ಲಖನೌ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜ. 12 ರಿಂದ ಫೆ. 26 ರವರೆಗೆ ಐತಿಹಾಸಿಕ ಮಹಾಕುಂಭ ಮೇಳ ನಡೆಯಲಿದೆ. ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಉತ್ತರ ಪ್ರದೇಶ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಈ ನಡುವೆ ಮಹಾ ಕುಂಭಮೇಳ ಪ್ರದೇಶದಲ್ಲಿನ ಶಿಬಿರವೊಂದರಲ್ಲಿ ಸಮಾಜವಾದಿ ಪಕ್ಷದ (SP) ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಮುಲಾಯಂ ಸಿಂಗ್ ಯಾದವ್ ಸ್ಮೃತಿ ಸೇವಾ ಸಂಸ್ಥಾನದ ವತಿಯಿಂದಸೆಕ್ಟರ್ 16 ರ ಶಿಬಿರದಲ್ಲಿ ಸ್ಥಾಪಿಸಲಾದ ಸುಮಾರು ಎರಡು-ಮೂರು ಅಡಿ ಎತ್ತರದ ಮುಲಾಯಂ ಸಿಂಗ್ ಯಾದವ್ ಅವರ ಪ್ರತಿಮೆಯನ್ನು ಶನಿವಾರ ಉದ್ಘಾಟಿಸಲಾಯಿತು ಎಂದು ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಭಾನುವಾರ ತಿಳಿಸಿದ್ದಾರೆ.
ಅವರು ಶನಿವಾರ “ನೇತಾಜಿ” ಪ್ರತಿಮೆ ಹಾಗೂ ಯಾದವ್ ಅವರ ಸಣ್ಣ ಪ್ರತಿಮೆಯನ್ನು ಉದ್ಘಾಟಿಸಿ, ಯಾದವ್ ಅವರ ಪ್ರತಿಮೆಯನ್ನು ಸಾಂಕೇತಿಕ ರೀತಿಯಲ್ಲಿ ಸ್ಥಾಪಿಸಲಾಗಿದೆ. ಶಿಬಿರವು ಮುಲಾಯಂ ಸಿಂಗ್ ಯಾದವ್ ಅವರ ಆಲೋಚನೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಮಹಾಕುಂಭದ ನಂತರ ಮೂರ್ತಿಯನ್ನು ಪಕ್ಷದ ಕಚೇರಿಗೆ ಮರುಸ್ಥಾಪಿಸಲಾಗುವುದು ಎಂದರು.
ಮಾಧ್ಯಮದವರು ಕೇಳಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಾರೆಯೇ ಎಂಬ ಪ್ರಶ್ನೆಗೆ “ಈ ವಿಷಯದಲ್ಲಿ ನಾನು ಅವರೊಂದಿಗೆ ಮಾತನಾಡಿಲ್ಲ” ಎಂದು ಪಾಂಡೆ ಹೇಳಿದರು.
ಯಾದವ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಕ್ಕಾಗಿ ಅಖಿಲ ಭಾರತೀಯ ಅಖಾರ ಪರಿಷತ್ತು ಟೀಕಿಸಿದೆ. ಅದರ ಅಧ್ಯಕ್ಷರಾದ ಮಹಂತ್ ರವೀಂದ್ರ ಪುರಿ, ಮುಲಾಯಂ ಸಿಂಗ್ ಯಾದವ್ ಅವರು “ಹಿಂದೂ-ವಿರೋಧಿ ಮತ್ತು ಸನಾತನ ವಿರೋಧಿ” ದೃಷ್ಟಿಕೋನಗಳನ್ನು ಹೊಂದಿದ್ದರು ಎಂದು ಹೇಳಿದ್ದಾರೆ.
ಮುಲಾಯಂ ಸಿಂಗ್ ಅವರ ಪ್ರತಿಮೆಗೆ ನಮ್ಮ ಅಭ್ಯಂತರವಿಲ್ಲ. ಅವರು ನಮ್ಮ ಮುಖ್ಯಮಂತ್ರಿಯಾಗಿದ್ದರು. ಆದರೆ ಈ ಸಮಯದಲ್ಲಿ ಪ್ರತಿಮೆ ಸ್ಥಾಪಿಸುವ ಮೂಲಕ ಅವರು ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ. ರಾಮಮಂದಿರ ಆಂದೋಲನದಲ್ಲಿ ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತು. ಅವರು ಯಾವಾಗಲೂ ಹಿಂದೂ ವಿರೋಧಿ, ಸನಾತನ ವಿರೋಧಿ ಮತ್ತು ಮುಸ್ಲಿಮರ ಪರವಾಗಿದ್ದಾರೆ ಎಂದು ಪುರಿ ಹೇಳಿದ್ದಾರೆ.
ಜುನಾ ಅಖಾರದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಅವರು ಪುರಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಪ್ರತಿಮೆ ಸ್ಥಾಪನೆಯನ್ನು ಅಖಿಲ ಭಾರತೀಯ ಅಖಾರ ಪರಿಷತ್ತು ಖಂಡಿಸಿರುವುದು ಸಮರ್ಥನೀಯವಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Mahakumbh 2025: AI ಕ್ಯಾಮರಾ, NSG ಕಮಾಂಡೋ, ಡ್ರೋನ್‌ಗಳು- ಮಹಾಕುಂಭಮೇಳಕ್ಕೆ ಭದ್ರತಾ ವ್ಯವಸ್ಥೆ ಹೇಗಿದೆ ಗೊತ್ತಾ?