Sunday, 12th January 2025

Novak Djokovic: ಆಹಾರಕ್ಕೆ ವಿಷ ಬೆರೆಸಿದ್ದರು: ಜೋಕೋವಿಕ್‌ ಗಂಭೀರ ಆರೋಪ

ಮೆಲ್ಬರ್ನ್: ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಾಗಿರುವ ಆಸ್ಟ್ರೇಲಿಯನ್‌ ಓಪನ್‌ಗೆ(Australian Open) ಇಂದು(ಭಾನುವಾರ) ಅದ್ದೂರಿ ಚಾಲನೆ ಸಿಕ್ಕಿದೆ. 10 ಬಾರಿಯ ಚಾಂಪಿಯನ್​ ನೊವಾಕ್​ ಜೋಕೊವಿಕ್(Novak Djokovic)​ 25ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನ ಹಂಬಲದಲ್ಲಿದ್ದಾರೆ. ಆದರೆ ಟೂರ್ನಿಗೂ ಮುನ್ನವೇ ಜೋಕೊ ಮಾಡಿರುವ ಗಂಭೀರ ಆರೋಪವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜೋಕೊವಿಕ್, 2022ರ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ ವೇಳೆ ತಮ್ಮ ಆಹಾರಕ್ಕೆ ವಿಷ ಬೆರೆಸಲಾಗಿತ್ತು ಎಂದು ಆರೋಪ ಮಾಡಿದ್ದಾರೆ. ‘ಮೆಲ್ಬರ್ನ್‌ನ ಹೋಟೆಲ್‌ನಲ್ಲಿದ್ದಾಗ ನನ್ನ ಆಹಾರಕ್ಕೆ ಸೀಸ ಹಾಗೂ ಪಾದರಸ ಬೆರೆಸಲಾಗಿತ್ತು. ಇದರಿಂದಾಗಿ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು. ಸರ್ಬಿಯಾಗೆ ಮರಳಿದ ಬಳಿಕ ಪರೀಕ್ಷೆ ಮಾಡಿಸಿದಾಗ ನನ್ನ ದೇಹದಲ್ಲಿ ಭಾರಿ ಪ್ರಮಾಣದ ಲೋಹ ಪತ್ತೆಯಾಗಿತ್ತು. ಆಹಾರದಲ್ಲೇ ಸೀಸ, ಪಾದರಸ ಬೆರೆಸಿದ್ದು ಆಗ ಗೊತ್ತಾಯಿತು. ಆದರೆ ಈ ಬಗ್ಗೆ ನಾನು ಯಾವತ್ತೂ ಸಾರ್ವಜನಿಕವಾಗಿ ಮಾತನಾಡಿಲ್ಲ’ ಎಂದು ಆರೋಪಿಸಿದ್ದಾರೆ.

2022ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಪಾಲ್ಗೊಳ್ಳಲು ಜೋಕೋ ಮೆಲ್ಬರ್ನ್‌ಗೆ ಆಗಮಿಸಿದ್ದರು. ಆದರೆ ಕೋವಿಡ್‌ ಲಸಿಕೆ ಹಾಕಲು ನಿರಾಕರಿಸಿದ್ದಕ್ಕೆ ಅವರಿಗೆ ಟೂರ್ನಿಯಲ್ಲಿ ಆಡಲು ಅವಕಾಶ ನೀಡದೆ ಅವರನ್ನು ಮೆಲ್ಬರ್ನ್‌ನಲ್ಲೇ ದಿಗ್ಬಂಧನದಲ್ಲಿರಿಸಿ ಬಳಿಕ ಗಡೀಪಾರು ಮಾಡಲಾಗಿತ್ತು.

2024ರಲ್ಲಿ ಒಂದೂ ಗ್ರಾಂಡ್​ ಸ್ಲಾಂ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ವಿಲರಾಗಿದ್ದ 37 ವರ್ಷದ ಜೋಕೋ, 2023ರ ಬಳಿಕ ಮತ್ತೊಮ್ಮೆ ಮೆಲ್ಬೋರ್ನ್​ನಲ್ಲಿ ಚಾಂಪಿಯನ್​ ಪಟ್ಟವೇರುವ ತವಕದಲ್ಲಿದ್ದಾರೆ. ​ಜೋಕೊವಿಕ್​ ಗೆದ್ದರೆ 25ನೇ ಗ್ರಾಂಡ್​ ಸ್ಲಾಂನೊಂದಿಗೆ 100ನೇ ಎಟಿಪಿ ಟೂರ್​ ಪ್ರಶಸ್ತಿ ಗೆದ್ದ ಸಾಧನೆಯನ್ನೂ ಮಾಡಲಿದ್ದಾರೆ. ಜಿಮ್ಮಿ ಕಾನರ್ಸ್​ (109) ಮತ್ತು ರೋಜರ್​ ಫೆಡರರ್​ (103) ಈ ಸಾಧನೆ ಮಾಡಿರುವ ಮೊದಲಿಗರು. ಜೋಕೋ ಆರಂಭಿಕ ಸುತ್ತಿನಲ್ಲಿ ಭಾರತ ಮೂಲದ ನಿಶೇಶ್‌ ಬಸವರೆಡ್ಡಿ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯ ಸೋಮವಾರ ನಡೆಯಲಿದೆ.

Leave a Reply

Your email address will not be published. Required fields are marked *