Saturday, 11th January 2025

Game Changer: ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್‌ ಆಫೀಸ್‌ನಲ್ಲಿ ‘ಗೇಮ್‌ ಚೇಂಜರ್‌’ ಕಮಾಲ್‌; ರಾಮ್‌ ಚರಣ್‌ ಚಿತ್ರ ಗಳಿಸಿದ್ದೆಷ್ಟು?

Game Changer

ಹೈದರಾಬಾದ್‌: ಕಳೆದ ತಿಂಗಳು ತೆರೆಕಂಡ ಅಲ್ಲು ಅರ್ಜುನ್‌ (Allu Arjun)-ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, 1 ತಿಂಗಳು ಕಳೆದ ನಂತರವೂ ಕೋಟಿ ಕೋಟಿ ದೋಚುತ್ತಿದೆ. ಈ ಮಧ್ಯೆ ಟಾಲಿವುಡ್‌ನ ಮತ್ತೊಂದು ಬಹು ನಿರೀಕ್ಷಿತ ಚಿತ್ರ ʼಗೇಮ್‌ ಚೇಂಜರ್‌ʼ (Game Changer) ರಿಲೀಸ್‌ ಆಗಿದೆ. ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎ.ಶಂಕರ್‌ (S.Shankar) ಆ್ಯಕ್ಷನ್‌ ಕಟ್‌ ಹೇಳಿರುವ, ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ (Ram Charan) ನಟನೆಯ ಸಿನಿಮಾ ಇದಾಗಿದ್ದು, ಸಂಕ್ರಾಂತಿ ಪ್ರಯುಕ್ತ ಜ. 10ರಂದು ತೆರೆಕಂಡಿದೆ. ಈ ಪಾಲಿಟಿಕಲ್‌, ಆ್ಯಕ್ಷನ್‌, ಡ್ರಾಮಾ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಉತ್ತಮ ಕಲೆಕ್ಷನ್‌ ಮಾಡುತ್ತಿದೆ. ಹಾಗಾದರೆ ಗೇಮ್‌ ಚೇಂಜರ್‌ ಕಲೆಕ್ಷನ್‌ ಮಾಡಿದ್ದೆಷ್ಟು ಎನ್ನುವ ವಿವರ ಇಲ್ಲಿದೆ (Game Changer Collection).

2022ರಲ್ಲಿ ಬಿಡುಗಡೆಯಾದ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಚಿತ್ರದಲ್ಲಿ ರಾಮ್‌ ಚರಣ್‌ ಕೊನೆಯದಾಗಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಈ ಚಿತ್ರದ ಬಳಿಕ ರಾಮ್‌ ಚರಣ್‌ ನಾಯಕರಾಗಿ ಕಾಣಿಸಿಕೊಂಡಿದ್ದ ಯಾವ ಚಿತ್ರವೂ ತೆರೆಕಂಡಿರಲಿಲ್ಲ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಗರಿಗೆದರಿತ್ತು.

ಮೊದಲ ದಿನದ ಕಲೆಕ್ಷನ್‌ ಎಷ್ಟು?

ʼಗೇಮ್‌ ಚೇಂಜರ್‌ʼ ಜಾಗತಿಕವಾಗಿ ಮೊದಲ ದಿನ 186 ಕೋಟಿ ರೂ. ದೋಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಚಿತ್ರತಂಡ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇನ್ನು ಭಾರತದಲ್ಲಿ ಕಲೆಕ್ಷನ್‌ ಆಗಿದ್ದು ಬರೋಬ್ಬರಿ 51.25 ಕೋಟಿ ರೂ. ತೆಲುಗಿನ ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿಯೂ ಸಿನಿಮಾ ರಿಲೀಸ್‌ ಆಗಿದೆ. ಸುಮಾರು 450 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಐಎಎಸ್‌ ಅಧಿಕಾರಿ ರಾಮ್‌ ನಂದನ್‌ (ರಾಮ್‌ ಚರಣ್‌) ಭ್ರಷ್ಟಾಚಾರ ವ್ಯವಸ್ಥೆ ಹೋರಾಡುವ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ನಾಯಕಿಯರಾಗಿ ಕಿಯಾರಾ ಅಡ್ವಾಣಿ ಮತ್ತು ಅಂಜಲಿ ನಟಿಸಿದ್ದಾರೆ. ಎಸ್‌.ಜೆ.ಸೂರ್ಯ, ಜಯರಾಂ, ವೆನ್ನಲಾ ಕಿಶೋರ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌.ಥಮನ್‌ ಅವರ ಸಂಗೀತಕ್ಕೆ ಪ್ರೇಕ್ಷಕರು ಫುಲ್‌ ಮಾರ್ಕ್ಸ್‌ ನೀಡಿದ್ದಾರೆ.

ʼಪುಷ್ಪ 2ʼ ದಾಖಲೆ ಮೀರಿಲ್ಲ

ಅದಾಗ್ಯೂ ʼಗೇಮ್‌ ಚೇಂಜರ್‌ʼಗೆ ʼಪುಷ್ಪ 2ʼ ಸಿನಿಮಾದ ಮೊದಲ ದಿನದ ಗಳಿಕೆ ಮೀರಲು ಸಾಧ್ಯವಾಗಿಲ್ಲ. ಸುಕುಮಾರ್‌ ನಿರ್ದೇಶನದ ʼಪುಷ್ಪ 2ʼ ವಿವಿಧ ಭಾಷೆಗಳಲ್ಲಿ ಡಿ. 5ರಂದು ತೆರೆಕಂಡು ಇದುವರೆಗೆ ಜಾಗತಿಕವಾಗಿ ಸುಮಾರು 1,800 ಕೋಟಿ ರೂ. ಗಳಿಸಿದೆ. ಮೊದಲ ದಿನವೇ ಬರೋಬ್ಬರಿ 294 ಕೋಟಿ ರೂ. ದೋಚಿಕೊಂಡಿತ್ತು. ಇತ್ತ ರಾಮ್‌ ಚರಣ್‌ ಅಭಿನಯದ ʼಆರ್‌ಆರ್‌ಆರ್‌ʼ ಚಿತ್ರದ ಮೊದಲ ದಿನದ ಗಳಿಕೆಯನ್ನು ಮೀರಲು ʼಗೇಮ್‌ ಚೇಂಜರ್‌ʼ ಸಫಲವಾಗಿದೆ. ʼಆರ್‌ಆರ್‌ಆರ್‌ʼ ಜಾಗತಿಕವಾಗಿ ಮೊದಲ ದಿನ 133 ಕೋಟಿ ರೂ. ಗಳಿಸಿತ್ತು.

ಗೆಲ್ತಾರ ಶಂಕರ್‌?

ಸತತ ಸೋಲಿನಿಂದ ಕಂಗೆಟ್ಟಿರುವ ನಿರ್ದೇಶಕ್‌ ಎಸ್‌.ಶಂಕರ್‌ಗೆ ʼಗೇಮ್‌ ಚೇಂಜರ್‌ʼ ಮೂಲಕ ತುರ್ತಾಗಿ ಬಹುದೊಡ್ಡ ಗೆಲುವೊಂದು ಬೇಕಾಗಿದೆ. ಇತ್ತೀಚೆಗೆ ತೆರೆಕಂಡ ಬಹು ನಿರೀಕ್ಷಿತ, ಕಮಲ್‌ ಹಾಸನ್‌ ನಟನೆಯ ಎಸ್‌.ಶಂಕರ್‌ ನಿರ್ದೇಶನದ ʼಇಂಡಿಯನ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಕಳೆದ ವರ್ಷದ ಅತೀ ದೊಟ್ಟ ಫ್ಲಾಪ್‌ ಚಿತ್ರಗಳಲ್ಲಿ ʼಇಂಡಿಯನ್‌ 2ʼ ಕೂಡ ಇದೆ. ಅಲ್ಲದೆ 2018ರಲ್ಲಿ ರಿಲೀಸ್‌ ಆದ ʼ2.0ʼ ಸಿನಿಮಾ ಕೂಡ ಅಂದುಕೊಂಡಷ್ಟು ಕಮಾಲ್‌ ಮಾಡಿರಲಿಲ್ಲ. ಹೀಗಾಗಿ ʼಗೇಮ್‌ ಚೇಂಜರ್‌ʼ ಹಿಟ್‌ ಆಗಲೇಬೇಕಾದ ಅನಿವಾರ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Ram Charan: ಟಿವಿಯಲ್ಲಿ ಮೊದಲ ಬಾರಿ ಅಪ್ಪನನ್ನು ನೋಡಿ ಖುಷಿ ಪಟ್ಟ ರಾಮ್‌ ಚರಣ್‌ ಮಗಳು; ಕ್ಯೂಟ್‌ ವಿಡಿಯೊ ಇಲ್ಲಿದೆ

Leave a Reply

Your email address will not be published. Required fields are marked *