Saturday, 11th January 2025

Delhi Election: ದಿಲ್ಲಿಯ ಶೀಷ್‌ ಮಹಲ್‌ನ ಶೌಚಾಲಯ ಕೊಳೆಗೇರಿಗಿಂತಲೂ ದುಬಾರಿ; ಆಪ್‌ ವಿರುದ್ಧ ಹರಿಹಾಯ್ದ ಅಮಿತ್‌ ಶಾ

Delhi Election

ನವದೆಹಲಿ: ದಿಲ್ಲಿ ವಿಧಾನಸಭಾ ಚುನಾವಣೆ (Delhi Election)ಯ ದಿನಾಂಕ‍ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಒಂದೆಡೆ ಮತ್ತೊಮ್ಮೆ ಅಧಿಕಾರಕ್ಕೆ ಮರಳಲು ಆಮ್‌ ಆದ್ಮಿ ಪಾರ್ಟಿ (Aam Aadmi Party) ಕಸರತ್ತು ನಡೆಸುತ್ತಿದ್ದರೆ ಇನ್ನೊಂದೆಡೆ ಬಿಜೆಪಿ (BJP) ಶತಾಯ ಗತಾಯ ಗದ್ದುಗೆಗೆ ಏರಲೇ ಬೇಕೆಂದು ಪಣ ತೊಟ್ಟಿದೆ. ಹೀಗಾಗಿ ಪರಸ್ಪರ ವಾದ-ವಿವಾದಗಳಲ್ಲಿ ಎರಡೂ ಪಕ್ಷಗಳು ತೊಡಗಿಸಿಕೊಂಡಿವೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ವಿರುದ್ಧ ವಾಗ್ದಾಳಿ ನಡೆಸಿದ್ದು, ದಿಲ್ಲಿಯ ಸರ್ಕಾರಿ ಬಂಗಲೆಯಾಗಿರುವ ಶೀಷ್‌ ಮಹಲ್‌ (Sheesh Mahal)ನಲ್ಲಿರುವ ಶೌಚಾಲಯವು ಇಡೀ ಕೊಳೆಗೇರಿಗಳಿಗಿಂತಲೂ ದುಬಾರಿ ಎಂದು ಹೇಳಿದ್ದಾರೆ.

ದಿಲ್ಲಿಯಲ್ಲಿ ನಡೆದ ಶನಿವಾರ (ಜ. 11) ಕೊಳೆಗೇರಿ ನಿವಾಸಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ʼʼಕೊಳೆಗೇರಿಗಳ ನಿವಾಸಿಗಳಿಗೆ ಎಎಪಿ ಸರ್ಕಾರ ಅನ್ಯಾಯ ಎಸಗಿದೆ. ಶುದ್ಧ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ವಂಚಿಸಿದೆʼʼ ಎಂದು ದೂರಿದ್ದಾರೆ.

“ದಿಲ್ಲಿಯ ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಕಲುಷಿತ ನೀರನ್ನು ಪೂರೈಸಲಾಗುತ್ತಿದೆ. ಕೊಳೆಗೇರಿಗಳಲ್ಲಿ ವಾಸಿಸುವ ಜನರು ದಿಲ್ಲಿ ವಿಶ್ವದ ಅತ್ಯಂತ ಕಲುಷಿತ ನಗರ ಏಕೆ ಎಂದು ನಮ್ಮನ್ನು ಕೇಳುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲ್ ದಿಲ್ಲಿಯಲ್ಲಿ ಏನು ಮಾಡಿದ್ದಾರೆ? ನಿಮಗೆ ಸೌಲಭ್ಯ ನೀಡಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಹಿಂದೆ ಸರಿಯಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಪ್ರಯೋಜನ ಒದಗಿಸಲಿದೆ” ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

3.58 ಕೋಟಿಗಿಂತ ಅಧಿಕ ಮನೆ

ದೇಶದ 3.58 ಕೋಟಿಗಿಂತ ಅಧಿಕ ಬಡವರಿಗೆ ಪ್ರಧಾನಿ ನರೇಂದ್ರ ಮೋದಿ ಮನೆ ಒದಗಿಸಿದ್ದಾರೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ. ʼʼಕೊಳೆಗೇರಿಯಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಉತ್ತಮ ಮನೆ ಒದಗಿಸುತ್ತೇವೆ. ಇದು ಮೋದಿಯ ಗ್ಯಾರಂಟಿ. ಅರವಿಂದ್‌ ಕೇಜ್ರಿವಾಲ್‌ ಅವರ ಶೀಷ್‌ ಮಹಲ್‌ನ ಶೌಚಾಲಯ ಇಡೀ ಕೊಳಗೇರಿಗಿಂತಲೂ ದುಬಾರಿ ಎನಿಸಿಕೊಂಡಿದೆʼʼ ಎಂದು ಟೀಕಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಕೊಳೆಗೇರಿ ನಿವಾಸಿಗಳನ್ನು ಮೋಸಗೊಳಿಸುತ್ತಿದ್ದಾರೆ ಮತ್ತು ದಿಲ್ಲಿಯನ್ನು ʼನರಕʼವನ್ನಾಗಿ ಪರಿವರ್ತಿಸಿದ್ದಾರೆ ಎಂದೂ ಆರೋಪಿಸಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಶೀಷ್‌ ಮಹಲ್‌ ಅನ್ನು 3 ಬಾರಿ ನವೀಕರಣಗೊಳಿಸಲಾಗಿದ್ದು, ಇದರಿಂದ ಒಟ್ಟು 33.66 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ.

“ದೇಶದ ಉಳಿದ ಭಾಗಗಳು ಪ್ರಗತಿ ಸಾಧಿಸಿದ್ದರೆ ದಿಲ್ಲಿ ಮಾತ್ರ ಅವ್ಯವಸ್ಥೆಯಲ್ಲಿ ಮುಳುಗಿದೆ. ನಳ್ಳಿಯನ್ನು ತೆರೆದರೆ ಕೊಳಚೆ ನೀರು ಹೊರಬರುತ್ತದೆ, ಕಿಟಕಿಯನ್ನು ತೆರೆದರೆ ಕೆಟ್ಟ ವಾಸನೆ ರಾಚುತ್ತದೆ, ಹೊರಗೆ ಹೆಜ್ಜೆ ಹಾಕಿದರೆ ಹೊಂಡಗಳಿಂದ ಕೂಡಿದ ರಸ್ತೆ ನಿಮ್ಮನ್ನು ಸ್ವಾಗತಿಸುತ್ತದೆ. ಛತ್ ಪೂಜೆಯ ಸಮಯದಲ್ಲಿಯೂ ಕಲುಷಿತ ಯಮುನಾ ನದಿಯಿಂದಾಗಿ ಜನರಿಗೆ ಸರಿಯಾಗಿ ಸ್ನಾನ ಮಾಡಲು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಎಎಪಿ ದಿಲ್ಲಿಯನ್ನು ನರಕವನ್ನಾಗಿಸಿದೆ” ಎಂದು ಅವರು ಹೇಳಿದ್ದಾರೆ.

ಎಎಪಿ ತಿರುಗೇಟು

ಈ ಆರೋಪಗಳಿಗೆ ಎಎಪಿ ತಿರುಗೇಟು ನೀಡಿದೆ. ಅಮಿತ್‌ ಶಾ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ ಮತ್ತು ಇದಕ್ಕೆ ಜನರು ಮತದಾನದ ಮೂಲಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ. ʼʼಅಮಿತ್‌ ಶಾ ಅವರು ನನ್ನನ್ನು ಮತ್ತು ದಿಲ್ಲಿಯ ಜನರನ್ನು ಸಾಕಷ್ಟು ನಿಂದಿಸಿದ್ದಾರೆ. ದಿಲ್ಲಿಯ ಜನರು ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡುತ್ತಾರೆ. ಅಮಿತ್ ಶಾ ಕೊಳೆಗೇರಿ ನಿವಾಸಿಗಳಿಗೆ ಸಾಕಷ್ಟು ಸುಳ್ಳು ಹೇಳಿದ್ದಾರೆ. ಡಿ. 12ರ ಬೆಳಗ್ಗೆ ನಾನು ಕೊಳೆಗೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯ ಕೆಟ್ಟ ಉದ್ದೇಶಗಳನ್ನು ಸಂಪೂರ್ಣ ಪುರಾವೆಗಳೊಂದಿಗೆ ಬಹಿರಂಗಪಡಿಸುತ್ತೇನೆ” ಎಂದು ಅವರು ಸವಾಲು ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Assembly Election 2025: ದಿಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟ; ಫೆ. 5ರಂದು ಒಂದೇ ಹಂತದಲ್ಲಿ ಮತದಾನ

Leave a Reply

Your email address will not be published. Required fields are marked *