ಅದ್ಭುತವಾದ ಕಲಾಕೃತಿಗಳನ್ನು ನೋಡಿದರೆ ಎಲ್ಲರ ಹುಬ್ಬು ಮೇಲೇರುತ್ತದೆ. ಒಂದು ಸುಂದರವಾದ ಕಲಾಕೃತಿಯು ವಿವಿಧ ಬಣ್ಣಗಳಿಂದ ತುಂಬಿಕೊಂಡು ಕಣ್ಣಿಗೆ ಆನಂದವನ್ನು ನೀಡುತ್ತದೆ. ಕಲಾಕೃತಿ ಪೂರ್ಣವಾಗುವುದಕ್ಕೆ ಬಣ್ಣ ಕೂಡ ಅದ್ಭುತವಾದ ಸಾಥ್ ನೀಡುತ್ತದೆ. ಇಲ್ಲೊಬ್ಬ ಕಲಾವಿದ ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿಯಂತಹ ದೈನಂದಿನ ಅಡುಗೆಯಲ್ಲಿ ಬಳಸುವಂತಹ ಮಸಾಲೆ ಪದಾರ್ಥಗಳನ್ನು ಬಳಸಿ ಮಹಿಳೆಯ ಅದ್ಭುತವಾದ ಭಾವಚಿತ್ರವನ್ನು ಬಿಡಿಸಿದ್ದಾರೆ. ಪಿಎಸ್ ರಾಥೋರ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಕಲಾಕೃತಿಯು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದಂತೂ ನಿಜ!
ಇಂತಹ ಮಸಾಲೆಗಳನ್ನು ಬಳಸಿ ಚಿತ್ರ ಬಿಡಿಸಲು ರಾಥೋರ್ ಅವರಿಗೆ ಸ್ಫೂರ್ತಿ ತುಂಬಿದ್ದು ಅವರ ಅಭಿಮಾನಿಯೊಬ್ಬರು ಬರೆದ ಸಂದೇಶವಂತೆ! “ನಾನು ಚಿತ್ರಕಲೆಯನ್ನು ಇಷ್ಟಪಡುತ್ತೇನೆ. ಆದರೆ ನಿಮ್ಮಂತೆ ನನ್ನ ಬಳಿ ಉತ್ತಮ ಬಣ್ಣಗಳಿಲ್ಲ” ಎಂದು ಅಭಿಮಾನಿ ಬರೆದಿದ್ದರು. ಇದರಿಂದ ಪ್ರಭಾವಿತರಾದ ರಾಥೋರ್, ಸಂಪನ್ಮೂಲಗಳ ಕೊರತೆಯನ್ನೂ ಮೀರಿ ಸಾಧಿಸಬೇಕು ಎಂದು ತೋರಿಸಲು ಇಂತಹ ಅಸಾಧಾರಣವಾದುದ್ದನ್ನು ರಚಿಸಲು ನಿರ್ಧರಿಸಿದೆ ಎಂದಿದ್ದಾರೆ.
ಈ ವಿಡಿಯೊ ಜೊತೆಗೆ ರಾಥೋರ್ “ನಿಮ್ಮ ಆಸೆ ಎಲ್ಲಾ ಅಡೆತಡೆಗಳಿಗಿಂತ ದೊಡ್ಡದಾಗಿರಬೇಕು.” ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ರಾಥೋರ್ ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿದ್ದಾರೆ. ಮತ್ತು ಭಾವಚಿತ್ರವನ್ನು ಬಿಡಿಸಲು ಪೆನ್ಸಿಲ್ ಬದಲು ಬೆಂಕಿಕಡ್ಡಿಗಳನ್ನು ಬಳಸಿದ್ದಾರೆ. ಬೆಂಕಿ ಕಡ್ಡಿಗೆ ಬೆಂಕಿ ಹೊತ್ತಿಸಿದಾಗ ಅದರಿಂದ ಬರುವ ಕಪ್ಪು ಬಣ್ಣದಿಂದ ಚಿತ್ರ ಬಿಡಿಸಿದ್ದಾರೆ.
“ಅಭಿಮಾನಿಯ ಕಾಮೆಂಟ್ ನೋಡಿದ ಕೂಡಲೇ ನಾನು ಏನನ್ನಾದರೂ ಚಿತ್ರಿಸುವ ಬಗ್ಗೆ ಯೋಚಿಸಿದೆ. ಬಣ್ಣ ನೀಡಲು ಅರಿಶಿನ ಮತ್ತು ಖಾರದಪುಡಿ ಮತ್ತು ಚಿತ್ರ ಬಿಡಿಸಲು ಬೆಂಕಿಕಡ್ಡಿಗಳನ್ನು ಬಳಸಲಾಗಿದೆ” ಎಂದು ರಾಥೋರ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಈ ಕಲಾಕೃತಿಯು ಸೋಶಿಯಲ್ ಮೀಡಿಯಾ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತ್ತು.
ಈ ಸುದ್ದಿಯನ್ನೂ ಓದಿ:ಚಿನ್ನದ ವ್ಯಾಪಾರಿ ಮೇಲೆ ಫೈರಿಂಗ್- ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, “ಇದು ನಂಬಲಾಗದು. ಕಲೆಗೆ ನಿಜವಾಗಿಯೂ ಯಾವುದೇ ಮಿತಿಗಳಿಲ್ಲ!” ಎಂದಿದ್ದಾರೆ. ಇನ್ನೊಬ್ಬರು “ಹ್ಯಾಟ್ಸ್ ಆಫ್!” ಎಂದಿದ್ದಾರೆ. ಇತರರು ರಾಥೋರ್ ಅವರ ಪ್ರತಿಭೆಯನ್ನು ಹೊಗಳಿದ್ದಾರೆ, “ನಿಮ್ಮ ಸಂದೇಶ ಮತ್ತು ಕಲೆ ತುಂಬಾ ಸ್ಪೂರ್ತಿದಾಯಕವಾಗಿದೆ” ಎಂದು ಹೇಳಿದ್ದಾರೆ.