ಬೆಂಗಳೂರು: ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಆಪ್ತನೆಂದು ಹೇಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ರಾಣೆಬೆನ್ನೂರು ಮೂಲದ ಪಿ.ಎಚ್.ಅಡವಿ ಎಂಬವರಿಗೆ ಕೆಲಸ ಕೊಡಿಸುವುದಾಗಿ 6 ಲಕ್ಷ ರೂ. ಪಡೆದು ವಂಚಿಸಿರುವ ಆರೋಪದಡಿ ವೀರೇಶ್ ಕೆ.ಪಿ ಎಂಬಾತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ (Fraud Case) ದಾಖಲಾಗಿದೆ.
ಪಿ.ಎಚ್.ಅಡವಿ ಅವರಿಗೆ 2023ರಲ್ಲಿ ವೀರೇಶ್ ಪರಿಚಯವಾಗಿತ್ತು. ‘ತಾನು ಅರಣ್ಯ ಸಚಿವರ ಆಪ್ತ’ ಎಂದು ಹೇಳಿಕೊಂಡಿದ್ದ ವೀರೇಶ್, ಅದೇ ವರ್ಷ ಡಿಸೆಂಬರ್‌ನಲ್ಲಿ ‘ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನಾನು ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸಿದ್ದ. ಅದರಂತೆ ಅಡವಿಯವರು ತಮ್ಮ ಮಕ್ಕಳು, ಸಹೋದರನ ಮಕ್ಕಳು ಸೇರಿ ಮೂವರಿಂದ ಧಾರವಾಡ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಿಗೆ ಅರ್ಜಿ ಸಲ್ಲಿಕೆ ಮಾಡಿಸಿದ್ದರು. ಕೆಲಸ ಕೊಡಿಸಲು ಮುಂಗಡ ಹಣ ಪಾವತಿಸಬೇಕು ಎಂದಿದ್ದ ವೀರೇಶ್, ವಿಕಾಸಸೌಧದ ಬಳಿ ಸೇರಿ ವಿವಿಧೆಡೆ ಹಂತ ಹಂತವಾಗಿ 6 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆದರೆ, ಹಣ ಪಡೆದು ಒಂದು ವರ್ಷ ಕಳೆದರೂ ಸಹ ಕೆಲಸ ಕೊಡಿಸದಿದ್ದಾಗ ಅನುಮಾನಗೊಂಡು ವಿರೇಶ್ನನ್ನು ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ವಂಚಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧ ಪೊಲೀಸ್ ಠಾಣೆಗೆ ಅಡವಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | R Ashok: ಡಿನ್ನರ್ ಸಭೆಗಳಲ್ಲೇ ನಿರತರಾದ ಸಿಎಂ-ಸಚಿವರು; ರೈತರ ಕಷ್ಟ ಕೇಳುವವರಿಲ್ಲ: ಆರ್. ಅಶೋಕ್ ಆರೋಪ
ಕೆಪಿಸಿಎಲ್ ನೇಮಕಾತಿ; ಕನ್ನಡ ಭಾಷೆ ಮರು ಪರೀಕ್ಷೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಹೈದರಾಬಾದ್-ಕರ್ನಾಟಕ ಮತ್ತು ಇತರೆ ಕೋಟಾಗಳ ಅಡಿಯಲ್ಲಿ ಜೂನಿಯರ್ ಎಂಜಿನಿಯರ್ (ಮೆಕ್ಯಾನಿಕಲ್) ಮತ್ತು ಸಹಾಯಕ ಎಂಜಿನಿಯರ್(ಮೆಕ್ಯಾನಿಕಲ್) ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ‘ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ (ಕೆಪಿಸಿಎಲ್-KPCL Recruitment) ಹೈಕೋರ್ಟ್ ಆದೇಶಿಸಿದೆ.
ನೇಮಕಾತಿ ಅಧಿಸೂಚನೆಯು ಕನ್ನಡ ಭಾಷಾ ಪರೀಕ್ಷೆಗೆ ಗರಿಷ್ಠ 150 ಅಂಕಗಳನ್ನು ಸ್ಪಷ್ಟವಾಗಿ ಸೂಚಿಸಿದ್ದರೂ, ಈಗಾಗಲೇ ನಡೆಸಲಾದ ಪರೀಕ್ಷೆಯ ನಂತರ ಅರ್ಹತಾ ಅಂಕಗಳಾಗಿ ಕನಿಷ್ಠ 50 ಅಂಕಗಳನ್ನು ಏಕಪಕ್ಷೀಯವಾಗಿ ನಿಗದಿಪಡಿಸಿರುವುದು ನ್ಯಾಯಯುತವಾಗಿಲ್ಲ ಅಥವಾ ಪಾರದರ್ಶಕ ಕ್ರಮವಲ್ಲ ಎಂದು ಕೋರ್ಟ್ ಹೇಳಿದೆ.
ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳಿಗೆ ಬದಲಾಗಿ 36 ಅಂಕಗಳನ್ನು ಗಳಿಸಿದ್ದಾರೆ ಎಂಬ ಕಾರಣಕ್ಕೆ ವಿಜಯಪುರ ಜಿಲ್ಲೆಯ ಗೀತಾ ಚವಾಣ್ ಅವರ ಆಯ್ಕೆಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರು, ಪರೀಕ್ಷೆ ನಡೆಸಿದ ನಂತರ ನಿಗದಿಪಡಿಸಲಾದ ಕನಿಷ್ಠ 50 ಅಂಕಗಳ ಅರ್ಹತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸೇವಾ (ಕೇಡರ್, ನೇಮಕಾತಿ, ಪ್ರೊಬೇಷನ್, ಬಡ್ತಿ ಮತ್ತು ಹಿರಿತನ) ನಿಯಮಗಳು, 1988 ರ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಮತ್ತೊಮ್ಮೆ ಕನ್ನಡ ಭಾಷಾ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.