ಬೆಂಗಳೂರು: ಚಾಮರಾಜಪೇಟೆಯಲ್ಲಿ (Chamrajpet) ಹಸುಗಳ (Cow) ಕೆಚ್ಚಲು ಕೊಯ್ದು ಕ್ರೌರ್ಯ (Bengaluru Crime News) ಪ್ರದರ್ಶಿಸಿದ ಪ್ರಕರಣದಲ್ಲಿ ಒಬ್ಬ ಆರೋಪಿಯನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ನಸ್ರು (30) ಬಂಧಿತ ಆರೋಪಿ. ಬಿಹಾರದ ಚಂಪರಣ್ ಮೂಲದ ಆರೋಪಿ ಸೈಯದ್ ನಸ್ರು, ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿ ಪ್ಲಾಸ್ಟಿಕ್, ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೃತ್ಯ ನಡೆದ ಜಾಗದಿಂದ 50 ಮೀಟರ್ ಅಂತರದಲ್ಲಿ ಕೆಲಸ ಮಾಡುತ್ತಿದ್ದ.
ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಿ, ಜಡ್ಜ್ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗೆ ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳ ಕ್ರೌರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸಾಚಾರ ತಡೆ ಕಾಯ್ದೆಯಡಿ ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರ ನಿವಾಸಿ ಕರ್ಣ ಎಂಬವರು ಕಳೆದ ಹಲವು ವರ್ಷಗಳಿಂದ ಇಲ್ಲಿ ಹಸು ಸಾಕುತ್ತಿದ್ದಾರೆ. ಶನಿವಾರ ತಡರಾತ್ರಿ ಆರೋಪಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದ. ಹಸುಗಳ ಮಾಲೀಕ ಕರ್ಣ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ರಮೇಶ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರು ತನಿಖೆ ನಡೆಸಿದ್ದಾರೆ.
ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಸುಗಳು ಕ್ಷೇಮವಾಗಿವೆ. ಆದರೆ, ಇನ್ನೂ ಎರಡು ವಾರ ಗಾಯ ಮಾಯಲು ಸಮಯ ಬೇಕಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆ ಮುಖಂಡರು, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿಸಿ ಮೋಹನ್, ಎಂಎಲ್ಸಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಮಾಲೀಕ ಕರ್ಣನಿಗೆ ಸಾಂತ್ವನ ಹೇಳಿದ್ದರು. ಘಟನೆಯನ್ನು ಖಂಡಿಸಿದ ನಾಯಕರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ವಿಪಕ್ಷ ನಾಯಕ ಆರ್. ಅಶೋಕ್ ವೈಯುಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು.
ಇದನ್ನೂ ಓದಿ: Self Harming: ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ? ದೆಹಲಿಯ ಉದ್ಯಮಿ ಆತ್ಮಹತ್ಯೆ