ಕೇಶವಪ್ರಸಾದ್ ಬಿ.
ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಇಳಿಸಲು ಮೀನಾಮೇಷ ಎಣಿಸುತ್ತಿರುವುದು, ಆರ್ಥಿಕ ನೀತಿಯನ್ನು ಬಿಗಿಗೊಳಿಸುವ ಮುನ್ಸೂಚನೆ ನೀಡಿರುವುದು, ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿರುವುದು, ಅಮೆರಿಕದ ಸಾಲಪತ್ರಗಳು 4.7% ಆದಾಯ ನೀಡುತ್ತಿರುವುದು, ಡಾಲರ್ ಎದುರು ರೂಪಾಯಿಯ ಅಪಮೌಲ್ಯ ಮತ್ತು ಆರ್ಥಿಕತೆಯ ಮುನ್ನೋಟ ಮಂದಗತಿಯಲ್ಲಿ ಇರುವುದರಿಂದ ಕಳೆದ ವಾರ ನಿಫ್ಟಿ ಇಳಿಕೆಯ ಹಾದಿಯಲ್ಲಿತ್ತು. ಈ ವಾರ ಕೂಡ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ (Stock Market outlook).
ಕಾರ್ಪೊರೇಟ್ ಕಂಪನಿಗಳ ಮೂರನೇ ತ್ರೈಮಾಸಿಕದ ಫಲಿತಾಂಶಗಳು, ಮಾರುಕಟ್ಟೆಯ ಏರಿಳಿತ, ವಿದೇಶಿ ಹೂಡಿಕೆಯ ಹೊರ ಹರಿವು, ಕಚ್ಚಾ ತೈಲ ದರಗಳು ಈ ವಾರ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಟೆಕ್ನಿಕಲ್ ಇಂಡಿಕೇಟರ್ಗಳು ಬಿಯರಿಶ್ ಸೆಂಟಿಮೆಂಟ್ ಅನ್ನು ಬಿಂಬಿಸಿವೆ. ನಿಫ್ಟಿಗೆ 23,200-23,300 ಅಂಕಗಳ ಮಟ್ಟದಲ್ಲಿ ನಿರ್ಣಾಯಕ ಸಪೋರ್ಟ್ ಸಿಗುವ ನಿರೀಕ್ಷೆ ಇದೆ.
ಈ ವಾರ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ಪ್ರಮುಖ ವಿದ್ಯಮಾನಗಳು ಇಂತಿವೆ.
ತಾಂತ್ರಿಕ ಅಂಶಗಳು: ನಿಫ್ಟಿಗೆ ಈಗ 23,200-23,300ರ ಮಟ್ಟದಲ್ಲಿ ನಿರ್ಣಾಯಕ ಸಪೋರ್ಟ್ ಲಭಿಸಿದ್ದು, ಒಂದು ವೇಳೆ ಇದು ಮುರಿದು ಬಿದ್ದರೆ, ಷೇರುಗಳ ಮಾರಾಟ ಮತ್ತಷ್ಟು ಹೆಚ್ಚಬಹುದು. ಆಗ ಸೂಚ್ಯಂ 22,900ಕ್ಕೆ ಇಳಿಯಬಹುದು. ಮೇಲ್ಮುಖವಾಗಿ 23,850ರಲ್ಲಿ ಪ್ರಬಲ ಪ್ರತಿರೋಧ ವ್ಯಕ್ತವಾಗಬಹುದು.
ತ್ರೈಮಾಸಿಕ ಫಲಿತಾಂಶ: ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಎಚ್ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಎಲ್ಟಿಐ ಮೈಂಡ್ಟ್ರೀ, ಜಿಯೊ ಫೈನಾನ್ಷಿಯಲ್ ಕಂಪನಿಗಳ ಕ್ಯೂ 3 ರಿಸಲ್ಟ್ ಬರಲಿದ್ದು, ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಶನಿವಾರ ಪ್ರಕಟವಾಗಲಿರುವ ಅವೆನ್ಯೂ ಸೂಪರ್ ಮಾರ್ಟ್ (ಡಿ-ಮಾರ್ಟ್) ರಿಸಲ್ಟ್ ಕೂಡ ಪ್ರಭಾವ ಬೀರಬಹುದು.
ಎಫ್ಐಐ ಹರಿವು: ಜಾಗತಿಕ ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ವರ್ಷಾಂತ್ಯದ ರಜಾ ದಿನಗಳನ್ನು ಮುಗಿಸಿ, ಕಳೆದ ವಾರ ಷೇರುಗಳನ್ನು ಖರೀದಿಸಿದ್ದರು. ಹೀಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಎಫ್ಐಐಗಳು ನಿವ್ವಳ ಸೆಲ್ಲರ್ ಆಗಿದ್ದರು. 16,854 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಹೀಗಿದ್ದರೂ ದೇಶೀಯ ಹೂಡಿಕೆದಾರರು ಷೇರುಗಳನ್ನು ಭರ್ಜರಿಯಾಗಿ ಖರೀದಿಸಿದ್ದರು. ಹೀಗಾಗಿ ನಿವ್ವಳ ಒಳ ಹರಿವು 21,682 ಕೋಟಿ ರೂ.ನಷ್ಟಿತ್ತು.
ಡಾಲರ್ ಎಫೆಕ್ಟ್: ಡಾಲರ್ ಇಂಡೆಕ್ಸ್ ಕಳೆದ ಎರಡು ವರ್ಷಗಳಲ್ಲಿಯೇ ಉನ್ನತ ಮಟ್ಟಕ್ಕೆ ಏರಿತ್ತು. ಡಾಲರ್ ಎದುರು ರೂಪಾಯಿ ಕಳೆದ ಶುಕ್ರವಾರ ಸಾರ್ವಕಾಲಿಕ ಕುಸಿತಕ್ಕೀಡಾಗಿತ್ತು. ರೂಪಾಯಿಯು 85.96 ರೂ.ಗೆ ಇಳಿದಿತ್ತು. ಈ ವಾರವೂ ರೂಪಾಯಿ ದುರ್ಬಲವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಕಚ್ಚಾ ತೈಲ: ಕಳೆದ ವಾರ ಕಚ್ಚಾ ತೈಲ ದರ ಏರುಗತಿಯಲ್ಲಿತ್ತು. ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 79 ಡಾಲರ್ನಷ್ಟಿತ್ತು.
ಈ ಸುದ್ದಿಯನ್ನೂ ಓದಿ: Stock Market: ಕೊನೆಗೂ ಸೆನ್ಸೆಕ್ಸ್, ನಿಫ್ಟಿ ಕುಸಿತಕ್ಕೆ ಬ್ರೇಕ್, ಎನ್ಟಿಪಿಸಿ ಗ್ರೀನ್ ಎನರ್ಜಿ ಐಪಿಒ ಶುರು