Saturday, 11th January 2025

Gauri Lankesh Murder: ಗೌರಿ ಲಂಕೇಶ್‌ ಹತ್ಯೆ; ಜೈಲಿನಲ್ಲಿದ್ದ ಕೊನೆಯ ಆರೋಪಿಗೂ ಜಾಮೀನು

gauri lankesh

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ (Gauri Lankesh Murder‌ Case) ಪ್ರಕರಣದಲ್ಲಿ ಜೈಲಿನಲ್ಲಿದ್ದ ಕೊನೆಯ ಆರೋಪಿಗೂ ಜಾಮೀನು (Bail) ನೀಡಲಾಗಿದೆ. 10ನೇ ಆರೋಪಿ ಶರದ್ ಬಾವುಸಾಹೇಬ್ ಕಲಾಸ್ಕರ್‌ಗೆ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಬುಧವಾರ ಜಾಮೀನು ನೀಡಿದ್ದು, ಇದರೊಂದಿಗೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಎಲ್ಲಾ 17 ಆರೋಪಿಗಳಿಗೂ ಜಾಮೀನು ಸಿಕ್ಕಂತಾಗಿದೆ.

ಮಹಾರಾಷ್ಟ್ರದ ಶರದ್‌ ಬಾಹುಸಾಹೇಬ್‌ ಕಾಲಸ್ಕರ್‌ ಸಲ್ಲಿಸಿದ ಅರ್ಜಿಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಮುರಳೀಧರ್‌ ಪೈ ಅವರು ಪುರಸ್ಕರಿಸಿದ್ದು, ಸಮಾನತೆಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ,

ಸಂವಿಧಾನದ 21ರ ಅಡಿ ಬದುಕುವುದು ಮೂಲಭೂತ ಹಕ್ಕು. ಆರೋಪಿಗಳ ವಿರುದ್ಧ ವಿಚಾರಣೆ ಬಾಕಿಯಿರುವ ಸಂದರ್ಭದಲ್ಲಿ ಅವರ ವೈಯಕ್ತಿಕ ಹಕ್ಕು ಕಸಿದುಕೊಳ್ಳಲಾಗುವುದಿಲ್ಲ. ಅನಗತ್ಯ ವಿಳಂಬವು ಬದುಕುವ ಹಕ್ಕನ್ನು ಮೊಟಕುಗೊಳಿಸಿದಂತಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಅರ್ಜಿದಾರ 2018ರ ಏಪ್ರಿಲ್‌ನಿಂದ ಬಂಧನದಲ್ಲಿದ್ದು, ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ವಿಚಾರಣೆ ವೇಳೆ ಅರ್ಜಿದಾರ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ಮತ್ತೆ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಾರೆ ಎಂಬುದಾಗಿ ಪ್ರಾಸಿಕ್ಯೂಷನ್ ಪರ ವಕೀಲರು ಆತಂಕ ವ್ಯಕ್ತಪಡಿಸಿ ಜಾಮೀನು ನಿರಾಕರಿಸಬೇಕು ಎಂದು ಕೋರಿದ್ದರು.

ಆದರೆ, ಪ್ರಕರಣದ ಸಾಕ್ಷಿಗಳ ಹೆಸರುಗಳನ್ನು ಆರೋಪಿಗಳಿಗೆ ತಿಳಿಯದಂತೆ ಮರೆ ಮಾಚಲಾಗಿದೆ. ಅಂತಹ ಸಾಕ್ಷಿಗಳನ್ನು ನಾಶ ಮಾಡುವ ಆತಂಕ ಇರುವುದಿಲ್ಲ. ಅಲ್ಲದೇ, ಈಗಾಗಲೇ 164 ಸಾಕ್ಷಿಗಳನ್ನು ಪರಿಶೀಲಿಸಿದೆ. ಇನ್ನುಳಿದ ಸಾಕ್ಷಿಗಳಲ್ಲಿ ಹೆಚ್ಚಿನದಾಗಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳಿದ್ದಾರೆ. ಹೀಗಾಗಿ ಪ್ರಾಸಿಕ್ಯೂಷನ್ ಆತಂಕ ಪರಿಗಣಿಸಲಾಗದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, 2 ಲಕ್ಷ ರೂ.ಗಳ ಬಾಂಡ್ ಮತ್ತು ಎರಡು ಶ್ಯೂರಿಟಿಗಳನ್ನು ನೀಡಬೇಕು ಎಂದು ತಿಳಿಸಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.

ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರ ರಾತ್ರಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅವರ ಮನೆಯ ಹೊರಗೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಪ್ರಕರಣ ಸಂಬಂಧ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಮೂಲ್ ಕಾಳೆ, ರಾಜೇಶ್ ಡಿ ಬಂಗೇರಾ, ವಾಸುದೇವ್ ಸೂರ್ಯವಂಶಿ, ರುಷಿಕೇಶ್ ದೇವ್ಡೇಕರ್, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ರಾಮಚಂದ್ರ ಬುಡ್ಡಿ ಮತ್ತು ಮನೋಹರ್ ದುಂಡೀಪ ಯಡವೆ ಅವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ, ಆರೋಪಿಗಳಾದ ಭರತ್ ಕುರಾನೆ, ಶ್ರೀಕಾಂತ್ ಪಂಗರ್ಕರ್, ಸುಜಿತ್ ಕುಮಾರ್ ಮತ್ತು ಸುಧನ್ವ ಅವರಿಗೆ ಸೆಪ್ಟೆಂಬರ್ 4ರಂದು, 11ನೇ ಆರೋಪಿ ಎನ್ ಮೋಹನ್ ನಾಯಕ್ ಅಲಿಯಾಸ್ ಸಂಪಜೆ ಎಂಬುವರಿಗೆ 2023ರ ಡಿಸೆಂಬರ್ 7ರಂದು, ಅಮಿತ್ ದಿಗ್ವೇಕರ್, ಕೆ.ಟಿ.ನವೀನ್ ಕುಮಾರ್ ಮತ್ತು ಸುರೇಶ್ ಹೆಚ್.ಎಲ್ ಅವರಿಗೆ ಜುಲೈ 16ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. ಪ್ರಕರಣದಲ್ಲಿ ಒಟ್ಟು 18 ಮಂದಿ ಆರೋಪಿಗಳಿದ್ದು, 15ನೇ ಆರೋಪಿ ವಿಕಾಸ್ ಪಟೇಲ್ ಅಲಿಯಾಸ್ ದಾದಾ ಅಲಿಯಾಸ್ ನಿಹಾಲ್ ಎಂಬವರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Prakash Raj: ʻಗೌರಿ ಹತ್ಯೆ ಮತ್ತು ಮಗನ ಅಗಲಿಕೆ ಬದುಕಿನ ಅತಿ ದೊಡ್ಡ ದುರಂತ…ʼ ಭಾರೀ ವೈರಲ್‌ ಆಗ್ತಿದೆ ಪ್ರಕಾಶ್‌ ರಾಜ್ ಈ ವಿಡಿಯೋ

Leave a Reply

Your email address will not be published. Required fields are marked *