Saturday, 11th January 2025

BBL: 58 ಎಸೆತಗಳಲ್ಲಿ ಸ್ಪೋಟಕ ಶತಕ ಬಾರಿಸಿದ ಸ್ಟೀವನ್‌ ಸ್ಮಿತ್‌!

BBL: Australia Batter Steve Smith equals record for most tons in Big Bash League

ನವದೆಹಲಿ: ಭಾರತದ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ದಿಟ್ಟ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಸ್ಟೀವನ್‌ ಸ್ಮಿತ್ (steve smith) ಇದೀಗ ಟಿ20 ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಬಿಗ್ ಬ್ಯಾಷ್ ಲೀಗ್‌ (BBL) ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಪೋಟಕ ಶತಕ ಬಾರಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

2025ರ ಬಿಗ್‌ಬ್ಯಾಷ್‌ ಲೀಗ್‌ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಸ್ಟೀವನ್‌ ಸ್ಮಿತ್‌ ಆಡುತ್ತಿದ್ದಾರೆ. ಶನಿವಾರ ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಸ್ಪೋಟಕ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಪಂದ್ಯದಲ್ಲಿ ಸ್ಮಿತ್‌ ಓಪನಿಂಗ್‌ಗೆ ಆಗಮಿಸಿ ಅಜೇಯರಾಗಿ ಪೆವಿಲಿಯನ್‌ಗೆ ಮರಳಿದ್ದು ಅತ್ಯಂತ ವಿಶೇಷವಾಗಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸಿಡ್ನಿ ಸಿಕ್ಸರ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಸ್ಮಿತ್‌, 64 ಎಸೆತಗಳಲ್ಲಿ ಬರೋಬ್ಬರಿ 7 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 121 ರನ್‌ಗಳನ್ನು ಸಿಡಿಸಿದರು. ಸ್ಮಿತ್ ಶತಕ ಪೂರೈಸಲು ಕೇವಲ 58 ಎಸೆತಗಳನ್ನು ತೆಗೆದುಕೊಂಡಿದ್ದರು. ಇದು ಅವರ ಟಿ20 ವೃತ್ತಿಜೀವನದ ನಾಲ್ಕನೇ ಶತಕವಾಗಿದೆ ಹಾಗೂ ಬಿಗ್ ಬ್ಯಾಷ್ ಲೀಗ್‌ನಲ್ಲಿ ಇವರ ಮೂರನೇ ಶತಕವಾಗಿದೆ. ಆ ಮೂಲಕ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಬೆನ್‌ ಮೆಕ್‌ಡರ್ಮೆಟ್‌ ಅವರನ್ನು ದಾಖಲೆಯನ್ನು ಸರಿದೂಗಿಸಿದ್ದಾರೆ.

ಸ್ಟೀವ್ ಸ್ಮಿತ್ ಸ್ವಲ್ಪ ಸಮಯದವರೆಗೆ ಅವರ ಫಾರ್ಮ್‌ನಲ್ಲಿರಲಿಲ್ಲ, ಆದರೆ ಭಾರತದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅವರು ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿ ಕಮ್‌ಬ್ಯಾಕ್‌ ಮಾಡಿದ್ದರು. ಅವರು ಈ ಸರಣಿಯಲ್ಲಿ ಎರಡು ಅದ್ಭುತ ಶತಕಗಳನ್ನು ಬಾರಿಸಿದ್ದರು. ಇದರ ಫಲವಾಗಿ ಬಿಗ್ ಬ್ಯಾಷ್ ಲೀಗ್‌ನಲ್ಲಿಯೂ ಅದೇ ಲಯವನ್ನು ಅವರು ಮುಂದುವರಿಸುತ್ತಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆಸ್ಟ್ರೇಲಿಯಾ ತಂಡಕ್ಕೂ ಸ್ಟೀವನ್‌ ಸ್ಮಿತ್‌ ಲಗ್ಗೆ ಇಡುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಸ್ಮಿತ್‌ ನಾಯಕರಾಗುವ ಸಾಧ್ಯತೆ

ಆದರೆ, ಇದಕ್ಕೂ ಮುನ್ನ ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗುವ ಎಲ್ಲ ಸಾಧ್ಯತೆಗಳಿವೆ. ತಂಡದ ನಿಯಮಿತ ನಾಯಕ ಪ್ಯಾಟ್ ಕಮಿನ್ಸ್‌ ವಿಶ್ರಾಂತಿ ಪಡೆಯಲು ಬಯಸುವುದಾಗಿ ಘೋಷಿಸಿದ್ದರು. ಇದಲ್ಲದೆ, ಕಮಿನ್ಸ್‌ ಗಾಯಗೊಂಡಿದ್ದಾರೆ ಎಂದು ವರದಿಗಳಾಗಿವೆ. ಈ ಕಾರಣದಿಂದಾಗಿ, ಅವರು ಶ್ರೀಲಂಕಾ ವಿರುದ್ಧದ ಸರಣಿಗೆ ಲಭ್ಯವಿರುವುದಿಲ್ಲ, ಆದರೆ ಅವರು ಚಾಂಪಿಯನ್ಸ್ ಟ್ರೋಫಿಗೆ ಲಭ್ಯರಾಗುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ.

2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌

ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜಿನಲ್ಲಿ ಸ್ಟೀವನ್‌ ಸ್ಮಿತ್‌ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಅನ್‌ಸೋಲ್ಡ್‌ ಆಗಿದ್ದರು. ಇದೀಗ ಭರ್ಜರಿ ಲಯಕ್ಕೆ ಮರಳಿರುವ ಕಾರಣ ಅವರನ್ನು ಐಪಿಎಲ್‌ ಟೂರ್ನಿಯ ವೇಳೆ ಯಾವುದಾದರೊಂದು ಫ್ರಾಂಚೈಸಿ ಸೇರಿಸಿಕೊಂಡರೂ ಅಚ್ಚರಿ ಇಲ್ಲ.

ಈ ಸುದ್ದಿಯನ್ನು ಓದಿ: Devdutt Padikkal: ಶತಕದ ಮೂಲಕ ಬಲವಾಗಿ ಕಮ್‌ಬ್ಯಾಕ್ ಮಾಡಿದ ಕನ್ನಡಿಗ!

Leave a Reply

Your email address will not be published. Required fields are marked *