ನ್ಯೂನ ಕಾನೂನು
ತಿಮ್ಮಣ್ಣ ಭಾಗ್ವತ್
ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಅತ್ಯಗತ್ಯ. ಜತೆಗೆ ಭ್ರಷ್ಟಾಚಾರ ನಿಯಂತ್ರಣ, ಸರಕಾರಿ ಇಲಾಖೆಗಳ ಉತ್ತರ ದಾಯಿತ್ವ ಅಷ್ಟೇ ಮಹತ್ವದ್ದು. ಆದರೆ ಗೌಪ್ಯತೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಕೆಲ ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸಲು ಆಗಲಿಕ್ಕಿಲ್ಲ. ಇವೆರಡೂ ಅಂಶಗಳನ್ನು ಸರಿದೂಗಿಸಿ ನಾಗರಿಕ ರಿಗೆ ಕೆಲವು ಮಾಹಿತಿಗಳನ್ನು ನೀಡುವುದು ಅವಶ್ಯವೆಂದು ಮನಗಂಡು ಮಾಹಿತಿ ಹಕ್ಕು ಕಾಯಿದೆ ಯನ್ನು ಜಾರಿಮಾಡಲಾಗಿದೆ.
ರಸ್ತೆ ಮಾಡಿ ಆರು ತಿಂಗಳಾಗಿಲ್ಲ, ಗುಂಡಿ ಬಿದ್ದೋಯ್ತು. ಹಳ್ಳದ ಒಡ್ಡು ಮೊದಲ ಮಳೆಗೇ ಕೊಚ್ಚಿಕೊಂಡು ಹೋಯ್ತು. ಕಂಟ್ರಾಕ್ಟರ್ ಪತ್ತೆ ಇಲ್ಲ. ಇಲಾಖೆಯವರು ಕ್ಯಾರೇ ಎನ್ನುವುದಿಲ್ಲ. ಈ ಕಳಪೆ ಕಾಮಗಾರಿಗೆ ತೆರಿಗೆದಾರರ
ಹಣ ಎಷ್ಟು ಖರ್ಚಾಗಿದೆ? ಟೆಂಡರ್ ಪಡೆದ ಪುಣ್ಯಾತ್ಮ ಕಂಟ್ರಾಕ್ಟರ್ ಯಾರು? ಅವನ ಮೇಲೆ ಏನು ಕ್ರಮ ಕೈಗೊಳ್ಳ ಲಾಗಿದೆ? ಎಂಬ ಯಾವ ಮಾಹಿತಿಯೂ ಇಲ್ಲದೆ ಕೇವಲ ಕಾಲಹರಣಕ್ಕೆ ಸುದ್ದಿ ಹೇಳುವುದನ್ನು 2005ರ ಅಡಿಯಲ್ಲಿ ಅರ್ಜಿ ಹಾಕಿದರೆ ಅಧಿಕಾರಿಗಳು ಕ್ಯಾ‘ರೇ’ ಅಲ್ಲ, ಕ್ಯಾ ‘ಜೀ’ ಎನ್ನಬೇಕಾಗುತ್ತದೆ. 30 ದಿನದಲ್ಲಿ ಮಾಹಿತಿ ನೀಡದಿದ್ದರೆ ದಂಡ ನೀಡಬೇಕಾಗುತ್ತದೆ.
ಪ್ರಜಾಪ್ರಭುತ್ವದಲ್ಲಿ ಮಾಹಿತಿವಂತ ನಾಗರಿಕರು ಮತ್ತು ಪಾರದರ್ಶಕತೆ ಅತ್ಯಗತ್ಯ. ಜತೆಗೆ ಭ್ರಷ್ಟಾಚಾರ ನಿಯಂತ್ರಣ ಮತ್ತು ಸರಕಾರಿ ಇಲಾಖೆಗಳ ಉತ್ತರದಾಯಿತ್ವ ಅಷ್ಟೇ ಮಹತ್ವದ್ದು. ಆದರೆ ಗೌಪ್ಯತೆ ಹಾಗೂ ಆಡಳಿತಾತ್ಮಕ ಸಮಸ್ಯೆ ಗಳಿಂದಾಗಿ ಕೆಲವು ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸುವುದು ಕಾರ್ಯ ಸಾಧ್ಯವಾಗಲಿಕ್ಕಿಲ್ಲ. ಇವೆರಡೂ ಅಂಶಗಳನ್ನು ಸರಿದೂಗಿಸಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಗಮನದಲ್ಲಿರಿಸಿ ನಾಗರಿಕರಿಗೆ ಸರಕಾರಿ ಅಧಿಕಾರಿಗಳ ನಿಯಂತ್ರಣದಲ್ಲಿರುವ ಕೆಲವು ಮಾಹಿತಿಗಳನ್ನು ನೀಡುವುದು ಅವಶ್ಯವೆಂದು ಮನಗಂಡು ಮಾಹಿತಿ ಹಕ್ಕು ಕಾಯಿದೆ ಯನ್ನು 15ನೇ ಜೂನ್ 2005ರಿಂದ ಜಾರಿ ಮಾಡಲಾಯಿತು.
ಸ್ಥೂಲವಾಗಿ ಹೇಳುವುದಾದರೆ, ಈ ಕಾಯಿದೆ ಯನ್ವಯ, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಅರ್ಜಿದಾರರು ಕೇಳಿದ ಮಾಹಿತಿಯನ್ನು ಕೊಡುವುದು ಸರಕಾರ ಅಥವಾ ಅದರ ಅಧೀನ ಸಂಸ್ಥೆಗಳ ಸಾರ್ವಜನಿಕ ಮಾಹಿತಿ ಅಽಕಾರಿಗಳ ಹೊಣೆಯಾಗಿರುತ್ತದೆ. ತಪ್ಪಿದರೆ ಅಥವಾ ಒದಗಿಸಿದ ಮಾಹಿತಿ ಸರಿಯಾಗಿರದಿದ್ದರೆ ಎರಡು ಹಂತದ ಮೇಲ್ಮನವಿಗೆ ಅವಕಾಶವಿದೆ.
ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಮಾಹಿತಿ ಆಯೋಗವು ಹೊಂದಿರುತ್ತದೆ. ಕೇಂದ್ರ ಹಾಗೂ ರಾಜ್ಯಗಳ ಮಾಹಿತಿ ಆಯೋಗಗಳ/ಆಯುಕ್ತರ ನಿಯುಕ್ತಿ, ಅಧಿಕಾರ ವ್ಯಾಪ್ತಿ ಮುಂತಾದ ವಿಷಯ ಗಳನ್ನು ಈ ಕಾಯಿದೆ ನಿರ್ದೇ ಶಿಸುತ್ತದೆ. ಆದರೆ ಕಲಂ 8 ಮತ್ತು 11ರನ್ವಯ, ದೇಶದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ, ವಿಚಕ್ಷಣಾ ವ್ಯವಸ್ಥೆಗಳು, ವಿದೇಶ ವ್ಯವಹಾರಗಳ ವಿಷಯಗಳು, ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿ, ಕೋರ್ಟ್ ನಿರ್ಬಂಧ, ವ್ಯಕ್ತಿಗಳ ಅಥವಾ ಸಂಸ್ಥೆಗಳ ವಾಣಿಜ್ಯ ಹಿತಾಸಕ್ತಿ, ವಿಶ್ವಾಸಾರ್ಹ ಸಂಬಂಧ, ಅಪರಾಧಿಗಳ ವಿಚಾರಣೆಯ ವಿಷಯ ಗಳು, ಮಂತ್ರಿಮಂಡಲದ ಠರಾವುಗಳು, ಹಾಗೂ ಮೂರನೇ ವ್ಯಕ್ತಿಯ ಮಾಹಿತಿಗಳು, ಮುಂತಾದವು ವಿನಾಯತಿ ಹೊಂದಿರು ತ್ತವೆ.
ಕಲಂ 24 ಮತ್ತು ಅನುಬಂಧ 2 ರಲ್ಲಿ ನಮೂದಿಸಿದ ಕೆಲವು ಇಲಾಖೆಗಳು ಈ ಕಾಯಿದೆಯ ವ್ಯಾಪ್ತಿಗೆ ಒಳಪಡುವು ದಿಲ್ಲ. ಮಾಹಿತಿ ನೀಡಲು 30 ದಿನ, ಪ್ರತಿ ಮೇಲ್ಮನವಿಗೆ 45 ದಿನ, ಹೀಗೆ ಕಾಲಮಿತಿಯನ್ನು ವಿಧಿಸಲಾಗಿದೆ. ಈ ಕಾಯಿದೆ ಯಡಿಯಲ್ಲಿ ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳು ನಿಯಮಾವಳಿಗಳನ್ನು ರೂಪಿಸಿವೆ. ಆದಷ್ಟು ಹೆಚ್ಚಿನ ಮಾಹಿತಿ ಹಾಗೂ ವರದಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಬೇಕೆಂಬ ನಿಯಮವೂ ಇದೆ. ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿರುವುದರಿಂದ ಮತ್ತು ಮಾಹಿತಿ ಬಹಿರಂಗವಾದಾಗ ಅದರ ಆಧಾರದಲ್ಲಿ ವಿಮರ್ಶೆ, ಸಾರ್ವಜನಿಕ ಚರ್ಚೆ ಹಾಗೂ ಮಾಧ್ಯಮಗಳಲ್ಲಿ ವರದಿ/ಚರ್ಚೆ ನಡೆಯುವುದರಿಂದ ಅಧಿಕಾರಿಗಳು ಹೆಚ್ಚಿನ ಜಾಗರೂ ಕತೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ, ಅವರ ಉತ್ತರದಾಯಿತ್ವ ಹೆಚ್ಚುವುದರಿಂದ ಕಾಯಿದೆಯ ಮೂಲ ಉದ್ದೇಶ ಬಹಳಮಟ್ಟಿಗೆ ಯಶಸ್ಸು ಕಂಡಿದೆ ಎಂದೇ ಹೇಳಬೇಕು.
ದುರುಪಯೋಗ: ‘ಸೂರ್ಯ ರಶ್ಮಿ’ (sun shine) ಕಾಯಿದೆ ಎಂದು ಹೊಗಳಿಸಿಕೊಂಡ ಈ ಕಾಯಿದೆಯ ಸಮರ್ಪಕ ಉಪಯೋಗ ದೇಶದ ಹಿತದೃಷ್ಟಿಗೆ ಪೂರಕ. ಆದರೆ ಅನೇಕ ಜನೋಪಯೋಗಿ ಕಾಯಿದೆಗಳಂತೆ ಈ ಕಾಯಿದೆಯನ್ನೂ ದುರುಪಯೋಗ ಮಾಡಿದ ಅನೇಕ ಪ್ರಕರಣಗಳು ನ್ಯಾಯಾಲಯಗಳ ಗಮನಕ್ಕೆ ಬಂದಿವೆ. ಶ್ರೀಮತಿ ಉಮಾಕಾಂತಿ ವರ್ಸಸ್ ನವೋದಯ ವಿದ್ಯಾಲಯ ಸಮಿತಿ, ನವದೆಹಲಿ: (ಕೇಂದ್ರೀಯ ಮಾಹಿತಿ ಆಯೋಗ): ಈ ಪ್ರಕರಣದಲ್ಲಿ ೧೮೮ ಪುಟಗಳ ಅರ್ಜಿಯಲ್ಲಿ 375 ವಿಷಯಗಳ ಕುರಿತು 141 ಫಾರ್ಮ್ಗಳಲ್ಲಿ 20 ವರ್ಷಗಳ ಅವಧೊಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಲಾಗಿತ್ತು.
ಇಲಾಖೆಯಲ್ಲಿ ಕೆಲಸ ಮಾಡುವ ಸಾವಿರಾರು ನೌಕರರ ವಾರ್ಷಿಕ ಗೌಪ್ಯ ವರದಿಗಳು, ಟೈಮ್ -ಟೇಬಲ್, ಮುಂಗಡ ಗಳು, 1996ರಿಂದ ಎಲ್ಲಾ ಸಿಬ್ಬಂದಿಗಳಿಗೆ ನೀಡಲಾದ ಪಗಾರ ವಿವರ, ಸಿಬ್ಬಂದಿ ವಸತಿ ಗೃಹಗಳು ಮುಂತಾದ ಅನೇಕ ಮಾಹಿತಿಗಳನ್ನು ಕೋರಿದ್ದರು. ಪ್ರಕರಣ ಅಂತಿಮವಾಗಿ ಕೇಂದ್ರೀಯ ಮಾಹಿತಿ ಆಯೋಗದ ಮುಂದೆ ವಿಚಾರಣೆಗೆ ಬಂದಾಗ ತಿಳಿದ ಸಂಗತಿಯೆಂದರೆ ಸದರಿ ದೂರುದಾರರನ್ನು ವರ್ಗಾವಣೆ ಮಾಡಿದ್ದರಿಂದ ಅವರು ಇಲಾಖೆಯ ವಿರುದ್ಧ ಅಸಮಾಧಾನಗೊಂಡಿದ್ದರು. ಅವರು ತಮ್ಮ ಮತ್ತು ತಮ್ಮ ಹೆಂಡತಿಯ ಹೆಸರಿನಲ್ಲಿ ಪದೇ ಪದೆ ಅರ್ಜಿ ಸಲ್ಲಿಸಿ ಇಲಾಖೆಗೆ ಅನವಶ್ಯಕ ಪತ್ರವ್ಯವಹಾರ, ಖರ್ಚು, ತಿರುಗಾಟ ಉಂಟಾಗುವಂತೆ ಮಾಡುವ ಉದ್ದೇಶದಿಂದ ಕಾಯಿದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಮಾನ್ಯ ನ್ಯಾಯಾಲಯದ ಗಮನಕ್ಕೆ ಬಂತು. ದೂರು ದಾರರ ಅರ್ಜಿಯನ್ನು ತಿರಸ್ಕರಿಸಿದ ಆಯೋಗ, “ಈ ಪ್ರಕರಣ ಬಹುಶಃ ಸದರಿ ಕಾಯಿದೆಯ ದುರುಪಯೋಗದ ಅತಿಕೆಟ್ಟ ಪ್ರಕರಣ. ಆರ್.ಟಿ.ಐ. ಕಾಯಿದೆಯನ್ನು ಉದ್ಯೋಗದಾತರ ವಿರುದ್ಧ ನೌಕರರು ಸೇಡು ತೀರಿಸಿಕೊಳ್ಳುವ ಸಾಧನವಾಗಿ ಬಳಸಿಕೊಳ್ಳುವಂತಿಲ್ಲ” ಎಂದು ಅಭಿಪ್ರಾಯ ಪಟ್ಟಿತು.
ಪಾರದರ್ಶಿತ ಪಬ್ಲಿಕ್ ವೆಲೇರ್ ಫೌಂಡೇಶನ್ ವರ್ಸಸ್ ಭಾರತ ಸರಕಾರ: ಇದು ಉದಾತ್ತ ಉದ್ದೇಶ ಹೊಂದಿದ ಕಾಯಿದೆಯೊಂದನ್ನು ಅತಿ ಕೀಳುಮಟ್ಟದಲ್ಲಿ ದುರುಪಯೋಗ ಮಾಡಿಕೊಂಡ ಕೆಟ್ಟ ಪ್ರಕರಣ. ಅರ್ಜಿದಾರ ಎನ್ಜಿಒ, ದೆಹಲಿ ಮಹಾನಗರ ಪಾಲಿಕೆಯ ಇಬ್ಬರು ಎಂಜಿನಿಯರುಗಳ ನಿಜವಾದ ತಂದೆ-ತಾಯಿ ಯಾರು, ಅವರ ತಂದೆ ಯಾರು ಎಂಬುದಕ್ಕೆ ಡಿಎನ್ಎ ಟೆಸ್ಟ್ ಮಾಡಲಾಗಿದೆಯೋ, ಅವರಿಗೆ ಏನಾದರೂ ಲೈಂಗಿಕ ರೋಗಗಳಿವೆಯೋ
ಎಂಬಿತ್ಯಾದಿ ಅಸಹ್ಯವೆನಿಸುವ ಮಾಹಿತಿಗಳನ್ನು ಕೇಳಿದ್ದರು. ಈ ಪ್ರಕರಣದಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ಅರ್ಜಿದಾರರಿಗೆ 75000 ರು. ದಂಡ ವಿಧಿಸಿ ಅರ್ಜಿಯನ್ನು ತಿರಸ್ಕರಿಸಿತು.
ಕಾಯಿದೆಯ ಕುರಿತಾದ ಜ್ಞಾನದ ಕೊರತೆ: ಅತ್ಯಂತ ಸರಳ ವಿಧಾನದ ಮೂಲಕ ಮಾಹಿತಿ ಪಡೆಯುವ ಅವಕಾಶ ವನ್ನು ಈ ಕಾಯಿದೆಯು ಕಲ್ಪಿಸುತ್ತದೆ. ಆದರೆ ಜನಸಾಮಾನ್ಯರಿಗೆ ವಿವಿಧ ನಿಬಂಧನೆಗಳ ಕುರಿತು ಅರಿವಿಲ್ಲ. ಆದ್ದರಿಂದ ಸಹಜವಾಗಿ ವಕೀಲರ ಅಥವಾ ಇತರ ಮಧ್ಯವರ್ತಿಗಳ ಸಹಾಯ ಪಡೆಯುತ್ತಾರೆ. ಆದರೆ ಮಧ್ಯವರ್ತಿಗಳು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಆರೋಪವೂ ಇದೆ. ಅನೇಕ ಅಧಿಕಾರಿಗಳಿಗೂ ಈ ಕಾಯಿದೆಯ ಕುರಿತು ಜ್ಞಾನದ ಕೊರತೆ ಇದೆ. ನೀಡಿದ ಮಾಹಿತಿಯ ಆಧಾರದಲ್ಲಿ ಸಾರ್ವಜನಿಕ/ಮಾಧ್ಯಮ ಚರ್ಚೆ, ಕೋರ್ಟ್ ಪ್ರಕರಣಗಳು ಮುಂತಾದ ಸಾಧ್ಯತೆಗಳಿವೆ.
ನಿಯಮಬದ್ಧ ನಿರ್ಧಾರಗಳಿಗೆ ಯಾಕೆ ಹೆದರಬೇಕು ಎಂಬ ವಾದ ಇದೆಯಾದರೂ, ಅನೇಕ ಸಲ ಕೆಲಸದ ಒತ್ತಡ ದಿಂದ ಕೆಲವು ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲು ಸಾಧ್ಯವಾಗದಿರಬಹುದು. ಮಾನವ ಸಹಜ ತಪ್ಪು ಗಳಾಗಬಹುದು. ಈ ಕಾರಣಕ್ಕೆ ಅನೇಕ ಅಧಿಕಾರಿಗಳು ಕಚೇರಿ ಟಿಪ್ಪಣಿಗಳಿಗೆ ಸಹಿ ಮಾಡದೇ ನಿರ್ಧಾರಗಳನ್ನು ಮುಂದೂಡುತ್ತಾರೆ ಅಥವಾ ಮೌಖಿಕ ಆದೇಶ ನೀಡುತ್ತಾರೆ ಎಂಬ ಅಭಿಪ್ರಾಯವಿದೆ. ಇದರಿಂದಾಗಿ ಅಭಿವೃದ್ಧಿ
ಸ್ಥಗಿತಗೊಳ್ಳಬಹುದು ಎಂಬ ಆತಂಕ ಇದೆ. ಮಾಹಿತಿ ಹಕ್ಕು ಕಾರ್ಯಕರ್ತರು: ಕಾಯಿದೆಯ ಜ್ಞಾನ ಇರುವವರು ಜನಸಾಮಾನ್ಯರಿಗೆ ಮಾಹಿತಿ ದೊರಕಿಸಿಕೊಳ್ಳಲು ಸಹಾಯ ಮಾಡುವುದು ಸ್ವಾಗತಾರ್ಹ. ಇನ್ನು, ಸರಕಾರಿ ಇಲಾಖೆ ಗಳಲ್ಲಿರುವ ಭ್ರಷ್ಟಾಚಾರ, ಅವ್ಯವಹಾರಗಳನ್ನು ಬಯಲಿಗೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುವವರೂ ಇದ್ದಾರೆ.
ಕೆಲವು ಮಾಧ್ಯಮದವರೂ ಮಾಹಿತಿಗಾಗಿ ಅಥವಾ ತನಿಖಾ ವರದಿಗಾಗಿ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಆದರೆ ಕೆಲವು ಇಲಾಖೆಗಳಲ್ಲಿ ಇರಬಹುದಾದ ಸಾಮಾನ್ಯ ಲೋಪ ದೋಷಗಳು, ನಿಯಮಗಳ ಉಲ್ಲಂಘನೆ ಮುಂತಾದವುಗಳನ್ನೇ ಮುಂದಿಟ್ಟುಕೊಂಡು, ಕೆಲವು ಸಲ ಇಲಾಖೆಯ ಒಳಗಿನವರ ಸಹಾಯವನ್ನೇ ಪಡೆದು, ಪ್ರಾಮಾಣಿಕ ಅಧಿಕಾರಿಗಳನ್ನು ಬ್ಲ್ಯಾಕ್ಮೇಲ್ ಮಾಡುವ, ಹಣಕ್ಕಾಗಿ ಪೀಡಿಸುವ ಪ್ರವೃತ್ತಿ ಬೆಳೆಯುತ್ತಿದೆ ಎನ್ನಲಾಗಿದೆ.
ಅಂಜಲಿ ಭಾರದ್ವಾಜ ವರ್ಸಸ್ ಭಾರತ ಸರಕಾರ (ಸುಪ್ರೀಂ ಕೋರ್ಟ್): ‘ಆರ್ಟಿಐ ಕಾರ್ಯಕರ್ತ ಎನ್ನುವುದು ಒಂದು ವೃತ್ತಿಯೇ? ಕೆಲವರು ತಮ್ಮ ಲೆಟರ್ಹೆಡ್ನಲ್ಲಿ ‘ಆರ್ಟಿಐ ಸಲಹೆಗಾರ’ ಎಂದು ನಮೂದಿಸುತ್ತಾರೆ. ಅವರು ತಮ್ಮನ್ನು ಆರ್ಟಿಐ ಕಾರ್ಯಕರ್ತ ಎಂದು ಕರೆದುಕೊಳ್ಳುತ್ತಾರೆ. ವಿಷಯಕ್ಕೆ ಏನೂ ಸಂಬಂಧ ಇಲ್ಲದೆ ಆರ್ಟಿಐ ಅರ್ಜಿಗಳನ್ನು ದಾಖಲಿಸುತ್ತಾರೆ. ಇದು ಕಾಯಿದೆಯ ದುರುಪಯೋಗ. ಆರ್ಟಿಐ ಅರ್ಜಿಗಳ ಹಿಂದೆ ಸ್ವಾರ್ಥಿಗಳ ಕೈವಾಡ ಇರಬಹುದು. ಕಾಯಿದೆಯ ದುರ್ಬಳಕೆ ತಡೆಯಲು ನಿಯಮಾವಳಿ ಅಗತ್ಯ’.
ಬ್ಯಾಂಕುಗಳಿಂದ ಗ್ರಾಹಕರ ಮಾಹಿತಿ ಕೋರಿಕೆ: ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಸದರಿ ಕಾಯಿದೆಯ ವ್ಯಾಪ್ತಿಗೆ ಬರುತ್ತವೆ. ಆದರೆ ಗ್ರಾಹಕರು ಬ್ಯಾಂಕಿನೊಂದಿಗೆ ಇಟ್ಟಿರುವ ವ್ಯವಹಾರದ ಗೌಪ್ಯತೆ ಕಾಯ್ದುಕೊಳ್ಳುವುದು ಬ್ಯಾಂಕಿನ ಹೆಚ್ಚಿನ ಜವಾಬ್ದಾರಿ ಮತ್ತು ಅದು ಬ್ಯಾಂಕು ಹಾಗೂ ಗ್ರಾಹಕರ ನಡುವಿನ ವಿಶ್ವಾಸಾರ್ಹ ಸಂಬಂಧಕ್ಕೆ ಒಳಪಡುತ್ತದೆ. ಗ್ರಾಹಕರ ವ್ಯವಹಾರದ ವಿವರಗಳನ್ನು ಈ ಕಾಯಿದೆಯ ಅಡಿಯಲ್ಲಿ ಕೇಳಿದಾಗ ಬ್ಯಾಂಕುಗಳು ಕಲಂ 8 (ಡಿ), (ಇ) ಮತ್ತು (ಜೆ) ಅಡಿಯಲ್ಲಿರುವ ವಿನಾಯತಿಯನ್ನು ಉಲ್ಲೇಖಿಸಿ ಅಂಥ ಅರ್ಜಿಗಳನ್ನು ತಿರಸ್ಕರಿಸುತ್ತವೆ.
ದುರುಪಯೋಗದ ಇನ್ನೂ ಕೆಲವು ಘಟನೆಗಳು ಈ ಮುಂದಿನಂತಿವೆ:
1. ಒಬ್ಬಾತ, ತನ್ನ ಸ್ನೇಹಿತರು ಮತ್ತು ಸಂಬಂಧಿಕರ ಹೆಸರಿನಲ್ಲಿ ಬೇರೆ ಬೇರೆ ನಗರಗಳ ವಿಳಾಸ ನೀಡಿ ಅದೇ ಮಾಹಿತಿ ಯನ್ನು ಕೇಳುತ್ತಿದ್ದ. ಅವನು ಕೇಳಿದ ಮಾಹಿತಿಯನ್ನು ಕೊಡದೇ ವಿಧಿಯಿರಲಿಲ್ಲ. ಯಾಕೆಂದರೆ ಅರ್ಜಿದಾರರ ಗುರುತು ಚೀಟಿ ಮತ್ತು ವಿಳಾಸದ ಪುರಾವೆ ಕೇಳಲು ಕಾಯಿದೆಯಲ್ಲಿ ಅವಕಾಶವಿಲ್ಲ (Ramesh Chand Jain v/s DTC).
2. ಕಳೆದ ಹತ್ತು ವರ್ಷಗಳಲ್ಲಿ ಒಂದು ಬ್ಯಾಂಕು ನೀಡಿದ ಸಾಲಗಳ ಜಾತಿವಾರು/ಗ್ರಾಮವಾರು ಮಾಹಿತಿ. ಆ
ಪೈಕಿ ಮಹಿಳೆಯರಿಗೆ, ಅಂಗವಿಕಲರಿಗೆ, ಎಸ್ಸಿ/ ಎಸ್ಟಿ, ಅಲ್ಪಸಂಖ್ಯಾತ ಮುಂತಾದ ವರ್ಗೀಕರಣದ ಅಂಕಿ-ಅಂಶ ಮತ್ತು ಆ ಪೈಕಿ ಸರಕಾರಿ ಯೋಜನೆಗಳಲ್ಲಿ ಕೊಟ್ಟ ಸಾಲಗಳೆಷ್ಟು- ಈ ಮಾಹಿತಿಯನ್ನು ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಬ್ಯಾಂಕು ನೀಡ ಬೇಕೆಂದರೆ ಎಷ್ಟು ಸಮಯ ವ್ಯಯವಾಗಬಹುದೆಂದು ಊಹಿಸಿ (J.I.Buck v/s. State Bank of Saurashtra).
3. ಅನೇಕ ಕಚೇರಿಗಳಲ್ಲಿ, ಬೇರೆ ಬೇರೆ ಕಚೇರಿ/ ಶಾಖೆಗಳಿಂದ ಮಾಹಿತಿ ತರಿಸಿ ಕ್ರೋಡೀಕರಿಸಬೇಕಾಗುತ್ತದೆ. ಇದರಿಂದಾಗಿ. ಕಚೇರಿಯ ಮಾಮೂಲಿ ಕೆಲಸ ಹಾಗೂ ಅಭಿವೃದ್ಧಿ ಕಾರ್ಯಗಳಿಗಿಂತ ಕಾಲಮಿತಿಯಲ್ಲಿ ಮುಗಿಸ ಬೇಕಾದ ಅರ್ಟಿಐ ಅರ್ಜಿಗೇ ಹೆಚ್ಚಿನ ಪ್ರಾಧಾನ್ಯ ನೀಡಬೇಕಾಗುತ್ತದೆ. ಹೀಗಾಗಿ ನೌಕರರ ಕೊರತೆಯಾಗಿ ಸಾರ್ವ ಜನಿಕರಿಗೆ ತೊಂದರೆಯಾಗುತ್ತದೆ.
4. ಮೇಲ್ಮನವಿ ಮತ್ತು ಇತರ ಕಾನೂನು ಹೋರಾಟಗಳಿಗೆ ಕೂಡಾ ಸಾಕಷ್ಟು ಸಮಯ ಮತ್ತು ಹಣ ವೆಚ್ಚವಾಗುತ್ತದೆ.
ಈ ಎಲ್ಲ ರೀತಿಯ ದುರುಪಯೋಗಗಳಿಂದಾಗಿ ಒಳ್ಳೆಯ ಕಾಯಿದೆಯ ಉದ್ದೇಶ ವಿಫಲವಾಗುತ್ತಿದೆ. ಈ ದಿಸೆಯಲ್ಲಿ ಕೈಗೊಳ್ಳಬಹುದಾದ ಕೆಲವು ಕ್ರಮಗಳು ಈ ಕೆಳಗಿನಂತಿವೆ: ಅರ್ಜಿದಾರರ ಗುರುತು ಮತ್ತು ವಿಳಾಸಗಳ ಪುರಾವೆ ಕೇಳುವುದು; ಇದರಿಂದ ನಕಲಿ ಅರ್ಜಿಗಳನ್ನು ತಡೆಯಬಹುದು.
ಮಾಹಿತಿಯ ಉದ್ದೇಶವನ್ನು ಕಡ್ಡಾಯ ಮಾಡುವುದು. ಅರ್ಜಿದಾರರಿಗೆ ಮಾಹಿತಿಯ ಕುರಿತು ಇರುವ ಸಂಬಂಧ (locus standi); ಆರ್ಟಿಐ ಮಧ್ಯವರ್ತಿಗಳನ್ನು ತಡೆಯಲು ಇದು ಸಹಕಾರಿ.
ಆರ್ಟಿಐ ಶುಲ್ಕ ಹೆಚ್ಚಳ: ಅರ್ಜಿಯೊಂದಿಗೆ ತೆರ ಬೇಕಾದ ಶುಲ್ಕ ಕೇವಲ 10 ರುಪಾಯಿ ಇದ್ದು ಇದನ್ನು ಹೆಚ್ಚಳ ಮಾಡಿದರೆ ಅನವಶ್ಯಕ ಅರ್ಜಿಗಳನ್ನು ತಡೆಯಬಹುದೆಂಬ ಅಭಿಪ್ರಾಯವಿದೆ.
ಇಲಾಖೆಗಳ ನೌಕರರಿಗೆ ಈ ಕುರಿತು ಸಾಕಷ್ಟು ತರಬೇತಿ ಮತ್ತು ಜ್ಞಾನ ನೀಡುವುದರಿಂದ ಅರ್ಜಿಗಳ ವಿಲೇವಾರಿಗೆ ಹಾಗೂ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಸಹಾಯವಾಗುವುದು. ಬೇರೆ ಮೂಲಗಳಿಂದ ದಾಖಲೆ ಪಡೆಯಲು ಅವಕಾಶವಿದ್ದಾಗ ಆರ್ಟಿಐ ಅರ್ಜಿ ನಿರಾಕರಿಸುವುದು. ದುರುಪಯೋಗ ಆಗುತ್ತಿರುವುದು ನಿಜವಾದರೂ,
ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ತಡೆಯಂಥ ಶ್ಲಾಘನೀಯ ಉದ್ದೇಶ ಹೊಂದಿರುವ ಈ ಕಾಯಿದೆ ಇನ್ನೂ ಬಲವಾಗಬೇಕು ಮತ್ತು ವ್ಯಾಪಕವಾಗಿ ಉಪಯೋಗವಾಗಬೇಕು. ಇದು ಪ್ರಜಾಪ್ರಭುತ್ವದ ಉಳಿವಿಗೆ ಮತ್ತು ಯಶಸ್ಸಿಗೆ ಅಗತ್ಯ.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್ನ ನಿವೃತ್ತ ಎಜಿಎಂ)
ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?