್ಲಿಯೇ ಕರ್ನಾಟಕ ನಾಗರೀಕ ಸೇವಾ ನಿಯಮಗಳು-1958ರ ನಿಯಮ-135 ಬಿ ರಲ್ಲಿ ವಿಧಿಸಿರುವ ಇತರೆ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು 15ದಿನಗಳ ರಜೆಯನ್ನು ದತ್ತು ಪ್ರಕ್ರಿಯೆಯು ಮಾನ್ಯತೆ ಹೊಂದಿದ ದಿನಾಂಕದಿಂದ ಮಂಜೂರು ಮಾಡತಕ್ಕದ್ದು.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿ; ಒಂದೇ ದಿನ 9.20 ಲಕ್ಷ ಜನ ಓಡಾಟ