Monday, 13th January 2025

Kiran Upadhyay Column: ರಾಮ ರಾಮಾ…ಇದೆಂಥ ಅವಸ್ಥೆ…!

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

ಅವು ನಮ್ಮ ಬಾಲ್ಯದ ದಿನಗಳು. ರಾಮಾಯಣದಂಥ ಪೌರಾಣಿಕ ಕಥೆ ಮೊತ್ತಮೊದಲ ಬಾರಿಗೆ ಕಿರುತೆರೆಯಲ್ಲಿ
ಪ್ರಸಾರವಾಯಿತು. ಅದುವರೆಗೂ ಹಿರಿತೆರೆಯಲ್ಲಿ ಮಾತ್ರ ಪೌರಾಣಿಕ, ಐತಿಹಾಸಿಕ ಚಿತ್ರಗಳು ಬರುತ್ತಿದ್ದವೇ ವಿನಾ ಕಿರುತೆರೆಯಲ್ಲಿ ಇದು ಮೊದಲ ಪ್ರಯೋಗವಾಗಿತ್ತು. ಜಾಹೀರಾತು ಸೇರಿ ಒಂದು ಗಂಟೆಗೆ ನಿಗದಿಯಾಗಿದ್ದ ಕಾರ್ಯ‌ ಕ್ರಮದಲ್ಲಿ 45 ನಿಮಿಷ ಮಾತ್ರ ಕಥೆಗೆ ಮೀಸಲಾಗಿರುತ್ತಿತ್ತು. ಈ ನಿಟ್ಟಿನಲ್ಲಿ 1987ರ ಜನವರಿ 25 ಕಿರುತೆರೆಯ
ಇತಿಹಾಸದಲ್ಲಿ ನೆನಪಿನಲ್ಲಿಡಬೇಕಾದ ಒಂದು ದಿನ.

ಅಂದು ಆರಂಭವಾಗಿ 1988ರ ಜುಲೈ 31ರವರೆಗೆ, ಒಟ್ಟೂ 78 ಕಂತುಗಳಲ್ಲಿ ರಾಮಾಯಣ ಧಾರಾವಾಹಿ ದೂರ ದರ್ಶನದಲ್ಲಿ ಪ್ರಸಾರವಾಯಿತು. ಆರಂಭದಲ್ಲಿ ಇದನ್ನು ಒಂದು ವರ್ಷದ ಅವಧಿಗೆ, 52 ಕಂತಿಗೆ ವಿನ್ಯಾಸ ಗೊಳಿಸ ಲಾಗಿತ್ತು. ಆದರೆ ಜನಪ್ರಿಯತೆ ಮತ್ತು ಬೇಡಿಕೆಯಿಂದಾಗಿ ಇದನ್ನು 3 ಬಾರಿ ವಿಸ್ತರಿಸಿ, ಅಂತಿಮವಾಗಿ 78 ಸಂಚಿಕೆಗಳಲ್ಲಿ ಬಿತ್ತರಿಸಲಾಯಿತು.

ನಿರ್ಮಾಪಕರಾಗಿದ್ದ ರಮಾನಂದ ಸಾಗರ್ ರಾಮಾಯಣದ ಆ ದಿನಗಳಲ್ಲಿ ಧಾರಾವಾಹಿಯ ಪ್ರತಿ ಸಂಚಿಕೆಗೆ 9 ಲಕ್ಷ ರುಪಾಯಿ ಪಡೆದಿದ್ದರು. ಆ ಕಾಲದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಟಿವಿ ಕಾರ್ಯಕ್ರಮ ಎಂದು ಅದನ್ನು ಪರಿಗಣಿಸಲಾಗಿತ್ತು. ಆದರೆ ಅದರಿಂದ ದೂರದರ್ಶನಕ್ಕೆ ಲಾಭವೇ ಆಗುತ್ತಿತ್ತು. ಏಕೆಂದರೆ ಪ್ರತಿ ಗಂಟೆಗೆ 40 ಲಕ್ಷ ರುಪಾಯಿಗಳನ್ನು ಜಾಹೀರಾತಿನಿಂದಲೇ ದೂರದರ್ಶನ ಗಳಿಸುತ್ತಿತ್ತು.

ಆ ಕಾಲದಲ್ಲಿ 65 ಕೋಟಿ ಜನ ರಾಮಾಯಣ ಧಾರಾವಾಹಿಯನ್ನು ವೀಕ್ಷಿಸಿದ್ದರು. ಬಿಬಿಸಿಯ ಒಂದು ವರದಿಯ ಪ್ರಕಾರ, ಆ ಸಮಯದಲ್ಲಿ 82 ಪ್ರತಿಶತ ಜನ (ಟಿವಿ ನೋಡುವವರಲ್ಲಿ) ಈ ಧಾರಾವಾಹಿಯನ್ನು ನೋಡುತ್ತಿದ್ದರಂತೆ.
2019-20ರ ಕೋವಿಡ್ ಸಂದರ್ಭದಲ್ಲಿ ಇದೇ ಧಾರಾವಾಹಿ ಮರುಪ್ರಸಾರವಾದಾಗ 250 ಕೋಟಿ ಜನ (ಎಲ್ಲ ಸಂಚಿಕೆ ಸೇರಿಸಿ) ವೀಕ್ಷಿಸಿದರು ಎಂದು ವರದಿ ಹೇಳುತ್ತದೆ. ಏಪ್ರಿಲ್ 16, 2020ರಂದು, ಒಂದೇ ದಿನ ಸುಮಾರು 7.5 ಕೋಟಿಗೂ ಹೆಚ್ಚು ಜನ ಈ ಧಾರಾವಾಹಿಯನ್ನು ನೋಡಿದ್ದು ವಿಶ್ವ ದಾಖಲೆಯಾಗಿದೆ ಎಂದರೆ ಅದರ ಜನಪ್ರಿಯತೆಯ ಅರಿವಾಗುತ್ತದೆ.

ಅಂದು ರಾಮಾಯಣ ಧಾರಾವಾಹಿಯಲ್ಲಿ ರಾಮನಾಗಿ ಅಭಿನಯಿಸಿದ ಅರುಣ್ ಗೋವಿಲ್, ಸೀತೆಯಾಗಿ ಅಭಿನಯಿಸಿದ ದೀಪಿಕಾ ಚಿಕಾಲಿಯ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಜನ‌ ಕಾಲಿಗೆ ಬೀಳುವಷ್ಟು ಜನಪ್ರಿಯರಾಗಿದ್ದರು. ಆ ಜನಪ್ರಿಯತೆಯಿಂದಾಗಿ ಇಬ್ಬರೂ ರಾಜಕೀಯವನ್ನು ಪ್ರವೇಶಿಸಿ ಚುನಾವಣೆಯನ್ನೂ
ಗೆದ್ದರು. ರಾವಣನ ಪಾತ್ರ ಮಾಡಿದ ಅರವಿಂದ ತ್ರಿವೇದಿಯೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.

ಇದು ಆ ಕಾಲದಲ್ಲಿ ರಾಮಾಯಣ ಮತ್ತು ಅದರ ಪಾತ್ರಧಾರಿಗಳು ಜನರ ಮೇಲೆ ಬೀರಿದ ಪರಿಣಾಮದ ವೈಖರಿ. ಅಂದು ತಾವು ಮಾಡುವ ಪಾತ್ರದಿಂದ, ತಮ್ಮ ಅಭಿನಯದಿಂದ ಕಲಾವಿದರು ಪ್ರಸಿದ್ಧಿಗೆ ಬರುತ್ತಿದ್ದರು. ಆ ದಿನ‌ ಗಳಲ್ಲಿ ಭಾನುವಾರ ಬೆಳಗ್ಗೆ, ‘ಸೀತಾರಾಮ ಚರಿತ ಅತಿ ಪಾವನ್…’ ಎಂಬ ಹಾಡು ಟಿವಿಯಲ್ಲಿ ಬರುತ್ತಿದ್ದರೆ, ಮನೆ ಮುಂದಿಯೆಲ್ಲ ಟಿವಿ ಮುಂದೆ ಜಮಾಯಿಸಿ ಕುಳಿತುಕೊಳ್ಳುತ್ತಿದ್ದರು.

ಯಾವ ಕೆಲಸವೇ ಇದ್ದರೂ, ಅದೆಲ್ಲ ರಾಮಾಯಣ ಮುಗಿದ ನಂತರವೇ. ಹಿರಿಯ ನಟ ಅಶೋಕ್ ಕುಮಾರ್ ಮತ್ತು ರಮಾನಂದ ಸಾಗರ್ ಅಂದಿನ ಸಂಚಿಕೆಯ ಕಥೆಯ ಸಾರಾಂಶವನ್ನು ಹೇಳುತ್ತಿದ್ದರೆ, ನಮ್ಮದೇ ಮನೆಯ ಹಿರಿಯ ಜೀವವೊಂದು ರಾಮಾಯಣದ ಕಥೆ ಹೇಳುತ್ತಿರುವ ಅನುಭವ ಆಗುತ್ತಿತ್ತು. ಈ ಒಂದು ಅದ್ಭುತವಾದ, ಮರೆಯ ಲಾಗದಂಥ ಧಾರಾವಾಹಿಯನ್ನು ದೂರದರ್ಶನದಲ್ಲಿ ಬಿತ್ತರಿಸಲು ಕಾರಣರಾದವರು, ಅಂದಿನ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಎಸ್.ಎಸ್.ಗಿಲ್.

ಗಿಲ್ ಮೊದಲ ಬಾರಿ ರಮಾನಂದ ಸಾಗರ್ ಅವರನ್ನು ಸಂಪರ್ಕಿಸಿ, “ರಾಮಾಯಣದ ಕಥೆಯನ್ನು ದೂರ ದರ್ಶನದಲ್ಲಿ ಬಿತ್ತರಿಸುವುದಕ್ಕೆ ಅನುಕೂಲವಾಗುವಂತೆ ಧಾರಾವಾಹಿಯ ರೂಪದಲ್ಲಿ ನಿರ್ಮಿಸಿ ಕೊಡಿ” ಎಂದು ಕೇಳಿಕೊಂಡರು. ಅಸಲಿಗೆ ಅವರು ರಾಮಾಯಣ ಮತ್ತು ಮಹಾಭಾರತ ಎರಡನ್ನೂ ದೂರದರ್ಶನಕ್ಕೆ ಧಾರವಾಹಿಯಾಗಿ ಮಾಡಿಕೊಡಿ ಎಂದು ಕೇಳಿದ್ದರು. ರಾಮಾಯಣಕ್ಕಾಗಿ ರಮಾನಂದ ಸಾಗರ್ ಅವರನ್ನು ಕೇಳಿಕೊಂಡರೆ, ಮಹಾಭಾರತವನ್ನು ಮಾಡಿಕೊಡುವಂತೆ ಬಿ.ಆರ್.ಚೋಪ್ರಾ ಅವರನ್ನು ಕೇಳಿಕೊಂಡಿದ್ದರು.

ಮಹಾಭಾರತದ ತಯಾರಿಗೆ ಸುಮಾರು ನಾಲ್ಕು ವರ್ಷಗಳ ಸಮಯ ತೆಗೆದುಕೊಂಡಿತ್ತು. ಆದ್ದರಿಂದ ರಾಮಾಯಣ ಮೊದಲು ಪ್ರಸಾರವಾಯಿತು. ಅದು ಮುಗಿದ ನಂತರ ಮಹಾಭಾರತ ಪ್ರಸಾರಗೊಂಡಿತು. ಈ ಧಾರಾವಾಹಿಗಳ ಜನಪ್ರಿಯತೆ ಹೇಗಿತ್ತು ಎಂದರೆ, ಭಾನುವಾರ ಏನಾದರೂ ವಿದ್ಯುತ್ ವ್ಯತ್ಯಯವಾದರೆ ಜನರು ಸ್ಥಳೀಯ ವಿದ್ಯುತ್ ಮಂಡಳಿಯ ಕಚೇರಿಯನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕುವಲ್ಲಿಯವರೆಗೆ ಹೋಗು ತ್ತಿತ್ತು. ಹಿಂದಿ ಭಾಷೆಯನ್ನು ಕಡಿಮೆ ಬಳಸುವ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳು ನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿಯೂ ಶೇ.50ಕ್ಕೂ ಹೆಚ್ಚು ಜನ ಈ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದರು. ಹಿಂದೂ ಸಂಸ್ಕೃತಿ ಮತ್ತು ಆಚರಣೆಯ ಕಥೆಯಾದರೂ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದವರು ಕೂಡ ವೀಕ್ಷಿಸುತ್ತಿದ್ದ ಧಾರಾವಾಹಿ ಇದಾಗಿತ್ತು.

ಮಹಾಭಾರತದ ಸಂಪೂರ್ಣ ಸಂಭಾಷಣೆ ಬರೆದವರು ಮುಸ್ಲಿಂ ಧರ್ಮದವರಾಗಿದ್ದ ರಾಹಿ ಮಾಸೂಮ್ ರಝಾ.
ಈ ಧಾರಾವಾಹಿ ಪ್ರಸಾರವಾಗುತ್ತಿರುವ ಸಂದರ್ಭದಲ್ಲಿ ನೂರಾರು ಜನ ಟೆಲಿವಿಷನ್ ಸೆಟ್ ಸುತ್ತಲೂ ಒಟ್ಟಾಗಿ ಕುಳಿತುಕೊಳ್ಳುತ್ತಿದ್ದರು ಎನ್ನುವುದರ ಜತೆಗೆ, ಮುಂಬೈ, ದೆಹಲಿ, ಕಲ್ಕತ್ತಾ, ಚೆನ್ನೈ ನಂಥ ಅತ್ಯಂತ ಜನನಿಬಿಡ ನಗರಗಳಲ್ಲಿಯೂ ರೈಲು, ಬಸ್ಸು, ಕಾರು, ಆಟೋ ಇತ್ಯಾದಿ ಸಾರ್ವಜನಿಕ ವಾಹನಗಳ ಸಂಚಾರ ನಿಂತುಹೋಗುತ್ತಿತ್ತು.
ಅಂಗಡಿ-ಮುಂಗಟ್ಟುಗಳು ಮುಚ್ಚಿರುತ್ತಿದ್ದವು.

ರಸ್ತೆಯೆಲ್ಲ ಭಣಗುಟ್ಟುತ್ತಿತ್ತು. ಹೆಚ್ಚು ಕಮ್ಮಿ ಇಡೀ ದೇಶವೇ ಸ್ತಬ್ಧವಾಗಿರುತ್ತಿತ್ತು. ಸರಕಾರಿ ಸಭೆಗಳನ್ನು ಕೂಡ ಮುಂದೂಡಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಸಚಿವ ಸಂಪುಟ ಕೂಡ ತುರ್ತುಸಭೆಗೆ ಹಾಜರಾಗಲು ವಿಫಲ ವಾಗುತ್ತಿತ್ತು. ಕೆಲವು ವಿದೇಶಿ ಪತ್ರಕರ್ತರು, “ಭಾರತದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಕರ್ಫ್ಯೂ ಜಾರಿ ಯಲ್ಲಿರುವಂತೆ ಭಾಸವಾಗುತ್ತದೆ” ಎಂದು ವರದಿ ಮಾಡಿದ್ದೂ ಇದೆ.

ಇದ್ದ ಬಿದ್ದ ಜನರೆಲ್ಲ ಟೆಲಿವಿಷನ್ ಮುಂದೆ ಜಮಾಯಿಸುತ್ತಿದ್ದರು. ಜನರು ಟಿವಿಗೆ ಹಾರ ಹಾಕುತ್ತಿದ್ದರು. ರಾಮ-ಸೀತೆ ಟಿವಿಯಲ್ಲಿ ಕಂಡಾಗ ಆರತಿ ಮಾಡುವವರೂ ಇದ್ದರು. ಧಾರಾವಾಹಿ ಆರಂಭವಾದಾಗಿನಿಂದ ಮುಗಿಯುವಲ್ಲಿಯ ವರೆಗೆ ಟಿವಿ ಮುಂದೆ ಕೈಮುಗಿದು ಕುಳಿತುಕೊಳ್ಳುವವರೂ ಇದ್ದರು. ಇದರ ಯಶಸ್ಸಿನಿಂದಾಗಿ, ನಂತರದ ದಿನಗ ಳಲ್ಲಿ ಚಾಣಕ್ಯ, ಟಿಪ್ಪು ಸುಲ್ತಾನ್ ಕುರಿತ ಧಾರಾವಾಹಿಗಳೂ ಕಿರುತೆರೆಯಲ್ಲಿ ಮೂಡಿಬಂದವು.

ಇಂಥ ಧಾರಾವಾಹಿಗಳಿಗೂ ಅಂದು ಅಪಸ್ವರ ಎದ್ದಿತ್ತು. ಕೆಲವರು “ರಾಮಾಯಣ ಧಾರಾವಾಹಿಯು ಧಾರ್ಮಿಕ ಪಕ್ಷಪಾತದ ಮೇಲಿನ ದಶಕಗಳಷ್ಟು ಹಳೆಯದಾದ ನಿಷೇಧವನ್ನು ಉಲ್ಲಂಸಿದೆ” ಎಂದರು. ಕೆಲವರು “ಹಿಂದೂ ರಾಷ್ಟ್ರೀಯವಾದಿಗಳು ಈ ಅವಕಾಶವನ್ನು ಉಪಯೋಗಿಸಿಕೊಂಡರು” ಎಂದು ಬರೆದರು. “ರಾಷ್ಟ್ರೀಯ ಸ್ವಯಂಸೇ ವಕ ಸಂಘ ಮತ್ತು ಅದರ ರಾಜಕೀಯ ಸಂಘಟನೆಯಾದ ಭಾರತೀಯ ಜನತಾ ಪಕ್ಷದ ಆಶ್ರಯದಲ್ಲಿ ಇವುಗಳು ಮೂಡಿಬಂದವು” ಎಂಬ ಟೀಕೆಯೂ ಕೇಳಿಬಂದಿತ್ತು.

ಇನ್ನು ಮಹಾಭಾರತವಂತೂ ಒಂದು ಸಾಲಿನ ಸಂಭಾಷಣೆಯಿಂದಾಗಿ ಸಂಕಷ್ಟ ಎದುರಿಸಿತ್ತು. ಅದರಲ್ಲಿ ಭರತನ ಪಾತ್ರ ಮಾಡಿದ ರಾಜ್ ಬಬ್ಬರ್ ಅವರು ಹೇಳುವ, “ಮನುಷ್ಯ ತನ್ನ ಯೋಗ್ಯತೆಯಿಂದ ರಾಜನಾಗಬೇಕೇ ವಿನಾ ತನ್ನ ವಂಶದ ಆಧಾರದಿಂದಲ್ಲ” ಎಂಬ ಒಂದು ಸಂಭಾಷಣೆಯ ಸಾಲು ಅಂದಿನ ಸರಕಾರದಲ್ಲಿದ್ದವರ ನಿದ್ದೆಗೆಡಿಸಿತ್ತು. ಅಂದು ರಾಜೀವ್ ಗಾಂಧಿ ಭಾರತದ ಪ್ರಧಾನಮಂತ್ರಿಯಾಗಿದ್ದರು.

ಅದರೊಂದಿಗೆ ಧಾರಾವಾಹಿಯ ಆರಂಭದಲ್ಲಿ, ‘ಸಮಯ’ ಆಯಾ ಸಂಚಿಕೆಯ ಸಾರಾಂಶವನ್ನು ಹೇಳುವ
ಮಾತುಗಳಿದ್ದವು. ಆ ಸಂದರ್ಭದಲ್ಲಿ ತೆರೆಯ ಮೇಲೆ ಒಂದು ಚಕ್ರ ತಿರುಗುತ್ತ ಇರುತ್ತಿತ್ತು. ಅದು ಜನತಾದಳ ಪಕ್ಷದ ಚಿಹ್ನೆಯನ್ನು ಹೋಲುತ್ತದೆ ಎಂದು ಆರೋಪಿಸಿದ್ದರು. ಸಂಭಾಷಣೆಯ ಆ ಒಂದು ಸಾಲು ಮತ್ತು ಒಂದು
ಚಿಹ್ನೆ (ಚಕ್ರ) ಇವೆರಡನ್ನೂ ಧಾರಾವಾಹಿಯಿಂದ ತೆಗೆಯಬೇಕು ಎಂದು ಅಂದಿನ ಸರಕಾರವು ಅದರ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಈ ನಿರ್ಬಂಧ ಹೇರಿದ್ದಾದರೂ ಯಾವಾಗ? ಪ್ರಸಾರವಾಗುವ ಒಂದು ದಿನ ಮೊದಲು! ಮಹಾಭಾರತದ ನಿರ್ಮಾಪಕರಾದ ಬಿ.ಆರ್.ಚೋಪ್ರಾ ಅಂದು ರಾತ್ರಿ ಕೋರ್ಟಿನ ಕದ ತಟ್ಟಿದರು.

ಅಂದು ಮಧ್ಯರಾತ್ರಿ ಎರಡೂವರೆಯವರೆಗೆ ನ್ಯಾಯಾಲಯ ಇಬ್ಬರ ವಾದ ಕೇಳಿ, ಮಾರನೇ ದಿನ ಬೆಳಗ್ಗೆ ಪ್ರಸಾರ
ಮಾಡಬಹುದು ಎಂಬ ತೀರ್ಪನ್ನು ನೀಡಿತ್ತು. ಒಂದು ಕಾಲ ಇತ್ತು, ಕಲಾವಿದರು ತಾವು ಮಾಡುವ ಪಾತ್ರದಿಂದ ತಮ್ಮ ಅಭಿನಯದಿಂದ ಕೀರ್ತಿವಂತರಾಗುತ್ತಿದ್ದರು. ಇಂದು ಬಿಗ್ ಬಾಸ್ ನಂಥ ಕಾರ್ಯಕ್ರಮದಲ್ಲಿ ಪ್ರವೇಶ ಪಡೆಯಬೇಕಾದರೆ (ಅಪ)ಕೀರ್ತಿ ಪಡೆದಿರಬೇಕು. ಅಂದು ಮೊದಲ ಬಾರಿಗೆ ಗಿಲ್ ಅವರು ರಮಾನಂದ ಸಾಗರ್ ಅವರನ್ನು ಧಾರಾವಾಹಿ ನಿರ್ಮಿಸಿಕೊಡುವಂತೆ ಕೇಳಿಕೊಂಡಾಗ, “ನಮ್ಮ ಮಹಾಕಾವ್ಯಗಳು ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ಭಂಡಾರ” ಎಂದಿದ್ದರು.

ಆದರೆ ಇಂದು ಮನೆಯಲ್ಲಿ ನಡೆಯುವ ಜಗಳ ಸಾಲದು ಎಂಬಂತೆ ಟಿವಿಯಲ್ಲಿಯೂ ಜಗಳ. ಅದಕ್ಕೆ ‘ದೊಡ್ಡ ಮನೆ’ ಎಂಬ ಹೆಸರು ಬೇರೆ! ಅಂಥ ದೊಡ್ಡ ಮನೆಯಲ್ಲಿ ಬೇಕೆಂದೇ ಒಬ್ಬರಿಗೆ ಒಬ್ಬರು ಕಾಟ ಕೊಡುವುದು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು, ಇದ್ದಕ್ಕಿದ್ದಂತೆ ಕಿರುಚುವುದು, ಮೈಮೇಲೆ ಎಗರಿ ಹೋಗುವುದು, ಕರ್ಮ…
ಕರ್ಮ… ಅದನ್ನೂ ಜನ ನೋಡುತ್ತಾರಲ್ಲ! ಅಸಲಿಗೆ ಇನ್ನೊಬ್ಬರ ಮನೆಯಲ್ಲಿ ಇಣುಕಿ ನೋಡುವುದೇ ತಪ್ಪು. ಅಂಥದ್ದರಲ್ಲಿ ಇನ್ನೊಬ್ಬರ ಮನೆಯಲ್ಲಿ ನಡೆಯುವ ಜಗಳ, ಕೊಂಕುಮಾತು, ಹಾತಾಪಾಯಿ, ಇದನ್ನೆಲ್ಲ ಗಂಟೆಗಟ್ಟಲೆ ನೋಡುವ ಅವಸ್ಥೆ!

ಇದನ್ನೆಲ್ಲ ನೋಡುತ್ತೇವೆ ಎಂದಾದರೆ, ನಾವು ಯಾರನ್ನು ದೂಷಿಸಬೇಕು? ಉಳಿದ ಧಾರಾವಾಹಿಗಳ ವಿಷಯಗಳೂ ಅಷ್ಟಕಷ್ಟೇ! ಅವುಗಳ ವಿಷಯ ಮಾತನಾಡದಿದ್ದರೇ ಒಳಿತು.

ಎಲ್ಲೋ ಆಗೊಮ್ಮೆ-ಈಗೊಮ್ಮೆ ಕೃಷ್ಣ, ಹನುಮಂತ, ಶಿವ ಇತ್ಯಾದಿ ಧಾರಾವಾಹಿಗಳು ನುಸುಳಿಕೊಂಡು ಬರುತ್ತಿವೆಯಾದರೂ, ಮೊದಲಿನ ರಾಮಾಯಣ, ಮಹಾಭಾರತ, ಚಾಣಕ್ಯದಂಥ ಧಾರಾವಾಹಿಯಷ್ಟು ಅಥವಾ ಇಂದಿನ ಬಿಗ್ ಬಾಸ್‌ನಂಥ ರಿಯಾಲಿಟಿ ಶೋಗಳಷ್ಟು ಜನಪ್ರಿಯವಾಗುವುದಿಲ್ಲ ಎಂದರೆ ನಮ್ಮನ್ನು ನಾವೇ ಶಪಿಸಿಕೊಳ್ಳಬೇಕು ಅಷ್ಟೇ! ಅಂದು, ಕೇವಲ ಒಂದು ವಾಕ್ಯ ಸರಿ ಇಲ್ಲವೆಂಬ ಕಾರಣಕ್ಕಾಗಿ ಧಾರಾವಾಹಿಯನ್ನು ತಡೆಹಿಡಿದಿದ್ದಂಥ ಸರಕಾರ ಅಥವಾ ಅಧಿಕಾರಿವರ್ಗ, ಇಂದು ಮನೆಯ ಒಳಗೇ ಮೈ-ಕೈ ಮಿಲಾಯಿಸಿ ಹೊಡೆದಾಟ
ಮಾಡಿಕೊಂಡರೂ, ಹೇಳುವವರಿಲ್ಲ, ಕೇಳುವವರಿಲ್ಲ. ನಮ್ಮವರಿಗೆ ಸ್ಪರ್ಧಿಯ ಕೊರಳಲ್ಲಿರುವ ಹುಲಿಯ ಉಗರು ಕಾಣುತ್ತದೆ. ಆದರೆ ಹುಲಿಯಂತೆ ಪ್ರತಿಸ್ಪರ್ಧಿಯ ಮೇಲೆ ಎಗರಿ ಹೋಗುವವರು ಇವರ ಕಣ್ಣಿಗೆ ಬೀಳುವುದಿಲ್ಲ. ಬಿದ್ದರೂ, ಯಾರೂ ಮಾತನಾಡುವುದಿಲ್ಲ. ಯಾಕೆಂದರೆ ಅದರಿಂದಾಗಿಯೇ ಈ ‘ಶೋ’ ನಡೆಯಬೇಕು, ನಡೆಯುತ್ತದೆ.

ರಾಮಾಯಣ ಮತ್ತು ಮಹಾಭಾರತಗಳು ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ಆಗರ ಎಂಬುದು ಅಂದಿನ ಅಧಿಕಾರಿ ಗಿಲ್ ಅವರ ಅಂಬೋಣ ವಾಗಿತ್ತು. ಅದರ ಸಂದೇಶವು ಜಾತಿ, ಮತಗಳನ್ನು ಮೀರಿದ್ದು, ಸಾರ್ವತ್ರಿಕ ವಾದದ್ದು ಎಂದು ಅವರು ನಂಬಿದ್ದರು. ಅದಕ್ಕೆ ರಮಾನಂದ ಸಾಗರ್ ಅವರು “ಆಧುನಿಕ ಯುಗದಲ್ಲಿ ರಾಮಾಯಣ ಮತ್ತು ಮಹಾಭಾರತದಂಥ ಮಹಾಕಾವ್ಯಗಳನ್ನು ಕಟ್ಟಿಕೊಡುವುದು, ಅದರ ಸಂದೇಶವನ್ನು ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಅಂಶಗಳಿಗೆ ಹೊಂದಿಸುವುದು ನಿಜವಾದ ಸವಾಲಿನ ಕೆಲಸ” ಅಂದಿದ್ದರು.

ರಾಮಾಯಣ, ಮಹಾಭಾರತ ಧಾರಾವಾಹಿಯನ್ನು ನಿರ್ಮಿಸುವ ಪೂರ್ವದಲ್ಲಿ ಸಲಹೆ, ಸೂಚನೆ ನೀಡುವುದಕ್ಕೆ ಗಿಲ್ ಅವರು ರಮಾನಂದ ಸಾಗರ್ ಮತ್ತು ಬಿ.ಆರ್.ಚೋಪ್ರಾ ಸೇರಿದಂತೆ ತಜ್ಞರು ಮತ್ತು ವಿದ್ವಾಂಸರ ಸಮಿತಿಯನ್ನು ರಚಿಸಿದ್ದರಂತೆ. ಒಮ್ಮೆ, ಯೋಚಿಸಿ ಈಗಿನ ಬಿಗ್ ಬಾಸ್‌ನಂಥ ಕಾರ್ಯಕ್ರಮಕ್ಕೆ ತಜ್ಞರು ಮತ್ತು ಪರಿಣತರ ಸಮಿತಿ ಯನ್ನು ರಚಿಸಿದರೆ ಆ ಸಮಿತಿಯಲ್ಲಿ ಯಾರೆಲ್ಲ ಸ್ಥಾನ ಪಡೆಯಬಹುದು ಅಥವಾ ಯಾರನ್ನೆಲ್ಲ ಕರೆಯಬೇಕಾಗಿತ್ತು? ಇದನ್ನು ನಿರ್ಮಿಸುವವರಿಗೆ ಯಾವ ಸವಾಲು ಇದ್ದೀತು? ಇದು ಖಾಸಗಿ ವಾಹಿನಿಯಲ್ಲಿ ಬರುವ ಕಾರ್ಯಕ್ರಮವೇ ಇರಬಹುದು. ನೋಡುವವರು ನಮ್ಮ ದೇಶದ ಪ್ರಜೆಗಳೇ ಅಲ್ಲವೇ? ಅದಕ್ಕೂ ಒಂದು ಕಡಿವಾಣ ಬೇಕಲ್ಲವೇ?

ಇದನ್ನೂ ಓದಿ: kiranupadhyay

Leave a Reply

Your email address will not be published. Required fields are marked *